ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಭತ್ತದ ಕ್ರಾಂತಿ

ಈ ಬಾರಿ ಸುಮಾರು ಒಂದು ಸಾವಿರ ಎಕರೆ ಬಂಜರು ಭೂಮಿಯಲ್ಲಿ ಭತ್ತ ಬೆಳೆಯಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭತ್ತದ ಕ್ರಾಂತಿ

ಭತ್ತದ ಕ್ರಾಂತಿ

  • Share this:
ಪುತ್ತೂರು (ಜು. 13):  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭತ್ತದ ಕ್ರಾಂತಿ ಸದ್ದಿಲ್ಲದೆ ಯಶಸ್ವಿಯ ಮಟ್ಟಲೇರುತ್ತಿದೆ. ಸರಿ ಸುಮಾರು ಇಪ್ಪತ್ತು,ಮೂವತ್ತು ವರ್ಷಗಳ ಹಿಂದೆ ಭತ್ತದ ಕೃಷಿಯನ್ನೇ ಮಾಡುತ್ತಿದ್ದ ಜಿಲ್ಲೆಯ ಜನ ಬಳಿಕದ ದಿನಗಳಲ್ಲಿ ವಾಣಿಜ್ಯ ಬೆಳೆಯಾದ ಅಡಿಕೆ ಕಡೆ ವಾಲಿದ ಬಳಿಕ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಬದಲಾಗಿದೆ. ತೋಟ ಮಾಡಲಾಗದವರು ಭತ್ತದ ಕೃಷಿಯನ್ನೂ ನಿಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಕೇವಲ ಬೆರಳೆಣಿಕೆಯ ಭತ್ತದ ಕೃಷಿ ಎನ್ನುವ ಸ್ಥಿತಿಗೆ ತಂದು‌ ನಿಲ್ಲಿಸಿದ್ದಾರೆ. ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಮಾರ್ಪಟ್ಟಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಭತ್ತದ ಬೆಳೆಯನ್ನು ಮುಂದುವರಿಸದ ಕಾರಣ ಗದ್ದೆಗಳು ಹಡೀಲು ( ಬಂಜರು) ಭೂಮಿಯಗಿ ಬದಲಾಗಿದೆ. ಜಿಲ್ಲೆಯಲ್ಲಿ ಮತ್ತೆ ಭತ್ತದ ಕೃಷಿಗೆ ಒತ್ತು ನೀಡಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ ಸಚಿವರೂ ಆಗಿರುವ ಕೋಟಾ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದ್ದರು.

ಸರಕಾರಿ ಅಂಕಿ-ಅಂಶದ ಪ್ರಕಾರ ಜಿಲ್ಲೆಯಲ್ಲಿ ಸುಮಾರು ಐದಯ ಸಾವಿರ ಎಕರೆಯಷ್ಟು ಭತ್ತದ ಗದ್ದೆಗಳು ಬೆಳೆ ಮಾಡದೆ ಹಾಗೆಯೇ ಉಳಿದಿದ್ದು, ಈ ಎಲ್ಲಾ ಭೂಮಿಗಳಲ್ಲಿ ಮತ್ತೆ ಭತ್ತದ ಬೆಳೆ ಬೆಳೆಸುವ ಉದ್ದೇಶ ಈ ಕಾರ್ಯಕ್ರಮದ ಹಿಂದಿತ್ತು. ಈ ಬಾರಿ ಸುಮಾರು ಒಂದು ಸಾವಿರ ಎಕರೆ ಬಂಜರು ಭೂಮಿಯಲ್ಲಿ ಭತ್ತ ಬೆಳೆಯಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಡೀಲು ಬಿದ್ದಿರುವ ಗದ್ದೆಯ ಮಾಲಕರನ್ನು ವಿಶ್ವಾಸಕ್ಕೆ ತೆಗೆದು, ಭತ್ತದ ಕೃಷಿಯ ಅನಿವಾರ್ಯತೆಯನ್ನು ಮನವರಿಕೆ ಮಾಡುವ‌ ಮೂಲಕ ಈ‌ ಯೋಜನೆಯ ಕಾರ್ಯಗತಕ್ಕೂ‌ ಪ್ರಯತ್ನಿಸಲಾಗಿದೆ. ಇದರ ಜಾರಿಗೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳನ್ನೂ ಈ ಕಾರ್ಯಕ್ರಮದಲ್ಲಿ ಜೋಡಿಸಿಕೊಳ್ಳಲಾಗಿದೆ. ಪ್ರತೀ ದೇವಸ್ಥಾನಗಳು ತಮ್ಮ ಶಕ್ತಿಯಾನುಸಾರ ತಮ್ಮ ವ್ಯಾಪ್ತಿಗೆ ಬರುವ ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಬೆಳೆಸಲು ಎಲ್ಲಾ ರೀತಿಯ ಸಹಕಾರಗಳನ್ನೂ ನೀಡಲು ಸೂಚನೆಯನ್ನೂ ನೀಡಲಾಗಿದೆ.

ಇದನ್ನು ಓದಿ: ಆಂಜಿಯೋಪ್ಲಾಸ್ಟಿಗೆ ಒಳಗಾಗುವ ಮುನ್ನ ಈ ಅಂಶಗಳು ನಿಮ್ಮ ಮನಸ್ಸಿನಲ್ಲಿರಲಿ..!

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿಯಿಂದ ಕಾರ್ಯಾಚರಿಸುತ್ತಿದ್ದು, ಈಗಾಗಲೇ ಎಂಬತ್ತು ಎಕರೆ ಬಂಜರು ಭೂಮಿಯಲ್ಲಿ ಮತ್ತೆ ಭತ್ತದ ಕೃಷಿ ಆರಂಭಿಸಿದೆ. ಸುಮಾರು 100 ಎಕರೆ ಪ್ರದೇಶದಲ್ಲಿ ಈ ಬಾರಿ ಭತ್ತ ಬೆಳೆಯುವ ಯೋಜನೆ ಹಾಕಿಕೊಳ್ಳಲಾಗಿದ್ದು, ಕೃಷಿಕರಿಂದ ಉತ್ತಮ ಸ್ಪಂದನೆಯೂ ದೊರೆಯುತ್ತಿದೆ ಎನ್ನುತ್ತಾರೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್.

ಹಿಂದೆ ಭತ್ತದ‌ ಗದ್ದೆಗಳಿಂದ ತುಂಬಿ ತುಳುಕುತ್ತಿದ್ದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯ ಮೂಲಕ ಮತ್ತೆ ಭತ್ತದ‌ ಕೃಷಿ ಆರಂಭಿಸಲಾಗಿದೆ. ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ತಮನ್ನು ಈ ಕಾರ್ಯಕ್ರಮದಲ್ಲಿ ಜೋಡಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ಬಂದಂತಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭತ್ತದ ಕೃಷಿಯತ್ತ ತೊಡಗಿಸಿಕೊಳ್ಳಬೇಕು ಎನ್ನುವ ಪ್ರೇರಣೆ ನೀಡುವ ನಿಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್ ಈ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಮ್ಮ ಅನ್ನವನ್ನು ನಾವೇ ಬೆಳೆಯುವುದು ಅನಿವಾರ್ಯವಾಗಿದ್ದು, ಇದು ವಾಣಿಜ್ಯ ಉದ್ದೇಶಕ್ಕಾಗಿ ಮಾಡುವ ಬೆಳೆಯಲ್ಲ ಎನ್ನುತ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್.

ಜಿಲ್ಲೆಯಲ್ಲಿ ಆರಂಭಗೊಂಡ ಈ ಭತ್ತದ ಕ್ರಾಂತಿಗೆ ಸಾಕಷ್ಟು ರೈತರು ಸ್ಪಂದಿಸಿದ್ದಾರೆ‌. ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಕೈ ಜೋಡಿಸಿದ್ದು, ಕೃಷಿಗೆ ಬೇಕಾದ ಯಂತ್ರೋಪಕರಣಗಳ ವ್ಯವಸ್ಥೆ ಹಾಗೂ ಕೃಷಿಯ ಕುರಿತ ಮಾರ್ಗದರ್ಶನವನ್ನೂ ನೀಡುವ ಕಾರ್ಯದಲ್ಲಿ ನಿರತವಾಗಿದೆ. ಜಿಲ್ಲೆಯಲ್ಲಿ ಆರಂಭಗೊಂಡ ಈ ಭತ್ತದ ಕ್ರಾಂತಿ ಎಲ್ಲವೂ ಯೋಜಿಸಿದಂತೆ ನಡೆದಷ್ಡು ಪರಿಪೂರ್ಣ ಯಶಸ್ಸೂ ಲಭಿಸಲಿದೆ.
Published by:Seema R
First published: