ಕಡಿಮೆ ಜಾಗದಲ್ಲಿ ಬೆಳೆದು ನಿಂತಿದೆ ದಟ್ಟ ಕಾಡು.. ಮೆಸ್ಕಾಂ ಲೈನ್​​ಮ್ಯಾನ್​​ ಪರಿಸರ ಪ್ರೇಮ

ಜಪಾನ್ ವಿಜ್ಞಾನಿ ಮಿಯಾ ವಾಕಿ ಅವರ ಕಡಿಮೆ ಜಾಗದಲ್ಲಿ ದಟ್ಟ ಕಾಡು ಬೆಳೆಸುವುದು ಹೇಗೆ ಎನ್ನುವ ವಿಧಾನವನ್ನು ಅನುಸರಿಸಿ ಕಾಡು ಬೆಳೆಸಲು ಮುಂದಾಗಿದ್ದರು. ಈ ಪ್ರಯೋಗವನ್ನು ತನ್ನ ಮನೆಯಿಂದಲೇ ಆರಂಭಿಸಿದ ಇವರು ಕೇವಲ 1000 ಚದರಡಿಯ ಜಾಗದಲ್ಲಿ 400 ಕ್ಕೂ ಮಿಕ್ಕಿದ ಗಿಡಗಳನ್ನು ನೆಟ್ಟಿದ್ದಾರೆ.

ದುರ್ಗಾಸಿಂಗ್

ದುರ್ಗಾಸಿಂಗ್

 • Share this:
  ದಕ್ಷಿಣಕನ್ನಡ: ಪರಿಸರ ಉಳಿಸಬೇಕು, ಪರಿಸರ ಬೆಳೆಸಬೇಕು ಎನ್ನುವುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಫೀಲ್ಡ್ ಗೆ ಇಳಿದು ಪ್ರಕೃತಿಯನ್ನು ಸಂರಕ್ಷಿಸುವ ಕೆಲಸಗಳು ಕೇವಲ ಬೆರಳೆಣಿಕೆಯ ಜನರಿಂದ ಮಾತ್ರ ಆಗುತ್ತಿದೆ. ಇಂಥ ಓರ್ವ ಪರಿಸರ ಸಂರಕ್ಷಕ ಹಾಗೂ ಕೃತಕ ಕಾಡುಗಳ ಸೃಷ್ಟಿಕರ್ತ  ಜಿಲ್ಲೆಯಲ್ಲಿದ್ದಾರೆ. ಮನೆಯ ಸಣ್ಣ ಜಾಗದಲ್ಲೇ ದಟ್ಟ ಕಾಡುಗಳನ್ನು ಹೇಗೆ ಬೆಳೆಸಬಹುದು ಎನ್ನುವುದಕ್ಕೆ ಮಾದರಿಯಾಗಿರುವ ಈ ವ್ಯಕ್ತಿ ಯಾರು ಹಾಗೂ ಇವರ ಸಾಧನೆಯೇನು ಎನ್ನುವುದಕ್ಕೆ ಸಾಕ್ಷಿಪ್ರಜ್ಞೆಗಳೂ ಜಿಲ್ಲೆಯಲ್ಲೇ ಇವೆ.
  ಕಡಬ ತಾಲೂಕಿನ ಗೋಳಿತೊಟ್ಟು ಪರಿಸರದಲ್ಲಿ ಕತ್ತಲು ಆವರಿಸಿದರೆ, ಆ ಭಾಗದ ಜನ ಬೆಳಕಿಗಾಗಿ ಆಶ್ರಯಿಸೋದು ದುರ್ಗಾಸಿಂಗ್ ಎನ್ನುವ ಮೆಸ್ಕಾಂ ಲೈನ್ ಮ್ಯಾನ್ ರನ್ನ. ಲೈನ್ ಮ್ಯಾನ್ ಕೆಲಸದ ಜೊತೆಗೆ ಪರಿಸರ ಉಳಿಸುವ ಮಹತ್ಕಾರ್ಯವನ್ನೂ ಕಳೆದ ಕೆಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ ದುರ್ಗಾಸಿಂಗ್. ಕಾಡಿನಂಚಿನಲ್ಲಿರುವ ಪ್ರದೇಶದಲ್ಲಿ ಲೈನ್ ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿರುವ ದುರ್ಗಾಸಿಂಗ್ ಈ ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ತೊಂದರೆಯಾಗುವ ಮರಗಳನ್ನು ಹಾಗು ಕೊಂಬೆಗಳನ್ನು ಕಡಿಯುತ್ತಿರುವ ಸಂದರ್ಭದಲ್ಲಿ ಇದೇ ರೀತಿ ಮರಗಳನ್ನು ಕಡಿದಲ್ಲಿ ಮುಂದೆ ಮರಗಳಿಲ್ಲದೆ ಪರಿಸರಕ್ಕೆ ಹಾನಿಯಾಗಲಿದೆ ಎನ್ನುವುದನ್ನು ಮನಗಂಡಿದ್ದರು. ಈ ಕಾರಣಕ್ಕಾಗಿ ಪರಿಸರವನ್ನು ಹಸಿರಾಗಿ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ದುರ್ಗಾಸಿಂಗ್ ಕೃತಕ ಕಾಡುಗಳನ್ನು ಬೆಳೆಸುವ ಯೋಜನೆಗೆ ಮುಂದಾಗಿದ್ದರು.

  ಜಪಾನ್ ವಿಜ್ಞಾನಿ ಮಿಯಾ ವಾಕಿ ಅವರ ಕಡಿಮೆ ಜಾಗದಲ್ಲಿ ದಟ್ಟ ಕಾಡು ಬೆಳೆಸುವುದು ಹೇಗೆ ಎನ್ನುವ ವಿಧಾನವನ್ನು ಅನುಸರಿಸಿ ಕಾಡು ಬೆಳೆಸಲು ಮುಂದಾಗಿದ್ದರು. ಈ ಪ್ರಯೋಗವನ್ನು ತನ್ನ ಮನೆಯಿಂದಲೇ ಆರಂಭಿಸಿದ ಇವರು ಕೇವಲ 1000 ಚದರಡಿಯ ಜಾಗದಲ್ಲಿ 400 ಕ್ಕೂ ಮಿಕ್ಕಿದ ಗಿಡಗಳನ್ನು ನೆಟ್ಟಿದ್ದಾರೆ. ಕೇವಲ ಒಂದು ವರ್ಷದಲ್ಲೇ ಆಳೆತ್ತರಕ್ಕೆ ಏರಿರುವ ಈ ಗಿಡಗಳು ಇನ್ನು ಎರಡು ವರ್ಷಗಳಲ್ಲಿ ಬೆಳೆದು ದಟ್ಟ ಕಾಡಾಗುವ ಹಂತದಲ್ಲಿದೆ. ಗಿಡಗಳನ್ನು ನೆಡುವ ಓಬೀರಾಯನ ಕಾಲದ ಪದ್ಧತಿಯಿಂದ ಹೊರಬಂದು ಹೊಸ ವಿಧಾನದಲ್ಲಿ ಕಾಡು ಬೆಳೆಸಬಹುದು ಎನ್ನುವುದನ್ನು ದುರ್ಗಾಸಿಂಗ್ ತೋರಿಸಿಕೊಟ್ಟಿದ್ದಾರೆ.

  ಇದನ್ನೂ ಓದಿ: Siddaramaiah: ಪ್ರಕೃತಿ ಚಿಕಿತ್ಸಾ ಶಿಬಿರಕ್ಕೆ ಸಿದ್ದರಾಮಯ್ಯ ತೆರಳಲು ಇದು ಕೂಡ ಕಾರಣವಂತೆ!

  ಮನೆಯಿಂದ ಆರಂಭಿಸಿದ ಈ ಕೃತಕ ಕಾಡಿನ ಆಲೋಚನೆ ಇದೀಗ ಶಾಲಾ-ಕಾಲೇಜುಗಳಿಗೂ ತಲುಪಿದೆ. ಈಗಾಗಲೇ ಗೋಳಿತೊಟ್ಟು, ಆಲಂತಾಯ ಗ್ರಾಮದ ಶಾಲೆಗಳಲ್ಲಿ ಈ ಕೃತಕ ಅರಣ್ಯವನ್ನು ನಿರ್ಮಿಸಿರುವ ದುರ್ಗಾಸಿಂಗ್ , ಆಸಕ್ತಿಯಿರುವವರ ಖಾಸಗಿ ಜಮೀನಿನಲ್ಲೂ ಕಾಡು ಬೆಳೆಸಿದ್ದಾರೆ. ಗಿಡ ನೆಟ್ಟ ಬಳಿಕ ಎರಡು ವರ್ಷಗಳ ಕಾಲ ಆ ಗಿಡಗಳಿಗೆ ಉತ್ತಮ ಪೋಷಕಾಂಶ ಹಾಗೂ ನಿರ್ವಹಣೆ ಮಾಡಿದ್ದಲ್ಲಿ ಕೇವಲ ಒಂದು ವರ್ಷದಲ್ಲೇ ಉತ್ತಮ ಬೆಳವಣಿಗೆ ಗಿಡಗಳಲ್ಲಿ ಕಂಡು ಬರಲಿದೆ. ಗಿಡಗಳು ಮರಗಳಾಗಿ ಬದಲಾದ ಬಳಿಕ ಆ ಕಾಡಿನೊಳಗೆ ಮನುಷ್ಯನಿಗೂ ಪ್ರವೇಶಿಸಲಾಗದ ರೀತಿಯಲ್ಲಿ ಈ ಕಾಡುಗಳು ಬೆಳೆಯಲಿದೆ.

  ದುರ್ಗಾಸಿಂಗ್ ರ ಈ ಪರಿಸರ ಸಂರಕ್ಷಣೆಯ ಸೈಲೆಂಟ್ ವರ್ಕ್ ಗೆ ಇದೀಗ ಸಾರ್ವಜನಿಕರೂ ಕೈ ಜೋಡಿಸಲಾರಂಭಿಸಿದ್ದಾರೆ. ತಮ್ಮ ತಮ್ಮ ಗ್ರಾಮದಲ್ಲಿರುವ ಶಾಲೆಗಳಲ್ಲಿ ಹೆಚ್ಚುವರಿಯಾಗಿರುವ ಜಾಗದಲ್ಲಿ ಕಾಡು ಬೆಳೆಸಲು ಜನ ಆಸಕ್ತರಾಗಿದ್ದಾರೆ. ಅಲ್ಲದೆ ಪ್ರತೀ ಮನೆಯಲ್ಲೂ ಒಂದು ಪುಟ್ಟ ಕಾಡು ಮಾಡಬೇಕೆನ್ನುವ ಪ್ರಯತ್ನಕ್ಕೂ ಕೈ ಹಾಕಿದ್ದಾರೆ. ಹತ್ತನ್ನೆರಡು ವರ್ಷಗಳ ಹಿಂದೆ ದಟ್ಟ ಕಾಡುಗಳಂತಿದ್ದ ಪ್ರದೇಶ ಇದೀಗ ಅಭಿವೃದ್ಧಿಯ ಕಾರಣಕ್ಕಾಗಿ ಬೋರು ಗುಡ್ಡಗಳಾಗುತ್ತಿವೆ. ಬೇಸಿಗೆಯಲ್ಲಿ ಅತ್ಯಂತ ತಂಪಾಗಿದ್ದ ಪ್ರದೇಶ ಇದೀಗ ಉರಿ ಬಿಸಿಲಿನಲ್ಲಿ ನಿಲ್ಲಲಾರದಂತಹ ಸ್ಥಿತಿಯಲ್ಲಿದೆ. ಈ ಕಾರಣಕ್ಕಾಗಿ ದುರ್ಗಾಸಿಂಗ್ ಅವರ ಮಾರ್ಗದರ್ಶನದಲ್ಲಿ ಪ್ರತೀ ಮನೆಯಲ್ಲಿ ಕಾಡು ಬೆಳೆಸಲು ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ಕಡಬದ ಅಲಂತಾಯ ನಿವಾಸಿ ವೇದಕುಮಾರ್.

  ತನ್ನ ಬಿಡುವಿಲ್ಲದ ಕರ್ತವ್ಯದ ನಡುವೆಯೇ ದುರ್ಗಾಸಿಂಗ್ ಪರಿಸರದ ಉಳಿವಿಗಾಗಿ ದುಡಿಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಪರಿಸರ ಉಳಿಸಿ, ಬೆಳೆಸಿ ಎನ್ನುವುದು ಕೇವಲ ಪುಸ್ತಕ ಹಾಗೂ ಭಾಷಣಕ್ಕೆ ಸೀಮಿತವಾಗಿರುವ ಈ ದಿನಗಳಲ್ಲಿ ದುರ್ಗಾಸಿಂಗ್ ನಂತಹ ಕೆಲವೇ ಜನ ಪರಿಸರದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.
  Published by:Kavya V
  First published: