Krishna Janmashtami 2021: ಕರಾವಳಿಯಲ್ಲಿ ಅಷ್ಟಮಿಗೆ ತಯಾರಿಸುವ ಈ ತಿಂಡಿಗಾಗಿ ಜನ ಮನೆಯ ಮಗನನ್ನೇ ಅಡವಿಡುತ್ತಿದ್ರು, ಪ್ರತೀ ಖಾದ್ಯದ ಹಿಂದೆಯೂ ಇದೆ ರೋಚಕ ಕತೆ!

Krishna Janmashtami Special: ಮೂಡೆ’ ( ಕಡುಬು) ಇದರಲ್ಲಿ ಪ್ರಮುಖವಾದದ್ದು, ಹಿಂದಿನ ಕಾಲದಲ್ಲಿ ಹಳ್ಳಿಯ ಮನೆಗಳಲ್ಲಿ ಮೂಡೆಯನ್ನು ಹೆಣೆಯುತ್ತಿದ್ದರು. ಅಷ್ಟಮಿಗಾಗಿಯೇ  ಮೂಡೆ ಕಟ್ಟಿ ಮಾರಾಟ ಮಾಡುವವರೂ ಇದ್ದಾರೆ. ಕರಾವಳಿ ಜನರ ಪಾಲಿಗೆ ಅಷ್ಟಮಿಯ ಆಚರಣೆ ಜೊತೆಗೆ ಬಗೆಬಗೆಯ ತಿನಿಸುಗಳಿಗೂ ಪ್ರಾಧಾನ್ಯತೆ. ಪ್ರತೀ ತಿಂಡಿಯ ಹಿಂದೆಯೂ ಒಂದೊಂದು ಆಚರಣೆ ಇದೆ.

ಹಲಸಿನ ಎಲೆಯ ಕೊಟ್ಟೆ ಕಡುಬು

ಹಲಸಿನ ಎಲೆಯ ಕೊಟ್ಟೆ ಕಡುಬು

  • Share this:
Krishnashtami in Coastal Karnataka: ಕೃಷ್ಣಾಷ್ಟಮಿಯನ್ನು  ಕರಾವಳಿಯಲ್ಲಿ ಅತ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅದರಲ್ಲೂ ಅಷ್ಟಮಿಯಂದು ಇಲ್ಲಿನ ಜನ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವುದೂ ಹಬ್ಬದ ವಿಶೇಷತೆಯೂ ಆಗಿದೆ. ಅಷ್ಟಮಿಯನ್ನು ಹಳ್ಳಿ ಹಳ್ಳಿಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಳೆಯು ಕಡಿಮೆಯಾಗುವ  ಹಂತದಲ್ಲಿ ಈ ಹಬ್ಬವು ಬರುತ್ತದೆ. ತುಳುನಾಡಿನ ಜನರ ಪ್ರಕಾರ ಅಷ್ಟಮಿಯ ದಿನಗಳು ತೀರಾ ಮುಗ್ಗಟ್ಟಿನ ದಿನಗಳು. ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಅಕ್ಕಿ ಮತ್ತಿತರ ಸೊತ್ತುಗಳು ಮುಗಿದಿರುತ್ತವೆ. ಮಳೆಗಾಲ ಜೋರಾಗಿರುತ್ತದೆ. ಅಷ್ಟಮಿಯ ದಿನಗಳಲ್ಲಿ ತಿಂಡಿ ಮಾಡುವ ಸಲುವಾಗಿ ಒಲೆ ಉರಿಸಲೂ ಕಟ್ಟಿಗೆ ಇಲ್ಲದ ಪರಿಸ್ಥಿತಿ ಎದುರಾಗುವುದುಂಟು. ಈ ಕಾರಣಕ್ಕಾಗಿಯೇ ಅಷ್ಟಮಿಯಂದು ಮೂಡೆ ಕಟ್ಟುವ ಮೂಲಕ ವಿಶೇಷ ತಿಂಡಿಯನ್ನು ತಯಾರಿಸುತ್ತಾರೆ. ಇದು ಅಷ್ಟಮಿಯ ವಿಶೇಷವಾದ ತಿಂಡಿ. ಹಿಂದೆ ಅಷ್ಟಮಿ ಹಬ್ಬ ಆಚರಿಸಲು ಹಿರಿಮಗನನ್ನು ಊರಿನ ಗುತ್ತಿನವರ, ಶ್ರೀಮಂತರ ಮನೆಯಲ್ಲಿ ಅಡವು ಇಟ್ಟಾದರೂ ಅಕ್ಕಿ ತರುತ್ತಿದ್ದರು ಎನ್ನುವುದು ಹಿರಿಯರ ಮಾತುಗಳು.

ಹೀಗೆ ಅಡವಿಟ್ಟ ಮಗನನ್ನು ಮುಂದಿನ ಶಿವರಾತ್ರಿಯ ದಿನ ಬಿಡಿಸಿಕೊಳ್ಳಲಾಗುತ್ತಿತ್ತಂತೆ.  ಸಾಮಾನ್ಯವಾಗಿ ಇಲ್ಲಿ ಅಷ್ಟಮಿಯನ್ನು ಮೂರು ದಿವಸಗಳ ಹಬ್ಬವಾಗಿ ಆಚರಿಸುತ್ತಾರೆ. ಅಷ್ಟಮಿಯ ಮುಂಚಿನ ದಿವಸ ರಾತ್ರಿ ಉಪವಾಸ ಆರಂಭಿಸುತ್ತಾರೆ. ಆಚರಣೆಯೂ ಭಿನ್ನ ಭಿನ್ನವಾಗಿರುತ್ತದೆ. ತಡರಾತ್ರಿ ಹೊಟ್ಟೆ ತುಂಬಾ ತಿಂಡಿ ತಿಂದು ಉಪವಾಸದ ವ್ರತಾಚರಣೆಯನ್ನು ಆರಂಭಿಸುತ್ತಾರೆ. ‘ಅಷ್ಟಮಿ ಪಾಸ’ ಅಂದರೆ ಅಷ್ಟಮಿಯ ಉಪವಾಸ ಹಿಡಿಯುವವರಿಗೆ ಅಷ್ಟಮಿ ದಿವಸದ ಚಂದ್ರೋದಯದವರೆಗೆ ಕಠಿಣವಾದ ವ್ರತವಿರುತ್ತದೆ. ಮಧ್ಯಾಹ್ನ ಸೀಯಾಳ ಕುಡಿಯುವ ಕ್ರಮವಿದೆ.

ಈ ನಡುವೆ ಅಷ್ಟಮಿಯ ರಾತ್ರಿ ಊಟಕ್ಕೆ ಬಗೆ ಬಗೆಯ ತಿಂಡಿ ತಿನಸುಗಳು ತಯಾರಾಗುತ್ತವೆ. ‘ಮೂಡೆ’ ( ಕಡುಬು) ಇದರಲ್ಲಿ ಪ್ರಮುಖವಾದದ್ದು, ಹಿಂದಿನ ಕಾಲದಲ್ಲಿ ಹಳ್ಳಿಯ ಮನೆಗಳಲ್ಲಿ ಮೂಡೆಯನ್ನು ಹೆಣೆಯುತ್ತಿದ್ದರು. ಅಷ್ಟಮಿಗಾಗಿಯೇ  ಮೂಡೆ ಕಟ್ಟಿ ಮಾರಾಟ ಮಾಡುವುದು ಕೆಲವರ ಕಾಯಕವಾಗಿದೆ. ನೈಸರ್ಗಿಕವಾಗಿ ಸಿಗುವ  ಮುಂಡೋವು ಎನ್ನುವ ಎಲೆಯೊಂದನ್ನು ಬಳಸಿಕೊಂಡು ಈ ಮೂಡೆಯನ್ನು ಕಟ್ಟಲಾಗುತ್ತದೆ. ಮಾರುಕಟ್ಟೆಗಳಲ್ಲಿ ಹತ್ತು ರೂಪಾಯಿಗೆ ಎರಡು ಅಥವಾ ಮೂರು ಮೂಡೆಗಳು ಸಿಗುತ್ತವೆ. ಹಲಸಿನ ಎಲೆಯನ್ನು ಬಳಸಿಕೊಂಡೂ ತಿಂಡಿ ತಯಾರಿಸುತ್ತಿದ್ದು,‌ ಈ ತಿಂಡಿಗೆ ಕರಾವಳಿಯಲ್ಲಿ  ‘ಕೊಟ್ಟಿಗೆ’ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: Krishna Janmashtami 2021: ಕರಾವಳಿಯಲ್ಲಿ ಕೃಷ್ಣಾಷ್ಟಮಿಯ ವಿಶೇಷ ತಿನಿಸು ಕೊಟ್ಟಿಗೆ, ಹೇಗೆ ಮಾಡ್ತಾರೆ? ರೆಸಿಪಿ ಇಲ್ಲಿದೆ..ನೀವೂ ಟ್ರೈ ಮಾಡಿ!

ಅಕ್ಕಿಯ ಹಿಟ್ಟು ಹಾಕಿ ಬೇಯಿಸಿದ ಕೊಟ್ಟಿಗೆ ಹಾಗು ಮೂಡೆಯನ್ನು ಅಷ್ಟಮಿಯ ದಿನ   ಮಾಡುತ್ತಾರೆ. ಹೀಗೆ ಮಾಡಿದ ತಿಂಡಿಯನ್ನು  ಗಣೇಶ ಚತುರ್ಥಿ ಹಬ್ಬದ ವರೆಗೆ ಇರಬೇಕು ಎನ್ನುವುದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ.  ಹೆಚ್ಚಿನ ಬ್ರಾಹ್ಮಣರ ಮನೆಯಲ್ಲಿ ಉಂಡೆ, ಚಕ್ಕುಲಿ, ಕೋಡು ಬಳೆ ಮುಂತಾದವುಗಳನ್ನು ಮಾಡುತ್ತಾರೆ. ಅಲ್ಲದೇ  ಮನೆಯ ಹಿರಿಯರು ಸೇರಿ ಚೆನ್ನೆ ಮಣೆ  ಎನ್ನುವ ಸಾಂಪ್ರದಾಯಕ ಆಟವಾಡುವುದೂ ಅಷ್ಟಮಿ ದಿನದ ವಿಶೇಷತೆಯಾಗಿದೆ. ಅಷ್ಟಮಿಯ ಊಟದ ಬಳಿಕ ಊರಿನ ಪ್ರಮುಖ ಕೇಂದ್ರದಲ್ಲಿ ನಡೆಯುವ ‘ಮೊಸರು ಕುಡಿಕೆ’ ಉತ್ಸವದಲ್ಲಿ ಸೇರುವುದು ತುಳುನಾಡಿನಲ್ಲಿ ಸಾಮಾನ್ಯವಾಗಿದೆ.

ತಪ್ಪಂಗಾಯಿ, ಹಗ್ಗ ಎಳೆಯುವುದು, ಮಡಿಕೆ ಒಡೆಯುವುದು, ಸಣ್ಣ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯುತ್ತವೆ. ಎತ್ತರ ಪ್ರದೇಶದಲ್ಲಿ ನೇತಾಡಿಸಿದ ಮೊಸರಿನ ಗಡಿಗೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಒಡೆಯುವುದು. ಎತ್ತರವಾದ ಅಡಿಕೆ ಮರದ ತುದಿಯಲ್ಲಿ ಕಟ್ಟಿದ ನಿಧಿಯನ್ನು ತೆಗೆಯುವುದು ಮುಂತಾದ ಸಾಹಸ ಪ್ರದರ್ಶನವಾಗುತ್ತಿತ್ತು ಅನೇಕ ಮಂದಿಯ ತಂಡದಿಂದ ಪಿರಮಿಡ್ ರಚನೆ ಮಾಡಿ ಸಂತೋಷ ಪಡುವುದು ಎಲ್ಲವೂ ನಮ್ಮ ಕಣ್ಣು ತುಂಬಿಕೊಳ್ಳಲು ಸಾಧ್ಯವಿಲ್ಲ. ಗ್ರೀಸ್ ಸವರಿದ ಕಂಬ ಹತ್ತುವ ಅಪಾಯಕಾರಿ ಆಟಗಳನ್ನು ನಡೆಸುತ್ತಾರೆ.
Published by:Soumya KN
First published: