ಸ್ವಾತಂತ್ರ್ಯೋತ್ಸವಕ್ಕೆ ಅಡ್ಡಿ- ಎಸ್​ಡಿಪಿಐ ಪಕ್ಷ ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ದೂರು

ಪುತ್ತೂರಿನ ಕಬಕ ಗ್ರಾ.ಪಂ.ನಲ್ಲಿ ನಿನ್ನೆ ಸಾವರ್ಕರ್ ಫೋಟೋ ವಿಚಾರಕ್ಕೆ ಸ್ವಾತಂತ್ರ್ಯೋತ್ಸವಕ್ಕೆ ಕೆಲವರು ಅಡ್ಡಿಪಡಿಸಿದ್ದರು. ಇದರ ಹಿಂದೆ ಎಸ್ಡಿಪಿಐ ಕೈವಾಡ ಇದೆ ಎಂದು ಆರೋಪಿಸಿರುವ ಹಿಂದೂ ಸಂಘಟನೆಗಳು, ಆ ಪಕ್ಷವನ್ನ ನಿಷೇಧಿಸುವಂತೆ ಒತ್ತಾಯಿಸಿವೆ.

ಎಸ್​ಡಿಪಿಐ ನಿಷೇಧಕ್ಕೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಸದಸ್ಯರಿಂದ ಮೆರವಣಿಗೆ

ಎಸ್​ಡಿಪಿಐ ನಿಷೇಧಕ್ಕೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಸದಸ್ಯರಿಂದ ಮೆರವಣಿಗೆ

  • Share this:
ಪುತ್ತೂರು: ಕರಾವಳಿ ಸೇರಿದಂತೆ ರಾಜ್ಯದ ನಾನಾ ಕಡೆ ನಡೆದ ಹತ್ಯಾಕಾಂಡ, ವಿಧ್ವಂಸಕ ಕೃತ್ಯಗಳ ಹಿಂದೆ ಪಿಎಫ್‌ಐ, ಎಸ್‌ಡಿಪಿಐ ಕೈವಾಡ ಇರುವ ಬಗ್ಗೆ ಸರಕಾರಗಳಿಗೆ ಹಿಂದಿನಿಂದಲೂ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲ. ಇದೀಗ ಪುತ್ತೂರಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೂ ಅಡ್ಡಿಪಡಿಸುವ ಮೂಲಕ ಎಸ್‌ಡಿಪಿಐ ದೇಶದ್ರೋಹ ಎಸಗಿದೆ. ಸರಕಾರ ವಿಳಂಬ ಮಾಡದೆ ಎಸ್‌ಡಿಪಿಐ ಪಕ್ಷವನ್ನು ನಿಷೇಧಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ವಿಶ್ವಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕಬಕದಲ್ಲಿ ನಡೆಸಿದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಈ ಆಗ್ರಹ ಮಾಡಲಾಯಿತು. ಭಾನುವಾರ ಕಬಕ ಗ್ರಾಮಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವ ರಥ ಅಭಿಯಾನಕ್ಕೆ ಎಸ್‌ಡಿಪಿಐ ಕಾರ್ಯಕರ್ತರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈ ಪ್ರತಿಭಟನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್ ಮಾತನಾಡಿ, ಎಸ್‌ಡಿಪಿಐ ನಿಷೇಧಕ್ಕೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಅದು ರಾಜಕೀಯ ಪಕ್ಷವಾಗಿರುವ ಕಾರಣ ಚುನಾವಣಾ ಆಯೋಗಕ್ಕೂ ಮನವಿ ಮಾಡುತ್ತೇವೆ. ವೀರ ಸಾವರ್ಕರ್ ಭಾವಚಿತ್ರವನ್ನು ಸಂಸತ್ತಿನಲ್ಲಿ ಅಳವಡಿಸಲಾಗಿದೆ. ಅಂಡಮಾನ್ ನಿಕೋಬಾರ್‌ನ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಲಾಗಿದೆ. ಇಂಥ ಮಹಾನ್ ದೇಶಪ್ರೇಮಿಯ ಬಗ್ಗೆ ಎಸ್‌ಡಿಪಿಐ ನಾಯಕರಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು.

ವೀರ ಸಾವರ್ಕರ್ ಅವರ ಚಿತ್ರ ಹಾಕುವುದಕ್ಕೆ ಕಬಕದಲ್ಲಿ ಪ್ರತಿರೋಧ ಒಡ್ಡಲಾಗಿದೆ. ಇದೇ ಕಬಕದಲ್ಲಿ ಸಾವರ್ಕರ್ ಪ್ರತಿಮೆ ಸ್ಥಾಪಿಸುವಂತೆ ಸ್ಥಳೀಯರೆಲ್ಲ ಒಟ್ಟಾಗಿ ಸರಕಾರಕ್ಕೆ ಮನವಿ ಮಾಡಬೇಕು. ಸಾವರ್ಕರ್ ವಿಚಾರಧಾರೆಗಾಗಿ ಮತ್ತು ದೇಶದ್ರೋಹಿಗಳ ವಿರುದ್ಧವಾಗಿ ಜಿಲ್ಲೆ ರಾಜ್ಯ ಮಟ್ಟದಲ್ಲೂ ಚಳುವಳಿ ನಡೆಸಲಾಗುವುದು. ಆಗಸ್ಟ್ 17 ರಂದು ಮಂಗಳವಾರ ಮಧ್ಯಾಹ್ನ 1.30 ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನಿಂದ ಸಾವರ್ಕರ್ ರಥಯಾತ್ರೆ ನಡೆಯಲಿದೆ. ಕಬಕ ಜಂಕ್ಷನ್‌ನಲ್ಲಿ ಸಮಾರೋಪ ನಡೆಯಲಿದೆ ಎಂದವರು ತಿಳಿಸಿದರು.

ಇದನ್ನೂ ಓದಿ: ಈ ನೀರಾವರಿ ಯೋಜನೆಗೆ ಸಾವಿರಾರು ಕೋಟಿ ಖರ್ಚಾದರೂ ಹನಿ ನೀರೂ ಸಿಕ್ಕಿಲ್ಲ

ಸಂಘಟನೆ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಕಬಕ ಗ್ರಾಪಂ ಆಶ್ರಯದಲ್ಲಿ ಹೊರಡಿಸಲಾಗಿದ್ದ ಸ್ವಾತಂತ್ರ್ಯ ರಥದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅಳವಡಿಸಿದ್ದರಲ್ಲಿ ಯಾವುದೇ ತಪ್ಪಿರಲಿಲ್ಲ. ಸಾವರ್ಕರ್ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ದೇಶಭಕ್ತ. ಬ್ರಿಟಿಷ್ ಸರಕಾರದಿಂದ ಸುದೀರ್ಘ ಕಾಲ ಕರಿನೀರಿನ ಶಿಕ್ಷೆ ಅನುಭವಿಸಿದ ವಿಶ್ವದ ಏಕೈಕ ಹೋರಾಟಗಾರ. ಇಂಥ ನಾಯಕರ ಫೋಟೋ ತೆಗೆದು ಟಿಪ್ಪು ಚಿತ್ರ ಅಳವಡಿಸಲು ಎಸ್‌ಡಿಪಿಐ ಆಗ್ರಹಿಸಿದೆ. ಅವರ ಆಕ್ಷೇಪ ಸಾವರ್ಕರ್ ವಿರುದ್ಧವಲ್ಲ. ಭಾರತದ ಅಸ್ಮಿತೆಯ ವಿರುದ್ಧ ಮಾಡಲಾದ ದಾಳಿ ಇದು. ಮಹಾತ್ಮ ಗಾಂಧೀಜಿ ಸಹಿತ ರಾಷ್ಟ್ರನಾಯಕರ ಭಾವಚಿತ್ರ ಇಟ್ಟುಕೊಂಡು ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿತ್ತು. ಅದು ಒಂದು ಪಕ್ಷ, ಒಂದು ಸಮುದಾಯದ ಕಾರ್ಯಕ್ರಮವಲ್ಲ. ರಾಷ್ಟ್ರೀಯ ಹಬ್ಬವಾಗಿತ್ತು. ಈ ದೇಶದ ಸಂವಿಧಾನದ ಅಡಿಯಲ್ಲಿ, ಜಾತ್ಯತೀತ ಪರಿಕಲ್ಪನೆಯಲ್ಲಿ ಎಲ್ಲರೂ ಒಂದಾಗಿ ಬಾಳುವ ಸಂದೇಶ ಹೊತ್ತ ಕಾರ್ಯಕ್ರಮ ಅದಾಗಿತ್ತು. ಅದಕ್ಕೆ ತಡೆಯೊಡ್ಡಿದ್ದು ದೇಶದ್ರೋಹದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಸರಿ ಬಾವುಟ ಹಿಡಿದಿದ್ದ ನೂರಾರು ಕಾರ್ಯಕರ್ತರು ಎಸ್‌ಡಿಪಿಐ ವಿರುದ್ಧ ಘೋಷಣೆಗಳನ್ನು ಕೂಗಿದರು. ಆ ಪಕ್ಷವನ್ನು ನಿಷೇಧಿಸುವಂತೆ ಫಲಕ ಪ್ರದರ್ಶಿಸಿದರು. ಅನೇಕರು ವೀರ ಸಾವರ್ಕರ್ ಭಾವಚಿತ್ರದ ಫಲಕ ಹಿಡಿದುಕೊಂಡಿದ್ದರು. ಘಟನೆ ನಡೆದ ಸ್ಥಳ ಜಿಲ್ಲೆಯ ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಪ್ರಕರಣದ ಬಳಿಕ ಕಬಕದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೇರಳ ಭಾಗದ ಹೆಚ್ಚಿನ ನಂಟು ಹೊಂದಿರುವ ಈ ಪ್ರದೇಶದಲ್ಲಿ ಈ ಹಿಂದೆಯೂ ಹಲವು ಅಹಿತಕರ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಪೋಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ನ್ಯಾಯಾಲಯ ಎಲ್ಲರಿಗೂ ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ವರದಿ: ಅಜಿತ್ ಕುಮಾರ್
Published by:Vijayasarthy SN
First published: