ಮಂಗಳೂರು: ಮಂಗಳೂರಿನ (Mangaluru) ನಾಗುರಿಯಲ್ಲಿ ನವೆಂಬರ್ 19ರಂದು ಚಲಿಸುತ್ತಿದ್ದ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದ (Cooker Bomb Blast) ಪ್ರಕರಣ ಇಡೀ ರಾಜ್ಯವನ್ನೆ ತಲ್ಲಣಗೊಳಿಸಿತ್ತು. ಈ ಘಟನೆಯಲ್ಲಿ ಶಂಕಿತ ಉಗ್ರ ಮೊಹಮ್ಮದ್ ಶಾರಿಕ್ (Mohammed Shariq) ಹಾಗೂ ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ( Purushottam Pujari) ಗಂಭೀರ ಗಾಯಗೊಂಡಿದ್ದರು. ಇದೀಗ ಆಸ್ಪತ್ರೆಯಿಂದ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಆರೋಪಿ ಶಾರಿಕ್ನನ್ನು ಬೆಂಗಳೂರಿನ ಜೈಲಿಗೆ ಸ್ಥಳಾಂತರಿಸಲಾಗಿದೆ. ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಇತ್ತ ಆಟೋ ಓಡಿಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಆಟೋ ಚಾಲಕ ಪುರುಷೋತ್ತಮ್ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ. ಆದರೆ ವೈದ್ಯರು ಸಲಹೆಯಂತೆ ಇನ್ನೂ ಒಂದು ವರ್ಷದವರೆಗೆ ಬೆಡ್ರೆಸ್ಟ್ನಲ್ಲಿರಬೇಕಾಗಿದೆ. ಹೀಗಿರುವಾಗ ಮುಂದಿನ ಜೀವನ ನೆನೆದು ಕಣ್ಣೀರಿಡುತ್ತಿದ್ದಾರೆ.
ಸತತ 56 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಪೂಜಾರಿ ಅವರು ಡಿಸ್ಚಾರ್ಜ್ ಆಗಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತಮ್ಮ ಮುಂದಿನ ಜೀವನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದಾಗ ಗೃಹ ಸಚಿವರು ಸೇರಿದಂತೆ ಸಂಸದರು, ಉಸ್ತುವಾರಿ ಸಚಿವರು, ಶಾಸಕರು ಭೇಟಿಯಾಗಿ ವೈಯಕ್ತಿಕ ಧನ ಸಹಾಯ ಮಾಡಿದ್ದರು. ಇಲ್ಲಿಯವರೆಗೆ ಹೇಗೋ ನಡೆದು ಹೋಗಿದೆ. ಆದರೆ ಒಂದು ತಿಂಗಳು ಮನೆಯಿಂದ ಹೊರಗೆ ಬರಬಾರದು ಹಾಗೂ ಒಂದು ವರ್ಷ ಆಟೋ ಓಡಿಸಬಾರದು ಎಂದು ತಿಳಿಸಿದ್ದಾರೆ. ಆದರೆ ನನಗೆ ಜೀವನ ಹೇಗೆ ಸಾಗಿಸುವುದು ಎಂಬುದು ದೊಡ್ಡ ಚಿಂತೆಯಾಗಿದೆ ಎಂದು ಪೂಜಾರಿ ಹೇಳಿದ್ದಾರೆ.
ಇದನ್ನೂ ಓದಿ: Mangaluru Cooker Bomb Blast: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರೀಕ್ ಬೆಂಗಳೂರಿಗೆ ಶಿಫ್ಟ್
ನನ್ನ ಪರಿಸ್ಥಿತಿ ಯಾರಿಗೂ ಬೇಡ
20 ವರ್ಷಗಳಿಂದ ಆಟೋ ಓಡಿಸುತ್ತಿದ್ದೆ, ಇಂತಹ ಘಟನೆ ಎಂದೂ ಕಂಡಿರಲಿಲ್ಲ. ಇದೀಗ ನನಗೆ ಬಂದಿರುವ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು. ಘಟನೆ ಬಳಿಕ ಸರ್ಕಾರದಿಂದ ನನ್ನ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಜನಪ್ರತಿನಿಧಿಗಳು, ಸಚಿವರು ಭರವಸೆ ನೀಡಿದ್ದರು. ಆಟೋ ರಿಕ್ಷಾ ಸುಟ್ಟಿರುವುದರಿಂದ ಹೊಸ ರಿಕ್ಷಾ ಕೊಡಿಸುವುದಾಗಿಯೂ ಹೇಳಿದ್ದಾರೆ. ಆದರೆ, ಇದುವರೆಗೂ ಯಾವ ಪರಿಹಾರವೂ ಸಿಕ್ಕಿಲ್ಲ. ಜೀವನವನ್ನು ತುಂಬಾ ಕಷ್ಟದಿಂದ ಸಾಗಿಸುವಂತಾಗಿದೆ ಎಂದು ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಹೇಳಿಕೊಂಡಿದ್ದಾರೆ.
ಮಗಳ ಇಎಸ್ಐ ಸೌಲಭ್ಯದಲ್ಲಿ ಚಿಕಿತ್ಸೆ
ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಪುರುಷೋತ್ತಮ್ ಪೂಜಾರಿ ಅವರಿಗೆ ಶೇ.33ರಷ್ಟು ಸುಟ್ಟಗಾಯಗಳಾಗಿದ್ದವು. ಈ ಚಿಕಿತ್ಸೆಗೆ ಲಕ್ಷಾಂತರ ರೂ ಖರ್ಚಾಗಿದೆ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಘಟನೆ ನಂತರ ರಾಜ್ಯ ಸರ್ಕಾರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಘೋಷಣೆ ಮಾಡಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ನೆರವು ನಮಗೆ ಸಿಕ್ಕಿಲ್ಲ. ಕಳೆದ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದೇನೆ. 10 ದಿನಗಳಿಗೊಮ್ಮೆ ವೈದ್ಯರಲ್ಲಿಗೆ ತಪಾಸಣೆಗೆ ಹೋಗಬೇಕು. ಒಂದು ತಿಂಗಳು ಹೊರಗೆ ಹೋಗಬಾರದು. ಒಂದು ವರ್ಷ ಕೆಲಸ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ. ಇಷ್ಟರವರೆಗೆ ಆಸ್ಪತ್ರೆ ಖರ್ಚು ಮಗಳ ಇಎಸ್ಐನಿಂದ ನಡೆದಿದೆ. ಮುಂದಿನ ಚಿಕಿತ್ಸಾ ವೆಚ್ಚಕ್ಕೆ ದೇವರೆ ಗತಿ ಎಂದು ನೋವು ತೋಡಿಕೊಂಡಿದ್ದಾರೆ.
ಪರಿಹಾರದ ನಿರೀಕ್ಷೆಯಲ್ಲಿ ಪೂಜಾರಿ ಕುಟುಂಬ
ಗಾಯ ಗುಣವಾಗುವವರೆಗೆ ಪ್ರತಿದಿನ ಔಷಧಿ ತೆಗೆದುಕೊಳ್ಳಬೇಕು. ಪ್ರತಿವಾರ ಆಸ್ಪತ್ರೆಗೆ ಹೋಗಬೇಕು, ಆ ಖರ್ಚನ್ನು ನಮ್ಮ ಕೈಯಿಂದಲೇ ಭರಿಸಬೇಕಾಗಿದೆ. ಸಚಿವರು ಹಾಗೂ ಶಾಸಕರು ನೀಡಿರುವ ಪರಿಹಾರದ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದೇನೆ. ಇದುವರೆಗೂ ಯಾರೂ ನನ್ನನ್ನು ವಿಚಾರಿಸಿಲ್ಲ. ಬಾಂಬ್ ಸ್ಫೋಟ ಪ್ರಕರಣದ ನನ್ನ ರಿಕ್ಷಾ ಎಲ್ಲಿದೆ ಎನ್ನುವುದೂ ನನಗೆ ಗೊತ್ತಿಲ್ಲ. ಹೊಸ ರಿಕ್ಷಾ ಸಿಗದಿದ್ದರೆ ಹಳೆ ರಿಕ್ಷಾ ರಿಪೇರಿ ಮಾಡಿಸಬೇಕು. ಅದಕ್ಕೆ ಎಷ್ಟು ಖರ್ಚಾಗುತ್ತದೋ ಏನೋ?. ಸಚಿವರು, ಜನಪ್ರತಿನಿಧಿಗಳು ಭರವಸೆ ನೀಡಿದಂತೆ ಸರ್ಕಾರದಿಂದ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ನನ್ನ ಪುತ್ರಿಯ ವಿವಾಹಕ್ಕಿಂತ ಮೊದಲು ಪರಿಹಾರ ದೊರೆತರೆ ದೊಡ್ಡ ಉಪಕಾರವಾಗುತ್ತದೆ ಎಂದು ಹೇಳಿದರು.
ನವೆಂಬರ್ 19ರಂದು ನಡೆದಿದ್ದೇನು?
ನಾಗುರಿಯಲ್ಲಿ ನವೆಂಬರ್ 19ರಂದು ನಾನು ಆಟೋದಲ್ಲಿ ಬರುವಾಗ ವ್ಯಕ್ತಿಯೊಬ್ಬ ಕೈ ತೋರಿಸಿ ನಿಲ್ಲಿಸಿ ಪಂಪ್ ವೆಲ್ಗೆ ಬಿಡಲು ತಿಳಿಸಿದ. ಈ ವೇಳೆ ಆತನ ಬಳಿ ಒಂದು ಬ್ಯಾಗ್ ಇತ್ತು. ಗರೋಡಿ ಬಳಿ ಬರುತ್ತಿದ್ದಂತೆ ದೊಡ್ಡ ಶಬ್ದವಾಗಿತ್ತು. ಈ ವೇಳೆ ರಿಕ್ಷಾದೊಳಗೆ ಹೊಗೆ ತುಂಬಿಕೊಂಡು ಸಂಪೂರ್ಣ ಕತ್ತಲಾದಂತಾಯಿತು. ಮುಂದೆ ರಿಕ್ಷಾ ಚಲಾಯಿಸಲು ಸಾಧ್ಯವಾಗದೆ ಅಲ್ಲಿಯೇ ನಿಲ್ಲಿಸಿದೆ. ಬಳಿಕ ನಮ್ಮಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಪುರುಷೋತ್ತಮ್ ತಿಳಿಸಿದರು.
ಬಾಂಬ್ ಸ್ಫೋಟ ಎಂದು ಗೊತ್ತಿರಲಿಲ್ಲ
ಅಂದು ಅಲ್ಲಿ ನಡೆದ ಸ್ಫೋಟ ಬಾಂಬ್ನಿಂದಾಗಿದೆ ಎಂದು ಗೊತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಇರುವಾಗ ಮತ್ತೆ ಪೊಲೀಸರು ಬಂದು ಹೇಳಿದಾಗ ಅದು ಬಾಂಬ್ ಸ್ಪೋಟ ಎಂಬುದು ನನ್ನ ಅರಿವಿಗೆ ಬಂದಿತು. ಸುಟ್ಟ ಗಾಯಗಳಿಂದಾಗಿ ಮುಖ ಮತ್ತು ದೇಹದ ರೂಪ ಬದಲಾವಣೆ ಆಗಿದೆ. ಬಾಂಬ್ ಸ್ಫೋಟಿಸಿದ ಶಾರೀಕ್ ಚಿಕ್ಕ ವಯಸ್ಸಿನ ಹುಡುಗ. ಘಟನೆ ನಂತರ ಇಬ್ಬರನ್ನು ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಕೋಣೆಯಲ್ಲಿ ಇರಿಸಿದ್ದರು. ಇದೀಗ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ವಿವರಿಸಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ