news18-kannada Updated:January 14, 2021, 3:42 PM IST
ಸುಳ್ಯದ ಕೃಷಿಕ ವಿನೋದ್
ಪುತ್ತೂರು (ಜ. 14): ಕಸ ಇತ್ತೀಚಿನ ದಿನಗಳಲ್ಲಿ ಜನರ ಬಗೆಹರಿಸಲಾರದ ಸಮಸ್ಯೆಗಳಲ್ಲಿ ಒಂದಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ಹರಡುವ ವಿವಿಧ ಪ್ರಕಾರದ ಕಸಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಪರಿಸರದ ಸ್ವಚ್ಛತೆಗೂ ಮಾರಕವಾಗಿ ಪರಿಣಮಿಸುತ್ತಿದೆ. ಆದರೆ, ಇಲ್ಲೊಬ್ಬರು ಕೃಷಿಕರು ನಗರದಲ್ಲಿ ಸಂಗ್ರಹಿಸಿದ ಕಸಗಳನ್ನು ತಮ್ಮ ತೋಟದಲ್ಲೇ ಸುರಿಸಿ, ಕಸದಿಂದಲೇ ಅತ್ಯುತ್ತಮ ಗುಣಮಟ್ಟದ ಗೊಬ್ಬರ ತಯಾರಿಸುತ್ತಿದ್ದಾರೆ. ದಿನಕ್ಕೆ 1ರಿಂದ 2 ಟನ್ ಕಸ ಸಂಗ್ರಹಿಸುವ ಇವರು ಅಷ್ಟೇ ಪ್ರಮಾಣದ ಗೊಬ್ಬರವನ್ನೂ ತಯಾರಿಸಿ, ಕೃಷಿಕರಿಗೆ ನೀಡುತ್ತಿದ್ದಾರೆ.
ಇವರು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಕೃಷಿಕ ವಿನೋದ್ ಲಾಸ್ರಾಡೋ. ಸುಳ್ಯ ನಗರ ಪಂಚಾಯತ್ಗೆ ಇವರ ತೋಟ ಒಂದು ರೀತಿಯಲ್ಲಿ ಡಂಪಿಂಗ್ ಯಾರ್ಡ್ ರೀತಿಯಾಗಿ ಮಾರ್ಪಟ್ಟಿದೆ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಘನ ಹಾಗೂ ಹಸಿ ಕಸವನ್ನು ಡಂಪ್ ಮಾಡಲು ಸುಳ್ಯ ಹೊರವಲಯದಲ್ಲಿ ಸುಮಾರು ಐದು ಎಕರೆ ಪ್ರದೇಶವನ್ನು ಈ ಹಿಂದೆಯೇ ಗುರುತಿಸಲಾಗಿತ್ತು. ಆದರೆ, ಅತ್ಯಂತ ಅವೈಜ್ಞಾನಿಕವಾಗಿ ಕಸವನ್ನು ಡಂಪ್ ಮಾಡಿದ ಹಿನ್ನೆಲೆಯಲ್ಲಿ ಇದೀಗ ಇಡೀ ಪ್ರದೇಶವೇ ಕಸದಿಂದ ತುಂಬಿ ತುಳುಕಲಾರಂಭಿಸಿದೆ.

ಸುಳ್ಯದ ಕೃಷಿಕ ವಿನೋದ್
ಇದರಿಂದಾಗಿ ಸುಳ್ಯ ನಗರದಲ್ಲಿ ಪ್ರತಿನಿತ್ಯ ಸಂಗ್ರಹಿಸುವ ಕಸವನ್ನು ಡಂಪ್ ಮಾಡಲು ಸ್ಥಳಾವಕಾಶವಿಲ್ಲದೆ ಸಂದರ್ಭದಲ್ಲಿ ಕಸವನ್ನು ರಸ ಮಾಡಲು ಅಣಿಯಾಗಿದ್ದು ಇದೇ ವಿನೋದ್ ಲಾಸ್ರೋಡೋ. ಸುಳ್ಯ ನಗರದ ತುಂಬ ಸಂಗ್ರಹವಾಗುವ ಹಸಿ ಕಸವನ್ನು ತನ್ನ ತೋಟದಲ್ಲಿ ತಂದು ಸುರಿಯಲು ಅವಕಾಶವನ್ನು ನೀಡುವ ಮೂಲಕ ಇದೀಗ ಇದೇ ಕಸದಿಂದ ಅತ್ಯುತ್ತಮ ಗುಣಮಟ್ಟದ ಗೊಬ್ಬರವನ್ನು ಉತ್ಪಾದಿಸಲಾರಂಭಿಸಿದ್ದಾರೆ. ಪ್ಲಾಸ್ಟಿಕ್ ಇಲ್ಲದ ಒಂದೂವರೆಯಿಂದ ಎರಡು ಟನ್ನಷ್ಟು ಕಸ ಇವರ ತೋಟಕ್ಕೆ ಪ್ರತಿದಿನ ಬರಲಾರಂಭಿಸಿದೆ.
ಇದನ್ನೂ ಓದಿ: ಸ್ವಂತ ಜಮೀನಿನಲ್ಲಿ ದಟ್ಟ ಕಾಡು ಬೆಳೆಸಿ ಪ್ರಾಣಿ-ಪಕ್ಷಿಗಳಿಗೆ ಆಸರೆಯಾದ ಪುತ್ತೂರಿನ ಕೃಷಿಕ
ಈ ಕಸವನ್ನು ಅತ್ಯಂತ ವ್ಯವಸ್ಥಿತವಾಗಿ ಜೋಡಿಸುವ ಮೂಲಕ ಕಸದಿಂದ ಯಾವುದೇ ರೀತಿಯ ದುರ್ನಾತ, ಸೊಳ್ಳೆ, ಹುಳಗಳ ಉತ್ಪಾದನೆಯಾಗದಂತೆ ಕ್ರಮವನ್ನೂ ಜರಗಿಸಲಾಗುತ್ತಿದೆ. ದಿನನಿತ್ಯ ಸುರಿದ ಕಸದ ಮೇಲೆ ಹಸಿ ಎಲೆಗಳನ್ನು ಹಾಕಿ ಜೋಡಿಸಲಾಗುತ್ತಿದ್ದು, ಒಂದು ಹಂತಕ್ಕೆ ಕಸಗಳನ್ನು ಸುರಿದು ಜೋಡಿಸಿದ ಬಳಿಕ ಇದರ ಮೇಲೆ ಸಗಣಿಯ ನೀರು ಹಾಗೂ ಇತರ ಸಾವಯವ ದ್ರಾವಣಗಳನ್ನು ಸಿಂಪಡಿಸಲಾಗುತ್ತದೆ. ಹೀಗೆ ಸಿಂಪಡಿಸಿದ ದ್ರಾವಣಗಳು ಕಸದಿಂದ ದುರ್ವಾಸನೆ ಬರುವುದನ್ನು ಹಾಗೂ ಸೊಳ್ಳೆ ಹಾಗೂ ಇತರ ಕ್ರಿಮಿ ಕೀಟಗಳ ನಿಯಂತ್ರಣವನ್ನು ಮಾಡುತ್ತದೆ.
ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಸುಳ್ಯ ನಗರದ ತುಂಬಾ ಸಂಗ್ರಹಿಸಿದ ಕಸಗಳನ್ನು ಜೋಡಿಸಲಾಗುತ್ತಿದೆ. ಕಸ ಸಂಗ್ರಹಿಸಲು ಹೆಚ್ಚಿನ ಪ್ರಮಾಣದ ಜಾಗದ ಅನಿವಾರ್ಯತೆಯೂ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿರುವ ಲಾಸ್ರಾಡೋ ಎಲ್ಲಾ ಕೃಷಿಕರೂ ಕೂಡ ತಮ್ಮ ಕೃಷಿತೋಟದಲ್ಲಿ ಇಂತಹ ಕಸಗಳನ್ನೇ ಬಳಸಿಕೊಂಡು ಗೊಬ್ಬರ ತಯಾರಿಸಿಕೊಳ್ಳಬಹುದು ಎನ್ನುವ ಸಲಹೆಯನ್ನೂ ನೀಡುತ್ತಾರೆ. ಜೋಡಿಸಿಟ್ಟ ಕಸಗಳು ಆರು ತಿಂಗಳಾಗುವಾಗ ಹಸಿ ಗೊಬ್ಬರವಾಗಿ ಬದಲಾಗುತ್ತದೆ. ಪ್ರತಿನಿತ್ಯ ಹೆಚ್ಚಿನ ಪ್ರಮಾಣದ ಕಸಗಳ ವಿಲೇವಾರಿಯಾಗುತ್ತಿರುವ ಹಿನ್ನಲೆಯಲ್ಲಿ ಇವರ ತೋಟದಲ್ಲಿ ಹೆಚ್ಚಿನ ಪ್ರಮಾಣದ ಗೊಬ್ಬರವೂ ಉತ್ಪತ್ತಿಯಾಗುತ್ತಿದೆ.
ತಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ಬಳಸಿಕೊಂಡು ಉಳಿದ ಗೊಬ್ಬರವನ್ನು ರೈತರಿಗೆ ನೀಡುವ ಕಾರ್ಯದಲ್ಲೂ ಇವರು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ರಸ್ತೆ ಬದಿಯಲ್ಲಿ ನೆಟ್ಟ ಮರಗಿಡಗಳಿಗೆ, ಶಾಲೆಯಲ್ಲಿ ನೆಟ್ಟ ಗಿಡ ಮರಗಳಿಗೆ ಉಚಿತವಾಗಿ ಗೊಬ್ಬರವನ್ನು ಇವರು ನೀಡುತ್ತಿದ್ದು, ಸುಳ್ಯ ನಗರವನ್ನು ತಕ್ಕ ಮಟ್ಟಿಗೆ ಸ್ವಚ್ಛವಾಗಿಸುವಲ್ಲಿ ಇವರ ಪಾತ್ರವೂ ಹೆಚ್ಚಿನದ್ದಾಗಿದೆ.
Published by:
Sushma Chakre
First published:
January 14, 2021, 3:39 PM IST