Mangaluru: ಕೆರೆಗಳ ಪುನರುಜ್ಜೀವನಕ್ಕೆ ಆಯುರ್ವೇದ! ಮಂಗಳೂರಿನ ಹೊಸ ಯೋಜನೆಯ ವಿವರ ಇಲ್ಲಿದೆ

ಈಗಾಗಲೇ 8 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದ್ದು ಇನ್ನೂ 8 ಕೆರೆಗಳ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಮತ್ತೆ ಐದು ಕೆರೆಗಳ ಪುನರುಜ್ಜೀವನದ ಕಾರ್ಯ ಕೈಗೆತ್ತಿಕೊಳ್ಳುವುದಾಗಿಯೂ ರವಿಶಂಕರ್ ಹೇಳಿದ್ದಾರೆ.

ಕೆರೆ (ಸಾಂಕೇತಿಕ ಚಿತ್ರ)

ಕೆರೆ (ಸಾಂಕೇತಿಕ ಚಿತ್ರ)

  • Share this:
ರಾಜ್ಯದಲ್ಲಿ ಕಳೆದ ಎರಡು ದಶಕಗಳಿಂದ ಜಾಗತಿಕವಾಗಿ ಏರುತ್ತಿರುವ ತಾಪಮಾನದ (Global Warming) ಪರಿಣಾಮವಾಗಿ ಜಲಮೂಲಗಳು ಕುಂಠಿತವಾಗುತ್ತಿರುವುದು ಒಂದೆಡೆಯಾದರೆ ಇದ್ದ ಕೆಲ ಕೆರೆಗಳಲ್ಲಿ (Lake) ಹೂಳಿದ್ದು ಬಳಸಲಾಗದಂತಹ ದುಸ್ಥಿತಿಯಲ್ಲಿರುವುದು ಇನ್ನೊಂದೆಡೆ. ಹಾಗಾಗಿ ಕಳೆದ ಹಲವು ವರ್ಷಗಳಿಂದ ಸರ್ಕಾರವು ಜಲ ಸಂರಕ್ಷಣೆಯಡಿಯಲ್ಲಿ (Water Conservation) ರಾಜ್ಯದ ಹಲವು ಕೆರೆಗಳ ಪುನರುಜ್ಜೀವನಕ್ಕಾಗಿ ಉಪಕ್ರಮಗಳನ್ನು (Lake Rejuvenation) ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಇದೀಗ ಆ ಕೈಂಕರ್ಯವನ್ನು ಮುಂದುವರಿಸುತ್ತಿರುವ ಭಾಗವಾಗಿ ಮಂಗಳೂರು (Mangaluru) ನಗರ ಅಭಿವೃದ್ಧಿ ಪ್ರಾಧಿಕಾರವು (MUDA) ಕೆರೆಗಳ ಪುನರುಜ್ಜೀವನಕ್ಕಾಗಿ ಆಯುರ್ವೇದದ ವಿಧಾನಗಳನ್ನು ಬಳಸುವ ಕುರಿತು ಆಸಕ್ತಿ ತೋರಿಸಿದೆ. ಈಕುರಿತು ಯೋಜನೆ ಕೈಗೊತ್ತಿಕೊಳ್ಳುವ ಹಂತದಲ್ಲಿದೆ. 

ಈ ಬಗ್ಗೆ ಮಾತನಾಡಿರುವ ಮೂಡಾ ಮುಖ್ಯಸ್ಥರಾದ ರವಿಶಂಕರ್ ಮೀಜರ್ ಅವರು ದೆಹಲಿಯ ಮಾದರಿಯಂತೆ ಆಯುರ್ವೇದ ವಿಧಾನಗಳನ್ನು ಬಳಸುವ ಮೂಲಕ ಕೆರೆಗಳ ಪುನರುಜ್ಜೀವನ ಮಾಡುವ ಬಗ್ಗೆ ಆಲೋಚನೆ ಇದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಯಿಸುತ್ತ ಅವರು "ನಾವು ಈಗಾಗಲೇ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ಸಾಂಪ್ರದಾಯಿಕವಾದ ಆಯುರ್ವೇದದ ವಿಧಾನಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ.

ದೆಹಲಿಯಲ್ಲಿ ಈಗಾಗಲೇ ಪುನರುಜ್ಜೀವನ
ಅದಾಗಲೇ ದೆಹಲಿಯಲ್ಲಿ ಕೆರೆಗಳ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಈ ವಿಧಾನಗಳನ್ನು ಯಶಸ್ವಿಯಾಗಿ ಬಳಸಲಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಅವರಿಂದ ಸಮಗ್ರ ಮಾಹಿತಿಯನ್ನು ಕಲೆ ಹಾಕಿದ್ದೇವೆ. ನಮಗೆ ಸಿಕ್ಕಿರುವ ಮಾಹಿತಿಯಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರವು ಆಯುರ್ವೇದ ಸಿದ್ಧಾಂತ ಆಧಾರಿತ 'ಕೌವ್ನಾಮಿಕ್ಸ್' ಅನ್ನು ಹಲವು ದೊಡ್ಡ ಕೆರೆಗಳ ಪುನರುಜ್ಜೀವನಕ್ಕಾಗಿ ಬಳಸುತ್ತಿದ್ದಾರೆ.

ಡೆಮೋ ನೀಡಲು ಆಹ್ವಾನಕ್ಕೆ ಯೋಚನೆ
ಭಾರತದಾದ್ಯಂತ ಹಲವು ಪ್ರಯೋಗಗಳನ್ನು ಈಗಾಗಲೇ ಮಾಡಲಾಗಿದ್ದು ದೆಹಲಿ ಪ್ರಾಧಿಕಾರದ ಸಹಕಾರದಿಂದಾಗಿ ನಮಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಸಂಪರ್ಕಗಳು ಲಭಿಸಿದೆ. ನಾವು ಕೆಲ ಪರಿಣಿತರನ್ನು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಈ ಬಗ್ಗೆ ಡೆಮೋ ನೀಡಲು ಆಹ್ವಾನಿಸಲು ಯೋಚಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಅತಿಕ್ರಮಣವೇ ಸ್ವಲ್ಪ ತಲೆಬಿಸಿ
ಇನ್ನು ಕೆರೆಗಳ ಹೂಳೆತ್ತುವ ಕಾರ್ಯದ ಬಗ್ಗೆ ಮಾತನಾಡಿದ ಅವರು ಮಂಗಳೂರಿನಲ್ಲಿ ಕೆರೆಗಳ ಜೀರ್ಣೋದ್ಧಾರ ಕಾರ್ಯವು ಈಗಾಗಲೇ ಯಾವುದೇ ಅಡೆ-ತಡೆಗಳಿಲ್ಲದೆ ರಭಸದಿಂದ ನಡೆಯುತ್ತಿದ್ದು ಕೇವಲ ಅತಿಕ್ರಮಣ ಮಾಡಿರುವಲ್ಲಿ ಮಾತ್ರ ಸವಾಲು ಎದುರಾಗುತ್ತಿರುವುದಾಗಿ ಹೇಳಿದ್ದಾರೆ. ಏಕೆಂದರೆ, ಅತಿಕ್ರಮಿತವಾದ ಪ್ರದೇಶವನ್ನು ಕ್ಲಿಯರ್ ಮಾಡಲು ಆಡಳಿತದ ಸಹಯೋಗ ಬೇಕಾಗಿರುವುದರಿಂದ ಸದ್ಯ ಅದು ತುಸು ಕಷ್ಟಕರವಾಗಿರುವುದಾಗಿ ಅವರು ಹೇಳಿದ್ದಾರೆ.

ಈಗಾಗಲೇ 8 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದ್ದು ಇನ್ನೂ 8 ಕೆರೆಗಳ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಮತ್ತೆ ಐದು ಕೆರೆಗಳ ಪುನರುಜ್ಜೀವನದ ಕಾರ್ಯ ಕೈಗೆತ್ತಿಕೊಳ್ಳುವುದಾಗಿಯೂ ರವಿಶಂಕರ್ ಹೇಳಿದ್ದಾರೆ.

ಇದನ್ನೂ Business Idea: ಸೂರ್ಯನ ಬೆಳಕಿಂದಲೂ ಹಣ ಗಳಿಸಿ!

ಲೋಕಾರ್ಪಣೆಗೆ ಸಂಬಂಧಿಸಿದಂತೆ ರವಿಶಂಕರ್, ಈಗಾಗಲೇ ಎರಡು ಕೆರೆಗಳ ಉದ್ಘಾಟನಾ ಕಾರ್ಯ ಮಾಡಲಾಗಿದ್ದು ಕೆಲ ಸಮಯದಲ್ಲಿ ಇನ್ನೂ ಹಲವು ಕೆರೆಗಳ ಉದ್ಘಾಟನಾ ಕಾರ್ಯವನ್ನು ಔಪಚಾರಿಕವಾಗಿ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ. ಹಾಗೂ, ಈ ಅಭಿಯಾನದ ಮುಖ್ಯ ಉದ್ದೇಶ ಅಂತರ್ಜಲ ಮಟ್ಟವನ್ನು ಸುಧಾರಿಸುವುದಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಅವಕಾಶವಿರುವೆಡೆ ವಾಕಿಂಗ್ ಟ್ರ್ಯಾಕ್ ಸಹ ನಿರ್ಮಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ನಗರ ಉದ್ಯಾನ ಅಭಿವೃದ್ಧಿಯ ಕನಸು
ಮೂಡಾ ಕೇವಲ ಕೆರೆಗಳ ಜೀರ್ಣೋದ್ಧಾರ ಮಾತ್ರವಲ್ಲದೆ ನಗರದಲ್ಲಿ ಉದ್ಯಾನಗಳನ್ನೂ ಅಭಿವೃದ್ದಿಪಡಿಸುವ ಯೋಜನೆ ರೂಪಿಸಿದ್ದು ಆ ಕುರಿತು ಶೀಘ್ರದಲ್ಲೇ ಕೆಲಸ ಆರಂಭಿಸಲಾಗುವುದೆಂದು ರವಿಶಂಕರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಸಂಬಂಧವಾಗಿ ಪ್ರದೇಶದಲ್ಲಿ 6 ಕಡೆ ಅಂದರೆ ಎಸ್‍ಎಲ್ ಮಥಿಯಾಸ್ ರಸ್ತೆ, ಬೆಜೈ, ಕರಂಗಲಪಾಡಿ, ಸೆಂಟರ್ಲ್ ವೇರ್ ಹೌಸ್ ಬಳಿ, ಸುರತ್ಕಲ್, ಹಾಗೂ ಬಲ್ಲಾಳಬಾಗ್ ಎಂಬಲ್ಲಿ ಉದ್ಯಾನ ಅಭಿವೃದ್ಧಿಗಾಗಿ ಸ್ಥಳಗಳನ್ನು ಗುರುತಿಸಲಾಗಿದೆ.

ಈ ಪ್ರತಿ ಸ್ಥಳಗಳ ಪರಿಶೀಲನೆಗಾಗಿ ಪ್ರತ್ಯೇಕ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದ್ದು ಅವರು ಪ್ರತಿ ವಾರ ಈ ಬಗ್ಗೆ ಪ್ರಗತಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ರವಿಶಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ: Bengaluru: ವಾಹನ ಸವಾರರೇ ಎಚ್ಚರ; ತಪ್ಪೇ ಮಾಡದಿದ್ರೂ ನಿಮ್ಮ ವಾಹನಕ್ಕೆ ಬೀಳುತ್ತೆ ದಂಡ!

ನಗರದ ಹಸಿರು ಅಳಿಯದಂತೆ ಸಂರಕ್ಷಿಸುವ ಬಗ್ಗೆ ಕಾರ್ಯತತ್ಪರವಾಗಿರುವ ಮೂಡಾ ಸ್ಥಳದ ಕೊರತೆಯಿರುವೆಡೆ ಮಿಯಾವಾಕಿ ಉದ್ಯಾನಗಳನ್ನು ಪರಿಚಯಿಸುತ್ತಿರುವುದಾಗಿ ಮೂಡಾ ಮುಖ್ಯಸ್ಥರು ಈ ಸಂದರ್ಭದಲ್ಲಿ ಹೇಳಿದ್ದಾರೆ.
Published by:guruganesh bhat
First published: