Mangaluru: ದುರ್ಗಮ ರಸ್ತೆಯಲ್ಲಿ ಧೂಳೆಬ್ಬಿಸುವ ಮಂಗಳೂರಿನ ಕಾರ್ ರೇಸರ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಚಾಂಪಿಯನ್ ಮೇಲೆ ಕಣ್ಣಿಟ್ಟು ಧೂಳೆಬ್ಬಿಸಿ ನುಗ್ಗುವ ಇವರ ಕಾರುಗಳ ಮುಂದೆ ಮಿಕ್ಕೆಲ್ಲ ಕಾರುಗಳು ಮಸುಕಾಗುತ್ತೆ!

  • Share this:

ಮಂಗಳೂರು: ಧೂಳೆಬ್ಬಿಸುತ್ತಾ ಗಾಳಿ ವೇಗದಲ್ಲಿ ಮುನ್ನುಗ್ಗೋ ರೇಸಿಂಗ್ ಕಾರು. ಚಾಂಪಿಯನ್ ಪಟ್ಟಕ್ಕಾಗಿ ರಾಕೆಟ್ ಸ್ಪೀಡಲ್ಲಿ ಮುತ್ತಿಡೋ ಕ್ರೇಝು. ಕರಾವಳಿಯಲ್ಲಿ ಹುಟ್ಟಿ ಕರುನಾಡಿನ ಕೀರ್ತಿ ಪತಾಕೆ ಹಾರಿಸೋ ಇವ್ರದ್ದುಎದೆ ಝಲ್ ಎನ್ನಿಸೋ ಡ್ರೈವ್. ಅಪರೂಪದಲ್ಲಿ ಅಪರೂಪದ ಕಾರು ರೇಸರ್, ಇವ್ರೇ ನೋಡಿ ಮಂಗಳೂರಿನ ಅಶ್ವಿನ್ ನಾಯ್ಕ್.


ಯೆಸ್, ಕಾರು ರೇಸಿಂಗ್ ಅಂದ್ರೆ ನಾರಾಯಣ್ ಕಾರ್ತಿಕೇಯನ್ ನೆನಪಾಗ್ತಾರೆ. ಆದ್ರೆ ಅದರಾಚೆಗೂ ಅದೆಷ್ಟೋ ಸಾಧಕರಿದ್ದಾರೆ ಅನ್ನೋದನ್ನ ಮರೆತಿದ್ದೇ ಜಾಸ್ತಿ. ಕಳೆದ ಎರಡು ದಶಕದಿಂದ ಮಂಗಳೂರು ಮೂಲದ ಅಶ್ವಿನ್ ನಾಯ್ಕ್ ಅವರು ಅಪರೂಪದ ಮೋಟಾರ್ ಸಾಧಕನಾಗಿ ಹತ್ತು ಹಲವು ಪ್ರಶಸ್ತಿಗಳನ್ನ ಗೆದ್ದುಕೊಂಡಿದ್ದಾರೆ. ಯಾವ ಕಾಂಪಿಟೇಶನ್ ಇದ್ರೂ ರೇಸಿಂಗ್ ಟ್ರ್ಯಾಕ್ ಮೇಲೆ ಅಶ್ವಿನ್ ನಾಯ್ಕ್ ಅವರ ಕಾರು ಬಂತು ಅಂದ್ರೆ ಸಾಕು, ಪ್ರಶಸ್ತಿ ಗೆಲ್ಲೋದು ಗ್ಯಾರಂಟಿ ಅನ್ನೋ ಲೆವೆಲ್ ಗೆ ಜಿದ್ದಾಜಿದ್ದಿ ನಡೆಯುತ್ತೆ. ಚಾಂಪಿಯನ್ ಮೇಲೆ ಕಣ್ಣಿಟ್ಟು ಧೂಳೆಬ್ಬಿಸಿ ನುಗ್ಗುವ ಇವರ ಕಾರುಗಳ ಮುಂದೆ ಮಿಕ್ಕೆಲ್ಲ ಕಾರುಗಳು ಮಸುಕಾಗುತ್ತೆ.


250ಕ್ಕೂ ಅಧಿಕ ರ್ಯಾಲಿ
1995ರ ಸಮಯದಲ್ಲಿ ಆರಂಭದಲ್ಲಿ ಮೋಟಾರ್ ಬೈಕ್ ಕ್ರೇಝ್ ಹೊಂದಿದ್ದ ಅಶ್ವಿನ್ ನಾಯ್ಕ್, ಆ ಬಳಿಕ ಮೋಟಾರ್ ಕಾರು ರೇಸಿಂಗ್ ಟ್ರ್ಯಾಕ್ ಗೆ ಇಳಿದವರು. 2000ನೇ ಇಸವಿ ನಂತರ ಮೋಟಾರ್ ಸ್ಪೋರ್ಟ್ಸ್ ಕಾರುಗಳ ಒಲವು ಹೆಚ್ಚಿಸಿಕೊಂಡ ಅಶ್ವಿನ್ ನಾಯ್ಕ್, ಯಾವುದೇ ಹಿಂಜರಿಕೆ ಇಲ್ಲದೇ, ಇದುವರೆಗೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಹೀಗೆ ಸುಮಾರು 250ಕ್ಕೂ ಅಧಿಕ ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ.


ಹತ್ತು ಹಲವು ಚಾಂಪಿಯನ್​ಶಿಪ್!
ಇದೀಗ 12 ವರ್ಷಗಳಿಂದ ಮಹೀಂದ್ರ ಅಡ್ವಂಚರ್ ತಂಡವನ್ನು ಪ್ರತಿನಿಧಿಸುತ್ತಿರುವ ಇವರು ಹಲವಾರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಹಿಮಾಲಯನ್ , ಡೆಸರ್ಟ್ ಸ್ಟಾರ್ಮ್ ರ್ಯಾಲಿಯಲ್ಲಿ ತಲಾ 5 ಬಾರಿ ಸಜೋಬಾ ರ್ಯಾಲಿಯಲ್ಲಿ 7 ಬಾರಿ ಹಾಗೂ ಇಂಡಿಯನ್ ನ್ಯಾಶನಲ್ ಚಾಂಪಿಯನ್​ಶಿಪ್​ನಲ್ಲಿ 3 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.


ಸದಾ ಅತ್ಯುತ್ತಮ ಕೋ ಡ್ರೈವರ್ ಜೊತೆಗೆ ಸ್ಪರ್ಧೆಗಿಳಿಯುವ ಅಶ್ವಿನ್ ನಾಯ್ಕ್ ಅವರು ಇಂದು ತನ್ನದೇ ಆದ ಇಂಡಿಯನ್ ಮೋಟಾರ್ ಸ್ಪೋಟ್ಸ್ ಅಕಾಡೆಮಿ ಅನ್ನು ಹೊಂದಿದ್ದಾರೆ. ಅದೆಂತಹ ಟಫ್ ಎನಿಸೋ ರಸ್ತೆಯಲ್ಲೂ ಅಳುಕಿಲ್ಲದೇ ಇವ್ರ ಕಾರುಗಳು ಮುನ್ನುಗ್ಗಿ ಹೋಗೋದನ್ನ ನೋಡೋದೆ ಒಂದು ಚೆಂದ. ಇದಕ್ಕಾಗಿ ಅದೆಷ್ಟೋ ಕಣ್ಣುಗಳು, ಕ್ಯಾಮೆರಾಗಳು ಅಲರ್ಟ್ ಆಗಿರುವುದು ಇವ್ರ ಸಾಧನೆಗೆ ಸಾಕ್ಷಿ ಎನ್ನುವಂತಿರುತ್ತವೆ.


ಇದನ್ನೂ ಓದಿ: Dakshina Kannada Viral News: ಇಲ್ಲಿ ರಾಜಕಾರಣಿಗಳಿಗೆ ಪ್ರವೇಶವೇ ಇಲ್ಲ!


ಆಂಗ್ಲರ ನಾಡಲ್ಲಿ ಅರಳಿದ ತ್ರಿವರ್ಣ ಧ್ವಜ
2016ರಲ್ಲಿ ಮೊದಲ ಬಾರಿಗೆ ಅಮೃತ್ ರಾಜ್ ಘೋಷ್ ಜೊತೆಗೂಡಿ ಕೋ ಡ್ರೈವರ್ ಆಗಿ ಬ್ರಿಟಿಷ್ ಚಾಂಪಿಯನ್​ಶಿಪ್​ನಲ್ಲಿ ಇವ್ರು ಭಾಗವಹಿಸಿದ್ದರು. ಅಲ್ಲಿ ಗೆಲ್ಲುವ ಮೂಲಕ ಆಂಗ್ಲರ ನಾಡಿನಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡಿದ್ದರು. ಇದೇ ಇತಿಹಾಸ 2017ರಲ್ಲಿ ಮತ್ತೆ ಯುರೋಪಿಯನ್ ಚಾಂಪಿಯನ್ ಶಿಪ್ ನಲ್ಲಿ ರಿಪೀಟ್ ಆಗಿತ್ತು. 140ಕ್ಕೂ ಮಿಕ್ಕಿ ರೇಸಿಂಗ್ ಕಾರುಗಳ ಮಧ್ಯೆ ಭಾರತವನ್ನು ಪ್ರತಿನಿಧಿಸಿದ್ದ ಅಶ್ವಿನ್ ನಾಯ್ಕ್ ಅವರ ತಂಡ ಗೆದ್ದು ಜಯಭೇರಿ ಬಾರಿಸಿತ್ತು.




ನೀವು ಜಾಯಿನ್‌ ಆಗಬಹುದು!
ಮುಂದೆ ವರ್ಲ್ಡ್ ರೇಸಿಂಗ್ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುವ ಕನಸು ಅಶ್ವಿನ್ ನಾಯ್ಕ್​ರದ್ದು . ಅಷ್ಟೇ ಅಲ್ದೇ, ಸಾರ್ವಜನಿಕ ರಸ್ತೆಗಳಲ್ಲಿ ವೀಲ್ಹಿಂಗ್, ಸ್ಟಂಟ್ ಮಾಡ್ತಾ ಜೀವಕ್ಕೆ ಅಪಾಯ ತಂದೊಡ್ಡುವ ಯುವಕರು ನನ್ನ ಜೊತೆಗೆ ಬಂದಲ್ಲಿ ಪ್ರೊಫೆಶನಲ್ ಮೋಟಾರ್ ಸ್ಫೋರ್ಟ್ ಕಲಿಕೆ ಜೊತೆಗೆ ಭವಿಷ್ಯ ರೂಪಿಸುವುದಾಗಿ ಹೇಳುತ್ತಾರೆ.


ಇದನ್ನೂ ಓದಿ: Puttur: ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ, ಭಕ್ತರಿಗೆ ಖಡಕ್ ವಸ್ತ್ರ ಸಂಹಿತೆ!


ಒಟ್ಟಿನಲ್ಲಿ ಅಶ್ವಿನ್ ನಾಯ್ಕ್ ಅವರ ಈ ಅಪರೂಪದ ಸಾಧನೆಗೆ ಇನ್ನಷ್ಟು ಪ್ರಶಸ್ತಿ, ಪುರಸ್ಕಾರ ಅರಸಿ ಬರಲಿ, ದೇಶದ ಕೀರ್ತಿ ಪತಾಕೆ ಎತ್ತಿ ಹಿಡಿಯಲಿ ಅನ್ನೋದೆ ನಮ್ಮ ಆಶಯ.


ವರದಿ: ಇರ್ಷಾದ್ ಕಿನ್ನಿಗೋಳಿ, ನ್ಯೂಸ್ 18 ಕನ್ನಡ ಡಿಜಿಟಲ್

First published: