Mangaluru: ಬೆಳ್ತಂಗಡಿಯ ಎಳನೀರಿನ 8 ಕಿ.ಮೀ ರಸ್ತೆ ಸರಿಯಾದರೆ ಗ್ರಾಮಸ್ಥರ ಬದುಕೇ ಬದಲಾಗುತ್ತೆ!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳನೀರು ಪ್ರದೇಶದ ಜನರು ಹಲವು ದಶಕಗಳಿಂದ ರಸ್ತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಎಳನೀರಿನ ರಸ್ತೆ

ಎಳನೀರಿನ ರಸ್ತೆ

  • Share this:
ಬೆಳ್ತಂಗಡಿ (ಜೂ. 28): ಈ ಊರಿನ ಜನರು ಅದೇನು ಪಾಪ ಮಾಡಿದ್ರೋ ಏನೋ! ಇಲ್ಲಿನ ಜನ ಗ್ರಾಮ ಪಂಚಾಯತ್ ಕೇವಲ 8 ಕಿಲೋ ಮೀಟರ್ ದೂರದಲ್ಲಿದ್ದರೂ ಪಂಚಾಯತ್ ಗೆ ಬರಬೇಕಾದರೂ 126 ಕಿಲೋ ಮೀಟರ್ ಸುತ್ತು ಬಳಸಿ ಬರಲೇಬೇಕು. ಬ್ಯಾಂಕ್ ಗೆ ಹೋಗಬೇಕಾದರೂ 126 ಕಿಲೋ ಮೀಟರ್ ಬರಲೇಬೇಕು. ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದರೂ 126 ಕಿಲೋ ಮೀಟರ್ ಬರಲೇಬೇಕು. ಇಂತಹ ದುಸ್ಥಿತಿ ಎದುರಿಸುತ್ತಿರುವವರು ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆ ಗಡಿಭಾಗದ ಎಳನೀರು ಪ್ರದೇಶದ ಜನರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳನೀರು ಪ್ರದೇಶದ ಜನರು ಹಲವು ದಶಕಗಳಿಂದ ರಸ್ತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆ ಎಂಟು ಕಿಲೋ ಮೀಟರ್ ರಸ್ತೆ ಅಭಿವೃದ್ಧಿಯಾದರೆ ಇಡೀ ಊರಿನ ಜನರ ಬದುಕೇ ಬದಲಾವಣೆಯಾಗುತ್ತದೆ.

ಕನಿಷ್ಠ ಗ್ರಾಮ ಪಂಚಾಯತ್ ಗೆ ಬರಬೇಕಾದರೂ 126 ಕಿಮೀ ಸುತ್ತುವ ಅನಿವಾರ್ಯತೆ ಎಳನೀರಿನ ಜನರಿಗಿದೆ. ಎಳ ನೀರು ಪ್ರದೇಶದಲ್ಲಿ 135 ಮನೆಗಳಿದ್ದು 600ಕ್ಕಿಂತ ಅಧಿಕ ಜನ ವಾಸವಾಗಿದ್ದಾರೆ. ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಿಗೆ  ಬರಬೇಕಾದರೂ 126 ಕಿಮೀ ಬರಬೇಕಿದೆ. ಎಳನೀರಿನಿಂದ ಸಂಸೆ-ಕುದುರೆಮುಖ-ಬಜಗೋಳಿ-ಬೆಳ್ತಂಗಡಿ ಮಾರ್ಗವಾಗಿ ಮಲವಂತಿಗೆ ಗ್ರಾ.ಪಂ ಗೆ ಬರಬೇಕಿದೆ. ಭೂಮಿ ದಾಖಲೆ ಅಥವಾ ತಾಲೂಕು ಪಂಚಾಯತ್ ನ ಕೆಲಸ ಕಾರ್ಯಗಳಿಗೆ ಹೋಗಬೇಕಾದರೂ 126 ಕಿಲೋ ಮೀಟರ್ ಬರಲೇಬೇಕಿದೆ. ತಾಲೂಕು ಪಂಚಾಯತ್ ಗ್ರಾಮ ಪಂಚಾಯತ್ ಗೆ ಬರಬೇಕಾದರೂ ಕನಿಷ್ಠ 500 ರೂಪಾಯಿ ಮತ್ತು ಒಂದು ದಿನದ ಪೂರ್ತಿ ಸಮಯವನ್ನು ವ್ಯಯಿಸಲೇ ಬೇಕಿದೆ.

ಇದನ್ನೂ ಓದಿ: SSLC Exam Date: ಶಾಲಾ-ಕಾಲೇಜು ಆರಂಭದ ಬಗ್ಗೆ ಇಂದು ಮಹತ್ವದ ಸಭೆ; ಇಂದೇ ಎಸ್ಎಸ್ಎಲ್​ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ದಿಡುಪೆಯಿಂದ ಎಳನೀರು ಸಂಪರ್ಕಿಸುವ 8 ಕಿಮೀ ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಎಂಟು ಕಿಮೀ ರಸ್ತೆ ಇದಾಗಿದ್ದು, ಅರಣ್ಯ ಇಲಾಖೆಯೇ ಪ್ರತಿ ಬಾರಿಯೂ ರಸ್ತೆ ನಿರ್ಮಾಣ ವಿಚಾರದಲ್ಲಿ ಅಡ್ಡಗಾಲು ಹಾಕುತ್ತಿದೆ. ಈಗ ಇರುವ ಕಚ್ಚಾ ರಸ್ತೆಯಲ್ಲಿ ಮಳೆಗಾಲದಲ್ಲಿ ಹೋಗಲೂ ಅಸಾಧ್ಯವಾಗಿದೆ. ಬೇಸಿಗೆಕಾಲದಲ್ಲಿ ಜೀಪ್ ಗಳು ಮಾತ್ರ ರಸ್ತೆಯಲ್ಲಿ ಹೋಗುತ್ತಿವೆಯಾದರೂ ಬೇರೆ ಯಾವುದೇ ವಾಹನಗಳು ಹೋಗುವಂತಿಲ್ಲ.

ಶಾಲೆ-ಕಾಲೇಜು,ಆಸ್ಪತ್ರೆಗೆ ಹೋಗಲೂ ಭಾರೀ ಸಮಸ್ಯೆ ಎದುರಿಸುತ್ತಿರುವ ಜನರು, ಮಳೆಗಾಲದಲ್ಲಿ ರೋಗಿಗಳನ್ನು 8 ಕಿಮೀ ಎತ್ತಿಕೊಂಡು ಹೋಗಬೇಕಾಗದ ಅನಿವಾರ್ಯತೆ ಇದೆ. ಈ ರಸ್ತೆ ಅಭಿವೃದ್ಧಿಗೆ ಹಲವು ದಶಕಗಳಿಂದ ಗ್ರಾಮಸ್ಥರು ಬೇಡಿಕೆಯಿಟ್ಟಿದ್ದಾರೆ. ಈ ಬಗ್ಗೆ ಕೊನೆಯ ಪ್ರಯತ್ನ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಮಾತುಕತೆ ಮಾಡಿದ್ದಾರೆ.

ಈ ಮಾತುಕತೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದಲ್ಲಿರುವ ಜನರಲ್ಲಿ ಹೊಸ ಆಶಾವಾದ ಮೂಡಿಸಿದೆ. ಕುದುರೆಮುಖದ ತಪ್ಪಲಿನಲ್ಲಿರುವ ಅರಣ್ಯದಂಚಿನ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದ ಜನರು ಈವರೆಗೆ ಎದುರಿಸಿದ್ದ ಸಮಸ್ಯೆ ಈಗ ನಿವಾರಣೆಯಾಗುವ ಭರವಸೆಗೆ ಮತ್ತೆ ಜೀವ ಪಡೆದಿದೆ. ಎಳನೀರು ಪ್ರದೇಶಕ್ಕೆ ಸಂಪರ್ಕಿಸುವ ಎಳನೀರು-ಸಂಸೆ ರಸ್ತೆ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇನ್ನು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಂದಾಗಿದ್ದಾರೆ.

ಎಳನೀರು-ಸಂಸೆ ರಸ್ತೆ ಅರಣ್ಯ ವ್ಯಾಪ್ತಿಗೆ ಬರೋದರಿಂದ, ಈಗ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಅಧಿಕಾರಿಗಳಿಂದಲೂ ರಸ್ತೆಗೆ ಸರ್ವೆ ಕಾರ್ಯ ನಡೆಸುವ ಬಗ್ಗೆ ಇಂಗಿತ ವ್ಯಕ್ತವಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್ ಗೋಗಿ ಮತ್ತು ಎಸಿಸಿಎಫ್ ಸುಭಾಷ್ ಕೆ ಮಾಲ್ಕೇಡೆ ಜೊತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತುಕತೆ ನಡೆಸಿದ್ದಾರೆ. ಈ ರಸ್ತೆ ಅಭಿವೃದ್ಧಿಯಾದರೆ ಸಂಸೆಯಿಂದ ಮಲವಂತಿಗೆ ಗ್ರಾಮವನ್ನು ಕೇವಲ 8 ಕಿಲೋ ಮೀಟರ್ ನಲ್ಲಿ ತಲುಪಬಹುದಾಗಿದೆ.
Published by:Sushma Chakre
First published: