Puttur Collage ವಿದ್ಯಾರ್ಥಿನಿಯರ ವಿಷಯಕ್ಕೆ ಶುರುವಾದ ಗಲಾಟೆಗೆ ಕೋಮುದ್ವೇಷದ ಬಣ್ಣ..!?

Puttur Govt PU College: ವಿದ್ಯಾರ್ಥಿನಿಯರ ವಿಚಾರದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಆರಂಭಗೊಂಡ ಗಲಾಟೆ ಇದೀಗ ಬೀದಿಗೆ ಬಂದು ತಲುಪಿದೆ. ಎರಡೂ ಗುಂಪುಗಳ ಪರ ಹಾಗೂ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ಘಟನೆ ಸಂಬಂಧ ಪ್ರತಿಭಟನೆ

ಘಟನೆ ಸಂಬಂಧ ಪ್ರತಿಭಟನೆ

  • Share this:
ಕೋಮುಸೂಕ್ಷ್ಮ ದಕ್ಷಿಣಕನ್ನಡ (Dakshina Kannada) ಜಿಲ್ಲೆಯಲ್ಲಿ ಮತ್ತೆ ಕೋಮುದ್ವೇಷ (Communal Hatred) ಹರಡುವ ಘಟನೆಗಳು ಗೋಚರಿಸಲಾರಂಭಿಸಿದೆ. ಈ ಘಟನೆಗಳು ಇತ್ತೀಚಿನ ದಿನಗಳಲ್ಲಿ ಪುತ್ತೂರಿನಲ್ಲಿ ನಡೆಯಲಾರಂಭಿಸಿದ್ದು, ಪುತ್ತೂರು ಕೊಂಬೆಟ್ಟು ಸರಕಾರಿ ಪಿ.ಯು ಕಾಲೇಜು (Puttur Govt College)  ಇದರ ಕೇಂದ್ರ ಬಿಂದುವಾಗಿದೆ. ವಿದ್ಯಾರ್ಥಿನಿಯರ ವಿಚಾರದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಆರಂಭಗೊಂಡ ಗಲಾಟೆ ಇದೀಗ ಬೀದಿಗೂ ಬಂದು ತಲುಪಿದೆ. ವಿದ್ಯಾರ್ಥಿಗಳ ಎರಡು ಗುಂಪು ಕಳೆದ ಒಂದು ವಾರದಿಂದೀಚೆಗೆ ವಿದ್ಯಾರ್ಥಿನಿಯರ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದು, ಒಂದು ಗುಂಪಿನ ಪ್ರಕಾರ ಕೆಲವು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರನ್ನು ಚುಡಾಯಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದಾದರೆ, ಇನ್ನೊಂದು ಗುಂಪು ವಿದ್ಯಾರ್ಥಿನಿಯ ಜೊತೆಗೆ ಮಾತನಾಡಿದ ಒಂದೇ ಕಾರಣಕ್ಕೆ ಹಲ್ಲೆ ನಡೆಸಲಾಗುತ್ತಿದೆ ಎಂದು ಆರೋಪಿಸಿದೆ.

ಪರಸ್ಪರ ಹಲ್ಲೆ, ದೂರು ದಾಖಲು 

ಕಾಲೇಜು ಕ್ಯಾಂಪಸ್ ನಲ್ಲಿ ನಡೆದ ಈ ಘಟನೆ ಬಳಿಕ ಪುತ್ತೂರು ಸರಕಾರಿ ಬಸ್ ನಿಲ್ದಾಣದವರೆಗೂ ತಲುಪಿದ್ದು, ಕಾಲೇಜಿನಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣದಲ್ಲಿ ಅಟ್ಯಾಕ್​ ಮಾಡಿದೆ. ಈ ಸಂಬಂಧ ಎರಡೂ ಗುಂಪಿನ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿ ಪರಸ್ಪರ ಪೋಲೀಸ್ ದೂರು ದಾಖಲಿಸಿದ್ದರು. ಈ ನಡುವೆ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪರವಾಗಿ ಸಂಘಟನೆಯೊಂದರ ಮುಖಂಡರು ಸರಕಾರಿ ಪಿ.ಯು ಕಾಲೇಜಿಗೆ ತೆರಳು ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರನ್ನು ಒತ್ತಾಯಿಸಿದೆ. ಈ ಹಿನ್ನಲೆಯಲ್ಲಿ ಪ್ರಾಂಶುಪಾಲರು ಹಲ್ಲೆ ನಡೆಸಿದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಬರದಂತೆ ತಡೆ ನೀಡಲಾಗಿತ್ತು. ಈ ತಡೆಯನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಕೊಂಬೆಟ್ಟು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸಿದ್ದರು.

ಕೋಮುದ್ವೇಷಕ್ಕೆ ತಿರುಗಿದ ಕಾಲೇಜ್​​ ಹುಡುಗರ ಗಲಾಟೆ!? 

ಪ್ರತಿಭಟನೆಯ ಬಳಿಕ ಮತ್ತೆ ಕಾಲೇಜಿನ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದ್ದು, ಈ ಸಂಬಂಧ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಎಲ್ಲಾ ಘಟನೆಗಳನ್ನು ಖಂಡಿಸಿ ಇದೀಗ ಮುಸ್ಲಿಂ ಪರ ಸಂಘಟನೆಗಳು ಬೀದಿಗಿಳಿದಿದ್ದು, ಹಲ್ಲೆ ನಡೆಸಿದ ಆರೋಪಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಪಟ್ಟು ಹಿಡಿದಿದೆ. ಈ ಸಂಬಂಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು ಪೋಲೀಸರಿಗೆ ಮನವಿಯನ್ನೂ ನೀಡಿದ್ದಾರೆ. ಘಟನೆಯ ಹಿಂದೆ ಕೆಲವು ರಾಜಕೀಯ ಶಕ್ತಿಗಳ ಕೈವಾಡವಿದ್ದು, ಹಲ್ಲೆ ಪ್ರಕರಣ ಹಾಗೂ ಬಳಿಕ ನಡೆದ ವಿದ್ಯಮಾನಗಳ ಕೂಲಂಕುಶ ತನಿಖೆ ನಡೆಸಬೇಕೆಂದೂ ಮುಸ್ಲಿಂ ಒಕ್ಕೂಟ ಪೋಲೀಸರನ್ನು ಆಗ್ರಹಿಸಿದೆ. 

ಮುಂದುವರೆದ ಆರೋಪ-ಪ್ರತ್ಯಾರೋಪ 

ವಿದ್ಯಾರ್ಥಿಗಳಲ್ಲಿ ಕೋಮುದ್ವೇಷವನ್ನು ತುಂಬಿಸಿ ಕಾಲೇಜಿನಲ್ಲಿ ಕೋಮುಭಾವನೆ ಕೆರಳಿಸಲು ಸಂಘಪರಿವಾರ ಸಂಚು ನಡೆಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ, ಚಿನ್ಮಯ ಈಶ್ವರಮಂಗಲ ಈ ಕೃತ್ಯದ ಹಿಂದಿರುವ ವ್ಯಕ್ತಿಗಳೆಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ. ಕೊಂಬೆಟ್ಟು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ಸಭೆ ನಡೆಸಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಲವ್ ಜಿಹಾದ್ ನಂತಹ ಕೃತ್ಯಗಳನ್ನು ತಡೆಯಬೇಕೆಂದು ಈ ನಾಯಕರು ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು. ಇದೇ ಕಾರಣಕ್ಕಾಗಿ ಸಭೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ನಿರಂತರವಾಗಿ ಕಾಲೇಜಿನಲ್ಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದು, ಪೊಲೀಸರು ಈ ವಿಚಾರದಲ್ಲಿ ಮೌನವಹಿಸಿದ್ದಾರೆ ಎಂದೂ ಅದು ಆರೋಪಿಸಿದೆ.

ಇದನ್ನೂ ಓದಿ: ನನ್ನ ಹೇಳಿಕೆಯಿಂದ ಕೆಲಸದಲ್ಲೂ ನನಗೆ ಹಿನ್ನಡೆಯಾಗಿದೆ; ವಿಚಾರಣೆ ವೇಳೆ ಗದ್ಗದಿತರಾದ Hamsalekha

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಬಾಲಾಪರಾಧಿ ಕಾಯ್ದೆಯಡಿ ಬರುವ ಕಾರಣಕ್ಕಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು    ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಸ್ಪಷ್ಟಪಡಿಸಿದ್ದಾರೆ.
Published by:Kavya V
First published: