ಹೆಸರಿಗೆ ಇದು ಸಿರಿಬಾಗಿಲು, ಆದರೆ ಇಲ್ಲಿದೆ ಮೂಲಭೂತ ಸೌಲಭ್ಯಗಳ ದಾರಿದ್ರ್ಯ....

ಮಳೆಗಾಲ ಬಂತೆಂದರೆ ಸಾಕು ಪುತ್ತೂರಿನ ಸಿರಿಬಾಗಿಲು ಗ್ರಾಮ ಇತರ ಪ್ರದೇಶಗಳ ಸಂಪರ್ಕವನ್ನೇ ಕಳೆದುಕೊಂಡು ದ್ವೀಪವಾಗಿಬಿಡುತ್ತದೆ. ಇಲ್ಲಿನ ಜನರಿಗೆ ಅಗತ್ಯ ಕಾರ್ಯಗಳಿಗಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗಲಾರದ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಸಿರಿಬಾಗಿಲು ಗ್ರಾಮದ ದುರವಸ್ಥೆ

ಸಿರಿಬಾಗಿಲು ಗ್ರಾಮದ ದುರವಸ್ಥೆ

  • Share this:
ಪುತ್ತೂರು: ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸಿರಿಬಾಗಿಲು ಗ್ರಾಮ. ಹೆಸರಿಗೆ ಇದು ಸಿರಿ ಬಾಗಿಲಾಗಿದ್ದರೂ, ಇಲ್ಲಿ ಮೂಲಭೂತ ವ್ಯವಸ್ಥೆಗಳ ದಾರಿದ್ರ್ಯ ಇದೆ. ಇಲ್ಲಿನ ಪುಟ್ಟ ಮಕ್ಕಳು ಅಂಗನವಾಡಿಗೆ ಹೋಗಬೇಕೆಂದರೆ ಸುಮಾರು 4 ಕಿಲೋಮೀಟರ್ ಗಳಷ್ಟು ದೂರ ನಡೆದೇ ಹೋಗಬೇಕು. ಹೈಸ್ಕೂಲ್ ಮಕ್ಕಳು ಐದು ಕಿಲೋಮೀಟರ್ ಗಳಷ್ಟು ದೂರ ಕಾಡು ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆಯಿದೆ. ಇದು ಈ ಗ್ರಾಮದ ಬೇಸಿಗೆ ಋತುವಿನ ಕಥೆಯಾದರೆ, ಮಳೆಗಾಲದಲ್ಲಿ ಈ ವ್ಯವಸ್ಥೆಯನ್ನೂ ಇಲ್ಲಿನ ಜನ ಕಳೆದುಕೊಳ್ಳುತ್ತಾರೆ.

ಹೌದು ದಟ್ಟ ಕಾಡುಗಳ ನಡುವೆಯೇ ಇರುವ ಈ ಗ್ರಾಮದ ಮಧ್ಯದಲ್ಲಿ ಮೂರು ಹೊಳೆಗಳು ಹರಿಯುತ್ತಿದ್ದು, ಮಳೆಗಾಲದಲ್ಲಿ ಈ ಹೊಳೆಗಳಲ್ಲಿ ನೀರಿನ ಮಟ್ಟ ವಿಪರೀತ ಏರಿಕೆಯಾಗುವುದರಿಂದಾಗಿ ಇಲ್ಲಿನ ಜನ ಒಂದೆಡೆಯಿಂದ ಇನ್ನೊಂದೆಡೆಗೆ ಸಂಪರ್ಕ ಇಲ್ಲದೆ ದ್ವೀಪದ ನಿವಾಸಿಗಳಂತೆ ಮಾರ್ಪಡುತ್ತಾರೆ. ಹಲವು ಬಾರಿ ತಮ್ಮ ಸಮಸ್ಯೆಗಳಿಗೆ ಮುಕ್ತಿ ದೊರಕಿಸಿಕೊಡುವಂತೆ ಸ್ಥಳೀಯ ಆಡಳಿತ, ಎಂ ಎಲ್ ಎ ಸೇರಿದಂತೆ ಹಲವರಿಗೆ ಸಾಕಷ್ಟು ಮನವಿಗಳನ್ನು ಮಾಡಿದರೂ ಇಲ್ಲಿನ ಜನರ ಸಮಸ್ಯೆಗೆ ಈವರೆಗೂ ಯಾವ ಪರಿಹಾರ ದೊರೆತಿಲ್ಲ. ಮಳೆಗಾಲದ ಸಂದರ್ಭದಲ್ಲಿ ಈ ಗ್ರಾಮದ ಜನರೇನಾದರೂ ಅನಾರೋಗ್ಯ ಪೀಡಿತರಾದಲ್ಲಿ, ವೈದ್ಯಕೀಯ ಚಿಕಿತ್ಸೆ ಎನ್ನುವುದು ಇಲ್ಲಿನ ಗ್ರಾಮದ ಜನರಿಗೆ ಮರೀಚಿಕೆಯೇ ಆಗುತ್ತದೆ. ಗ್ರಾಮೀಣಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರಗಳು ಕೋಟ್ಯಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತದೆಯಾದರೂ ಇಂಥ ಗ್ರಾಮಗಳನ್ನು ಅವುಗಳು ಇಂದಿಗೂ ಮುಟ್ಟಿಲ್ಲ ಎನ್ನುವುದು ವಿಪರ್ಯಾಸವೇ ಸರಿ.

ಇದನ್ನೂ ಓದಿ: Pasha vs Nirani - ಮುರುಗೇಶ್ ನಿರಾಣಿ ಬಳಿ 500 ಸಿಡಿ ಇವೆ: ಅಲಂ ಪಾಷಾ ಆರೋಪ

ಇಲ್ಲಿನ ಜನ ವಿದ್ಯಾಭ್ಯಾಸಕ್ಕಾಗಿ ತಮ್ಮ ಮಕ್ಕಳನ್ನು ಬೇರೆ ಪ್ರದೇಶಗಳಲ್ಲಿ ಬಿಟ್ಟು ಓದಿಸ ಬೇಕಾದಂತಹ ಪರಿಸ್ಥಿತಿಯನ್ನು ಎದುರಿಸಿಕೊಂಡು ಬರುತ್ತಿದ್ದಾರೆ. ಕಾಲೇಜಿಗೆ ಹೋಗುವ ಹಲವು ವಿಧ್ಯಾರ್ಥಿಗಳು ಇಲ್ಲಿದ್ದರೂ, ಕಾಡು ದಾರಿಯಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ಹಾಗೂ ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲೇ ಶಾಲೆ ಕಾಲೇಜಿಗೆ ಹೋಗಿ ಬಂದು ವಿದ್ಯಾಭ್ಯಾಸ ಮಾಡಬೇಕಾದ ಅನಿವಾರ್ಯತೆ ಇವರದಾಗಿದೆ. ರೇಶನ್ ಸೇರಿದಂತೆ ಮನೆಗೆ ಬೇಕಾದ ಪ್ರತಿಯೊಂದು ಅಗತ್ಯವನ್ನು ಹೊತ್ತುಕೊಂಡೇ ಸಾಗಬೇಕಾದ ಈ ಗ್ರಾಮದ ಜನರಿಗೆ ಶಾಶ್ವತ ಸೇತುವೆಯನ್ನು ನಿರ್ಮಿಸಿಕೊಡುವ ಭರವಸೆಯನ್ನು ಜನಪ್ರತಿನಿಧಿಗಳು ಪ್ರತೀ ಚುನಾವಣೆ ಬರುವ ಸಂದರ್ಭದಲ್ಲಿ ನೀಡಿ ಹೋಗುತ್ತಾರೆ. ಭರವಸೆ ಕೊಟ್ಟ ಬಳಿಕ ಅವರು ಮತ್ತೆ ಈ ಗ್ರಾಮದತ್ತ ಸುಳಿಯೋದು ಇನ್ನೊಂದು ಚುನಾವಣೆ ಬಂದ ನಂತರವೇ ಎಂದು ಈ ಗ್ರಾಮದ ಜನರು ಪ್ರಸಕ್ತ ವ್ಯವಸ್ಥೆಯ ವಿರುದ್ಧ ಕಿಡಿಕಾರುತ್ತಾರೆ.

ಅಧಿಕಾರಕ್ಕಾಗಿ ತಿಪ್ಪರಲಾಗ ಹಾಕುತ್ತಿರುವ ಜನಪ್ರತಿನಿಧಿಗಳಿಗೆ ಇಂಥ ಅದೆಷ್ಟೋ ಪ್ರದೇಶಗಳಲ್ಲಿರುವ ಜನರ ಸಮಸ್ಯೆಗಳತ್ತ ಒಂದು ಬಾರಿಯಾದರೂ ಗಮನಹರಿಸುವ ಪುರುಸೋತ್ತಿಲ್ಲದಂತಾಗಿದೆ. ರಾಜಕಾರಣಿಗಳು, ಜನಪ್ರತಿನಿಧಿಗಳು, ಅಧಿಕಾರವರ್ಗದವರು ಇನ್ನಾದರೂ ಈ ಗ್ರಾಮದ ಜನತೆಯ ಸಂಕಷ್ಟಗಳ ನಿವಾರಣೆಯತ್ತ ಶ್ರಮಿಸಬೇಕಿದೆ.

ಇದನ್ನೂ ಓದಿ: ಬಿಎಸ್​ವೈ ಇದ್ದರೆ ಬಿಜೆಪಿ, ಇಲ್ಲ ಎಲ್ಲವೂ ಸರ್ವನಾಶ : ಯಡಿಯೂರಪ್ಪ ಬೆಂಬಲಕ್ಕೆ ನಿಂತ ಸ್ವಾಮೀಜಿಗಳಿಂದ ಎಚ್ಚರಿಕೆ

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಅಜಿತ್ ಕುಮಾರ್
Published by:Vijayasarthy SN
First published: