ಪುತ್ತೂರು KSRTC ಬಸ್ ನಿಲ್ದಾಣಕ್ಕೆ ಇನ್ನು ತುಳುನಾಡು ವೀರರಾದ 'ಕೋಟಿ ಚೆನ್ನಯ'ರ ಹೆಸರು

ಪುತ್ತೂರು ಬಸ್ ನಿಲ್ದಾಣಕ್ಕೆ "ಕೋಟಿ ಚೆನ್ನಯ ಕೆ.ಎಸ್.ಆರ್.ಟಿ.ಸಿ  ಬಸ್ ನಿಲ್ದಾಣ ಪುತ್ತೂರು' ಎಂದು ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಚಾರಿತ್ರಿಕ ಸಮಾರಂಭ ಶೀಘ್ರವೇ ನಡೆಯಲಿದೆ.

ಪುತ್ತೂರಿನ ಬಸ್ ನಿಲ್ದಾಣ

ಪುತ್ತೂರಿನ ಬಸ್ ನಿಲ್ದಾಣ

  • Share this:
ಪುತ್ತೂರು, ದಕ್ಷಿಣ ಕನ್ನಡ: ಸರಕಾರಿ (Government) ಹಾಗೂ ಖಾಸಗಿ (Private) ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಜಿಲ್ಲೆಯ ಅತಿದೊಡ್ಡ ಬಸ್ ನಿಲ್ದಾಣವೆಂಬ (Bus Station) ಖ್ಯಾತಿಗೆ ಪಾತ್ರವಾಗಿರುವ ಪುತ್ತೂರು (Puttur) ಕೆ.ಎಸ್.ಆರ್.ಟಿ.ಸಿ (KSRTC) ಬಸ್ ನಿಲ್ದಾಣ ಇನ್ನು ಮುಂದೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ (Koti Chennaya) ಹೆಸರಿನಲ್ಲಿ ರಾರಾಜಿಸಲಿದೆ. ಕೆ.ಎಸ್.ಆರ್.ಟಿ.ಸಿ ಯು ಕೋಟಿ ಚೆನ್ನಯರ ಹೆಸರನ್ನು ಪುತ್ತೂರು ಬಸ್ ನಿಲ್ದಾಣಕ್ಕೆ ಇಡುವ ಸಂಬಂಧ ನಿರ್ಣಯ ಕೈಗೊಂಡಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ. ಪುತ್ತೂರು ಶಾಸಕ (MLA) ಸಂಜೀವ ಮಠಂದೂರು (Sanjeeva Matandoor) ಅವರ ಬೆಂಬಿಡದ ಪ್ರಯತ್ನದ ಫಲವಾಗಿ ಯೋಜನೆ ಕೈಗೂಡಿದ್ದು, ಬಹುತೇಕ ಮುಂದಿನ ತಿಂಗಳು ನಾಮಕರಣ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಪುತ್ತೂರು ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು

ಈ ವಿಚಾರವನ್ನು ಶಾಸಕ ಮಠಂದೂರು ಖಚಿತಪಡಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಂ. ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಬಸ್ ನಿಲ್ದಾಣಕ್ಕೆ "ಕೋಟಿ ಚೆನ್ನಯ ಕೆ.ಎಸ್.ಆರ್.ಟಿ.ಸಿ  ಬಸ್ ನಿಲ್ದಾಣ ಪುತ್ತೂರು' ಎಂದು ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರ ಗಣ್ಯರ ಸಮಕ್ಷಮ ಚಾರಿತ್ರಿಕ ಸಮಾರಂಭ ಶೀಘ್ರ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಸರ್ಕಾರಕ್ಕೆ ಮನವಿ ಸಲ್ಲಿಕೆ

ಪುತ್ತೂರು ನಗರಸಭೆ 2020ರಲ್ಲಿ ಕೋಟಿ ಚೆನ್ನಯರ ಅಭಿದಾನವನ್ನು ಬಸ್ ನಿಲ್ದಾಣಕ್ಕೆ ನೀಡುವ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಿತ್ತು. ಶಾಸಕ ಸಂಜೀವ ಮಠಂದೂರು ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ,  ನಗರಸಭೆ ನಿರ್ಣಯದ ಪ್ರತಿಯನ್ನು ತಮ್ಮ ಶಿಫಾರಸು ಪತ್ರದ ಮೂಲಕ ಕೆ.ಎಸ್.ಆರ್.ಟಿ.ಸಿ ಸಲ್ಲಿಸಿದ್ದರು. ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಚಂದ್ರಪ್ಪ ಜತೆ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ:

 ಫಲಿಸಿತು ಶಾಸಕರ ಪ್ರಯತ್ನ

ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2 ವರ್ಷಗಳ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಿ ಅವಳಿ ವೀರರ ಹೆಸರನ್ನು ಪುತ್ತೂರು ಬಸ್ ನಿಲ್ದಾಣಕ್ಕೆ ಇಡುವಂತೆ ಕೋರಲಾಗಿತ್ತು. ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲ್ ವತಿಯಿಂದ ಮನವಿ ಮಾಡಲಾಗಿತ್ತು. ಪಡುಮಲೆಯ ಕೋಟಿ ಚೆನ್ನಯ ಜನ್ಮಸ್ಥಳ ಸಂಚಾಲನ ಸಮಿತಿಯಿಂದ ಪುತ್ತೂರು ನಗರಸಭೆಗೆ ಮನವಿ ಸಲ್ಲಿಸಲಾಗಿತ್ತು. ಸತತ ಮನವಿಗಳ ಹಿನ್ನೆಲೆ ಮತ್ತು ಶಾಸಕರ ಪ್ರಯತ್ನ ಇದೀಗ ಫಲ ನೀಡಿದೆ.

ಕೋಟಿ ಚೆನ್ನಯರ ಮೂಲ ಊರು ಪುತ್ತೂರು

ತುಳುನಾಡಿನಾದ್ಯಂತ 250ಕ್ಕಿಂತಲೂ ಅಧಿಕ ಗರಡಿಗಳಲ್ಲಿ ಉಪಾಸನೆ ಪಡೆಯುತ್ತಿರುವ ಕೋಟಿ ಚೆನ್ನಯರ ಮೂಲ ಊರು ಪುತ್ತೂರು. ಹೀಗಾಗಿ ಪುತ್ತೂರು ಬಸ್ ನಿಲ್ದಾಣಕ್ಕೆ ವೀರರ ಹೆಸರು ಸೂಕ್ತವೆಂಬ ಅಭಿಪ್ರಾಯವಿದೆ. ಕೋಟಿ ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಿಲ್  ಪುತ್ತೂರಿನಿಂದ 22 ಕಿ.ಮೀ. ದೂರದಲ್ಲಿದೆ. ಕೋಟಿ ಚೆನ್ನಯರ ಕಾಲದ ಅರಸು ಸಂಸ್ಥಾನವಿದ್ದ ಪಡುಮಲೆ, ವೀರರ ಜನನವಾದ ಬಳ್ಳಾಲರ ಬೀಡು, ಸ್ವರ್ಣಕೇದಗೆ ಬೆಳೆದ ಮನೆಯೂ ಸೇರಿದಂತೆ ಅವಳಿ ವೀರರ ಬದುಕಿನ ಕುರುಹುಗಳು ಇಲ್ಲಿವೆ. ದೇಯಿ ಬೈದ್ಯೆತಿ ಔಷಧಿವನ ಮುಡಿಪುನಡ್ಕದಲ್ಲಿದೆ.

5 ಕೋಟಿ ಅನುದಾನದಲ್ಲಿ ಹುಟ್ಟೂರಿನ ಅಭಿವೃದ್ಧಿ

ಸರಕಾರದ 5 ಕೋಟಿ ರೂ. ಅನುದಾನದಲ್ಲಿ ಕೋಟಿ ಚೆನ್ನಯರ ಹುಟ್ಟೂರಿನ ಅಭಿವೃದ್ಧಿಯಾಗುತ್ತಿದೆ. ಆದಿ ಬೈದರ್ಕಳ ಗರಡಿ ಇರುವ ಎಣ್ಮೂರಿಗೆ ಕರಾವಳಿಯ ಭಕ್ತರು ಪುತ್ತೂರು ಮೂಲಕ ತೆರಳುತ್ತಾರೆ. ಈ ಎಲ್ಲ ಕಾರಣದಿಂದ ಪುತ್ತೂರು ಬಸ್ ನಿಲ್ದಾಣಕ್ಕೆ ಕಾರಣಿಕ ಶಕ್ತಿಗಳ ಹೆಸರಿಡುವುದು ಸೂಕ್ತ ಎಂಬ ಅಭಿಪ್ರಾಯವಿದೆ.

ಮೂರೂವರೆ ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ

ಕೆ.ಎಸ್.ಆರ್.ಟಿ.ಸಿ  ಸೇರಿದ ಸುಮಾರು ಮೂರೂವರೆ ಎಕರೆ ಪ್ರದೇಶದಲ್ಲಿ ಪುತ್ತೂರು ಬಸ್ ನಿಲ್ದಾಣ ನಿರ್ಮಾಣವಾಗಿದೆ. ಹಿಂದುಸ್ಥಾನ್ ಪ್ರೊಮೋಟರ್ಸ್ ಮತ್ತು ಡೆವಲಪರ್ಸ್ ಸಂಸ್ಥೆ  33 ಕೋಟಿ ರೂ. ವೆಚ್ಚದಲ್ಲಿ ಬಸ್ ಟರ್ಮಿನಲ್ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಿದೆ. 33 ವರ್ಷಗಳ ಕಾಲ ಇದರ ನಿರ್ವಹಣೆ ಈ ಸಂಸ್ಥೆಗೆ ಸೇರಿದೆ. 2016ರ ಜನವರಿ 9ರಂದು ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಸ್ ಟರ್ಮಿನಲ್ ಉದ್ಘಾಟಿಸಿದ್ದರು.

ಇದನ್ನೂ ಓದಿ:

ಕೆ.ಎಸ್.ಆರ್.ಟಿ.ಸಿ  ಸೇರಿದ ಜಾಗದಲ್ಲಿ ಖಾಸಗಿಯವರು ಬಸ್ ನಿಲ್ದಾಣ ಕಟ್ಟಿದ್ದು, ಇದು ಜಿಲ್ಲೆಯಲ್ಲಿ ಸರಕಾರಿ ಖಾಸಗಿ ಸಹಭಾಗಿತ್ವದ(ಪಿಪಿಪಿ) ಅತಿದೊಡ್ಡ ಬಸ್ ನಿಲ್ದಾಣ ಯೋಜನೆಯಾಗಿದೆ.
Published by:Annappa Achari
First published: