ಯಡಿಯೂರಪ್ಪ ನಂತರ ಬರೋನೂ ಭ್ರಷ್ಟನೇ ಆಗಿರ್ತಾನೆ: ಸಿದ್ದರಾಮಯ್ಯ, ಡಿಕೆಶಿ ಗುಡುಗು

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರೋವಾಗ ಇವರು ಸಿಎಂ ಬದಲಾವಣೆ ಮಾಡಲು ಹೊರಟಿದ್ದಾರೆ. ಮುಂದೆ ಸಿಎಂ ಆಗೋನೂ ಭ್ರಷ್ಟನೇ ಆಗಿರ್ತಾನೆ ಎಂದು ಮಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಮಂಗಳೂರು: ಸರ್ಕಾರದ ಮುಖ್ಯಮಂತ್ರಿ ಬದಲಾವಣೆ ಪ್ರಹಸನಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದ್ದಾರೆ. ಮಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ಧರಾಮಯ್ಯ, ಜನಗಳ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ, ಹಿಂದೆಯೂ ಇರಲಿಲ್ಲ, ಈಗ ಬರೋಕೂ ಸಾಧ್ಯವಿಲ್ಲ ಎಂದು ಖಂಡಿಸಿದ್ದಾರೆ. 2019ರಲ್ಲಿ ಬಂದ ಪ್ರವಾಹದ ಪರಿಹಾರವನ್ನೇ ಯಡಿಯೂರಪ್ಪ ಇನ್ನೂ ಕೊಟ್ಟಿಲ್ಲ. ಈಗ ಎಲ್ಲಾ ಕಡೆ ಮಳೆ ಬಂದು ಜನ ಕೊಚ್ಚಿ ಹೋಗಿದ್ದಾರೆ. ಮನೆಗಳು ಬಿದ್ದಿವೆ. ಈಗ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡೋ ಬದಲು ಸಿಎಂ ಬದಲಾವಣೆಯಲ್ಲಿದ್ದಾರೆ. ಈಗ ಯಡಿಯೂರಪ್ಪರನ್ನ ಚೇಂಜ್ ಮಾಡ್ತಾರೆ. ಆದ್ರೆ ಬರೋನು ಕೂಡ ಭ್ರಷ್ಟನೇ ಆಗಿರ್ತಾನೆ. ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು. ಇಲ್ಲಿ ಜನಾಭಿಪ್ರಾಯ ಬಹಳ ಮುಖ್ಯ, ಪಕ್ಷದ ಒಳಗಿನ ವಿಚಾರದಲ್ಲಿ ಯಾರೂ ಕೈ ಹಾಕಬಾರದು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗಿದ್ದಾರೆ.

ಇನ್ನು ವಲಸಿಗ ಸಚಿವರು ಮತ್ತೆ ಕಾಂಗ್ರೆಸ್ ಸೇರುತ್ತಾರಾ ಅನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ವಲಸಿಗರು ಬರ್ತಾರೆ ಅನ್ನೋದು ನನಗಂತೂ ಗೊತ್ತಿಲ್ಲ. ಈ ಬಗ್ಗೆ ನಾನು ಸದನದಲ್ಲೇ ಅವರನ್ನ ವಾಪಾಸ್ ತೆಗೆದುಕೊಳ್ಳಲ್ಲ ಅಂದಿದ್ದೆ. ಯಾವುದೇ ಕಾರಣಕ್ಕೂ ಅವರನ್ನು ವಾಪಾಸ್ ತಗೊಳೋದಿಲ್ಲ ಅನ್ನೋ ಮಾತಿಗೆ ಬದ್ದವಾಗಿದ್ದೇನೆ. ರಾಹುಲ್ ಗಾಂಧಿಯವರು ಎಲ್ಲರೂ ಒಟ್ಟಾಗಿ ಭ್ರಷ್ಟ ಬಿಜೆಪಿ ಸರ್ಕಾರ ಬದಲಾಯಿಸಿ ಅಂದಿದ್ದಾರೆ ಎಂದು ಹೇಳಿದ್ದಾರೆ.

ನಾನು ತಿಂಗಳ ಹಿಂದೆಯೇ ಯಡಿಯೂರಪ್ಪ ಬದಲಾಗ್ತಾರೆ ಅಂದಿದ್ದೆ. ನನಗೆ ಹೈಕಮಾಂಡ್ ಮೂಲದ ಮಾಹಿತಿ ಇತ್ತು. ಆದ್ರೆ ಯಾರು ಬರ್ತಾರೆ ಅನ್ನೋ ಮಾಹಿತಿಯಿಲ್ಲ. ಯಾರನ್ನು ಸಿಎಂ ಮಾಡ್ತಾರೆ ಅನ್ನೋ ವಿಚಾರದಲ್ಲಿ ನಳಿನ್ ಕಟೀಲ್ ಗೆ ಸವಾಲು ಹಾಕ್ತೇನೆ. ಸಿದ್ದರಾಮಯ್ಯ ದಲಿತರನ್ನ ಸಿಎಂ ಮಾಡಲಿ ಅಂತ ಅವರು ನನಗೆ ಹೇಳಿದ್ದರು. ಆದರೆ, ನಮ್ಮಲ್ಲಿ ಬಹಳ ಜನ ದಲಿತರು ಸಿಎಂ ಆಗಿದ್ದಾರೆ. ಸದ್ಯ ಬಿಜೆಪಿಯವರಿಗೆ ಆ ಅವಕಾಶ ಬಂದಿದೆ. ಕಟೀಲ್ ಅವರು ದಲಿತರನ್ನ ಸಿಎಂ ಮಾಡಲಿ. ದಲಿತರ ಬಗ್ಗೆ ಕಟೀಲ್​ಗೆ ಪ್ರೀತಿ ಇದೆ ಅಲ್ವ, ಸಾಮಾಜಿಕ ನ್ಯಾಯ ಅಂತ ಹೇಳ್ತಾರೆ. ಹೇಗಿದ್ರೂ ಯಡಿಯೂರಪ್ಪರನ್ನ ತೆಗೀತಾರೆ, ಈಗ ದಲಿತರನ್ನ ತಕ್ಷಣವೇ ಸಿಎಂ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಿದ್ದರಾಮಯ್ಯ ಸವಾಲೆಸಿದಿದ್ದಾರೆ.

ಇದನ್ನೂ ಓದಿ: Landslides - ಮಹಾರಾಷ್ಟ್ರದಲ್ಲಿ ಭೂಕುಸಿತ ದುರಂತ: 36 ಮಂದಿ ಬಲಿ; ಮಣ್ಣಿನಡಿ ಸಿಲುಕಿರುವ 30ಕ್ಕೂ ಹೆಚ್ಚು ಜನರು

ಫೋನ್ ಕದ್ದಾಲಿಕೆಯಿಂದ ಸಮ್ಮಿಶ್ರ ಸರ್ಕಾರ ಪತನ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಫೋನ್ ಕದ್ದಾಲಿಕೆ ಇದೇ ಮೊದಲಲ್ಲ. ಬಿಜೆಪಿ ಇದಕ್ಕೂ ಮೊದಲು ಮಾಡಿದೆ. 2019ರಲ್ಲಿ ನನ್ನ ಪಿಎ ವೆಂಕಟೇಶ್ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಕುಮಾರಸ್ವಾಮಿ, ಜಿ.ಪರಮೇಶ್ವರ್ ಸೇರಿ ಹಲವರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಕಿತ್ತು ಹಾಕಲು ಏನು ಬೇಕೋ ಅದೆಲ್ಲಾ ಮಾಡಿದ್ದಾರೆ. ನಾನು ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆಗೆ ಆಗ್ರಹಿಸುತ್ತೇನೆ. ಇದೊಂದು ಪ್ರಜಾಪ್ರಭುತ್ವದ ಕೊಲೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್ ಗಳದ್ದೇ ಫೋನ್ ಕದ್ದಾಲಿಸೋದು ದೇಶದ್ರೋಹದ ಕೆಲಸ. ಇವರಿಗೆ ಸರ್ಕಾರ ಮಾಡೋಕೆ ಯೋಗ್ಯತೆ ಇಲ್ಲ, ನಾಲಾಯಕ್​ಗಳು ಇವರು ಎಂದು ಲೇವಡಿ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಟೀಕೆ:

ಇನ್ನು ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಹೋದ ಸಚಿವರು ಮತ್ತೆ ಕಾಂಗ್ರೆಸ್​ಗೆ ಬರೋದಾದರೆ ಅರ್ಜಿ ಹಾಕಲಿ ಪರಿಶೀಲನೆ ನಡೆಸುತ್ತೇವೆ ಅಂತಾ ತಾವು ನೀಡಿದ ಹೇಳಿಕೆಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಕಾಂಗ್ರೆಸ್​ಗೆ ಯಾರಾದ್ರೂ ಬರೋರಿದ್ರೆ ಅರ್ಜಿ ಹಾಕಲಿ. ಆ ಮೇಲೆ ಕೂತು ಮಾತನಾಡೋಣ. ಈಗ ಇದರ ಬಗ್ಗೆ ಸುಮ್ಮನೆ ಮಾತನಾಡಲ್ಲ. ಹೋದವರು, ಇರೋರು ಬರ್ತಾರೆ ಅನ್ನೋದಲ್ಲ. ಯಾವುದೇ ಇದ್ದರೂ ಪಕ್ಷದ ಕಾನೂನಿನಡಿ ನಿರ್ಧಾರ ತೆಗೆದುಕೊಳ್ತೇವೆ. ಕಾಂಗ್ರೆಸ್​ಗೆ ಬರಬೇಕು ಅಂತಾ ಇರೋರು ತುಂಬಾ ಮಂದಿ ಇದ್ದಾರೆ. ಅವರ ಹೆಸರು ಈಗ ಹೇಳೋದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇನ್ನು ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆ‌ಶಿ, ಒಳ್ಳೆಯ ಸರ್ಕಾರ ಕೊಡಲು ಆಗದ ಕಾರಣ ಮುಖ್ಯಮಂತ್ರಿ ಬದಲಾವಣೆ ಆಗ್ತಿದೆ. ಎರಡು ವರ್ಷದಲ್ಲಿ ಡಬಲ್ ಇಂಜಿನ್ ಸರ್ಕಾರ ಇಟ್ಟುಕೊಂಡು ಒಳ್ಳೆ ಆಡಳಿತ ಕೊಡಲು ಆಗಿಲ್ಲ. ಇವರ ಆಡಳಿತ ಸರಿ ಇಲ್ಲ. ಅಧಿಕಾರಿಗಳಿಂದ ಹಿಡಿದು ಗ್ರಾ.ಪಂ, ವಿಧಾನಸೌಧದವರೆಗೆ ಯಾರೂ ಮಾತು ಕೇಳ್ತಿಲ್ಲ. ಈಗ ತರಾತುರಿಯಲ್ಲಿ ಅನುದಾನ ಬಿಡುಗಡೆಯಾಗ್ತಿದೆ. ಫೈಲ್​ಗಳಿಗೆ ಸಹಿ ಆಗ್ತಿದೆ. ನೀರಾವರಿ ಇಲಾಖೆ ಸೇರಿ ಬೇರೆ ಬೇರೆ ಇಲಾಖೆಯ ಫೈಲ್​ಗಳು ಕ್ಲಿಯರ್ ಆಗ್ತಿದೆ. ಬಜೆಟ್​ನಲ್ಲಿ ಎಷ್ಟು ದುಡ್ಡು ಇಟ್ಟಿದ್ರೀ? ಈಗ ಎಷ್ಟು ಕ್ಲಿಯರ್ ಆಗ್ತಿದೆ? ಎರಡು ವರ್ಷದಿಂದ ಎಷ್ಟಾಗಿದೆ? ಈ ಬಗ್ಗೆ ಅಸೆಂಬ್ಲಿಯಲ್ಲಿ ದಾಖಲೆ ಸಮೇತ ನಾನು ಮಾತನಾಡ್ತೇನೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಮತ್ತೆ ಭ್ರಷ್ಟಾಚಾರದ ಆರೋಪ ಮಾಡಿರುವ ಡಿ.ಕೆ. ಶಿವಕುಮಾರ್, ಹಣಕಾಸು ಇಲಾಖೆಯಲ್ಲಿ  ದುಡ್ಡಿಲ್ಲ ಅಂತ ಸರ್ಕಾರ ಪ್ರಾಜೆಕ್ಟ್ ಕ್ಲಿಯರ್ ಆಗ್ತಿರಲಿಲ್ಲ. ಈಗ ದುಡ್ಡು ಎಲ್ಲಿಂದ ಬಂತು? ಇವೆಲ್ಲಾ ಕೂಡ ದೊಡ್ಡ ಚರ್ಚೆಯಾಗಬೇಕು. ಇದನ್ನ ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡ್ತೀನಿ ಎಂದವರು ಹೇಳಿದ್ದಾರೆ.

ವರದಿ: ಕಿಶನ್ ಕುಮಾರ್
Published by:Vijayasarthy SN
First published: