ಮಂಗಳೂರು (ಏ. 28): ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದ ವಾರ್ಷಿಕ ಆದಾಯದ ಲೆಕ್ಕಪರಿಶೋಧನೆಯೇ ನಡೆದಿಲ್ಲ ಎಂಬ ಗಂಭೀರ ಆರೋಪಕ್ಕೆ ದೇವಸ್ಥಾನ ದ ಆಡಳಿತ ಮಂಡಳಿ ಕೊನೆಗೂ ಸ್ಪಷ್ಟೀಕರಣ ನೀಡಿದೆ. ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ದೇವಸ್ಥಾನದ ವಾರ್ಷಿಕ ಆದಾಯದಲ್ಲಿ ಗೋಲ್ಮಾಲ್ ಆಗಿದೆ ಎನ್ನುವುದು ಸಂಪೂರ್ಣ ಸುಳ್ಳಾಗಿದೆ. ಐದು ವರ್ಷಗಳಿಂದ ದೇವಳದ ವಾರ್ಷಿಕ ಆದಾಯದ ಲೆಕ್ಕ ಪರಿಶೋಧನೆ ನಡೆದಿಲ್ಲ ಎಂಬ ಆರೋಪವೂ ಸುಳ್ಳು ಎಂದಿದ್ದಾರೆ. ದೇವಳದ 2012-13 ರಿಂದ 2014-15ನೇ ಸಾಲಿನ ವರೆಗಿನ ಲೆಕ್ಕ ತಪಾಸಣೆಯನ್ನು ಜಂಟಿ ನಿರ್ದೇಶಕರು, ಸ್ಥಳೀಯ ಲೆಕ್ಕ ಪರಿಶೋಧನ ವರ್ತುಲ ಮಂಗಳೂರು ಇವರು ನಡೆಸಿರುತ್ತಾರೆ ಎಂದು ಮಾಹಿತಿ ನೀಡಿದರು.
ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾಧಿಕಾರಿಯವರು ಅಧಿಸೂಚಿತ ಸಂಸ್ಥೆಗಳ ಲೆಕ್ಕ ತಪಾಸಣೆ ನಡೆಸಲು ಪ್ಯಾನಲ್ ರಚಿಸುತ್ತಾರೆ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ, ಮಂಗಳೂರು ಇವರ ಮೂಲಕ ಈ ದೇವಳದ ಲೆಕ್ಕ ಪರಿಶೋಧನೆಗೆ ಕಾರ್ಯಾದೇಶ ನೀಡಿರುತ್ತಾರೆ. ಆ ಪ್ರಕಾರ ಮೋಹನ್ಕುಮಾರ್ ಎಂ. ಅಂಡ್ ಅಸೋಸಿಯೇಟ್ಸ್, ಚಾರ್ಟೆಡ್ ಅಕೌಂಟೆಂಟ್, ಬೆಂಗಳೂರು ಇವರಿಂದ 2015-16 ನೇ ಸಾಲಿನಿಂದ 2018-19 ನೇ ಸಾಲಿನವರೆಗಿನ ಅವಧಿಯ ಲೆಕ್ಕ ತಪಾಸಣೆ ನಡೆಸಿ ವರದಿ ಸಲ್ಲಿಸಿರುತ್ತಾರೆ. ಪ್ರಸ್ತುತ 2019-20ಮತ್ತು 2020-21 ನೇ ಸಾಲಿನ ಅವಧಿಯ ಲೆಕ್ಕ ಪರಿಶೋಧನೆ ಮಾತ್ರವೇ ಬಾಕಿ ಇರುವುದಾಗಿದೆ ಎಂದು ಹೇಳಿದ್ದಾರೆ.
2015-16ರಿಂದ ಬಾಕಿ ಇರುವ ಲೆಕ್ಕ ಪರಿಶೋಧನೆಯನ್ನು ಮಾಡುವ ಕುರಿತಾಗಿ ಜಿಲ್ಲಾಧಿಕಾರಿಯವರು, ಜಂಟಿ ನಿರ್ದೇಶಕರು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಮಂಗಳೂರು ಇವರಿಗೆ ದೇವಳದ ಬಾಬ್ತು ಲೆಕ್ಕ ಪರಿಶೋಧನೆ ನಡೆಸಿಕೊಡುವಂತೆ ಸಂಬಂಧಪಟ್ಟ ಇಲಾಖೆಯನ್ನೂ ಕೋರಲಾಗಿದೆ. ಶ್ರಿ ದೇವಳದ ಆದಾಯ ವಿವರಕ್ಕೆ ಸಂಬಂಧಿಸಿದಂತೆ, ಆದಾಯ ತೆರಿಗೆ ಇಲಾಖೆಗೆ ರಿಟರ್ನ್ ಫೈಲ್ ಮಾಡುವ ಬಗ್ಗೆ ಸರಕಾರದ ನಿರ್ದೇಶನದಂತೆ, ಚಾರ್ಟಡ್ ಅಕೌಂಟೆಂಟ್ರವರಿಂದ 2019-20 ನೇ ಅವಧಿಯವರೆಗೆ ಲೆಕ್ಕ ಪರಿಶೋಧನೆಯನ್ನು ಸಹ ದೇವಳದಿಂದ ನಡೆಸಲಾಗಿರುತ್ತದೆ
ದೇಶದಾದ್ಯಂತ ಹರಡಿರುವ ಕೋವಿಡ್-19 ಎಂಬ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಕಳೆದ ಮಾರ್ಚ್ 17 ರ 2020 ರಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಿರುವ ಕಾರಣದಿಂದ ಮಾಚ್-2020 ರಿಂದ ಸೆಪ್ಟೆಂಬರ್-2020 ರ ವರೆಗೂ ಅಂದರೆ ಸುಮಾರು 6 ತಿಂಗಳುಗಳಿಗಿಂತಲೂ ಅಧಿಕ ದೇಶಾದ್ಯಂತ ಉಲ್ಭಣಿಸಿದ ಈ ವಿಷಮ ಪರಿಸ್ಥಿತಿಯಿಂದಾಗಿ ಸರಕಾರದ ಕಟ್ಟುನಿಟ್ಟಾದ ಮಾರ್ಗಸೂಚಿ ಹಾಗೂ ನಿಯಮಾವಳಿಗಳು ಜಾರಿಯಲ್ಲಿದ್ದವು. ಣ ಸಾರ್ವಜನಿಕರಿಗೆ ಅವಶ್ಯಕ ಸೇವೆಗಳನ್ನು ಒದಗಿಸುವ ಕಚೇರಿಗಳಿಗೆ ಮತ್ತು ಇಲ್ಲಿನ ಸಿಬ್ಬಂದಿಗಳ ಹಾಜರಾತಿಗೆ ಶೇಕಡಾವಾರು ಮಿತಿಗೊಳಿಸಿ ನಿರ್ಬಂಧಿಸಿರುವ ಕಾರಣದಿಂದ ಮತ್ತು ಅವಶ್ಯಕ ಸೇವೆಗಳಲ್ಲದ ಸರಕಾರಿ ಕಛೇರಿಗಳನ್ನು ಸಂಪೂರ್ಣವಾಗಿ ತೆರೆಯಲಾಗಿರಲಿಲ್ಲ. ಜೊತೆಗೆ ವಿವಿಧ ಇಲಾಖಾವಾರು ಕಛೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದುದರಿಂದ ಈ ದೇವಳದ ಲೆಕ್ಕ ಪರಿಶೋಧನೆಗೆ ಸರಕಾರದ ಹಂತದಲ್ಲಿ ಕೂಡಾ ಕ್ರಮಕೈಗೊಳ್ಳಲು ವಿಳಂಬವಾಗಿದೆ ಎಂದರು.
ಮಾಸ್ಟರ್ಪ್ಲಾನ್ ಯೋಜನೆಯ ಕಾಮಗಾರಿಗಳು ಸರಕಾರದ ಆದೇಶದ ಪ್ರಕಾರ ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಸುವುದಾಗಿದೆ ದೇವಳದ ಆಡಳಿತ ವತಿಯಿಂದ ಖರೀದಿ ಅಥವಾ ಕಾಮಗಾರಿಗಳಿಗೆ ಸಂಬಂಧಿಸಿ ಎಲ್ಲಾ ಪ್ರಸ್ತಾವನೆಗಳು ಕೂಡಾ ಶ್ರೀ ದೇವಳದ ಆಡಳಿತಾಧಿಕಾರಿ ಆಯುಕ್ತರು ಮತ್ತು ಸರಕಾರದ ಹಂತದಲ್ಲಿ ಮಂಜೂರಾತಿಗೊಂಡೇ ಎಲ್ಲಾ ವ್ಯವಹಾರಗಳು ನಡೆಯುವುದಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಸಹ ತೀರಾ ಪಾರದರ್ಶಕವಾಗಿ ನಡೆಯುತ್ತಿದೆ. ಇಲಾಖೆ ಅಥವಾ ಸರಕಾರದ ವತಿಯಿಂದ ಯಾವುದೇ ಹಂತದಲ್ಲಿ ತಪಾಸಣೆ ಅಥವಾ ತನಿಖೆ ನಡೆಸುವುದಾದಲ್ಲಿ ಸಂಪೂರ್ಣ ದಾಖಲೆಗಳು ಶ್ರೀ ದೇವಳದಲ್ಲಿ ಲಭ್ಯವಿದ್ದು, ಈ ಬಗ್ಗೆ ದೇವಳದ ಆಡಳಿತ ಸಹ ತಪಾಸಣೆ ಅಥವಾ ತನಿಖೆಗೆ ಸಹಕರಿಸುತ್ತದೆ ಎಂದರು.
ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದ ಆದಾಯದ ಲೆಕ್ಕ ಪರಿಶೋಧನೆ ಯೇ ನಡೆದಿಲ್ಲ. ಕಣ್ಣಳತೆಗೇ ಆದಾಯ ತೋರಿಸಿ ದೇವಸ್ಥಾನದ ಆಡಳಿತ ಮಂಡಳಿ ಲೆಕ್ಕ ಕೊಡುತ್ತಿದೆ. 5 ವರ್ಷದಿಂದ ದೇವಳದ ಲೆಕ್ಕ ಪರಿಶೋಧನೆ ನಡೆಯಲಿಲ್ಲ. ವಾರ್ಷಿಕ ಆದಾಯದಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು ಬೆಂಗಳೂರು ಮೂಲದ ವಕೀಲ ಶ್ರೀ ಹರಿ ಕುತ್ಸ ಎಂಬುವವರು ದೇವಸ್ಥಾನ ದ ಆಡಳಿತ ಮಂಡಳಿಯ ವಿರುದ್ಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ