Birds: ಪಕ್ಷಿಗಳ ಸಂರಕ್ಷಣೆಗಾಗಿ ಬಂಟ್ವಾಳದ ದಂಪತಿಯ ನಿಸ್ವಾರ್ಥ ಸೇವೆ: ಹಕ್ಕಿಗಳಿಗಾಗಿ ಉಚಿತ ಗೂಡು ತಯಾರಿಕೆ

ಪಕ್ಷಿ ಸಂಕುಲವನ್ನು ಉಳಿಸುವ ಕಾರ್ಯದಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಅಪರೂಪದ ಪಕ್ಷಿ ದಂಪತಿ. ಬಂಟ್ವಾಳದ ನಿತ್ಯಾನಂದ ಶೆಟ್ಟಿ ಹಾಗೂ ರಮ್ಯಾ ಉಚಿತವಾಗಿ ಪಕ್ಷಿಗಳಿಗಾಗಿ ಗೂಡು ತಯಾರಿಸಿ ಸ್ಥಳೀಯರಿಗೆ ನೀಡುವ ಮೂಲಕ ಪಕ್ಷಿ ಸಂಕುಲದ ರಕ್ಷಣೆಗೆ ಪಣ ತೊಟ್ಟಿದ್ದಾರೆ.

ಪಕ್ಷಿ ಪ್ರೇಮಿ ಬಂಟ್ವಾಳದ ನಿತ್ಯಾನಂದ ಶೆಟ್ಟಿ

ಪಕ್ಷಿ ಪ್ರೇಮಿ ಬಂಟ್ವಾಳದ ನಿತ್ಯಾನಂದ ಶೆಟ್ಟಿ

  • Share this:
ಮಾನವನಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕಿರುವಂತೆ ಸಕಲ ಚರಾಚರ ಜೀವರಾಶಿಗಳಿಗೂ ಅಷ್ಟೇ ಹಕ್ಕಿದೆ. ಆದರೆ ,ಈ ರೀತಿ ಯೋಚಿಸುವವರು ಹಾಗೂ ಪ್ರಾಣಿ ಪಕ್ಷಿಗಳ ಉಳಿವಿಗೆ ಜೀವನ ಮುಡಿಪಾಗಿಡುವವರು ತುಂಬಾ ಕಡಿಮೆ. ಆದರೆ ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡದ ದಂಪತಿಗಳು ಸ್ಥಳೀಯರಿಗೆ ಉಚಿತ ಗೂಡುಗಳನ್ನು ನೀಡುವ ಮೂಲಕ ಪಕ್ಷಿ ಸಂತತಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಿರತರಾಗಿದ್ದಾರೆ. ದಾನ-ಧರ್ಮ ಸೇವಾ ಮನೋಭಾವನೆ ಆರಂಭವಾಗುವುದೇ ಮನೆಗಳಲ್ಲಿ ಎಂಬುದು ಪಕ್ಷಿಗಳ ಉಳಿವಿಗೆ ಸತತ ಏಳು ವರ್ಷಗಳಿಂದ ಹೋರಾಡುತ್ತಿರುವ ನಿತ್ಯಾನಂದ ಶೆಟ್ಟಿಯವರ ಮಾತಾಗಿದೆ. 36ರ ಹರೆಯದ ನಿತ್ಯಾನಂದ ಶೆಟ್ಟಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಗುಬ್ಬಚ್ಚಿ ಗೂಡು ಎಂಬ ಅಭಿಯಾನದ ಹರಿಕಾರರು ಕೂಡ ಹೌದು. ಎಂ.ಕಾಂ ಪದವೀಧರೆ ಆಗಿರುವ ಇವರ ಪತ್ನಿ 26ರ ಹರೆಯದ ರಮ್ಯಾ ಪತಿಯ ಕಾರ್ಯದಲ್ಲಿ ಜೊತೆಯಾಗಿದ್ದಾರೆ.

ಪಕ್ಷಿ ಸಂಕುಲವನ್ನು ಉಳಿಸುವ ಕಾರ್ಯದಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಅಪರೂಪದ ಪಕ್ಷಿ ದಂಪತಿ ಇವರು. ಉಚಿತವಾಗಿ ಪಕ್ಷಿಗಳಿಗಾಗಿ ಗೂಡು ತಯಾರಿಸಿ ಸ್ಥಳೀಯರಿಗೆ ನೀಡುವ ಈ ದಂಪತಿಗಳು ಪಕ್ಷಿ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ. ಮರ ಹಾಗೂ ಬಿದಿರಿನಿಂದ ಗೂಡುಗಳನ್ನು ತಯಾರಿಸಿ ಅದರಲ್ಲಿ ಸಣ್ಣ ನೀರಿನ ಮಡಿಕೆಗಳನ್ನಿಟ್ಟು ಪಕ್ಷಿಗಳಿಗೆ ಆಶ್ರಯ ತಾಣವನ್ನು ಒದಗಿಸುತ್ತಿದ್ದಾರೆ. ತಾವು ಮಾತ್ರವಲ್ಲದೆ ಸ್ಥಳೀಯರನ್ನು ಕೂಡ ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Nithyananda Shetty and his wife Ramya is on a mission to conserve birds by providing locals with free nests
ಪಕ್ಷಿ ಪ್ರೇಮಿ ಬಂಟ್ವಾಳದ ನಿತ್ಯಾನಂದ ಶೆಟ್ಟಿ


ಪಕ್ಷಿಗಳಿಂದ ಪರಿಸರಕ್ಕೆ ಉಂಟಾಗುತ್ತಿರುವ ಪ್ರಯೋಜನಗಳು ಹಾಗೂ ಪಕ್ಷಿಗಳ ಸಂರಕ್ಷಣೆಯಲ್ಲಿ ನಾವು ಏಕೆ ತೊಡಗಿಸಿಕೊಳ್ಳಬೇಕೆಂಬುದರ ಕುರಿತು ಸ್ಥಳೀಯರಲ್ಲಿ ಅರಿವನ್ನುಂಟು ಮಾಡುತ್ತಿದ್ದಾರೆ.

ದಂಪತಿ ಪಕ್ಷಿಗಳನ್ನು ಹೇಗೆ ಆಕರ್ಷಿಸುತ್ತಾರೆ?

ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುವ ದಂಪತಿ ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯ ಎಲಿಯನಾಡುಗೋಡು ಎಂಬಲ್ಲಿ 2 ಎಕರೆ ಸ್ಥಳದಲ್ಲಿ ಚಿಕ್ಕು, ಪೇರಳೆ, ಬಾಳೆ, ಹಲಸಿನಂತಹ ವಿವಿಧ ಮರಗಳನ್ನು ನೆಟ್ಟು ಪಕ್ಷಿಗಳನ್ನು ಆಕರ್ಷಿಸಿ ತಂಪಿನ ತಾಣವನ್ನು ಸೃಷ್ಟಿಸಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ 93 ಜಾತಿಯ ಪಕ್ಷಿಗಳು ಶೆಟ್ಟಿಯವರ ತೋಟವನ್ನು ತಮ್ಮ ಕುಟುಂಬವನ್ನಾಗಿ ಮಾಡಿಕೊಂಡಿವೆ ಎಂಬುದು ತಿಳಿದು ಬಂದಿದೆ.

ನಿತ್ಯಾನಂದ ಶೆಟ್ಟಿಯವರಿಗೆ ಪಕ್ಷಿಪ್ರೇಮ ಹೇಗೆ ಉಂಟಾಯಿತು?

ಶೆಟ್ಟಿಯವರ ಮನೆಗೆ ಭೇಟಿ ನೀಡಿದಾಗ ನಮ್ಮನ್ನು ಸ್ವಾಗತಿಸುವುದೇ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆಯಾಗಿದೆ. ಪಕ್ಷಿಗಳ ಮೇಲಿನ ಒಲವನ್ನು ತನ್ನ ತಾಯಿಯಿಂದಲೇ ಕಲಿತುಕೊಂಡಿರುವುದಾಗಿ ಶೆಟ್ಟಿ ಹೇಳುತ್ತಾರೆ. ಅವರ ತಾಯಿ ಪಕ್ಷಿಗಳ ಮೇಲೆ ದಯೆ ಹೊಂದಿದ್ದರು ಇದರಿಂದ ಪಕ್ಷಿಗಳನ್ನು ಸಂರಕ್ಷಿಸುವ ಯೋಜನೆ ಅವರ ಮನದಲ್ಲಿ ರೂಪುಗೊಂಡಿತು. ಹೀಗೆ ತಾಯಿಯಿಂದ ಪ್ರೇರಣೆಗೊಂಡು ಶೆಟ್ಟಿಯವರು ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡ ನಂತರ ಅವರ ಉಸಿರೇ ಪಕ್ಷಿಗಳಿಗೆ ಮುಡಿಪಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: Bird Survey: ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ಪಕ್ಷಿ ಸಮೀಕ್ಷೆ: 289 ಜಾತಿಯ ಪಕ್ಷಿಗಳು ಪತ್ತೆ..!

ಪಕ್ಷಿಗಳನ್ನು ಸಂರಕ್ಷಿಸುವ ನಿಸ್ವಾರ್ಥ ಕೆಲಸದಲ್ಲಿ ಶೆಟ್ಟಿಯವರಿಗೆ ಉಂಟಾಗಿರುವ ಪ್ರಯೋಜನವೇನು ಎಂದು ಕೇಳಿದಾಗ ನಮ್ಮ ಹಾಗೆ ಹಕ್ಕಿಗಳಿಗೂ ಹಸಿವು ಬಾಯಾರಿಕೆ ಸಹಜವೇ ಆಗಿದೆ. ನಮಗೆ ಆಹಾರ ನೀರು ಇಲ್ಲದಿದ್ದರೆ ನಾವೆಷ್ಟು ಅಸಹಾಯಕರಾಗುತ್ತೇವೆ. ಅದೇ ರೀತಿ ಪಕ್ಷಿಗಳೂ ಅಸಹಾಯಕರಾಗುತ್ತಾರೆ ಎಂದು ಶೆಟ್ಟಿ ಹೇಳುತ್ತಾರೆ.

ಉಚಿತವಾಗಿ ಗೂಡು ಒದಗಿಸುವ ದಂಪತಿ:

ಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸ್ಥಳೀಯರಿಗೆ ಗೂಡು ಒದಗಿಸುವ ಯೋಜನೆ ಹೇಗೆ ಹುಟ್ಟಿಕೊಂಡಿತು ಎಂದು ನಿತ್ಯಾನಂದ ಶೆಟ್ಟಿಯವರಲ್ಲಿ ಕೇಳಿದಾಗ ಅವರೊಂದು ಉದಾಹರಣೆ ನೀಡುತ್ತಾರೆ. ಒಮ್ಮೆ ಅಪರಿಚಿತರೊಬ್ಬರು ಶೆಟ್ಟಿಯವರಿಗೆ ಕರೆ ಮಾಡಿ ತಮ್ಮ ಮನೆಯ ಮರದಲ್ಲಿ ನೇತುಹಾಕಲು 2 ಗೂಡುಗಳನ್ನು ಒದಗಿಸಬಹುದೇ ಎಂದು ಕೇಳಿದರು. ಕೆಲವೇ ಗಂಟೆಗಳಲ್ಲಿ ಸಿದ್ಧಗೊಂಡ ಗೂಡುಗಳನ್ನು ಶೆಟ್ಟಿಯವರು ಅವರಿಗೆ ತಲುಪಿಸುತ್ತಾರೆ ಹಾಗೂ ಇದೇ ರೀತಿ ಗೂಡು ಬಯಸುವವರು ಯಾರಾದರೂ ಇದ್ದರೆ ಸಂಪರ್ಕಿಸಲು ತಿಳಿಸುತ್ತಾರೆ. ಕರೆಮಾಡಿದ ವ್ಯಕ್ತಿ ಗೂಡಿನ ನಿರ್ಮಾಣಕ್ಕಾದ ವೆಚ್ಚವನ್ನು ಶೆಟ್ಟರಿಗೆ ನೀಡಲು ಬಂದಾಗ ಶೆಟ್ಟರು ಹಣ ಸ್ವೀಕರಿಸಲು ನಿರಾಕರಿಸುತ್ತಾರೆ.

ಪಕ್ಷಿಗಳಿಗಾಗಿ ಮಾಡುವ ಉದಾತ್ತ ಕೆಲಸಕ್ಕಾಗಿ ಶೆಟ್ಟಿ ದಂಪತಿ ಯಾರಿಂದಲೂ ಹಣ ಸ್ವೀಕರಿಸುವುದಿಲ್ಲ. ತಾವು ಕಷ್ಟಪಟ್ಟು ದುಡಿದ ಆದಾಯದಿಂದ ಒಂದು ಭಾಗವನ್ನು ಈ ಪಕ್ಷಿಗಳಿಗಾಗಿ ಮುಡಿಪಾಗಿಡುತ್ತಾರೆ. ದಂಪತಿ ತಮ್ಮ 2 ವರ್ಷದ ಮಗನೊಂದಿಗೆ ಆನಂದದ ಜೀವನವನ್ನು ನಡೆಸುತ್ತಿದ್ದು ಸರಳ ಜೀವನ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಪಕ್ಷಿಗಳ ಸಂರಕ್ಷಣೆಯಲ್ಲಿ ಕೈಗೊಂಡಿರುವ ಕಾರ್ಯಗಳೇನು?

ಕಳೆದ 7 ವರ್ಷಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನೂರಾರು ನಿವಾಸಿಗಳಿಗೆ ಸಾವಿರಕ್ಕೂ ಹೆಚ್ಚಿನ ಉಚಿತ ಗೂಡುಗಳನ್ನು ದಂಪತಿ ವಿತರಿಸಿದ್ದಾರೆ. ಶಾಲೆ ಹಾಗೂ ಹಳ್ಳಿಗಳಲ್ಲಿ ಪಕ್ಷಿ ಸಂರಕ್ಷಣೆಯ ಕುರಿತು ಹಲವಾರು ಉಪನ್ಯಾಸಗಳನ್ನು ಕೂಡ ನೀಡಿದ್ದಾರೆ. ಒಮ್ಮೆ ಜಮ್ಮು - ಕಾಶ್ಮೀರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನಮ್ಮೊಂದಿಗೆ ಪ್ರಯಾಣಿಸುತ್ತಿದ್ದ ನೂರಾರು ಪ್ರಯಾಣಿಕರಿಗೆ ಪಕ್ಷಿಗಳನ್ನು ಸಂರಕ್ಷಿಸುವ ಅಗತ್ಯಕ್ಕೆ ಒತ್ತು ನೀಡುವ ಕರಪತ್ರಗಳನ್ನು ಕೂಡ ಹಂಚಿದ್ದೇವೆ ಎಂದು ಹೇಳುವಾಗ ಶೆಟ್ಟಿಯವರ ಕಣ್ಣುಗಳಲ್ಲಿನ ಹೊಳಪು ಅವರಿಗೆ ಪಕ್ಷಿಗಳ ಮೇಲಿರುವ ಕಳಕಳಿಯನ್ನು ಎದ್ದುಗ ಕಾಣಿಸುತ್ತದೆ.

ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ತುಂಗಭದ್ರಾ ; ಹಮ್ಮಿಗಿ ಬ್ಯಾರೇಜ್ ಹಿನ್ನೀರಿನಲ್ಲಿ ಪಕ್ಷಿಗಳು ತತ್ತರ

ಪಕ್ಷಿಗಳನ್ನು ಸಂರಕ್ಷಿಸುವ ಕುರಿತು ಜನರಿಗೆ ಶಿಕ್ಷಣ ನೀಡುವ ಹಲವಾರು ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಶೆಟ್ಟಿಯವರು ಅಪ್‌ಲೋಡ್ ಮಾಡಿದ್ದಾರೆ. ತಮ್ಮ ತಮ್ಮ ಮನೆಯ ಸುತ್ತಮುತ್ತ ಗೂಡು ನಿರ್ಮಿಸಲು ಯಾರಾದರೂ ಮುಂದೆ ಬಂದರೆ ನಮಗೆ ತುಂಬಾ ಸಂತೋಷವಾಗುತ್ತದೆ. ನಿಜಕ್ಕೂ ಅವರಿಗೆ ಪಕ್ಷಿಗಳ ಮೇಲೆ ಕಾಳಜಿ ಇದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಶೆಟ್ಟಿ ಹೇಳುತ್ತಾರೆ. ಪಕ್ಷಿಗಳ ಗೂಡು ತಯಾರಿಗೆ ಬಳಸುವ ಬಿದಿರನ್ನು ಸ್ನೇಹಿತರು ಅಥವಾ ಸಂಬಂಧಿಕರಿಂದ ಪಡೆದುಕೊಳ್ಳುತ್ತಾರೆ. ಇನ್ನು ಮಣ್ಣಿನ ಮಡಿಕೆ ಹಾಗೂ ಮರವನ್ನು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸುತ್ತಾರೆ.

ಗೂಡನ್ನು ಎಲ್ಲಿ ಇರಿಸಬೇಕೆಂದು ಶೆಟ್ಟಿಯವರು ಸಲಹೆ ನೀಡುತ್ತಾರೆ?

ಪಕ್ಷಿಗಳ ಗೂಡುಗಳನ್ನು ಇರಿಸಲು ಸೂಕ್ತ ಸ್ಥಳವನ್ನು ಕೂಡ ಶೆಟ್ಟಿಯವರೇ ನಿರ್ಧರಿಸುತ್ತಾರೆ. ಬೆಕ್ಕು ಹಾಗೂ ಸಾಕು ಪ್ರಾಣಿಗಳ ಶಬ್ಧ, ವಾಹನಗಳ ಶಬ್ಧ ಪಕ್ಷಿಗಳಿಗೆ ಗಂಭೀರ ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುವುದರಿಂದ ಅದೂ ಅಲ್ಲದೆ ಮಳೆ ಗಾಳಿಗಳಿಂದ ಗೂಡುಗಳನ್ನು ರಕ್ಷಿಸುವುದಕ್ಕಾಗಿ ಪ್ರಶಾಂತ ಹಾಗೂ ನೆರಳಿರುವ ಸ್ಥಳವನ್ನು ಶೆಟ್ಟಿಯವರು ಆಯ್ಕೆಮಾಡುತ್ತಾರೆ. ಬೇಸಿಗೆಯ ಸಮಯದಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಸುವಂತೆ ಸ್ಥಳೀಯರನ್ನು ಅವರು ವಿನಂತಿಸುತ್ತಾರೆ. ಮಳೆಗಾಲದಲ್ಲಿ ಬೇರೆ ಬೇರೆ ಸಸ್ಯಗಳನ್ನು ನೆಟ್ಟು ಭವಿಷ್ಯದಲ್ಲಿ ಇನ್ನಷ್ಟು ಪಕ್ಷಿಗಳಿಗೆ ಆಶ್ರಯತಾಣ ಒದಗಿಸುವ ಭರವಸೆಯನ್ನು ಶೆಟ್ಟಿಯವರು ಹೊಂದಿದ್ದಾರೆ.

ಶೆಟ್ಟಿಯವರ ತೋಟದಲ್ಲಿರುವ ಸಾಮಾನ್ಯ ಪಕ್ಷಿಗಳು:

ಕಾಗೆ, ಗ್ರೇಟ್ ಕಾರ್ಮೋರಂಟ್, ಗೂಬೆ, ಕಿಂಗ್‌ಫಿಶರ್, ಕೊಕ್ಕರೆ, ಪಾರಿವಾಳ, ಬುಲ್‌ಬುಲ್, ಕಾಡುಕೋಳಿ, ನವಿಲು, ಸನ್‌ಬರ್ಡ್, ಮೈನಾ, ಬೂದು ಕಾಡುಕೋಳಿ, ಕೋಗಿಲೆ, ಮಚ್ಚೆಯುಳ್ಳ ಮುನಿಯಾ, ಗಿಳಿ, ಪ್ಯಾರಕೀಟ್, ಮರಕುಟಿಗ, ಹಸಿರು ಪಾರಿವಾಳ, ಕೆನ್ನೀಲಿ ಬಕ ಮುಂತಾದ ಪಕ್ಷಿಗಳಿವೆ. ಶೆಟ್ಟಿಯವರ ಎರಡು ಎಕರೆ ಭೂಮಿಯಲ್ಲಿ 93 ಜಾತಿಗಳ ಪಕ್ಷಿಗಳು ಕಂಡುಬಂದಿವೆ.
Published by:Anitha E
First published: