• ಹೋಂ
  • »
  • ನ್ಯೂಸ್
  • »
  • state
  • »
  • Mangaluru: ಕಟೀಲಿನಲ್ಲಿ ಇಂದು ಏಕಕಾಲಕ್ಕೆ ಆರು ಮೇಳಗಳ ಯಕ್ಷಗಾನ ಪ್ರದರ್ಶನ!

Mangaluru: ಕಟೀಲಿನಲ್ಲಿ ಇಂದು ಏಕಕಾಲಕ್ಕೆ ಆರು ಮೇಳಗಳ ಯಕ್ಷಗಾನ ಪ್ರದರ್ಶನ!

ಈ ಋತುವಿನ ಕೊನೆಯ ಆಟ!

ಈ ಋತುವಿನ ಕೊನೆಯ ಆಟ!

ಮೇ 26ರ ಶುಕ್ರವಾರ ಕಟೀಲು ಮೇಳದ ಕೊನೆಯ ಪ್ರದರ್ಶನವಾಗಿದ್ದು, ಅದುವರೆಗೂ ಪ್ರತ್ಯೇಕವಾಗಿ ಬೇರೆ ಬೇರೆ ಊರುಗಳಿಗೆ ತೆರಳಿ ಪ್ರದರ್ಶನ ನೀಡುತ್ತಿದ್ದವರೆಲ್ಲರೂ ಒಟ್ಟಾಗಿ ಪ್ರದರ್ಶನ ನೀಡುತ್ತಾರೆ.

  • News18 Kannada
  • 3-MIN READ
  • Last Updated :
  • Dakshina Kannada, India
  • Share this:

ಮಂಗಳೂರು: ತುಳುನಾಡಿನಲ್ಲಿ (Tulunadu) ಮಳೆಗಾಲ (Rainy Season) ಆರಂಭವಾಗುತ್ತಿದ್ದಂತೆ ಬರುವ ʼಪತ್ತನಾಜೆʼಗೂ ಮುನ್ನ ಎಲ್ಲ ಧಾರ್ಮಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ (Cultural Activities) ತೆರೆ ಬೀಳುತ್ತವೆ. ಇದನ್ನೇ ತುಳುವರು ʼಪತ್ತನಾಜೆ ಬತ್ತ್‌ನ್ಡ ಜತ್ತಿ ಆಟ ಉಂತ್ಂಡ್‌ʼ (ಪತ್ತನಾಜೆ ಬಂತು ಅಂದ್ರೆ ಪ್ರದರ್ಶಕ್ಕೆ ಹೋಗುತ್ತಿದ್ದ ಯಕ್ಷಗಾನ ಬಯಲಾಟ ನಿಂತಿತು) ಎನ್ನುತ್ತಾರೆ.


ಇನ್ನೇನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿದ್ದು, ಕಲಾವಿದರು ತಾವು ಕಟ್ಟಿದ ಗೆಜ್ಜೆಯನ್ನು ಬಿಚ್ಚಿಡುವ ಸಮಯವಿದು. ನವೆಂಬರ್‌ ನಿಂದ ಮೇ ತಿಂಗಳವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಯಕ್ಷಗಾನ ಮೇಳಗಳು ಭಕ್ತರು ನಡೆಸುವ ಹರಕೆ ರೂಪದ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಿದ್ದರು. ವಿಶೇಷವಾಗಿ ದೇವಿ ಸಂಬಂಧಿತ ಪ್ರಸಂಗಗಳು ಕರಾವಳಿಯಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ. ಅದರ ಜೊತೆಗೆ ಇನ್ನಿತರ ಪ್ರಸಂಗಗಳು ಕೂಡಾ ಪ್ರದರ್ಶನ ಕಾಣುತ್ತವೆ. ವಿಶೇಷ ಅಂದರೆ ಸರಕಾರದ ನಿಯಮದಿಂದಾಗಿ ಈ ಬಾರಿಯ ಕಾಲಮಿತಿಯ (ಬಹುತೇಕ ಮೇಳಗಳ ಪ್ರದರ್ಶನ ರಾತ್ರಿ 12.30ರ ತನಕ) ಯಕ್ಷಗಾನದ ಮೊದಲ ಋತುವಿನ ಸಮಾಪ್ತಿ ಕಾಣುತ್ತಿವೆ.



ವಿವಿಧ ಮೇಳಗಳ ಪ್ರದರ್ಶನ


ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವು ತೆಂಕು ಹಾಗೂ ಬಡಗು ಶೈಲಿಯ ಯಕ್ಷಗಾನ ಮೇಳಗಳು ಇಂದಿಗೂ ಯಕ್ಷಗಾನ ಪ್ರದರ್ಶನದಲ್ಲಿ ಭಾರೀ ಮನೆಮಾತಾಗಿದೆ. ಕಟೀಲು, ಧರ್ಮಸ್ಥಳ, ಮಂದಾರ್ತಿ, ಬಪ್ಪನಾಡು, ಸುಂಕದಕಟ್ಟೆ, ಹನುಮಗಿರಿ ಹಾಗೂ ಇತ್ತೀಚೆಗೆ ಹೊಸದಾಗಿ ಸೇರ್ಪಡೆಯಾದ ಗೆಜ್ಜೆಗಿರಿ ಮತ್ತು ಪಾವಂಜೆ ಮೇಳಗಳು ಕೂಡಾ ಭಾರೀ ಸಂಖ್ಯೆಯಲ್ಲಿ ಪ್ರದರ್ಶನ ನೀಡಿದೆ. ಅದ್ರಲ್ಲೂ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಆರು ಮೇಳಗಳು ದಿನಂಪ್ರತಿಯಂತೆ ಪ್ರತೀ ಮೇಳವು ತಲಾ 170 ರಷ್ಟು ಪ್ರದರ್ಶನ ನೀಡಿದೆ.


ಶುಕ್ರವಾರ ರಾತ್ರಿ ಕೊನೆಯ ಆಟ


ಮೇ 26ರ ಶುಕ್ರವಾರ ಕಟೀಲು ಮೇಳದ ಕೊನೆಯ ಪ್ರದರ್ಶನವಾಗಿದ್ದು, ಅದುವರೆಗೂ ಪ್ರತ್ಯೇಕವಾಗಿ ಬೇರೆ ಬೇರೆ ಊರುಗಳಿಗೆ ತೆರಳಿ ಪ್ರದರ್ಶನ ನೀಡುತ್ತಿದ್ದವರೆಲ್ಲರೂ ಒಟ್ಟಾಗಿ ಪ್ರದರ್ಶನ ನೀಡುವರು. ಜೊತೆ ಜೊತೆಯಾಗಿ ಆರು ವೇದಿಕೆ (ರಂಗಸ್ಥಳ)ಯಲ್ಲಿ ಏಕಕಾಲಕ್ಕೆ ಆರು ಮೇಳಗಳು ಒಂದು ಪ್ರಸಂಗಕ್ಕೆ ಹೆಜ್ಜೆ ಹಾಕುವರು. ಬಳಿಕ ದೇವರ ಸನ್ನಿಧಿಯಲ್ಲಿ ಕಲಾವಿದರು ಗೆಜ್ಜೆ ಬಿಚ್ಚಿಡಲಿದ್ದಾರೆ.


ಇದನ್ನೂ ಓದಿ: ಜೂನ್‌ 1 ರಿಂದ ಮೀನುಗಾರಿಕೆ ನಿಷೇಧ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ!

ಶುಕ್ರವಾರ ಕಟೀಲು ರಥಬೀದಿಯಲ್ಲಿ ತೆರೆ ಕಾಣಲಿರುವ ಈ ಋತುವಿನ ಯಕ್ಷಗಾನದ ಕೊನೆಯ ವೈಭವದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವರು. ಅಲ್ಲದೇ, ಶುಕ್ರವಾರದ ಹಿನ್ನೆಲೆ ದೇವಿಯ ಭಕ್ತರ ಸಂಖ್ಯೆಯೂ ಅಧಿಕವಿರಲಿದ್ದು, ವಿದ್ಯುತ್‌ ದೀಪಗಳಿಂದ ಅಲಂಕರಿಸಿದ ರಥಬೀದಿಯ ರಂಗಸ್ಥಳದಲ್ಲಿ ಭಾರೀ ಪ್ರದರ್ಶನದ ಜೊತೆಗೆ ಈ ಋತುವಿನ ಯಕ್ಷಗಾನ ಮೇಳಗಳ ಸುತ್ತಾಟಕ್ಕೆ ಮಂಗಳ ಹಾಡಲಿದ್ದಾರೆ.

First published: