news18-kannada Updated:February 22, 2021, 2:55 PM IST
ಬಂಟ್ವಾಳದ ಪಕ್ಷಿ ಪ್ರೇಮಿ ನಿತ್ಯಾನಂದ
ಮಂಗಳೂರು (ಫೆ. 22): ನೀರು, ಆಹಾರ ಹಾಗೂ ವಾಸ ಸ್ಥಾನಗಳ ಕೊರತೆಯಿಂದಾಗಿ ಇಂದು ಪಕ್ಷಿಗಳ ಸಂತತಿ ಒಂದೆಡೆ ನಾಶವಾದರೆ, ಇನ್ನುಳಿದವುಗಳು ವಲಸೆ ಹೋಗುತ್ತಿವೆ. ಪಕ್ಷಿಗಳ ಸಂಸತಿಯನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಾದರೂ ವಾಸ್ತವದಲ್ಲಿ ಇದು ಕಾರ್ಯರೂಪಕ್ಕೆ ಬರುತ್ತಿರುವುದು ಬಲು ಅಪರೂಪವೇ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕನೋರ್ವ ಪಕ್ಷಿಗಳಿಗೆ ಅವಾಸ ಸ್ಥಾನವನ್ನು ಒದಗಿಸಿ, ಅವುಗಳನ್ನು ನೈಸರ್ಗಿಕವಾಗಿ ಪೋಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ಬಳಿಯ ಬೈದ್ಯಾರು ನಿವಾಸಿ ನಿತ್ಯಾನಂದ ಶೆಟ್ಟಿ ಈ ಅಪರೂಪದ ಪಕ್ಷಿಪ್ರೇಮಿಯಾಗಿದ್ದಾರೆ.
ಖಾಸಗಿ ವಿದ್ಯಾಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಇವರಿಗೆ ಪಕ್ಷಿಗಳೆಂದರೆ ಪಂಚಪ್ರಾಣ. ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿ ನೀರನ್ನು ನೀಡುವ ಕೆಲಸ ಮಾಡಬೇಕು ಎನ್ನುವ ತಾಯಿಯ ಮಾತನ್ನು ಇಂದಿಗೂ ಕಾರ್ಯಗತಗೊಳಿಸುತ್ತಿರುವವರು. ಈ ಕಾರ್ಯವನ್ನು ಹೊಸತನದ ಮೂಲಕ ಮಾಡಬೇಕೆಂಬ ಕಾರಣಕ್ಕಾಗಿ ತನ್ನ ಮನೆ ಹಾಗೂ ತೋಟದಾದ್ಯಂತ ಕಬ್ಬಿಣದ ಸರಳುಗಳಲ್ಲಿ ನೀರು ಹಾಗೂ ಆಹಾರವನ್ನು ಇಡುವ ವ್ಯವಸ್ಥೆ ಮಾಡುವ ಮೂಲಕ ಡಿಫರೆಂಟ್ ಪಕ್ಷಿಪ್ರೇಮಿಯಾಗಿ ಗುರುತಿಸಿಕೊಂಡಿದ್ದಾರೆ. ಮನೆಯ ಸುತ್ತಮುತ್ತ ಇರುವ ಖಾಲಿ ಜಾಗ, ಬಂಡೆಗಳ ಮೇಲೆ ಹೀಗೆ ಎಲ್ಲಾ ಕಡೆಗಳಲ್ಲೂ ಪಕ್ಷಿಗಳಿಗಾಗಿ ನೀರು ಹಾಗೂ ಆಹಾರದ ವ್ಯವಸ್ಥೆಯನ್ನು ಇವರು ಮಾಡುತ್ತಿದ್ದಾರೆ. ಸುಮಾರು 7 ಲಕ್ಷಕ್ಕೂ ಮಿಕ್ಕಿದ ಹಣವನ್ನು ಈ ಪ್ರಾಣಿ-ಪಕ್ಷಿಗಳ ವಾಸ ಸ್ಥಾನ ಹಾಗೂ ಆಹಾರಕ್ಕಾಗಿ ವೆಚ್ಚ ಮಾಡಿರುವ ಇವರು ಇದರಲ್ಲೇ ಆತ್ಮಸಂತೃಪ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Karnataka Weather: ಮಲೆನಾಡು, ಕರಾವಳಿ, ಕೊಡಗು ಸೇರಿ ಕರ್ನಾಟಕದ ಹಲವೆಡೆ ಇನ್ನೆರಡು ದಿನ ಮಳೆ ಸಾಧ್ಯತೆ
ವಿಕಿರಣದ ಹೆಚ್ಚಳ, ಆಹಾರ, ನೀರು, ಮರಗಳ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಪಕ್ಷಿಗಳ ಸಂತತಿ ಹೆಚ್ಚು ಹೆಚ್ಚು ನಾಶವಾಗುತ್ತಿದೆ. ಆದರೆ ನಿತ್ಯಾನಂದ ಶೆಟ್ಟಿ ತನ್ನ ತೋಟದಲ್ಲಿ ಈ ಪ್ರಾಣಿ-ಪಕ್ಷಿಗಳು ತಿನ್ನಲೆಂದೇ ವಿವಿಧ ರೀತಿಯ ಹಣ್ಣುಗಳ ಗಿಡಗಳನ್ನು ಬೆಳಿಸಿದ್ದಾರೆ. ಪಪ್ಪಾಯಿ, ಪೇರಳೆ, ಅನನಾಸು, ಹಲಸು, ಮಾವು, ಗೇರು ಹೀಗೆ ಹಲವು ಪ್ರಕಾರದ ಹಣ್ಣುಗಳ ಗಿಡಗಳು ಇವರ ತೋಟದಲ್ಲಿವೆ. ಪಕ್ಷಿಗಳು ಇವುಗಳನ್ನು ಯಥೇಚ್ಛವಾಗಿ ತಿಂದು ಅಲ್ಲೇ ತನ್ನ ವಾಸ ಮಾಡಬೇಕು ಎನ್ನುವ ಉದ್ಧೇಶ ಇವರದ್ದಾಗಿದೆ. ಅಲ್ಲದೆ ಕೃತಕ ಹಾಗೂ ನೈಸರ್ಗಿಕ ಗೂಡುಗಳನ್ನು ಮರದ ತುಂಬೆಲ್ಲಾ ಇಟ್ಟಿರುವ ಇವರು ಪಕ್ಷಿಗಳ ವಂಶಾಭಿವೃದ್ಧಿಗೂ ಪೂರಕ ವಾತಾವರಣವನ್ನು ಸೃಷ್ಟಿಸಿದ್ದಾರೆ.
ಕೇವಲ ತಾನೊಬ್ಬನೇ ಪಕ್ಷಿ-ಪ್ರಾಣಿಗಳ ಬಗ್ಗೆ ಪ್ರೀತಿಯಿಟ್ಟುಕೊಂಡಲ್ಲಿ ಸಾಲದು ಎಲ್ಲರಲ್ಲೂ ಪ್ರಾಣಿ-ಪಕ್ಷಿ ಹಾಗೂ ಪ್ರಕೃತಿಯ ಕುರಿತು ಕಾಳಜಿಯಿರಬೇಕು ಎನ್ನುವ ಧ್ಯೇಯವನ್ನೂ ಇವರು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಬಂಟ್ವಾಳ ತಾಲೂಕಿನ ಹಲವು ಶಾಲೆಗಳಲ್ಲಿ ಪಕ್ಷಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರವನ್ನೂ ಏರ್ಪಡಿಸುತ್ತಾರೆ. ಪಕ್ಷಿಗಳಿಗೆ ನಿರಂತರ ನೀರು ಹಾಗೂ ಆಹಾರ ಪೂರೈಸುವ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ತಾವು ಮಾಹಿತಿ ನೀಡಿದ ಶಾಲೆಗಳಲ್ಲಿ ಕೃತಕ ಹಕ್ಕಿ ಗೂಡುಗಳನ್ನು ನೀಡುವ ಮೂಲಕ ಮಕ್ಕಳೂ ಪಕ್ಷಿಗಳ ಸಂತತಿ ಹೆಚ್ಚಿಸುವಲ್ಲಿ ನಿರಂತರ ತೊಡಗಿಕೊಳ್ಳಬೇಕು ಎನ್ನುವ ಕಾರಣಕ್ಕೆ ಮಕ್ಕಳನ್ನೇ ಹೆಚ್ಚಾಗಿ ತನ್ನ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀಕಾಂತ್ ಶೆಟ್ಟಿಯವರ ಪಕ್ಷಿಗಳ ಮೇಲಿನ ಕಾಳಜಿಯನ್ನು ಗುರುತಿಸಿ ಹಲವು ಸಂಘಸಂಸ್ಥೆಗಳು ಇವರನ್ನು ಗೌರವಿಸಿದೆ.
(ವರದಿ: ಅಜಿತ್ ಕುಮಾರ್ )
Published by:
Sushma Chakre
First published:
February 22, 2021, 2:55 PM IST