ಮಂಗಳೂರು: ಮಂಗಳೂರು ಆಸ್ಪತ್ರೆಗಳ (Mangaluru Hospitals) ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಅಭಾವ ಎದುರಾಗಿದೆ. ರಕ್ತದಾನ ಶಿಬಿರಗಳು ಕಡಿಮೆಯಾಗಿರುವುದು ನೇರವಾಗಿ ರಕ್ತದ ಅಭಾವಕ್ಕೆ ಪ್ರಮುಖ ಕಾರಣವೂ ಆಗಿದೆ. ಚುನಾವಣೆ ಘೋಷಣೆ (Karnataka Elections 2023) ರಕ್ತದಾನ ಶಿಬಿರಗಳ ಆಯೋಜನೆಗೆ ಅಡ್ಡಿಯಾಗದಿದ್ದರೂ, ರಾಜಕೀಯ ಬೆಳವಣಿಗೆಯಿಂದಾಗಿ ಶಿಬಿರಗಳು ಕಡಿಮೆಯಾಗಿವೆ ಎಂದು ಅಂದಾಜಿಸಲಾಗಿದೆ. ಚುನಾವಣೆ ಮುಗಿದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳು (Blood Donation Camps) ಆಯೋಜನೆಗೊಂಡಲ್ಲಿ ಮಳೆಗಾಲ ಸಮಯಕ್ಕೂ ರಕ್ತದ ಕೊರತೆ ಎದುರಾಗದಂತೆ ನೋಡಿಕೊಳ್ಳಬಹುದಾಗಿದೆ.
ರಕ್ತನಿಧಿಯಲ್ಲೂ ಕೊರತೆ!
ಮಂಗಳೂರು ನಗರದ ಪ್ರಮುಖ ಆಸ್ಪತ್ರೆಗಳು ತನ್ನದೇ ಆದ ಬ್ಲಡ್ ಬ್ಯಾಂಕ್ಗಳನ್ನ ಹೊಂದಿವೆ. ಆದರೆ, ಇತ್ತೀಚೆಗೆ ಬ್ಲಡ್ ಡೊನೇಶನ್ ಕಡಿಮೆಯಾಗುತ್ತಿರುವ ಪರಿಣಾಮ ಅಲ್ಲೆಲ್ಲವೂ ರಕ್ತ ಸಂಗ್ರಹದ ಕೊರತೆ ಎದುರಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಂಡು ಬಂದಿರುವುದರಿಂದ ಅಗತ್ಯ ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರನ್ನು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ಗೆ ಕಳುಹಿಸಿಕೊಡುತ್ತಾರೆ. ಹೀಗಾಗಿ ಪ್ರತಿದಿನ ಸರಾಸರಿ 100 ಯುನಿಟ್ನಷ್ಟು ರಕ್ತವನ್ನು ವೆನ್ಲಾಕ್ ಆಸ್ಪತ್ರೆ ಪೂರೈಸುತ್ತಿದೆ. ಆದರೆ, ಅದೇ ಸಮಯಕ್ಕೆ ರಕ್ತ ಸಂಗ್ರಹ ಕುಸಿದಿದೆ. ಬೇಡಿಕೆ ಹೆಚ್ಚಾಗುತ್ತಲೇ, ರಕ್ತ ಸಂಗ್ರಹ ಕಡಿಮೆಯಾಗಿರುವುದು ರಕ್ತದ ಅಭಾವಕ್ಕೆ ಕಾರಣವಾಗಿದೆ.
ಸಾರ್ವಜನಿಕರಿಗೆ ಮನವಿ
ರಕ್ತದಾನ ಶ್ರೇಷ್ಠದಾನ. ನಿಗದಿತ ವಯಸ್ಸು ಹಾಗೂ ಆರೋಗ್ಯ ಕ್ಷಮತೆ ಇದ್ದಲ್ಲಿ ಎಂತಹ ವ್ಯಕ್ತಿಯೂ ರಕ್ತದಾನ ಮಾಡಬಹುದಾಗಿದೆ. ಸಂಬಂಧಪಟ್ಟ ವೈದ್ಯಾಧಿಕಾರಿಗಳು ಸಂಘ ಸಂಸ್ಥೆ, ಕಾಲೇಜು ಹಾಗೂ ಸಾರ್ವಜನಿಕರಿಗೆ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ರಕ್ತದಾನ ಶಿಬಿರಗಳನ್ನು ಆಯೋಜಿಸುವಂತೆ ಮನವಿ ಮಾಡಿದ್ದಾರೆ. ಮನವಿಗೆ ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದ್ದು, ಕೆಲವರು ವೈಯಕ್ತಿಕವಾಗಿ ಹಾಗೂ ಇನ್ನೂ ಕೆಲವರು ಸಂಘ ಸಂಸ್ಥೆಗಳ ಜೊತೆಗೂಡಿ ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡುತ್ತಿದ್ದಾರೆ.
ಇದನ್ನೂ ಓದಿ: Dakshina Kannada News: ಕರಾವಳಿಯಲ್ಲಿ ಹೆಚ್ಚಾಯ್ತು ಜೇನುತುಪ್ಪ ಸಂಗ್ರಹ, ಬೇಸಿಗೆಯೇ ಕಾರಣ!
ಮಳೆಗಾಲಕ್ಕೆ ಮುನ್ನ ಸಂಗ್ರಹದ ಸವಾಲು!
ಮಳೆಗಾಲ ಆರಂಭವಾಗುತ್ತಿದ್ದಂತೆ ಸೋಂಕಿನ ಪ್ರಮಾಣ ಜಾಸ್ತಿಯಾಗುತ್ತದೆ. ಅಂತಹ ಸಮಯದಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗಬಹುದು. ಹಾಗೂ ಹಲವು ಕಾರಣಗಳಿಗಾಗಿ ರಕ್ತದ ಬೇಡಿಕೆ ಹೆಚ್ಚಾಗಬಹುದು. ಶಿಬಿರಗಳು ನಡೆಸಲು ಕಷ್ಟವಾದರೆ ರಕ್ತದ ಸಂಗ್ರಹವೂ ಇಳಿಮುಖವಾಗುತ್ತದೆ. ಹಾಗಾಗಿ, ಮಳೆಗಾಲ ತನ್ನ ಬಿರುಸು ಪಡೆಯುವ ಮುನ್ನ ರಕ್ತ ಸಂಗ್ರಹದ ಸವಾಲು ಬ್ಲಡ್ ಬ್ಯಾಂಕ್ ಮುಂದಿದೆ.
ರಕ್ತದಾನ ಮಾಡ್ಬೇಕಂದ್ರೆ ಹೀಗೆ ಮಾಡಿ
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತದಾನ ಮಾಡಲು ಇಚ್ಛಿಸುವ ರಕ್ತದಾನಿಗಳು ವೈಯಕ್ತಿಕವಾಗಿ ಅಥವಾ ಸಂಘ ಸಂಸ್ಥೆಗಳ ಮುಖಾಂತರ ಬಂದು ರಕ್ತದಾನ ಮಾಡಬಹುದಾಗಿದೆ. ಬ್ಲಡ್ ಬ್ಯಾಂಕ್ಗೆ ರಕ್ತದಾನ ಮಾಡುವ ಉದ್ದೇಶ ಹೊಂದಿರುವವರು ನೇರವಾಗಿ ಮಂಗಳೂರು ನಗರದಲ್ಲಿರುವ ವೆನ್ಲಾಕ್ ಆಸ್ಪತ್ರೆಗೆ ಬಂದು ರಕ್ತದಾನ ಮಾಡಬಹುದಾಗಿದೆ.
ಇದನ್ನೂ ಓದಿ: Matsyagandha Express: ಕರಾವಳಿಯ ಕಣ್ಮಣಿ ಮತ್ಸ್ಯಗಂಧ ಎಕ್ಸ್ಪ್ರೆಸ್ಗೆ 25 ವರ್ಷ, ಇದು ಕೇವಲ ರೈಲಲ್ಲ, ಬದುಕು!
ಆಸಕ್ತರು ಭಾನುವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ ರಕ್ತದಾನ ಮಾಡಬಹುದಾಗಿದೆ. ಭಾನುವಾರದಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯೊಳಗಾಗಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಬಹುದಾಗಿದೆ. ನೀವು ರಕ್ತದಾನ ಮಾಡುವುದಿದ್ದರೆ ಇಲ್ಲಿದೆ ಸಂಪರ್ಕ ಸಂಖ್ಯೆ: ಸದಾಶಿವ ಶಾನ್ ಬೋಗ್, ಡಿಎಂಓ ವೆನ್ಲಾಕ್ 9845225529
ವರದಿ: ಇರ್ಷಾದ್ ಕಿನ್ನಿಗೋಳಿ, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ