ಮಂಗಳೂರಿನಲ್ಲಿಯೂ ಮರುಕಳಿಸಿದ ಘಟನೆ; ಬೈಕ್​ಗೆ ನಾಯಿ ಕಟ್ಟಿ ಎಳೆದುಕೊಂಡು ಹೋದ ನೀಚರು

ಕೇರಳದಲ್ಲಿ ಚಪ್ಪಲಿ ಕಚ್ಚಿದ ಕಾರಣಕ್ಕಾಗಿ ವ್ಯಕ್ತಿ ನಾಯಿಯನ್ನು ಇದೇ ರೀತಿ ಎಳೆದುಕೊಂಡು ಹೋದ ವಿಚಾರ ಇಡೀ ದೇಶಾದ್ಯಾಂತ ಸುದ್ದಿಯಾಗಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ನಗರದಲ್ಲಿಯೂ ಇದೇ ರೀತಿ ಅಮಾನವೀಯ ನಡೆ ಕಂಡು ಬಂದಿದೆ

ನಾಯಿಯನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ

ನಾಯಿಯನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ

  • Share this:
ಮಂಗಳೂರು (ಏ. 23): ಜಗತ್ತಿನಲ್ಲಿ ಮನುಷ್ಯನಿಗಿಂತ ಕ್ರೂರ ಪ್ರಾಣಿ ಮತ್ತೊಂದು‌ ಇಲ್ಲ ಅನ್ನುವ ಮಾತಿದೆ. ಈ ಮಾತು ಹಲವು ಬಾರಿ ನಿಜವಾಗುತ್ತಲೇ ಬಂದಿದೆ. ಇದೀಗ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ  ಕಡಲನಗರಿಯಲ್ಲಿ ಇಡೀ ಮನುಜ ಕುಲವೇ ಹೇಸಿಗೆ ಪಡುವಂತಹ ಘಟನೆ ನಡೆದಿದೆ. ಬಡಪಾಯಿ ನಾಯಿಯನ್ನು ಕಿಡಿಗೇಡಿಗಳು ಬೈಕ್​ಗೆ  ಕಟ್ಟಿ ಹೆದ್ದಾರಿಯಲ್ಲಿ ಎಳೆದುಕೊಂಡು ಹೋಗಿ ರಾಕ್ಷಸತನ ಮೆರೆದಿರುವ ಘಟನೆ ನಡೆದಿದೆ. ಕಳೆದ ಐದಾರು ದಿನಗಳ ಹಿಂದೆ ಕೇರಳದಲ್ಲಿ ನಡೆದ ರೀತಿಯೇ ಈ ಕಿಡಿಗೇಡಿಗಳು ವರ್ತಿಸಿದ್ದು, ಅವರ ಈ ಕ್ರೂರ ಕಾರ್ಯಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.  

ಮಂಗಳೂರು ನಗರ ಹೊರವಲಯದ ಮುಕ್ಕದಲ್ಲಿ ಎಪ್ರಿಲ್15 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ ಮುಕ್ಕದ ಎನ್​ಐಟಿಕೆ ಬಳಿ ಇಬ್ಬರು ವ್ಯಕ್ತಿಗಳು ಬೈಕ್ ಹಿಂಬದಿಗೆ  ನಾಯಿಯನ್ನು ಕಟ್ಟಿ ಅಮಾನುಷವಾಗಿ ಹಿಂಸೆ ನೀಡಿದ್ದಾರೆ. ಎನ್ ಐ ಟಿ ಕೆ ಸರ್ವಿಸ್ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಬೈಕ್ ಸವಾರ ನಾಯಿ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗುವ ದೃಶ್ಯವನ್ನು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರು ಸೆರೆ ಹಿಡಿದಿದ್ದಾರೆ.

ವಿಡಿಯೋ ಮಾಡಿದ ಬೈಕ್ ಸವಾರರು ಮೂಕ ಪ್ರಾಣಿ ಮೇಲೆ ದರ್ಪ ತೋರುತ್ತಿದ್ದವರುನ್ನು  ಸ್ಥಳದಲ್ಲೇ ನಿಲ್ಲಲು ಸೂಚನೆ ನೀಡಿದರೂ ಕ್ಯಾರೇ ಅನ್ನದೆ ನಾಯಿಯನ್ನು ಎಳೆದುಕೊಂಡು ಹೋಗಲಾಗಿದೆ. ಕೇರಳದಲ್ಲಿ  ಚಪ್ಪಲಿ ಕಚ್ಚಿದ ಕಾರಣಕ್ಕಾಗಿ ವ್ಯಕ್ತಿ ನಾಯಿಯನ್ನು ಇದೇ ರೀತಿ ಎಳೆದುಕೊಂಡು ಹೋದ ವಿಚಾರ ಇಡೀ ದೇಶಾದ್ಯಾಂತ ಸುದ್ದಿಯಾಗಿತ್ತು. ಮನಷ್ಯನದ ರಕ್ಕಸ ಪ್ರವೃತ್ತಿ ಬಗ್ಗೆ ತೀರಾ ಆಕ್ರೋಶ ವ್ಯಕ್ತವಾಗಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ನಗರದಲ್ಲಿಯೂ ಇದೇ ರೀತಿ ಅಮಾನವೀಯ ನಡೆ ಕಂಡು ಬಂದಿದೆ.

ಇದನ್ನು ಓದಿ: ವಿಕೇಂಡ್​ ಲಾಕ್​ಡೌನ್​ಗೂ​ ಮುಂಚೆ ಮನೆ ಸೇರಿಕೊಳ್ಳೋಣ ಎಂದವರಿಗೆ ಅಡ್ಡಿಯಾದ ಮಳೆ; ರಾಜಧಾನಿಯಲ್ಲಿ ವರುಣನ ಅಬ್ಬರ

ಮಂಗಳೂರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದ್ದು, ಬಡಪಾಯಿ ನಾಯಿಗೆ ಹಿಂಸಿಸಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಪ್ರಕರಣ ಕುರಿತು ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿ ಆರೋಪಿಗಳ ಘೋರ ಕೃತ್ಯಕ್ಕೆ ಶಿಕ್ಷೆ ನೀಡಬೇಕೆಂದು ಜನ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಸುರತ್ಕಲ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದೆ. ಕೊಪ್ಪಳ ಮೂಲದ ನೀಲಪ್ಪ ಎಂಬುವವನ ಬಂಧನವಾಗಿದೆ. ವಿಚಾರಣೆ ವೇಳೆ ಆರೋಪಿ ನಾಯಿ ಸತ್ತು ಹೋಗಿರುವುದಾಗಿ ಹೇಳಿದ್ದಾನೆ. ನಾಯಿ ಸತ್ತಿದ್ದರೂ ಆರೋಪಿ ಈ ರೀತಿ ಅಮಾನುಷವಾಗಿ ಕೊಂಡು ಹೋಗಿರೋದು ಹೇಯ ಕೃತ್ಯ ಎಂದಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ದ ಐ ಪಿ ಸಿ ಸೆಕ್ಷನ್ 428, 429, R/W 34,ಮತ್ತು ಸೆಕ್ಷನ್ 11 ರ ಪ್ರಕಾರ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
Published by:Seema R
First published: