ಮಂಗಳೂರು: ದೇಶದ ವಾಣಿಜ್ಯ ನಗರಿ ಹಾಗೂ ಕರ್ನಾಟಕದ ಕರಾವಳಿಯನ್ನು ಸಂಪರ್ಕಿಸುವ ʼಮತ್ಸ್ಯಗಂಧ ಎಕ್ಸ್‌ಪ್ರೆಸ್ʼ (Matsyagandha Express) ತನ್ನ ಓಡಾಟ ಆರಂಭಿಸಿ 25 ವರ್ಷ ಸಂದಿವೆ. ಮುಂಬೈನಿಂದ ಮಂಗಳೂರು ನಡುವೆ ಓಡಾಟ (Mumbai To Mangaluru) ನಡೆಸುವ ʼಮತ್ಸ್ಯಗಂಧ ರೈಲುʼ ಕೊಂಕಣ ರೈಲ್ವೆಯ (Konkan Railway) ಮಹತ್ವಾಕಾಂಕ್ಷಿಯ ಯೋಜನೆಯೂ ಆಗಿದೆ.
ಇದರಿಂದಾಗಿ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಕರಾವಳಿಯನ್ನು ತಲುಪುವ ಅವಕಾಶವನ್ನು ನೀಡಿದೆ. ʼಮತ್ಸ್ಯಗಂಧʼ ಈ ಮೂರು ರಾಜ್ಯಗಳ ಕರಾವಳಿಯ ಅಭಿವೃದ್ಧಿ, ಉದ್ಯೋಗಕ್ಕೆ ವಿಫುಲ ಅವಕಾಶಗಳನ್ನು ಕಲ್ಪಿಸಿವೆ.
25 years of Matsyagandha Express : Celebrating the rich legacy of Matsyagandha Express, which was the first through train that ran on the completed Konkan Railway track. #IndianRailway @RailMinIndia @GMSRailway @Central_Railway @WesternRly @SWRRLY pic.twitter.com/JcfDcbAp2P
— Konkan Railway (@KonkanRailway) May 1, 2023
ಜಾರ್ಜ್ ಫರ್ನಾಂಡಿಸ್ ಹೋರಾಟದ ಫಲ
ಮಂಗಳೂರು ಹಾಗೂ ಮುಂಬೈ ನಡುವೆ ರೈಲಿನ ಓಡಾಟ ಅಗತ್ಯವಿದೆ ಅನ್ನೋದನ್ನು 25 ವರ್ಷಗಳ ಹಿಂದೆಯೇ ಜಾರ್ಜ್ ಫರ್ನಾಂಡಿಸ್ ಕಂಡುಕೊಂಡಿದ್ದರು. ಕೇಂದ್ರದ ಮಾಜಿ ಸಚಿವರೂ ಆಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಮೂಲತಃ ಮಂಗಳೂರಿನವರೇ ಆಗಿದ್ದು, ಈ ನಿಟ್ಟಿನಲ್ಲಿ ಭಾರೀ ಪ್ರಯತ್ನ ನಡೆಸಿದ್ದರು.
ಕೊನೆಗೂ 1998ರ ಮೇ 1 ರಂದು ಮತ್ಸ್ಯಗಂಧ ಓಡಾಟಕ್ಕೆ ಚಾಲನೆ ನೀಡಲಾಯಿತು. ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ರೈಲ್ವೆ ಸಚಿವರಾಗಿದ್ದ ನಿತೀಶ್ ಕುಮಾರ್ ಹಾಗೂ ಇತರೆ ಗಣ್ಯರ ಸಮ್ಮುಖದಲ್ಲಿ ಮೊದಲ ರೈಲಿಗೆ ಚಾಲನೆ ನೀಡಿದ್ದರು. ಲೋಕಮಾನ್ಯ ತಿಲಕ್ ಟರ್ಮಿನಲ್ನಿಂದ ಹೊರಟ ಮತ್ಸ್ಯಗಂಧ ರೈಲು ಕರ್ನಾಟಕದ ಮಂಗಳೂರು ತಲುಪಿತ್ತು. ಇದು ರೈಲ್ವೆ ಇತಿಹಾಸದಲ್ಲಿ ಬಹುದೊಡ್ಡ ಹೆಜ್ಜೆ ಗುರುತಾಗಿ ಉಳಿಯುವಂತೆ ಮಾಡಿದೆ.
17 ಗಂಟೆಗಳ ಪಯಣ
ಅದಕ್ಕೂ ಮುಂಚೆಯೂ ಮುಂಬೈನಿಂದ ಮಂಗಳೂರಿಗೆ ರೈಲು ಸಂಪರ್ಕವಿತ್ತಾದರೂ, ಅದೆಲ್ಲವೂ ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಇನ್ನು ಬಸ್ನಲ್ಲಿ ಬರಬೇಕಾದರೆ 30 ಗಂಟೆ ಹಾಗೂ ಆಗಿನ ರೈಲುಗಳಲ್ಲಿ 40 ಗಂಟೆಗಳ ಪಯಣ ಬೆಳೆಸಬೇಕಿತ್ತು. ಆದರೆ ಅದ್ಯಾವಾಗ ʼಮತ್ಸ್ಯಗಂಧ ಎಕ್ಸ್‌ಪ್ರೆಸ್ʼ ರೈಲು ಚಾಲನೆಗೊಂಡಿತೋ ಅಂದಿನಿಂದ ಮುಂಬೈ-ಕರಾವಳಿಯ ಪ್ರಯಾಣಿಕರು ಕೇವಲ 17 ಗಂಟೆಯಲ್ಲಿ 900 ಕಿಲೋ ಮೀಟರ್ ಕ್ರಮಿಸಿ ತಮ್ಮ ಗುರಿಯನ್ನು ತಲುಪುವಂತಾಯಿತು.
ಇದನ್ನೂ ಓದಿ: Netravati River: ನೇತ್ರಾವತಿಯಲ್ಲಿ ನೀರಿಲ್ಲ, ಮಂಗಳೂರಿನಲ್ಲಿ ಹಾಹಾಕಾರ!
ಪ್ರತಿದಿನದ ಓಡಾಟ
ʼಮತ್ಸ್ಯಗಂಧ ಎಕ್ಸ್‌ಪ್ರೆಸ್ʼ ಮುಂಬೈನಿಂದ ಪ್ರತಿದಿನ ಮಧ್ಯಾಹ್ನ 3.20ಕ್ಕೆ ಹೊರಟು ಮರುದಿನ ಬೆಳಿಗ್ಗೆ 7.30ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತೆ. ಇನ್ನು ರೈಲ್ವೇ ಸಂಖ್ಯೆ 12620 ʼಮತ್ಸ್ಯಗಂಧ ಎಕ್ಸ್‌ಪ್ರೆಸ್ʼ ಮಂಗಳೂರು ಸೆಂಟ್ರಲ್ನಿಂದ ಪ್ರತಿದಿನ ಮಧ್ಯಾಹ್ನ 2.35ಕ್ಕೆ ಹೊರಟು ಮರುದಿನ ಮುಂಜಾನೆ 6.35ಕ್ಕೆ ಮುಂಬೈ ತಲುಪುವುದು. ಈ ರೈಲು 22 ಬೋಗಿಗಳನ್ನು ಹೊಂದಿದೆ. ಅದ್ರಲ್ಲಿ ಎಸಿ, ಸ್ಲೀಪರ್, ಜನರಲ್ ಸೇರಿರುತ್ತವೆ.
ಮತ್ಸ್ಯಗಂಧ ನಿಲುಗಡೆ
ಮತ್ಸ್ಯಗಂಧ ಎಕ್ಸ್‌ಪ್ರೆಸ್ ಕರಾವಳಿಯ ಅಭಿವೃದ್ಧಿಯಲ್ಲಿ ಬಹುದೊಡ್ದ ಪಾಲು ನೀಡಿದೆ. ಜೊತೆಗೆ ಕರಾವಳಿ ಪ್ರವಾಸೋದ್ಯಮ ಬೆಳವಣಿಗೆಗೂ ಕಾರಣವಾಗಿದೆ. ಕಾರ್ಮಿಕರು, ಕುಟುಂಬ ಸಮೇತ ತೆರಳುವವರು, ಉದ್ಯಮಿಗಳಿಗೆ ʼಮತ್ಸ್ಯಗಂಧ ಎಕ್ಸ್‌ಪ್ರೆಸ್ʼ ಹೆಚ್ಚು ಅಚ್ಚುಮೆಚ್ಚು.
ಇದನ್ನೂ ಓದಿ: Anjal Fish: ರಾಹುಲ್ ಗಾಂಧಿಗೆ ಕರಾವಳಿ ಮಹಿಳೆ ಕೊಟ್ಟದ್ದು ಸಾಮಾನ್ಯ ಮೀನಲ್ಲ, ಇದ್ರ ಮುಂದೆ ಚಿಕನ್, ಮಟನ್ ರುಚಿಯೇ ಅಲ್ಲ!
ಈ ರೈಲು ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲಾ, ಕಾರವಾರ, ಮಡಗಾಂವ್, ಕುಡಲ್, ರತ್ನಗಿರಿ, ಚಿಪ್ಲುನ್, ಪನ್ವೇಲ್, ಥಾಣೆಯಲ್ಲಿ ನಿಗದಿತ ಸಮಯದ ನಿಲುಗಡೆ ಹೊಂದಿರುತ್ತದೆ.
ವರದಿ: ಇರ್ಷಾದ್ ಕಿನ್ನಿಗೋಳಿ, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ