ಸಾವರ್ಕರ್ ಬದಲು ಟಿಪ್ಪು ಸುಲ್ತಾನ್ ಚಿತ್ರ ಹಾಕಿ: ಕಬಕದಲ್ಲಿ ಎಸ್​ಡಿಪಿಐ ಕಾರ್ಯಕರ್ತರ ಗಲಾಟೆ

ಸ್ವಾತಂತ್ರ್ಯೋತ್ಸವದ ಭಾಗವಾಗಿ ಸರ್ಕಾರದ ಸೂಚನೆಯಂತೆ ತಯಾರಾದ ರಥದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಚಿತ್ರ ಹಾಕಲಾಗಿತ್ತು. ಕಬಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಂಥ ರಥದ ಮೇಲೆ ಸಾವರ್ಕರ್ ಚಿತ್ರ ಸೇರಿಸಿದ್ದನ್ನ ಎಸ್ಡಿಪಿಐ ಕಾರ್ಯಕರ್ತರು ಬಲವಾಗಿ ಆಕ್ಷೇಪಿಸಿದರು.

ಸ್ವಾತಂತ್ರ್ಯೋತ್ಸವ ರಥ

ಸ್ವಾತಂತ್ರ್ಯೋತ್ಸವ ರಥ

  • Share this:
ಪುತ್ತೂರು, ಆ. 15: ದೇಶದಾದ್ಯಂತ 75 ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ವಿವಾದವೊಂದು ಏರ್ಪಟ್ಟಿದೆ. ಈ ಬಾರಿ ರಾಜ್ಯದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪ್ರತೀ ಗ್ರಾಮಪಂಚಾಯತ್ ನಿಂದ ಸ್ವಾತಂತ್ರ್ಯ ರಥವನ್ನು ಸಿದ್ಧಪಡಿಸುವ ಸೂಚನೆ ಸರಕಾರದಿಂದ ನೀಡಲಾಗಿತ್ತು. ಪುತ್ತೂರಿನ ಕಬಕ ಗ್ರಾಮಪಂಚಾಯತ್ ನಲ್ಲೂ ಸ್ವಾತಂತ್ರ್ಯ ರಥವನ್ನು ಸಿದ್ಧಪಡಿಸಿ, ಪಂಚಾಯತ್ ವ್ಯಾಪ್ತಿಯಲ್ಲಿ ರಥವನ್ನು ಓಡಿಸುವ ಪ್ರಕ್ರಿಯೆಗೂ ಸಿದ್ಧತೆ ನಡೆಸಲಾಗಿತ್ತು. ಪಂಚಾಯತ್​ನ ಅಧ್ಯಕ್ಷರು ಹಾಗೂ ಪಿಡಿಒ ಅವರು ಪಂಚಾಯತ್ ಆವರಣದಲ್ಲಿ ರಥಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಪಕ್ಷದ ಕೆಲವು ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಸ್ವಾತಂತ್ರ್ಯ ರಥ ತೆರಳುವುದಕ್ಕೆ ಅಡ್ಡಿಪಡಿಸಿದರು. ರಥದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಹಾಕಲಾಗಿದ್ದು, ಇದರಲ್ಲಿದ್ದ ವೀರ್ ಸಾವರ್ಕರ್ ಚಿತ್ರವನ್ನು ತೆಗೆದುಹಾಕಬೇಕೆಂದು ಎಸ್.ಡಿ.ಪಿ.ಐ ಕಾರ್ಯಕರ್ತರು ಆಗ್ರಹ ಮಾಡಿದರು.

ವೀರ್ ಸಾವರ್ಕರ್ ಚಿತ್ರದ ಬದಲು ಟಿಪ್ಪು ಸುಲ್ತಾನ್ ನ ಚಿತ್ರ ಹಾಕುವಂತೆ ಕಾರ್ಯಕರ್ತರು ಪಟ್ಟು ಹಿಡಿದಿದ್ದು, ಸ್ಥಳದಲ್ಲಿ ಸ್ವಲ್ಪ ಸಮಯ ಉದ್ವಿಗ್ನ ಸ್ಥಿತಿಯೂ ನಿರ್ಮಾಣಗೊಂಡಿದೆ. ಪಂಚಾಯತ್ ಸದಸ್ಯರು ಹಾಗೂ ರಥಕ್ಕೆ ತಡೆಯೊಡ್ಡಿದವರ ವಿರುದ್ಧ ನೂಕಾಟ-ತಳ್ಳಾಟವೂ ನಡೆದಿದ್ದು, ಸಂಭ್ರಮದಿಂದ ನಡೆಯಬೇಕಾಗಿದ್ದ ಸ್ವಾತಂತ್ರ್ಯೋತ್ಸವ ವಿವಾದದ ಕೇಂದ್ರಬಿಂದುವಾಗಿಯೂ ಬದಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಪೋಲೀಸರು ಆಗಮಿಸಿ ರಥಕ್ಕೆ ತಡೆಯೊಡ್ಡಿದವರನ್ನು ಚದುರಿಸುವ ಮೂಲಕ ರಥದ ಚಾಲನೆಗೆ ಅವಕಾಶ ಮಾಡಿಕೊಟ್ಟರು.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಬಕ ಗ್ರಾಮಪಂಚಾಯತ್​ಗೆ ಭೇಟಿ ನೀಡಿದ ಪುತ್ತೂರು ಶಾಸಕ‌ ಸಂಜೀವ ಮಠಂದೂರು ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಮಾಡಿದ ಘಟನೆಯನ್ನು ಖಂಡಿಸಿದರಲ್ಲದೆ, ರಥಕ್ಕೆ ಅಡ್ಡಿ ಮಾಡಿದ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸುವಂತೆ ಪೋಲೀಸರಿಗೆ ಸೂಚಿಸಿದರು.

ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ ಕಾಲಿಟ್ಟರೂ ಸಿಎಂ ತವರಿನಲ್ಲಿ ಪೂರ್ಣಗೊಳ್ಳದ ರಾಷ್ಟ್ರಧ್ವಜ ಮ್ಯೂಸಿಯಂ

ಕೇರಳದ ಸಂಪರ್ಕ ಹೊಂದಿರುವ ಕಬಕದಲ್ಲಿ ಇತ್ತೀಚಿನ ದಿನಗಳಲ್ಲಿ ಮತೀಯ ಸಂಘಟನೆಗಳು ಸಕ್ರಿಯವಾಗಿದ್ದು, ಸಾಮಾಜದ ಸ್ವಾಸ್ಥವನ್ನು ಕದಡುವ ಪ್ರಯತ್ನದಲ್ಲಿ ನಿರಂತರವಾಗಿ ನಿರತವಾಗಿದೆ. ಇದೀಗ ಸ್ವಾತಂತ್ರ್ಯದ ರಥದಲ್ಲೂ ಮತೀಯ ವಾದವನ್ನು ತರುವ ಮೂಲಕ ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸುವ ಯತ್ನ ನಡೆಸಿರುವುದು‌ ಖಂಡನೀಯ ಎಂದಿರುವ ಶಾಸಕ ಸಂಜೀವ ಮಠಂದೂರು, ಈ ಘಟನೆಯ ಹಿಂದೆ ಕೇರಳ ಮೂಲದ ಕೆಲವು ಸಂಘಟನೆಗಳ  ಕೈವಾಡವಿದ್ದು, ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ರಾಯಿಸಿದರು.

ತನಿಖೆಯನ್ನು ಎನ್.ಐ.ಎ ಗೆ ವಹಿಸುವ ಮೂಲಕ ಘಟನೆಯ ಹಿಂದಿನ ಶಕ್ತಿಯನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿರುವ ಅವರು, ಕಬಕವನ್ನು ಮತ್ತೊಂದು ಕಾಶ್ಮೀರವಾಗಲು ಅವಕಾಶ ನೀಡುವುದಿಲ್ಲ ಎಂದರು. ಸ್ಥಳೀಯ ಪೋಲೀಸರಿಗೆ ಆರೋಪಿಗಳ ಬಂಧನಕ್ಕೂ ಸೂಚನೆ ನೀಡಿದ ಅವರು, ಈ ಸಂಬಂಧ ಗೃಹ ಸಚಿವರ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.

ಸರಕಾರವೇ ದೇಶದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ರಥದಲ್ಲಿ ಹಾಕಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ರಥವನ್ನು ಸಿದ್ಧಪಡಿಸಲಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ ಕೆಲಸ ಕಬಕದಲ್ಲಿ‌ ನಡೆದಿದ್ದು, ಸದ್ಯಕ್ಕೆ‌ ಮುಗಿದ‌ ಹಂತಕ್ಕೆ ತಲುಪಿರುವ ಈ ಘಟನೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ವಿವಾದದ ಕಿಡಿ ಹೊತ್ತಿಸುವ ಲಕ್ಷಣವೂ ಗೋಚರಿಸಲಾರಂಭಿಸಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಅಜಿತ್ ಕುಮಾರ್
Published by:Vijayasarthy SN
First published: