Scuba Diving in Karnataka: ರಾಜ್ಯದಲ್ಲಿ ಸ್ಕೂಬಾ ಡೈವಿಂಗ್ ಮತ್ತೆ ಶುರು; ಕೈಬೀಸಿ ಕರೆಯುತ್ತಿದೆ ನೇತ್ರಾಣಿ ದ್ವೀಪ

ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಿಂದ ಸುಮಾರು 19 ಕಿಲೋ ಮೀಟರ್ ದೂರದ ಸಮುದ್ರದಲ್ಲಿ ನೇತ್ರಾಣಿ ದ್ವೀಪವಿದೆ. ಕರ್ನಾಟಕದಲ್ಲಿಯೇ ಸ್ಕೂಬಾ ಡೈವಿಂಗ್ ಮಾಡುವ ಏಕೈಕ ಸ್ಥಳ ನೇತ್ರಾಣಿ ದ್ವೀಪವಾಗಿದ್ದು ಹಲವಾರು ಬಗೆಯ ಜಲಚರಗಳಿಗೆ ಸ್ಥಾನವನ್ನ ಒದಗಿಸುವ ಮೂಲಕ ಪ್ರಾಕೃತಿಕವಾಗಿ ಸಾಕಷ್ಟು ವೈವಿಧ್ಯತೆಗಳನ್ನ ಹೊಂದಿದೆ.

ಸ್ಕೂಬಾ ಡೈವಿಂಗ್​

ಸ್ಕೂಬಾ ಡೈವಿಂಗ್​

  • Share this:
ಕಾರವಾರ: ಕಡಲಾಳದಲ್ಲಿ ಮೀನುಗಳ ಜೊತೆಗೆ ಈಜಾಡುತ್ತಾ ಆಳಸಮುದ್ರ ಜೀವಿಗಳ ಲೋಕವನ್ನ ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಸಮುದ್ರದಾಳದ ಪರಿಸರವನ್ನ ನೋಡುವ ಅವಕಾಶವನ್ನ ಕಲ್ಪಿಸುವ ರಾಜ್ಯದ ಏಕೈಕ ಪ್ರದೇಶ ಅಂದ್ರೆ ಅದು ಉತ್ತರಕನ್ನಡ ಜಿಲ್ಲೆಯ ನೇತ್ರಾಣಿ ದ್ವೀಪ. ಸದ್ಯ ಕೊರೊನಾ ಹಿನ್ನಲೆ ಕಳೆದ ಎರಡು  ವರ್ಷದಿಂದ ಸ್ಥಗಿತಗೊಂಡಿದ್ದ ಸ್ಕೂಬಾ ಡೈವಿಂಗ್‌ನ್ನ ಪ್ರಾರಂಭಿಸಲು ಇದೀಗ ಜಿಲ್ಲಾಡಳಿತ ಅನುಮತಿ ನೀಡಿದ್ದು ಸಾಲು ಸಾಲು ರಜೆಗಳ ನಡುವೆ ಮುರ್ಡೇಶ್ವರ ಪ್ರವಾಸಿಗರನ್ನ ಸೆಳೆಯುತ್ತಿದೆ.

ಕೈಬೀಸಿ ಕರೆಯುತ್ತಿದೆ ನೇತ್ರಾಣಿ ದ್ವೀಪ

ಧಾರ್ಮಿಕ ಹಾಗೂ ಪ್ರವಾಸೋದ್ಯಮದ ನಿಟ್ಟಿನಲ್ಲೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ತಾಣಗಳಲ್ಲಿ ಮುರ್ಡೇಶ್ವರ ಸಹ ಒಂದು. ರಾಜ್ಯದಲ್ಲಿಯೇ ಅತೀ ಎತ್ತರದ ಶಿವನ ಮೂರ್ತಿಯನ್ನ ಹೊಂದಿರುವ ಮುರ್ಡೇಶ್ವರಕ್ಕೆ ಪ್ರತಿವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ದೇಶದ ವಿವಿಧೆಡೆಗಳಿಂದ ಆಗಮಿಸುತ್ತಾರೆ. ಅದರಲ್ಲೂ ಸ್ಕೂಬಾ ಡೈವಿಂಗ್ ಮಾಡಲು ಪ್ರಶಸ್ತವಾದ ಸ್ಥಳಗಳಿರುವ ತಾಣಗಳಲ್ಲಿ ಮುರ್ಡೇಶ್ವರದ ನೇತ್ರಾಣಿ ದ್ವೀಪ ದೇಶದಲ್ಲಿಯೇ ಎರಡನೇಯ ಸ್ಥಾನವನ್ನ ಪಡೆದಿದೆ.

ಸ್ಕೂಬಾ ಡೈವಿಂಗ್‌ನ್ನ ಪುನರಾರಂಭಿಸಲು ಅವಕಾಶ

ಹೀಗಾಗಿ ಸಾಕಷ್ಟು ಮಂದಿ ಸ್ಕೂಬಾ ಡೈವಿಂಗ್ ಮಾಡುವ ಉದ್ದೇಶದಿಂದಲೇ ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಆಗಮಿಸುತ್ತಾರೆ.ಆದ್ರೆ ಕೊರೊನಾ ಮೊದಲನೇಯ ಅಲೆ ಅಪ್ಪಳಿಸಿದ ಬಳಿಕ ಸ್ಕೂಬಾ ಡೈವಿಂಗ್‌ನ್ನ ಸ್ಥಗಿತಗೊಳಿಸಿದ್ದು ಸರಿಸುಮಾರು ಎರಡು ವರ್ಷದ ಬಳಿಕ ಮತ್ತೆ ಸ್ಕೂಬಾ ಪ್ರಾರಂಭಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ. ಜಿಲ್ಲೆಯ ಕೊರೊನಾ ಪಾಸಿಟಿವಿಟಿ ದರ ಶೇಕಡಾ 1ಕ್ಕಿಂತ ಕಡಿಮೆಯಿದ್ದು ಸದ್ಯ ಪ್ರತಿನಿತ್ಯದ ಕೊರೊನಾ ಪ್ರಕರಣಗಳ ಸಂಖ್ಯೆ ಸಹ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೀಗಾಗಿ ಕೊರೊನಾ ಹೊಡೆತದಿಂದಾಗಿ ನೆಲಕಚ್ಚಿದ್ದ ಪ್ರವಾಸೋದ್ಯಮವನ್ನ ಉತ್ತೇಜಿಸುವ ಉದ್ದೇಶದಿಂದ ಮುರ್ಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ನ್ನ ಪುನರಾರಂಭಿಸಲು ಅವಕಾಶವನ್ನ ನೀಡಲಾಗಿದೆ. ಆದ್ರೆ ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡುವುದು ಕಡ್ಡಾಯವಾಗಿದ್ದು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದಲೂ ಜಿಲ್ಲಾಡಳಿತ ಈ ಕ್ರಮವನ್ನ ಕೈಗೊಂಡಿದೆ.

ಇದನ್ನೂ ಓದಿ: Mysore Dasara 2021: ಮೈಸೂರು ಅರಮನೆಯಲ್ಲಿನ ವೈಭವದ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ

ಅಪರೂಪದ ಕಡಲಜೀವಿಗಳನ್ನು ಕಣ್ತುಂಬಿಕೊಳ್ಳಬಹುದು

ಇನ್ನು ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಿಂದ ಸುಮಾರು 19 ಕಿಲೋ ಮೀಟರ್ ದೂರದ ಸಮುದ್ರದಲ್ಲಿ ನೇತ್ರಾಣಿ ದ್ವೀಪವಿದೆ. ಕರ್ನಾಟಕದಲ್ಲಿಯೇ ಸ್ಕೂಬಾ ಡೈವಿಂಗ್ ಮಾಡುವ ಏಕೈಕ ಸ್ಥಳ ನೇತ್ರಾಣಿ ದ್ವೀಪವಾಗಿದ್ದು ಹಲವಾರು ಬಗೆಯ ಜಲಚರಗಳಿಗೆ ಸ್ಥಾನವನ್ನ ಒದಗಿಸುವ ಮೂಲಕ ಪ್ರಾಕೃತಿಕವಾಗಿ ಸಾಕಷ್ಟು ವೈವಿಧ್ಯತೆಗಳನ್ನ ಹೊಂದಿದೆ. ಹವಳದಂಡೆಯನ್ನ ಹೊಂದಿರುವ ರಾಜ್ಯದ ಏಕೈಕ ಪ್ರದೇಶವಾಗಿರುವುದರ ಜೊತೆಗೆ ಅಪರೂಪದ ಕಡಲಜೀವಿಗಳ ಸುಮಾರು 35ಕ್ಕೂ ಅಧಿಕ ಪ್ರಬೇಧಗಳನ್ನ ಇಲ್ಲಿ ಗುರುತಿಸಲಾಗಿದೆ. ಸ್ವಚ್ಛವಾದ ನೀರನ್ನ ಈ ಪ್ರದೇಶ ಹೊಂದಿರುವುದರಿಂದ ಸ್ಕೂಬಾ ಡೈವಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದ್ದು ದೇಶ, ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಹವಳದಂಡೆಗಳ ವಿಸ್ಮಯ ನಿಮ್ಮನ್ನು ಆವರಿಸಿಕೊಳ್ಳುತ್ತದೆ 

ಸಮುದ್ರದ ಸುಮಾರು 12 ಅಡಿ ಆಳದಲ್ಲಿ ಸ್ಕೂಬಾ ಮಾಡುವ ಮೂಲಕ ಅಪರೂಪದ  ಹವಳದಂಡೆಗಳು ಹಾಗೂ ಭಿನ್ನ ವಿಭಿನ್ನ ಜಲಚರಗಳನ್ನ ನೋಡುವ ಅವಕಾಶವನ್ನ ಇದು ಒದಗಿಸಿಕೊಡುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ಕೂಬಾ ಮಾಡುವ ಕ್ರೇಜ್‌ನಿಂದಲೇ ಸಾಕಷ್ಟು ಮಂದಿ ಪ್ರವಾಸಿಗರೂ ಸಹ ಆಗಮಿಸುತ್ತಿದ್ದು ಇದೀಗ ಜಿಲ್ಲಾಡಳಿತ ಅವಕಾಶ ನೀಡಿರುವುದು ಸಾಕಷ್ಟು ಅನುಕೂಲವಾಗಲಿದೆ ಅಂತಾರೇ ಸ್ಕೂಬಾ ಆಯೋಜಕರು. ಸತತ 2 ವರ್ಷಗಳಿಂದ ಕೊರೊನಾ ಅಬ್ಬರಕ್ಕೆ ಮಂಕಾಗಿದ್ದ ಉತ್ತರಕನ್ನಡ ಪ್ರವಾಸೋದ್ಯಮ ಸದ್ಯ ಚೇತರಿಸಿಕೊಳ್ಳುತ್ತಿದ್ದು ಇದೀಗ ಸ್ಕೂಬಾ ಡೈವಿಂಗ್‌ಗೂ ಅವಕಾಶ ನೀಡಿರೋದು ಮತ್ತಷ್ಟು ಉತ್ತೇಜನ ನೀಡೋದಂತೂ ಸತ್ಯ.
Published by:Kavya V
First published: