Mangalore Coronavirus: ದಕ್ಷಿಣ ಕನ್ನಡದಲ್ಲಿ ಹೋಮ್ ಐಸೋಲೇಷನ್ ರೋಗಿಗಳ ಪರಿಶೀಲನೆಗೆ ವಿಶೇಷ ತಂಡ ರಚನೆ

Mangalore Coronavirus Updates: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8,414 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ 1,204 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7,210 ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ರೋಗಿಗಳು ಶೇ.14.30ರಷ್ಟು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬಾಕಿ ಉಳಿದವರು ಹೋಮ್ ಐಸೋಲೇಷನ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಳಿನ್ ಕುಮಾರ್ ಕಟೀಲು, ಕೋಟ ಶ್ರೀನಿವಾಸ್ ಪೂಜಾರಿ

ನಳಿನ್ ಕುಮಾರ್ ಕಟೀಲು, ಕೋಟ ಶ್ರೀನಿವಾಸ್ ಪೂಜಾರಿ

  • Share this:
ಮಂಗಳೂರು (ಮೇ 6): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಧೃಡಪಟ್ಟಿರುವ ರೋಗಿಗಳಲ್ಲಿ ಶೇ. 85.70ಕ್ಕೂ ಹೆಚ್ಚು ರೋಗಿಗಳು ಹೋಮ್ ಐಸೋಲೇಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ಕ್ಷೇಮಗಳನ್ನು ವಿಚಾರಿಸಲು ವೈದ್ಯಕೀಯ ತಂಡಗಳನ್ನು ರಚನೆ ಮಾಡುವುದರೊಂದಿಗೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ವೈದ್ಯಕೀಯ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8,414 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ 1,204 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7,210 ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ರೋಗಿಗಳು ಶೇ.14.30ರಷ್ಟು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬಾಕಿ ಉಳಿದವರು ಹೋಮ್ ಐಸೋಲೇಷನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಶೇ.75ರಷ್ಟು ನಗರ ಪ್ರದೇಶದ ವ್ಯಾಪ್ತಿಯವರೇ ಇದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಅವರ ಯೋಗಕ್ಷೇಮ ಪ್ರತಿದಿನ ವಿಚಾರಿಸಬೇಕು ಎಂದು ಆದೇಶ ನೀಡಿದ್ದಾರೆ.

ಹೋಮ್ ಐಸೋಲೇಷನ್​ಗೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರನ್ನು ಒಳಗೊಂಡ 78ಕ್ಕೂ ಹೆಚ್ಚು ತಂಡಗಳನ್ನು ರಚಿಸುವುದರೊಂದಿಗೆ ಅವರು ಮನೆಮನೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಇವುಗಳ ಮೇಲ್ವಿಚಾರಣೆ ಮಾಡಲು ಸಹ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Bellary Coronavirus | ಬಳ್ಳಾರಿಯಲ್ಲಿ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಲು ಮನೆ-ಮನೆ ಸಮೀಕ್ಷೆ

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಲ್ಲಿ 45 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ದೊಳಗಿನ ರೋಗಿಗಳ ಮಾಹಿತಿ ಕಲೆ ಹಾಕುವುದರೊಂದಿಗೆ ಅವರುಗಳಲ್ಲಿ ರಕ್ತದೊತ್ತಡದಿಂದ ಬಳಲುವವರು, ಮಧುಮೇಹ ಸೇರಿದಂತೆ ಮತ್ತಿತರ ಕಾಯಿಲೆ ಹೊಂದಿರುವವರನ್ನು ಗುರುತಿಸುವುದರೊಂದಿಗೆ ಅವರುಗಳ ರಕ್ತ ಪರೀಕ್ಷೆ ಮತ್ತಿತರ ಪರೀಕ್ಷೆಗಳನ್ನು ಮಾಡುವುದರೊಂದಿಗೆ ಇನ್ನಿತರ ತೊಂದರೆಗಳಾದಲ್ಲಿ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.

ಜನರು  ದಿನನಿತ್ಯದ ಅವಶ್ಯಕ ವಸ್ತುಗಳನ್ನು ಖರೀದಿಸಲು ಕೋವಿಡ್ ಕಫ್ರ್ಯೂನಲ್ಲಿ ಬೆಳಿಗ್ಗೆ 6 ರಿಂದ 10 ರವರೆಗೆ ಅವಕಾಶ ನೀಡಲಾಗಿದೆ. ಆದರೆ ಕೆಲವರು ಯಾವುದೇ ಅವಶ್ಯಕ ಕೆಲಸವಿಲ್ಲದಿರುವವರು ಅನಗತ್ಯವಾಗಿ ತಿರುಗಾಡುವುದು ಕಂಡುಬರುತ್ತದೆ. ಇದಕ್ಕೆ ಜನರು ಕಡಿವಾಣ ಹಾಕಬೇಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಖಾಸಗಿ ನರ್ಸಿಂಗ್ ಹೋಮ್ ಗಳಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರಿಂದ ಸರ್ಕಾರ ನಿಗದಿ ಪಡಿಸಿರುವ ದರವನ್ನು ಮಾತ್ರ ತೆಗೆದುಕೊಳ್ಳಬೇಕು. ಆದರೆ ಕೆಲವರು ಹೆಚ್ಚು ಶುಲ್ಕ ಪಡೆಯುತ್ತಿರುವ ಬಗ್ಗೆ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಹೀಗಾಗದಂತೆ ನೋಡಿಕೊಳ್ಳಬೇಕು ಕೆಲವೊಮ್ಮೆ ಹೆಚ್ಚು ಪಡೆದದ್ದು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಗೆ ದೂರು ನೀಡಿದಲ್ಲಿ ಹೆಚ್ಚು ಶುಲ್ಕವನ್ನು ಮರು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ರೆಮಿಡಿಸಿವಿಯರ್ ಔಷದಿ ಕೋವಿಡ್ ಸೋಂಕಿತರೆಲ್ಲರಿಗೂ ಅವಶ್ಯಕತೆ ಇರುವುದಿಲ್ಲ ಪ್ರಾರಂಭದ ಹಂತದಲ್ಲಿ ಉಸಿರಾಟದ ತೊಂದರೆ ಇರುವಂತವರಿಗೆ ನೀಡುವುದು ಎಂದು ದೇಶದ ವೈದ್ಯಕೀಯ ಸಂಸ್ಥೆಗಳು ತಿಳಿಸಿವೆ ಎಂದ ಅವರು ಅಗತ್ಯ ಇರುವ ರೋಗಿಗಳಿಗೆ ಮಾತ್ರ ಈ ಔಷದಿಯನ್ನು ನೀಡಬೇಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ಸಲಹೆ ನೀಡಿದ್ದಾರೆ.

ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಕೆಲವೊಮ್ಮೆ ಕೋವಿಡ್ ದೃಢಪಟ್ಟು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತವರು ತೀವ್ರ ತರದ ಉಸಿರಾಟದ ಸಮಸ್ಯೆ ಉಂಟಾಗಿ ಕೊನೆ ಘಳಿಗೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ ಇದಕ್ಕೆ ಆಸ್ಪದ ನೀಡಬಾರದು ಸೋಂಕಿತರು ತಮಗಾಗುವ ತೊಂದರೆಗಳನ್ನು ಪ್ರತಿದಿನ ಕಂಟ್ರೋಲ್ ರೂಮ್ ನಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು ಹಾಗೂ ಎ.ಎನ್.ಎಂಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದರು.

ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರ ಯೋಗಕ್ಷೇಮ ವಿಚಾರಿಸಲು ಜಿಲ್ಲೆಯ 8 ಮೆಡಿಕಲ್ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು. ಕೊರೋನಾ ಸೋಂಕು ಬಂದು ಹೋಂ ಐಸೋಲೇಶನ್‍ನಲ್ಲಿ ಇರುವವರು ಏನೆಲ್ಲ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿಯನ್ನು ಒಳಗೊಂಡ ವೀಡಿಯೋ ಚಿತ್ರೀಕರಣ ಮಾಡುವುದರೊಂದಿಗೆ ಜನರಿಗೆ ತಲುಪಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ತಿಳಿಸಿದ್ದಾರೆ.
Published by:Sushma Chakre
First published: