HOME » NEWS » State » MANGALORE VACCINATION DRIVE SECOND PHASE GO SLOW IN PUTTHUR TALUK AKP SNVS

Vaccination Drive - ಪುತ್ತೂರು ತಾಲೂಕಿನಲ್ಲಿ ಎರಡನೇ ಹಂತದ ಕೋವಿಡ್ ಲಸಿಕೆ ವಿತರಣೆಯಲ್ಲಿ ಇಳಿಕೆ

ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯ ಬಾಗಿಲಲ್ಲಿ ಕಳೆದ ಮೂರು ದಿನಗಳಿಂದ ವ್ಯಾಕ್ಸಿನ್ ಲಭ್ಯವಿರುವುದಿಲ್ಲ ಎಂಬ ಫಲಕ ಹಾಕಲಾಗಿದೆ. ಕಡಬ ತಾಲೂಕಿನಲ್ಲಿ ಲಸಿಕೆ ಗುರಿ ಪೈಕಿ ಶೇ. 6 ಮಾತ್ರ ಈಡೇರಿಕೆ ಆಗಿರುವುದು ತಿಳಿದುಬಂದಿದೆ.

news18-kannada
Updated:May 6, 2021, 3:41 PM IST
Vaccination Drive - ಪುತ್ತೂರು ತಾಲೂಕಿನಲ್ಲಿ ಎರಡನೇ ಹಂತದ ಕೋವಿಡ್ ಲಸಿಕೆ ವಿತರಣೆಯಲ್ಲಿ ಇಳಿಕೆ
ಸಾಂದರ್ಭಿಕ ಚಿತ್ರ
  • Share this:
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಒಟ್ಟು 16 ಲಸಿಕೆ ಕೇಂದ್ರಗಳಲ್ಲಿ ಎರಡನೆ ಹಂತದ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಬೇಡಿಕೆಗೆ ತಕ್ಕಷ್ಟು ಲಸಿಕೆ ಲಭ್ಯವಿಲ್ಲ ಎಂಬ ಉತ್ತರ ಬರುತ್ತಿದೆ. ಪ್ರಥಮ ಹಂತದ ಲಸಿಕೆ ಪಡೆದವರ ಪ್ರಮಾಣ ಗಮನಿಸಿದರೆ ಎರಡನೆ ಹಂತದಲ್ಲಿ ತಾಲೂಕಿನ ಪ್ರಗತಿ ಅತಿ ಕಡಿಮೆ ದಾಖಲಾಗಿದೆ. ತಾಲೂಕಿನಲ್ಲಿ 45 ರಿಂದ 60 ವರ್ಷದೊಳಗಿನ ಹಾಗೂ 60 ವರ್ಷದ ಮೇಲ್ಪಟ್ಟವರು 58 ಸಾವಿರ ಮಂದಿಯಿದ್ದು, ಆ ವಯೋಮಾನದಲ್ಲಿಯೇ 20 ಸಾವಿರಕ್ಕೂ ಅಧಿಕ ಮಂದಿ ಪ್ರಥಮ ಹಂತದ ಲಸಿಕೆ ಪಡೆದುಕೊಂಡಿಲ್ಲ. ಮೊದಲನೆಯ ಲಸಿಕೆ ಪಡೆದವರ ಪೈಕಿ ಕೇವಲ ಶೇ.6 ರಷ್ಟು ಮಂದಿಗೆ ಮಾತ್ರ ಎರಡನೆ ಡೋಸ್ ನೀಡಲಾಗಿದೆ. ಮೊದಲ ಹಂತದಲ್ಲಿ ಲಸಿಕೆ ಪಡೆದ 32,920 ಮಂದಿ ಎರಡನೆ ಹಂತದ ಲಸಿಕೆ ಪಡೆಯಲು ಬಾಕಿ ಇದ್ದಾರೆ.

ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯ ಬಾಗಿಲಲ್ಲಿ ಕಳೆದ ಮೂರು ದಿನಗಳಿಂದ ವ್ಯಾಕ್ಸಿನ್ ಲಭ್ಯವಿರುವುದಿಲ್ಲ ಎಂಬ ಫಲಕ ಹಾಕಲಾಗಿದೆ. ಪ್ರಾರಂಭದಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದ ಜನರು ಕೊರೊನಾ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಲಸಿಕೆ ಪಡೆಯಲು ಆಗಮಿಸಿರುವುದು ಕೊರತೆಗೆ ಕಾರಣವಾಗಿತ್ತು. ಮೇ 5 ರಂದು ಪುತ್ತೂರಿಗೆ 1200 ಲಸಿಕೆ ಪೂರೈಕೆ ಆಗಿದ್ದು, ಸರಕಾರಿ ಆಸ್ಪತ್ರೆಗೆ 200 ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 50 ರಂತೆ ಮತ್ತು ಉಪ್ಪಿನಂಗಡಿ ಮತ್ತು ಕಡಬ ಸಮುದಾಯ ಆಸ್ಪತ್ರೆಗೆ ತಲಾ 100 ಲಸಿಕೆ ವಿತರಿಸಲಾಗಿದೆ.

ಈ ನಡುವೆ

ಪ್ರಥಮ ಹಂತದ ಲಸಿಕೆ ವಿತರಣೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದ್ದ ಪುತ್ತೂರು ಎರಡನೆ ಹಂತದ ಲಸಿಕೆ ವಿತರಣೆಯಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಕಾರಣ ಮೊದಲನೆ ಹಂತದ ಲಸಿಕೆ ನೀಡುವಲ್ಲಿಯೇ ಹೆಚ್ಚು ಆದ್ಯತೆ ನೀಡಿರುವುದು ಹಾಗೂ ಎರಡನೆ ಹಂತದ ಲಸಿಕೆ ನೀಡುವಲ್ಲಿ ಗಮನ ಹರಿಸದೆ ಇರುವುದು ಇದಕ್ಕೆ ಕಾರಣ ಎನ್ನುವ ಅಂಶ ಜಿಲ್ಲಾಧಿಕಾರಿಗಳ ಇತ್ತೀಚೆಗೆ ಪುತ್ತೂರಿನಲ್ಲಿ ನಡೆಸಿದ ಸಭೆಯಲ್ಲಿ ಬೆಳಕಿಗೆ ಬಂದಿತ್ತು. ಮೇ 5 ರಂದು ಆರೋಗ್ಯ ಇಲಾಖೆ ನೀಡಿದ ಅಂಕಿ ಅಂಶ ಆಧಾರದಲ್ಲಿ 45 ರಿಂದ 60 ಹಾಗೂ 60 ರ ಮೇಲ್ಪಟ್ಟ ವಯೋಮಾನದಲ್ಲಿ ಎರಡನೆ ಹಂತದಲ್ಲಿ 26481 ಕೋವಿಶೀಲ್ಡ್ ಲಸಿಕೆ, 6424 ಕೊವ್ಯಾಕ್ಸಿನ್ ಲಸಿಕೆ ನೀಡಲು ಬಾಕಿ ಇದೆ.

ಮೊದಲ ಹಂತದ ಲಸಿಕೆ ಪಡೆದವರ ಪೈಕಿ ಬಹುತೇಕ ಮಂದಿಗೆ ಎರಡನೆ ಹಂತದ ಲಸಿಕೆ ಪಡೆಯುವ ದಿನವಾದರೂ ಲಸಿಕೆ ಇಲ್ಲ ಎಂಬ ಉತ್ತರ ಕೇಂದ್ರಗಳಿಂದ ಬರುತ್ತಿದೆ. ಕೋವಿಶೀಲ್ಡ್ ಲಸಿಕೆಯನ್ನು ಪಡೆದುಕೊಂಡ ಬಳಿಕ ಎರಡನೇ ಡೋಸ್‍ನ್ನು ಮುಂದಿನ 60 ದಿನಗಳಲ್ಲಿ ಪಡೆಯಬೇಕು. ಅದೇ ರೀತಿ ಕೊವ್ಯಾಕ್ಸಿನ್ 2 ನೇ ಡೋಸ್‍ನ್ನು 42 ದಿನದೊಳಗೆ ಪಡೆಯಬೇಕು. ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದವರು 2 ನೇ ಡೋಸ್‍ನಲ್ಲೂ ಅದನ್ನೇ ಪಡೆಯಬೇಕು. ಕೋವಿಶೀಲ್ಡ್ ಪಡೆದವರು ಅದನ್ನೇ 2 ನೇ ಡೋಸ್‍ನಲ್ಲೂ ಪಡೆಯಬೇಕು. ಹೀಗಾಗಿ ಮೊದಲ ಮತ್ತು ಎರಡನೆ ಲಸಿಕೆ ಪಡೆದವರ ಅಂತರ ತಗ್ಗಿಸಿ ಸಮ ಪ್ರಮಾಣದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಪ್ರಸ್ತುತ ಮೊದಲ ಹಂತದ ಲಸಿಕೆ ವಿತರಣೆ ಸ್ಥಗಿತಗೊಳಿಸಿ ಎರಡನೆ ಹಂತದ ಲಸಿಕೆ ನೀಡುವಲ್ಲಿ ಆದ್ಯತೆ ನೀಡಲಾಗಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ 24 ಗಂಟೆಯಲ್ಲಿ 20 ಸಾವು; ಆಕ್ಸಿಜನ್ ಕೊರತೆಯಿಂದ ಸಾವಾಗಿಲ್ಲ ಎಂದ ಸುರೇಶ್ ಕುಮಾರ್

1 ತಾಲೂಕು ಆಸ್ಪತ್ರೆ, 4 ಖಾಸಗಿ ಆಸ್ಪತ್ರೆ, 10 ಪ್ರಾಥಮಿಕ ಆರೋಗ್ಯ ಕೇಂದ್ರ, 2 ಸಮುದಾಯ ಕೇಂದ್ರ, 1 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕೇಂದ್ರವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ದಿನಂಪ್ರತಿ 50 ಲಸಿಕೆ ನೀಡಲಾಗುವ ಕಾರಣ ಲಸಿಕೆಗಾಗಿ ಜನ ವಾರಗಟ್ಟಲೇ ಕಾಯುವ ಸ್ಥಿತಿ ಉಂಟಾಗಿದೆ. ಹೀಗಾಗಿ ಗ್ರಾಮ ಮಟ್ಟದಲ್ಲಿ ಲಸಿಕೆ ನೀಡುವ ಪ್ರಮಾಣ ಹೆಚ್ಚಿಸಬೇಕು. ಆಗ ಸಮುದಾಯ, ತಾಲೂಕು ಆಸ್ಪತ್ರೆಯ ಒತ್ತಡ ಕಡಿಮೆ ಆಗುತ್ತದೆ ಎನ್ನುವ ಆಗ್ರಹವು ಕೇಳಿ ಬಂದಿದೆ.ಅವಿಭಜಿತ ತಾಲೂಕಿಗೆ ಎರಡನೆ ಹಂತದ 1200 ಲಸಿಕೆ ಪೂರೈಕೆಯಾಗಿದೆ. ಎರಡನೆ ಹಂತದ ಲಸಿಕೆಗೆ ಸಂಬಂಧಿಸಿ 45 ರಿಂದ 60 ಹಾಗೂ 60 ರ ಮೇಲ್ಪಟ್ಟ ವಯೋಮಾನದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಸೇರಿ ಒಟ್ಟು 32,920 ಮಂದಿಗೆ ಲಸಿಕೆ ನೀಡಲು ಬಾಕಿ ಇದೆ ಎಂದು ಪುತ್ತೂರು ತಾಲೂಕು ಆರೋಗ್ಯಧಿಕಾರಿ ಡಾ| ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.

ವರದಿ: ಅಜಿತ್ ಕುಮಾರ್
Published by: Vijayasarthy SN
First published: May 6, 2021, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories