Puttur: ಜಾತ್ರೆಯಲ್ಲೂ ನಿಷೇಧದ ಕೂಗು, ಅನ್ಯಧರ್ಮೀಯ ಆಟೋಗಳಿಗಿಲ್ಲ ಇಲ್ಲಿ ಅವಕಾಶ!

ಕೇಸರಿ ಧ್ವಜವಿರುವ ಆಟೋಗಳಲ್ಲೇ ಹಿಂದೂ ಭಕ್ತಾಧಿಗಳು ಜಾತ್ರೆಗೆ ಆಗಮಿಸಬೇಕು ಎನ್ನುವ ಸಂದೇಶವನ್ನೂ ಈಗಾಗಲೇ ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳ ಮೂಲಕ ಭಕ್ತಾಧಿಗಳಿಗೆ ರವಾನಿಸುವ ಕಾರ್ಯ ಆಗುತ್ತಿದೆ.

ಆಟೋಗಳಿಗೆ ಹಿಂದೂಪರ ಸಂಘಟನೆ ಮನವಿ

ಆಟೋಗಳಿಗೆ ಹಿಂದೂಪರ ಸಂಘಟನೆ ಮನವಿ

  • Share this:
ಪುತ್ತೂರು, ದಕ್ಷಿಣ ಕನ್ನಡ: ‘ಹತ್ತೂರ ಒಡೆಯನ ಪುತ್ತೂರು ಜಾತ್ರೆ’ಗೆ ಕ್ಷಣಗಣನೆ (Count Down) ಆರಂಭವಾಗಿದೆ. 800 ವರ್ಷಗಳಷ್ಟು ಇತಿಹಾಸವಿರುವ (History) ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ (Puttur Mahalingeshwara Temple) ಜಾತ್ರೋತ್ಸವವು (Jatre) ಇಂದಿನಿಂದ ಅಂದರೆ, ಎಪ್ರಿಲ್ 10 ರಿಂದ ಏಪ್ರಿಲ್ 20 ರ ತನಕ ನಡೆಯಲಿದೆ. ಇಲ್ಲಿ ಈ ಬಾರಿ ಅನ್ಯಧರ್ಮೀಯರಿಗೆ ಜಾತ್ರೋತ್ಸವದಲ್ಲಿ ವ್ಯಾಪಾರ-ವ್ಯವಹಾರಕ್ಕೆ ನಿಷೇಧ (Ban) ಹೇರಲಾಗಿದೆ. ಈ ನಿಷೇಧದ ಮುಂದುವರಿದ ಭಾಗವಾಗಿ ಜಾತ್ರೋತ್ಸವಕ್ಕೆ ಬರುವ ಭಕ್ತಾಧಿಗಳು (Devotees) ಹಿಂದೂ (Hindu) ಆಟೋ ಚಾಲಕರ ಆಟೋದಲ್ಲೇ (Auto) ಬರಬೇಕು ಎಂದು ಹಿಂದೂ ಜಾಗರಣ ವೇದಿಕೆ ಭಕ್ತಾಧಿಗಳಲ್ಲಿ ಮನವಿ ಮಾಡಿದೆ. ಈ ಸಂಬಂಧ ಪುತ್ತೂರಿನ ಆಟೋ ಚಾಲಕರಿಗೆ ಭಗವಾಧ್ವಜವನ್ನು ವಿತರಣೆ ಮಾಡುವ ಕೆಲಸವನ್ನು ಈಗಾಗಲೇ ವೇದಿಕೆಯ ಕಾರ್ಯಕರ್ತರು ಆರಂಭಿಸಿದ್ದಾರೆ.

ಹಿಂದೂ ಚಾಲಕರ ಆಟೋಗಳಿಗೆ ಮಾತ್ರ ಅವಕಾಶ

ಜಾತ್ರೆಯ ನೆಪದಲ್ಲಿ ಅನ್ಯಧರ್ಮೀಯರು ಹಿಂದೂ ಹೆಣ್ಣುಮಕ್ಕಳನ್ನು ಮೋಸದ ಜಾಲದಲ್ಲಿ ಸಿಲುಕಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆ ಈ ಬಾರಿ ಹಿಂದೂಗಳ ಆಟೋದಲ್ಲಿ ಮಾತ್ರವೇ ಭಕ್ತಾಧಿಗಳು ಜಾತ್ರೆಗೆ ಆಗಮಿಸಬೇಕು. ಕೇಸರಿ ಧ್ವಜವಿರುವ ಆಟೋದಲ್ಲೇ ಸಂಚರಿಸುವ ಮೂಲಕ ಹಿಂದೂ ಬಡ ಆಟೋ ಚಾಲಕರಿಗೆ ಸಹಾಯ ಮಾಡಬೇಕು ಎನ್ನುವ ವಿಚಾರವನ್ನೂ ಹಿಂಜಾವೇ ತನ್ನ ಅಭಿಯಾನದಲ್ಲಿ ಬಳಸಿಕೊಂಡಿದೆ.

ರಾಜ್ಯ ಸರ್ಕಾರದ ವಿರುದ್ಧ ಆರೋಪ

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರದಿಂದ ಹಿಂದೂಗಳಿಗೆ ಯಾವುದೇ ಸಹಾಯ ದೊರೆಯುತ್ತಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುವ ಕೆಲಸವಾಗುತ್ತಿರುವ ಕಾರಣ, ಹಿಂದೂ ಸಮಾಜ ಇದೀಗ ತಾನೇ ಕಾರ್ಯಾಚರಣೆಗೆ ಇಳಿದಿದೆ ಎನ್ನುವುದು ಹಿಂಜಾವೇ ಮುಖಂಡರ ವಾದವಾಗಿದೆ.

ಇದನ್ನೂ ಓದಿ: ಶ್ರೀರಾಮ ಸೇನೆಯಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ: ಭಯೋತ್ಪಾದಕರಿಗೂ, ಈ ಕಿರಾತಕರಿಗೆ ವ್ಯತ್ಯಾಸವಿಲ್ಲ ಅಂದ್ರು HDK

 “ನಾವು ಯಾರ ಮೇಲೂ ದೌರ್ಜನ್ಯ ಎಸಗಿಲ್ಲ”

ಹಿಂದೂ ಹೆಣ್ಣುಮಕ್ಕಳನ್ನು ಮೋಸದ ಜಾಲದಿಂದ ಹೊರ ತರುವ ಕೆಲಸವನ್ನು ಹಿಂದೂ ಸಂಘಟನೆಗಳು ಮಾಡುತ್ತಿದೆ. ಯಾರ ಮೇಲೂ ದೌರ್ಜನ್ಯ ಎಸಗುವ ಕೃತ್ಯವನ್ನು ಹಿಂದೂ ಸಂಘಟನೆಗಳು ಮಾಡಿಲ್ಲ ಎನ್ನುತ್ತಾರೆ ಅನ್ಯಧರ್ಮೀಯರ ಆಟೋಗಳಿಗೆ ನಿಶೇಧ ಹೇರಿದ ಕ್ರಮವನ್ನು ಸಮರ್ಥಿಸುವ ಪುತ್ತೂರಿನ ಖ್ಯಾತ ವೈದ್ಯ ಮತ್ತು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡ ಪ್ರಸಾದ್ ಭಂಡಾರಿ.

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಪ್ಪಿಸಲು ಕ್ರಮ

ಪ್ರತೀ ಜಾತ್ರೋತ್ಸವದ ಸಂದರ್ಬದಲ್ಲೂ ಅನ್ಯಧರ್ಮೀಯ ಆಟೋ ಚಾಲಕರು ಹಿಂದೂ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದ್ದು, ಈ ಬಾರಿ ಇಂಥ ಘಟನೆಗಳು ನಡೆಯಬಾರದು ಎನ್ನುವ ಕಾರಣಕ್ಕಾಗಿ ಈ ರೀತಿಯ ಅಭಿಯಾನವನ್ನು ಹಮ್ಮಿಕೊಂಡಿರುವಾಗಿ ಹೇಳುತ್ತಾರೆ ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿಯಾದ ದಿನೇಶ್ ಪಂಜಿಗ.

“ಕೇಸರಿ ಧ್ವಜ ಇರುವ ಆಟೋಗಳಲ್ಲೇ ಬನ್ನಿ”

ಪುತ್ತೂರಿನಲ್ಲಿ ಸುಮಾರು  6 ಸಾವಿರಕ್ಕೂ ಮಿಕ್ಕಿದ ಆಟೋಗಳು ಓಡಾಡುತ್ತಿದ್ದು, ಪುತ್ತೂರು ನಗರದಲ್ಲೇ ಅತ್ಯಧಿಕ 4 ಸಾವಿರ ಆಟೋಗಳಿವೆ. ಇವುಗಳಲ್ಲಿ ಹಿಂದೂಗಳ ಎಲ್ಲಾ ಆಟೋಗಳಿಗೆ ಕೇಸರಿ ಧ್ವಜವನ್ನು ನೀಡುವ ಯೋಜನೆಯನ್ನು ಅಭಿಯಾನದ ಮೂಲಕ ಹಾಕಿಕೊಳ್ಳಲಾಗಿದೆ. ಕೇಸರಿ ಧ್ವಜವಿರುವ ಆಟೋಗಳಲ್ಲೇ ಹಿಂದೂ ಭಕ್ತಾಧಿಗಳು ಜಾತ್ರೆಗೆ ಆಗಮಿಸಬೇಕು ಎನ್ನುವ ಸಂದೇಶವನ್ನೂ ಈಗಾಗಲೇ ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳ ಮೂಲಕ ಭಕ್ತಾಧಿಗಳಿಗೆ ರವಾನಿಸುವ ಕಾರ್ಯ ಆಗುತ್ತಿದೆ.

ಇದನ್ನೂ ಓದಿ: ಅರಗ ಜ್ಞಾನೇಂದ್ರ ಅಲ್ಲ, ಅರ್ಧ ಜ್ಞಾನಿ; ಕೋಮುವಾದ ಬಿತ್ತಲು ಬಿಜೆಪಿ ಪ್ರಯತ್ನ; Nalpad ವಾಗ್ದಾಳಿ

ಜಾತ್ರೆ ಆರಂಭಗೊಂಡು ಮುಗಿಯುವ 10 ದಿನಗಳ ಕಾಲ ಆಟೋಗಳಲ್ಲಿ ಕೇಸರಿ ಧ್ವಜವನ್ನು ಹಾಕಿಯೇ ಆಟೋಗಳು ತಿರುಗಾಡಲಿವೆ ಎಂದು ಮಾಹಿತಿ ನೀಡುತ್ತಾರೆ ದಿನೇಶ್. ರಾಜ್ಯದಲ್ಲಿ ಹಿಜಾಬ್ ಪ್ರಕರಣ ಕಾಣಿಸಿಕೊಂಡ ಬಳಿಕ ಸಮಾಜದಲ್ಲಿ ವಿಭಜನೆಯ ಇಂಥಹ ಹಲವು ಪ್ರಕರಣಗಳು ವರದಿಯಾಗಿದ್ದು, ಈ ಪ್ರಕರಣಗಳ ಸಾಲಿಗೆ ಇದೀಗ ಪುತ್ತೂರಿನ ಆಟೋ ಸೇವೆಯೂ ಸೇರ್ಪಡೆಗೊಂಡಂತಾಗಿದೆ.
Published by:Annappa Achari
First published: