ಮಂಗಳೂರು (ಜೂ. 25): 21ನೇ ಶತಮಾನದಲ್ಲೂ ಹಳ್ಳಿಗಳನ್ನು ತಲುಪದ ಇಂಟರ್ನೆಟ್ ಜಗತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಬಾಳಿಗೇ ಸಂಚಕಾರವನ್ನು ತರುತ್ತಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಮೊಗ್ರದ ಬಳ್ಳಕ್ಕ ವಿದ್ಯಾರ್ಥಿಗಳಿಗೆ ನೆಟ್ ವರ್ಕ್ ಸಮಸ್ಯೆ ರಾಷ್ಟ್ರಾದ್ಯಾಂತ ಸುದ್ದಿಯಾದ ಬಳಿಕ ಊರಿನ ಜನರೇ ಮಕ್ಕಳ ಸಮಸ್ಯೆ ನೀಗಿಸಲು ಮುಂದಾಗಿದ್ದಾರೆ.
ಭಾರೀ ಗಾಳಿ ಮಳೆಗೆ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಗುಡ್ಡದ ಮೇಲಿನ ರಸ್ತೆಯಲ್ಲಿ ಇಡೀ ದಿನ ಕೂತು ವಿದ್ಯಾರ್ಥಿಗಳ ಆನ್ ಲೈನ್ ಕ್ಲಾಸ್ ಗೆ ಹಾಜರಾಗುತ್ತಿದ್ದರು. ಭಾರೀ ಮಳೆಗೆ ವಿದ್ಯಾರ್ಥಿಗಳಿಗೆ ಪೋಷಕರು ಸ್ವತಃ ಛತ್ರಿಯ ಆಸರೆ ನೀಡುತ್ತಿದ್ದು, ಭಾರೀ ಗಾಳಿ ಮಳೆಗೆ ರಸ್ತೆಯಲ್ಲಿಯೇ ನಿಂತು ಪಾಠ ಕೇಳಬೇಕಾದ ಅನಿವಾರ್ಯತೆ ಇತ್ತು. ಮಕ್ಕಳ ಸಂಕಷ್ಟದ ಒಂದು ಫೋಟೋ ಭಾರೀ ಸಂಚಲನ ಮೂಡಿಸಿತ್ತು.
ಈಗ ತಮ್ಮೂರಿನ ಮಕ್ಕಳ ಸಮಸ್ಯೆಗೆ ಊರಿನವರೇ ಪರಿಹಾರ ಕಂಡುಕೊಂಡಿದ್ದಾರೆ. ಕೊರೋನಾ ಸಂಕಷ್ಟದ ಕಾರಣದಿಂದ ಶಾಲೆ- ಕಾಲೇಜುಗಳು ನಡೆಯುತ್ತಿಲ್ಲ. ಕೆಲಸಕ್ಕೆ ತೆರಳುವ ಮಂದಿಗೂ ಸಂಕಷ್ಟ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಇದೀಗ ಪಿಎಂ ವಾಣಿ ಚಾಲನೆಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಮಿಲದಲ್ಲಿ ಈಗ ಪಿಎಂ ವಾಣಿ ಚಾಲನೆಯಾಗಿದ್ದು, ಏಕಾನೆಟ್ ಎಂಬ ಹೆಸರಿಲ್ಲಿ ಈಗ ಲಭ್ಯವಾಗುತ್ತಿದೆ.
ಇದನ್ನೂ ಓದಿ: Karnataka Weather Today: ಕರಾವಳಿಯಲ್ಲಿ ಇಂದಿನಿಂದ 4 ದಿನ ಭಾರೀ ಮಳೆ; ಮಲೆನಾಡಿನಲ್ಲೂ ನಾಳೆ ವರುಣನ ಆರ್ಭಟ
ಕೇಂದ್ರ ಸರಕಾರವು ಸಾರ್ವಜನಿಕ ವೈಫೈ ನೀಡಲು ಪಿಎಂ ವಾಣಿ ಎಂಬ ಯೋಜನೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಟೆಲಿಕಾಂ ಇಲಾಖೆಯ ಮೂಲಕ ವ್ಯವಸ್ಥೆಗೆ ಮುಂದಾಗಿತ್ತು. ದೇಶದ ಹಲವು ಕಡೆಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲು ಕೂಡ ಸೂಚಿಸಿತ್ತು. ಇದರ ಅನ್ವಯ ಟೆಲಿಕಾಂ ಇಲಾಖೆಗಳನ್ನು ಸಂಪರ್ಕಿಸಿದ ಸುಳ್ಯದ ಸಾಯಿರಂಜನ್ ಕಲ್ಚಾರು ಹಾಗೂ ಸದಾಶಿವ ಕೊಡಪ್ಪಾಲ ಅವರು ಇದಕ್ಕೆ ಬೇಕಾದ ವ್ಯವಸ್ಥೆಗೆ ಮುಂದಾಗಿದ್ದಾರೆ. ಇಲಾಖೆಗಳನ್ನು, ವ್ಯವಸ್ಥೆಗಳನ್ನು ದೂರುತ್ತಾ ಕೂರುವ ಬದಲು ಇರುವ ವ್ಯವಸ್ಥೆಗಳನ್ನು ಹೇಗೆ ಬಳಕೆ ಮಾಡಬಹುದು ಹಾಗೂ ಸುಧಾರಿಸಬಹುದು ಎಂದು ಈ ಯುವಕರಿಬ್ಬರು ಯೋಚಿಸಿದ್ದಾರೆ.
ಈಗ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸಿಗೆ ಪರದಾಟ ನಡೆಸುವ ಸ್ಥಿತಿಯನ್ನು ಕಂಡು ತಕ್ಷಣವೇ ಇಲಾಖೆಗಳಿಂದ ಅನುಮತಿ ಪಡೆದು ಇದೀಗ ಸುಳ್ಯದ ಕಮಿಲದಲ್ಲಿ ಈ ವ್ಯವಸ್ಥೆಗೆ ಮುಂದಾಗಿದ್ದಾರೆ. ಈ ನೆಟ್ವರ್ಕ್ ಗೆ ಏಕಾನೆಟ್ ಎಂಬ ಹೆಸರು ಇರಿಸಲಾಗಿದ್ದು, ಏಕ ಎಂದರೆ ಒಂದು ಹಾಗೂ ನೆಟ್ ಎಂದರೆ ನೆಟ್ವರ್ಕ್ ಎಂಬ ಅರ್ಥ ಒಳಗೊಂಡಿದ್ದು , ಒಂದು ನೆಟ್ವರ್ಕ್ ಎಲ್ಲರಿಗಾಗಿ ಎಂಬ ಸಂದೇಶ ಇದರ ಹಿಂದಿದೆ. ಸೇವಾ ಉದ್ದೇಶ ಇದಾದರೂ ಇದಕ್ಕೆ ಬೇಕಾದ ಇಂಟರ್ನೆಟ್ ಹಾಗೂ ಇತರ ಉಪಕರಣಗಳಿಗೆ ವೆಚ್ಚಗಳಾಗುವುದರಿಂದ ಬಳಸುವ ಡಾಟಾಗಳ ಮೇಲೆ ಕನಿಷ್ಟ ದರ ವಿಧಿಸಲಾಗುತ್ತದೆ.
ಇದನ್ನೂ ಓದಿ: Fathers Day 2021: ಮಳೆಯಲ್ಲಿ ಆನ್ಲೈನ್ ಕ್ಲಾಸ್ ಕೇಳುವ ಮಗಳಿಗೆ ಅಪ್ಪನ ಕೊಡೆಯೇ ಆಸರೆ; ಸುಳ್ಯದ ತಂದೆ-ಮಗಳ ಫೋಟೋ ವೈರಲ್
ಸದ್ಯ ಸುಮಾರು 2000 ಚದರ ಅಡಿಯಲ್ಲಿ ಈ ಸಿಗ್ನಲ್ ಲಭ್ಯವಿರುತ್ತದೆ. ತೀರಾ ಅಗತ್ಯ ಇರುವ ವಿದ್ಯಾರ್ಥಿಗಳಿಗೆ, ತುರ್ತು ಇಂಟರ್ನೆಟ್ ಅಗತ್ಯ ಇದ್ದವರಿಗೆ, ವರ್ಕ್ ಫ್ರಂ ಹೋಂ ವ್ಯವಸ್ಥೆಯ ಮಂದಿಗೆ ಈ ಸಾರ್ವಜನಿಕ ವೈ ಫೈ ಬಳಕೆ ಮಾಡಬಹುದು. ಈ ಯೋಜನೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳು ಇದ್ದು ನೆಟ್ವರ್ಕ್ ಲೋಪದೋಷಗಳ ಕಡೆಗೂ ಗಮನಹರಿಸಲಾಗುತ್ತಿದೆ.
ಟೆಲಿಕಾಂ ಇಲಾಖೆಗಳು ಅನುಮತಿಯೊಂದಿಗೆ ಆರಂಭವಾಗುವ ಈ ಯೋಜನೆಗೆ ವೇಗದ ಇಂಟರ್ನೆಟ್ ಅಗತ್ಯವಿದೆ. ಕಮಿಲದಲ್ಲಿ ಬಿ ಎಸ್ ಎನ್ ಎಲ್ ಭಾರತ್ ಏರ್ ಫೈಬರ್ ಮೂಲಕ ಇಂಟರ್ನೆಟ್ ಸಂಪರ್ಕ ಪಡೆದು ಪ್ರತ್ಯೇಕ ಡಿವೈಸ್ ಮೂಲಕ ಸಾರ್ವಜನಿಕ ವೈ ಫೈ ನೀಡಲಾಗುತ್ತಿದೆ. ಇಂದು ಇಂಟರ್ನೆಟ್ ಖಾಸಗಿ ವಲಯಕ್ಕೆ ಬಿಎಸ್ಎನ್ಎಲ್ ಪ್ರಾಂಚೈಸಿ ಮೂಲಕ ನೀಡುವ ಕಾರಣದಿಂದ ಸಾಮಾನ್ಯ ಜನರಿಗೂ ಇಂತಹ ಸಂಪರ್ಕ ಪಡೆಯಲು ಕಷ್ಟವಾಗಿದೆ. ಈ ಕಾರಣದಿಂದ ಸಾರ್ವಜನಿಕ ವೈಫೈ ಉದ್ದೇಶ ಉತ್ತಮವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ