Puttur: ಕೊರೋನಾ ರೋಗಿಗಳಿಗಾಗಿ ಇಡೀ ಆಸ್ಪತ್ರೆಯನ್ನೇ ನೀಡಿದ ವೈದ್ಯೆ; ಪುತ್ತೂರಿನ ಗಿರಿಜಾ ಕ್ಲಿನಿಕ್ ಕೋವಿಡ್ ಸೆಂಟರ್ ಆಗಿ ಮಾರ್ಪಾಡು

ಗಿರಿಜಾ ಕ್ಲಿನಿಕ್ ಸುಮಾರು 30 ಬೆಡ್ ನ ಆಸ್ಪತ್ರೆಯಾಗಿದ್ದು, ಪುತ್ತೂರಿನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ರೋಗಿಗಳಿಗಾಗಿ ಮೀಸಲಿಡಲು ವ್ಯವಸ್ಥೆ ಮಾಡಲಾಗಿದೆ.

ಡಾ.  ಗೌರಿ ಪೈ

ಡಾ. ಗೌರಿ ಪೈ

  • Share this:
ಪುತ್ತೂರು (ಮೇ 10): ಕೋವಿಡ್ ಹೆಸರಿನಲ್ಲಿ ಸರಕಾರದಿಂದ, ಬಡ ಜನರಿಂದ ಎಷ್ಟು ಲೂಟಿ ಮಾಡಲು ಸಾಧ್ಯವೋ ಅಷ್ಟು ಲೂಟಿ ಮಾಡಲು ಹವಣಿಸುತ್ತಿರುವ ಕೆಲವು ಜನಗಳ ಮಧ್ಯೆ ತನ್ನ ಸರ್ವಸ್ವವನ್ನೂ ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟ ಜನರೂ ಇದ್ದಾರೆ. ಇಂತಹ ಓರ್ವ ಮಹಾತಾಯಿ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದಾರೆ. ಕೋವಿಡ್ ಹೆಸರಿನಲ್ಲಿ ಆಸ್ಪತ್ರೆಗಳಲ್ಲಿ ಲೂಟಿ ನಡೆಯುತ್ತಿದೆ ಎನ್ನುವ ಆರೋಪಗಳ ನಡುವೆ ಈ ಮಹಾತಾಯಿ ತನ್ನ ಹೆಸರಿನಲ್ಲಿರುವ ಆಸ್ಪತ್ರೆಯನ್ನೇ ಕೋವಿಡ್ ಸೆಂಟರ್ ಗಾಗಿ ನೀಡಿದ್ದಾರೆ.

ಕೋವಿಡ್ ಹೆಸರಿನಲ್ಲಿ ಸಮಾಜದ ಕೆಲವು ಮಂದಿ ಸರಕಾರದಿಂದ, ಬಡ ಜನರಿಂದ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿದ್ದಾರೆ.  ಆಕ್ಸಿಜನ್, ಬೆಡ್, ಲಸಿಕೆ ಮೊದಲಾದವುಗಳ ಮೂಲಕ ಈ ಲೂಟಿ ನಡೆದಿರುವುದು ದೇಶದಾದ್ಯಂತ ಸುದ್ಧಿಯಾಗಿದೆ. ಇಂಥ ಲೂಟಿಕೋರರ ಮಧ್ಯೆ ಕೋವಿಡ್ ಗಾಗಿ ತಮ್ಮ ಸರ್ವಸ್ವವನ್ನೂ ದಾನ ಮಾಡಿದ ಜನರೂ ಇದ್ದಾರೆ. ಹೌದು, ಇಂಥವರ ಪಟ್ಟಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಡಾ. ಗೌರಿ ಪೈ ಎನ್ನುವ ವೈದ್ಯೆಯೂ ಸೇರಿಕೊಳ್ಳುತ್ತಾರೆ.

ರಾಜ್ಯ ಕೊರೊನಾ ಮಹಾಮಾರಿಗೆ ಸಿಲುಕಿ ಸಂಕಷ್ಟ ಪಡುತ್ತಿರುವುದನ್ನು ನೋಡುತ್ತಿದ್ದ ಡಾ. ಗೌರಿ ಪೈಯವರಿಗೆ ತಾನೂ ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಹಂಬಲವಿತ್ತು. ತನ್ನ ಹುಟ್ಟೂರಾದ ಪುತ್ತೂರಿನಲ್ಲೂ ಕೋವಿಡ್ ಪಾಸಿಟೀವ್ ಪ್ರಕರಣಗಳ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳುತ್ತಿರುವುದನ್ನೂ ಗೌರಿ ಪೈ ಗಮನಿಸಿದ್ದರು. ಈ ನಡುವೆ ಪುತ್ತೂರು ಶಾಸಕ ಸಂಜೀವ ಮಠಂದೂರು ತಮ್ಮ ಹುಟ್ಟು ಹಬ್ಬದ ದಿನದಂದು ಹಿರಿಯ ವೈದ್ಯೆಯಾಗಿರುವ ಗೌರಿ ಪೈ ಯವರ ಮನೆಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Explainer: ಕೊರೋನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿದೆ ಬ್ಲ್ಯಾಕ್‌ ಫಂಗಸ್‌!; ಇದರ ಬಗ್ಗೆ ಇಲ್ಲಿದೆ ಮಾಹಿತಿ

ಈ ಸಂದರ್ಭದಲ್ಲಿ ಶಾಸಕರು ಕೊರೊನಾ ವಿಚಾರವಾಗಿ ಗೌರಿ ಪೈಯವರಲ್ಲಿ ಚರ್ಚೆಯನ್ನೂ ನಡೆಸಿದ್ದರು. ಚರ್ಚೆಯ ಮಧ್ಯೆ ಡಾ. ಗೌರಿ ಪೈಯವರ ಮಾಲೀಕತ್ವದಲ್ಲಿ ನಡೆಯುತ್ತಿದ್ದ ಗಿರಿಜಾ ಕ್ಲಿನಿಕ್ ಇದೀಗ ಸ್ವಲ್ಪ ಸಮಯದ ಹಿಂದೆ ಮುಚ್ಚಿರುವುದನ್ನು ಗಮನಿಸಿ ಆ ಆಸ್ಪತ್ರೆಯನ್ನು ಕೋವಿಡ್ ಸೆಂಟರ್ ಮಾಡಲು ನೀಡುವಂತೆ ಶಾಸಕರು ಮನವಿ ಮಾಡಿದ್ದರು. ಈ ಮನವಿಗೆ ಹಿಂದೆ-ಮುಂದೆ ನೋಡದೆ ಒಪ್ಪಿಕೊಂಡಿದ್ದ ಗೌರಿ ಪೈ ತನ್ನ ಸಮಾಜಕ್ಕೋಸ್ಕರ ಯಾವ ಸೇವೆಗೂ ಸೈ ಎಂದಿದ್ದರು. ಈ ಹಿನ್ನಲೆಯಲ್ಲಿ ಸುಸಜ್ಜಿತವಾದ ಗಿರಿಜಾ ಕ್ಲಿನಿಕ್ ಇದೀಗ ಪುತ್ತೂರಿನ ಕೋವಿಡ್ ಸೆಂಟರ್ ಆಗಿ ಬದಲಾಗಿದೆ.

ಪುತ್ತೂರಿನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ರೋಗಿಗಳಿಗಾಗಿ ಮೀಸಲಿಡಲು ವ್ಯವಸ್ಥೆ ಮಾಡಲಾಗಿದೆ. ಬೆಡ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಈ ಆಸ್ಪತ್ರೆಯನ್ನು ಕೋವಿಡ್ ರೋಗಿಗಳಿಗಾಗಿ ಬಿಟ್ಟು ಕೊಡುವ ಮೂಲಕ ಗೌರಿ ಪೈ ಸಮಾಜಕ್ಕೆ ತನ್ನ ಕೈಲಾದ ಸೇವೆಯನ್ನು ಮಾಡಿದ್ದಾರೆ.

ಗಿರಿಜಾ ಕ್ಲಿನಿಕ್ ಸುಮಾರು 30 ಬೆಡ್ ನ ಆಸ್ಪತ್ರೆಯಾಗಿದ್ದು, ಈ ಆಸ್ಪತ್ರೆಯನ್ನು ಡಾ. ಗೌರಿ ಪೈ ನಡೆಸಲಾಗದ ಹಿನ್ನಲೆಯಲ್ಲಿ ಮುಚ್ಚಿದ್ದರು. ಡಾ. ಗೌರಿ ಪೈ ಆಸ್ಪತ್ರೆಯ ಜೊತೆಗೆ ಒಂದು ಓಲ್ಡ್ ಏಜ್ ಕೇರ್  ಸೆಂಟರ್ ಅನ್ನೂ ಮುನ್ನಡೆಸುತ್ತಿದ್ದು, ಈ ಕಾರಣಕ್ಕಾಗಿ ಹಿರಿಯ ಅನಾಥರ ಆರೈಕೆಯಲ್ಲೇ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಯ ಕಡೆಗೆ ಗಮನ ಕೊಡಲು ಕಷ್ಟಸಾಧ್ಯವಾದ ಕಾರಣಕ್ಕಾಗಿ ಆಸ್ಪತ್ರೆಯನ್ನು ಮುಚ್ಚಿ ಅದನ್ನು ಮಾರಾಟಕ್ಕೆ ಇಟ್ಟಿದ್ದರು. ಆದರೆ ಕೋವಿಡ್ ಪಾಸಿಟೀವ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಆಸ್ಪತ್ರೆಯನ್ನು ಕೋವಿಡ್ ಸೆಂಟರ್ ಗಾಗಿ ನೀಡಲು ಮುಂದೆ ಬಂದಿದ್ದಾರೆ. ಅಲ್ಲದೆ ಎಷ್ಟು ಸಮಯದವರೆಗೂ ಈ ಆಸ್ಪತ್ರೆಯನ್ನು ಕೋವಿಡ್ ರೋಗಿಗಳಿಗಾಗಿ ಬಳಸಲು ಅನುಮತಿಯನ್ನೂ ಈಗಾಗಲೇ ನೀಡಿದ್ದಾರೆ.
Published by:Sushma Chakre
First published: