Sullia: ಮೋದಿ ಹೇಳಿದರೂ ಬಗೆಹರಿಯಲಿಲ್ಲ ಊರ ಸಮಸ್ಯೆ; ಸುಳ್ಯದ ಗ್ರಾಮಸ್ಥರ ಹಣದಿಂದಲೇ ಸಿದ್ಧವಾಯ್ತು ಸೇತುವೆ

Dakshina Kannada News: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಊರಿಗೆ ಸೇತುವೆ ನಿರ್ಮಿಸುವಂತೆ ಪ್ರಧಾನಿ ಕಾರ್ಯಾಲಯದಿಂದಲೇ ಸೂಚನೆ ಬಂದರೂ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳಲಿಲ್ಲ. ಹೀಗಾಗಿ, ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ಸೇತುವೆ ನಿರ್ಮಿಸಿಕೊಂಡಿದ್ದಾರೆ!

ಸೇತುವೆ ನಿರ್ಮಿಸಿಕೊಳ್ಳುತ್ತಿರುವ ಗುತ್ತಿಗಾರಿನ ಜನ

ಸೇತುವೆ ನಿರ್ಮಿಸಿಕೊಳ್ಳುತ್ತಿರುವ ಗುತ್ತಿಗಾರಿನ ಜನ

  • Share this:
ಮಂಗಳೂರು (ಜೂ. 26): ಒಂದು ಇಡೀ ಊರಿನ ಸಮಸ್ಯೆಯನ್ನು ಸ್ಥಳೀಯಾಡಳಿತ, ಸರ್ಕಾರ ಬಗೆಹರಿಸದೆ ಇದ್ದಾಗ ಪ್ರಧಾನಿಗೆ ಪತ್ರ ಬರೆದು ಬಗೆಹರಿದ ಎಷ್ಟೋ ಉದಾಹರಣೆ ನೋಡಿದ್ದೇವೆ. ಆದರೆ, ಇಲ್ಲೊಂದು ಊರಿನ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯೇ ಈಡೇರಿಸುವಂತೆ ಸೂಚಿಸಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ಇನ್ನು ಅಧಿಕಾರಿಗಳನ್ನು ಕಾದರೆ ಪ್ರಯೋಜನವಿಲ್ಲ ಎಂದು ಊರ ಜನರೇ ಸಮಸ್ಯೆಗೊಂದು ಪರಿಹಾರ ಕಂಡುಕೊಂಡಿದ್ದಾರೆ.

ಹೌದು... ಅದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಊರು. ಮಳೆಗಾಲ ಬಂತು ಅಂದ್ರೆ ಇಲ್ಲಿನ ಜನ ಪಡಬಾರದ ಕಷ್ಟ ಪಡುತ್ತಿದ್ದರು. ತಮ್ಮೂರಿನ ಹೊಳೆಯನ್ನು ದಾಟಿ ಇವರು ಪಟ್ಟಣಕ್ಕೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡೆ ಹೋಗಬೇಕಿತ್ತು. ಹೀಗಾಗಿ ತಮ್ಮೂರಿನ ಹೊಳಗೆ ಶಾಶ್ವತ ಸೇತುವೆ ಬೇಕೆಂದು ಶಾಸಕ-ಸಚಿವರುಗಳಿಗೆ ಮನವಿ ಸಲ್ಲಿಸಿದರು. ಆದರೆ, ಇದು ಪ್ರಯೋಜನಕಾರಿಯಾಗದೇ ನೇರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.

Dakshina Kannada District Sullia Taluk Guttigar Villagers Constructed Bridge in Their Own Money.

ಇಲ್ಲಿನ ಗ್ರಾಮಸ್ಥರು ತಮ್ಮ ಊರ ಸಂಕಷ್ಟದ ವಿಡಿಯೋ ಸಿಡಿ ಕಳುಹಿಸಿ ಸೇತುವೆಗೆ ಮನವಿ ಮಾಡಿದ್ದರಿಂದ ಪ್ರಧಾನಿ ಕಾರ್ಯಾಲಯದಿಂದ ಸಮಸ್ಯೆ ಬಗೆಹರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ಗೆ ಸೂಚನೆ ಬಂದಿತ್ತು. ಆದರೆ, ಪ್ರಧಾನಿಯೇ ಸೂಚಿಸಿದರೂ ಇಚ್ಛಾ ಶಕ್ತಿಯನ್ನು ಅಧಿಕಾರಿಗಳು ಮೆರೆದಿಲ್ಲ. ಹೀಗಾಗಿ ಅಧಿಕಾರಿಗಳನ್ನು ಇನ್ನು ಕಾದರೆ ಪ್ರಯೋಜನವಿಲ್ಲ ಅಂತ ಊರಿನ ಜನರೇ ಸೇತುವೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: Mangalore: ಸುಳ್ಯದ ಇಂಟರ್ನೆಟ್ ಸಮಸ್ಯೆಗೆ ಊರವರೇ ಕಂಡುಹಿಡಿದರು ಸೂಪರ್ ಪರಿಹಾರ!

ಸಚಿವ ಎಸ್ ಅಂಗಾರ ಪ್ರತಿನಿಧಿಸುವ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಊರಿನ ಮಂದಿ ನೂರಾರು ಬಾರಿ ಮನವಿ ಮಾಡಿದರೂ ಯಾರು ಗಣನೆಗೆ ತೆಗೆದುಕೊಳ್ಳಲಿಲ್ಲ. ಹೀಗಾಗಿ, ರಾಜಕೀಯ ವ್ಯವಸ್ಥೆಯ ಬಗ್ಗೆ ಬೇಸತ್ತು ಗ್ರಾಮಸ್ಥರೇ ತಮ್ಮ ಸ್ವಂತ ಖರ್ಚಿನಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ. ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಳೆಗೆ ತಾತ್ಕಾಲಿಕ ಕಬ್ಬಿಣದ ಸೇತುವೆ ತಯಾರಿಸಿದ್ದಾರೆ. ಈ ಮೂಲಕ ಹಲವು ದಶಕಗಳಿಂದ ಎದುರಿಸುತ್ತಿದ್ದ ತೀವ್ರ ಸಮಸ್ಯೆಗೆ ಮುಕ್ತಿ ಸಿಕ್ಕಿದಂತಾಗಿದೆ.

ಮಳೆಗಾಲದ ಸಂದರ್ಭದಲ್ಲಿ ಹೊಳೆಯ ಇನ್ನೊಂದು ಭಾಗದಲ್ಲಿರುವ ಶಾಲೆ-ಅಂಗನವಾಡಿ ಕೇಂದ್ರಕ್ಕೆ ಪೋಷಕರು ಹೊಳೆಯಲ್ಲೇ ಮಕ್ಕಳನ್ನು ಹಿಡಿದು ಶಾಲೆಗೆ ತಲುಪಿಸುತ್ತಿದ್ದರು. ಸದ್ಯ ಇದೀಗ ಸೇತುವೆ ಆಗಿರುವುದರಿಂದ ಈ ಬಾರಿಯ ಮಳೆಗಾಲದಲ್ಲಿ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಒಟ್ಟಿನಲ್ಲಿ ಊರ ಮಂದಿಯ ಒಗ್ಗಟ್ಟಿನ ಹೋರಾಟ ನಿಜಕ್ಕೂ ಮೆಚ್ಚುವಂಥದ್ದು.
ಈಗ ಮತ್ತೆ ಮಳೆಗಾಲ ಆರಂಭವಾಗಿದೆ. ನದಿ-ಹಳ್ಳಗಳು ತುಂಬಿ ಮೈದುಂಬಿ ಹರಿಯಲು ಆರಂಭವಾಗಿದೆ. ಇದರ ಜೊತೆಗೆ ಹಲವು ಗ್ರಾಮೀಣ ಭಾಗಗಳ ಸಮಸ್ಯೆಗಳೂ ಮೈ ಕೊಡವಿ ನಿಂತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಗ್ರಾಮದ ಜನರ ಅಭಿವೃದ್ಧಿ ಯ ಆಶಾಭಾವ ಕಮರಿ ಹೋಗಿದ್ದು, ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಕಾದು, ಬಸವಳಿದು ತಮ್ಮೂರಿನ ಸಮಸ್ಯೆಗೆ ತಾವೇ ಪರಿಹಾರ ಕಂಡು ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: Bengaluru Crime: ನೀಲಿ ಚಿತ್ರ ತೋರಿಸಿ ವಿದ್ಯಾರ್ಥಿಯೊಂದಿಗೆ ಸಲಿಂಗ ಕಾಮ ನಡೆಸಿದ ಹೆಡ್ ಮಾಸ್ಟರ್; ಬೆಂಗಳೂರಲ್ಲೊಂದು ಹೀನ ಕೃತ್ಯ

ವಿದ್ಯಾರ್ಥಿಗಳಿಗೆ ಹೊಳೆ ದಾಟಲು ಸೇತುವೆಗಾಗಿ ಪ್ರಧಾನಿಯಿಂದ ಹಿಡಿದು ಗ್ರಾಮ ಪಂಚಾಯತ್ ವರೆಗೆ ಅಲೆದರೂ ಫರಿಹಾರ ಕಾಣದೆ ಈದೀಗ ತಾವೇ ಹೊಳೆಗೆ ಕಬ್ಬಿಣದ ಸೇತುವೆ ನಿರ್ಮಿಸಲು ತೀರ್ಮಾನ ಮಾಡಿದ್ದಾರೆ. ಮೊಗ್ರದ ಸರ್ಕಾರಿ ಶಾಲೆ-ಆರೋಗ್ಯ ಉಪಕೇಂದ್ರ-ಅಂಗನವಾಡಿ ಕೇಂದ್ರ ಸೇರಿದಂತೆ ಇತರ ಸಂಪರ್ಕಕ್ಕಾಗಿ ಏರಣಗುಡ್ಡೆ-ಕಮಿಲ ಭಾಗದ ಜನರು ಹಲವಾರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದು,ಕೊನೆಗೂ ಹೊಳೆಗೆ ಸೇತುವೆಯಾಗದೆ, ಜನಪ್ರತಿನಿಧಿಗಳ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಅನೇಕ ವರ್ಷದಿಂದಲೂ ಶಾಶ್ವತ ಸೇತುವೆಗಾಗಿ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಮಸ್ಯೆಯ ಕುರಿತು ಸಚಿತ್ರ ವರದಿ ಕಳುಹಿಸಿದರೂ ಕೇವಲ ರಾಜ್ಯ ಸರ್ಕಾರಕ್ಕೆ ಸೂಚನೆಯ ಉತ್ತರ ಬಂದಿದ್ದರ ಹೊರತು ಪಡಿಸಿ ಯಾವುದೇ ಫಲ ಸಿಗಲಿಲ್ಲ . ಹೀಗಾಗಿ ಜನಪ್ರತಿನಿಧಿಗಳಿಂದ, ಸರ್ಕಾರದಿಂದ ಪರಿಹಾರವನ್ನು ಅಪೇಕ್ಷಿಸುವುದೇ ವ್ಯರ್ಥ ಅಂತಾ ಭಾವಿಸಿ ಊರಿನ ಜನರೇ ತಮ್ಮ ಸ್ವಂತ ಖರ್ಚಿನಿಂದ ಸೇತುವೆ ನಿರ್ಮಿಸಲು ಮುಂದಾಗಿದ್ದಾರೆ.

ಸ್ಥಳೀಯರು ಮತ್ತು ಗ್ರಾಮ ಭಾರತ ಎಂಬ ತಂಡ ಈ ಯೋಜನೆ ರೂಪಿಸಿದ್ದು, ಈ ಮೂಲಕ ಕಣ್ಣು ಕಾಣದ ಕಿವಿ ಕೇಳದ ತಮ್ಮೂರಿನ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆಯಲು ತೀರ್ಮಾನಿಸಿದ್ದಾರೆ. ಕಳೆದ ಗ್ರಾಮ ಪಂಚಾಯತ್ ಚುನಾವಣಾ ಸಂಧರ್ಭದಲ್ಲೂ ಸೇತುವೆಯ ಬೇಡಿಕೆಯನ್ನು ಆಗ್ರಹಿಸಿ ಗ್ರಾಮ ಭಾರತ ತಂಡ, ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, ಭರ್ಜರಿ ಜಯಭೇರಿ ಭಾರಿಸಿ ತಮ್ಮ ಒತ್ತಾಯಕ್ಕೆ ಬಲ ತಂದಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.

(ವರದಿ: ಕಿಶನ್ ಶೆಟ್ಟಿ)
Published by:Sushma Chakre
First published: