Oscar fernandes: ಕಾಂಗ್ರೆಸ್​ನಲ್ಲಿ ಇದ್ದ ಕರ್ನಾಟಕದ ದನಿ; ಗಾಂಧಿ ಕುಟುಂಬದ ಆಪ್ತ ಆಸ್ಕರ್​ ಫರ್ನಾಂಡಿಸ್​​

ಕೇವಲ ಪುರಸಭೆ ಸದಸ್ಯನಾಗಿದ್ದ ವ್ಯಕ್ತಿ ಕಣ್ಣು ಮುಚ್ಚಿ ಬಿಡುವುದರೊಳಗೆ ಕೇವಲ 8 ವರ್ಷದಲ್ಲೇ ಪಾರ್ಲಿಮೆಂಟಿನಲ್ಲಿ ತಮ್ಮ ಹೆಜ್ಜೆಯೂರಿದ್ದರು. 1980 ರಲ್ಲಿ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾದ ಆಸ್ಕರ್​. ಒಟ್ಟು ಐದು ಬಾರಿ ಅಂದರೆ 1984, 1989, 1991, 1996ರಲ್ಲಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಗೆ ಇವರಿಗೆ ಸಲ್ಲುತ್ತದೆ.

ಆಸ್ಕರ್​ ಫರ್ನಾಂಡಿಸ್​

ಆಸ್ಕರ್​ ಫರ್ನಾಂಡಿಸ್​

 • Share this:
  ಯೋಗ ಮಾಡುವಾಗ ಜಾರಿ ಬಿದ್ದು ಗಾಯಗೊಂಡಿದ್ದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ಹಿರಿಯ ನಾಯಕ ಮಂಗಳೂರಿನ ಖಾಸಗಿ ಆಸ್ಪತ್ರೆ  ಯೇನೆಪೋಯದಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಆಸ್ಕರ್​ ಫರ್ನಾಂಡಿಸ್​​ ಸೋಮವಾರ (ಸೆ.13) ರಂದು ಕೊನೆಯುಸಿರೆಳೆದಿದ್ದಾರೆ.

  ಕರ್ನಾಟಕದ ಕಾಂಗ್ರೆಸ್​ ನಾಯಕರು ಯಾರ ಜೊತೆ ಮುಸುಕಿನ ಗುದ್ದಾಟ ನಡೆಸಿದರು ಈ ಹಿರಿಯ ಕಾಂಗ್ರೆಸ್​ ನಾಯಕನ ಜೊತೆ ಗುದ್ದಾಟಕ್ಕೆ ಇಳಿಯುತ್ತಿರಲಿಲ್ಲ. ಅದರಲ್ಲೂ ಅತ್ಯಂತ ಸರಳ ಹಾಗೂ ಸೌಮ್ಯ ಸ್ವಾಭಾವದವರಾಗಿದ್ದ ಆಸ್ಕರ್​ ರಾಜೀವ್​ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಸಾಕಷ್ಟು ಹತ್ತಿರದಲ್ಲಿ ಇದ್ದ ಹಾಗೂ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದ ನಾಯಕ. ಕಾಂಗ್ರೆಸ್​ ಪಕ್ಷದಲ್ಲಿ ಕರ್ನಾಟಕದ ದನಿಯಾಗಿ ಇದ್ದವರು ಆಸ್ಕರ್​ ಎಂದೇ ಹೇಳಬಹುದು.

  ಪುರಸಭೆಯಿಂದ ಪಾರ್ಲಿಮೆಂಟ್​ವರೆಗೆ ನಡೆದ ಫರ್ನಾಂಡಿಸ್​ ಹಾದಿ

  ಆಗ ಕರಾವಳಿ ಕಾಂಗ್ರೆಸ್​ ಪಾಲಿನ ಭದ್ರ ಕೋಟೆ ಎಂದೇ ಹೆಳಬಹುದು. ಏಕೆಂದರೆ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿರುವ ಹಾಗೂ ಕೇಂದ್ರದಲ್ಲಿ ಹೆಚ್ಚು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದ ಕರ್ನಾಟಕದ ಕಾಂಗ್ರೆಸ್​ ನಾಯಕರೆಲ್ಲ ಕರಾವಳಿ ಭಾಗದವರೆ ಎಂದರೂ ಅತಿಶಯೋಕ್ತಿಯಲ್ಲ. ಅದರಂತೆ ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್​ ಪಕ್ಷದ ಕಟ್ಟಾಳುವಾಗಿದ್ದ ಆಸ್ಕರ್​ 1972ರಲ್ಲಿ ಪುರಸಭೆ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸದರು. ಇವರ ಬೆಳವಣಿಗೆ ಗಮನಿಸಿದರೆ ಒಂದು ರೀತಿಯಲ್ಲಿ ಸೋಲಿಲ್ಲದ ಸರದಾರ ಎಂದೇ ಹೇಳಬಹುದು.

  5 ಬಾರಿ ಸಂಸದ 4 ಬಾರಿ ರಾಜ್ಯಸಭಾ ಸದಸ್ಯ

  ಕೇವಲ ಪುರಸಭೆ ಸದಸ್ಯನಾಗಿದ್ದ ವ್ಯಕ್ತಿ ಕಣ್ಣು ಮುಚ್ಚಿ ಬಿಡುವುದರೊಳಗೆ ಕೇವಲ 8 ವರ್ಷದಲ್ಲೇ ಪಾರ್ಲಿಮೆಂಟಿನಲ್ಲಿ ತಮ್ಮ ಹೆಜ್ಜೆಯೂರಿದ್ದರು. 1980 ರಲ್ಲಿ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾದ ಆಸ್ಕರ್​. ಒಟ್ಟು ಐದು ಬಾರಿ ಅಂದರೆ 1984, 1989, 1991, 1996ರಲ್ಲಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಗೆ ಇವರಿಗೆ ಸಲ್ಲುತ್ತದೆ. ಮೊದಲ ಬಾರಿ ಸ್ಪರ್ದೆಗೆ ಇಳಿದಾಗ ಬರೋಬ್ಬರಿ ಒಂದುವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು ಆಸ್ಕರ್​. ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಆಸ್ಕರ್​ ಅದಕ್ಕಿಂತ ಹೆಚ್ಚಾಗಿ ಕರ್ನಾಟಕದ ಬಗ್ಗೆ ಸಂಸತ್ತಿನಲ್ಲಿ ಹೆಚ್ಚು ದನಿ ಎತ್ತುತ್ತಿದ್ದರು.

  ಚರ್ಚಿನಲ್ಲಿ ಆಲ್ಟರ್​ ಬಾಯ್ ಆಗಿದ್ದ ಹುಡುಗ​​ ರಾಜಕೀಯದಲ್ಲಿ ಬೆಳೆದಿದ್ದೆ ವಿಸ್ಮಯ

  ಮಾರ್ಚ್​ 21, 1941 ರಂದು ಕ್ಯಾಥೋಲಿಕ್​​ ಕ್ರಿಶ್ಚಿಯನ್​ ಕುಟುಂಬದಲ್ಲಿ ಜನಿಸಿದ ಆಸ್ಕರ್​ ಅವರು ರೂಕಿ ಫರ್ನಾಂಡಿಸ್​ ಹಾಗೂ ಲಿಯೋನಿಸಾ ಫರ್ನಾಂಡಿಸ್​ ದಂಪತಿಗಳ ಮಗನಾಗಿ ಜನಿಸಿದರು. ಇವರಿಗೆ 12 ಜನ ಸೋದರ- ಸೋದರಿಯರು ಇದ್ದಂತಹ ದೊಡ್ಡ ಕುಟುಂಬ. 1981 ಆಗಸ್ಟ್​ ತಿಂಗಳ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಫರ್ನಾಂಡಿಸ್​ ಅವರಿಗೆ ಓರ್ವ ಪುತ್ರ, ಪುತ್ರಿ ಇದ್ದಾರೆ.

  ಕ್ಯಾಥೋಲಿಕ್​ ಸಂಪ್ರದಾಯದ ಕಟ್ಟಾ ಅನುಯಾಯಿಗಳಾಗಿದ್ದ ಇವರ ತಂದೆ- ತಾಯಿ ಇವರನ್ನು ಅತ್ಯಂತ ಶಿಸ್ತಿನಿಂದ ಬೆಳೆಸುತ್ತಾರೆ. ಬಾಲ್ಯದಲ್ಲಿ ತಮ್ಮ ಮನೆ ಹತ್ತಿರದ ಚರ್ಚಿನಲ್ಲಿ ಆಲ್ಟರ್​ ಬಾಯ್​ ಆಗಿದ್ದ ಆಸ್ಕರ್​​, ಯುವಕರಾಗಿದ್ದಾಗಲೂ ಅಷ್ಟೇ ಉತ್ಸಾಹದಿಂದ ಚರ್ಚಿನ ಎಲ್ಲಾ ಕಾರ್ಯಕ್ರಮಗಳ ಮುಂದಾಳತ್ವವನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದರು.

  ಕೇಂದ್ರ ರಾಜಕಾರಣದಲ್ಲೇ ಉಳಿದ ನಾಯಕ

  26 ವರ್ಷಗಳ ಕಾಲ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಆಸ್ಕರ್​ ಫರ್ನಾಂಡಿಸ್​, ಕರಾವಳಿ ಭಾಗದ ಅತ್ಯಂತ ಜನಪ್ರಿಯ ರಾಜಕಾರಣಿ.  ತಾವು ರಾಜಕೀಯದಲ್ಲಿ ಇದ್ದ ಅಷ್ಟು ದಿನಗಳ ಕಾಲ ಕೇವಲ ಕೇಂದ್ರ ರಾಜಕೀಯದ ಕಡೆಗೆ ಮಾತ್ರ ಗಮನ ನೀಡಿದ್ದ ಆಸ್ಕರ್​ ಅವರು, ರಾಜ್ಯ ರಾಜಕಾರಣದ ಕಡೆಗೆ ಆಸಕ್ತಿವಹಿಸಿದ್ದು ಕಡಿಮೆ. ಉಡುಪಿಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಿಂದ ಹಿಡಿದು ಸ್ಥಳೀಯ ಆಡಳಿತದ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದ ಇವರ ಪ್ರಭಾವ ಬದಲಾದ ರಾಜಕೀಯ ದೃಷ್ಟಿಕೋನದ ಕಾರಣ ಸಡಿಲವಾಗುತ್ತಾ ಹೋಯಿತು ಎನ್ನಬಹುದು.

  ಆಸ್ಕರ್ ಫರ್ನಾಂಡಿಸ್ ಸಂಸದೀಯ ಕಾರ್ಯದರ್ಶಿ, ಕೆಪಿಸಿಸಿ ಅಧ್ಯಕ್ಷ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಚುನಾವಣಾ ಸಮಿತಿ ಸದಸ್ಯರಾಗಿ ಹೀಗೆ ಪಕ್ಷದ ನೀಡಿದ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಅತ್ಯಂತ ಗುರುತರವಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

  ಯೋಗ ಮಾಡುವಾಗ ಆಯತಪ್ಪಿ ಬಿದ್ದು ಆಸ್ಪತ್ರೆ ಸೇರುವ ತನಕವೂ ಸದಾ ಕ್ರಿಯಾಶೀಲವಾಗಿದ್ದ, ಎಲೆಮರೆಯಲ್ಲೇ ಕೆಲಸ ಮಾಡಿದ, ಆದರೆ ಅಷ್ಟೇ ಪ್ರಭಾವಿಯಾಗಿದ್ದ, ಗಾಂಧಿ ಕುಟುಂಬದ ವಿರುದ್ದ ಯಾರೇ ಮಾತನಾಡಿದರೂ ತಕ್ಷಣ ಪ್ರತಿಕ್ರಿಯೆ ನೀಡುತ್ತಿದ್ದ  ಈ ಹಿರಿಯ ನಾಯಕನನ್ನು ಕರಾವಳಿ ಕರ್ನಾಟಕ ಕಳೆದುಕೊಂಡಿದೆ.

  ಇದನ್ನೂ ಓದಿ: Punjab: ಬಿಜೆಪಿ ಸೇರಿದ ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್​ ಸಿಂಗ್​ ಮೊಮ್ಮಗ ಇಂದರ್‌ಜೀತ್ ಸಿಂಗ್

  ಕಾಂಗ್ರೆಸ್​ ಮುಳುಗುತ್ತಿರುವ ಹಡಗಾಗುತ್ತಿರುವ ಈ ಹೊತ್ತಿನಲ್ಲಿ ಇವರ ವಿದಾಯ ಪಕ್ಷಕ್ಕೆ ಸಾಕಷ್ಟು ಹೊಡೆತ ಎಂದೇ ಹೆಳಬಹುದು. ಸಕ್ರಿಯ ರಾಜಕಾರಣದಿಂದ ಕೊಂಚ ದೂರ ಇದ್ದರೂ ಸಹ ತಮ್ಮದೇ ವರ್ಚಸ್ಸು ಬೆಳೆಸಿಕೊಂಡಿದ್ದ ನಾಯಕ ಈಗ ನೆನಪು ಮಾತ್ರ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: