ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯ (Prime Minister Narendra Modi) ದೀರ್ಘಾಯಸ್ಸುಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ (Sri Dharmasthala temple) ದಲ್ಲಿ ನಡೆಯುತ್ತಿದ್ದ ಮಹಾ ಮೃತ್ಯುಂಜಯ ಯಾಗ (Maha Mrityunjaya Yaga) ಸಂಪನ್ನಗೊಂಡಿದೆ. ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾ ಭವನದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ (Harish Punja) ನೇತೃತ್ವದಲ್ಲಿ ಯಾಗ ನಡೆದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ (D Veerendra Heggade), ಸಚಿವರಾದ ಕೆ. ಎಸ್. ಈಶ್ವರಪ್ಪ, ಸಿ ಸಿ ಪಾಟೀಲ್, ಶಶಿಕಲಾ ಜೊಲ್ಲೆ ಆದಿಯಾಗಿ ನೂರಾರು ಮಂದಿ ಈ ಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದ ಏಳು ಹೋಮಕುಂಡಗಳಲ್ಲಿ ಯಾಗ ನಡೆದಿದ್ದು, ಏಳು ಕುಂಡಗಳಲ್ಲೂ ಪ್ರಧಾನ ಅರ್ಚಕರು ಮತ್ತು ಸಹಾಯಕ ಅರ್ಚಕರಿಂದ ಮಂತ್ರಘೋಷ, ವಿವಿಧ ದ್ರವ್ಯಗಳ ಅರ್ಪಣೆ ಯಾಗಕುಂಡಕ್ಕೆ ಹಾಕಲಾಗಿದೆ. ಈ ಯಾಗದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 140ಕ್ಕೂ ಹೆಚ್ಚು ಅರ್ಚಕರು ಭಾಗಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಯಾಗದ ಪೂರ್ಣಾಹುತಿ ಮಾಡಲಾಗಿದೆ.
ಯಾಗದ ಪೂಜೆಯಲ್ಲಿ ಶಾಸಕ ಹರೀಶ್ ಪೂಂಜಾ ದಂಪತಿ ಸೇವಾಕರ್ತರಾಗಿ ಭಾಗವಹಿಸಿದ್ದಾರೆ. ವೇದಮೂರ್ತಿ ನಾಗೇಂದ್ರ ಭಾರದ್ವಜ್ ನೇತೃತ್ವದಲ್ಲಿ ಯಾಗ ನಡೆದಿದೆ. ಈ ಮಹಾ ಯಾಗಕ್ಕೂ ಮುನ್ನ ಬೆಳ್ತಂಗಡಿ ತಾಲೂಕಿನ ಎಲ್ಲಾ 25 ಶಿವ ದೇವಸ್ಥಾನಗಳಲ್ಲಿ ಮೃತ್ಯುಂಜಯ ಹೋಮ ನಡೆದಿತ್ತು. ಅಂತಿಮವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಮಹಾಮೃತ್ಯುಂಜಯ ಹೋಮದ ಪೂರ್ಣಾಹುತಿ ನಡೆದಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಲಸಿಕೆ ಪಡೆದ ಮೂರು ಮಕ್ಕಳ ಸಾವು ಪ್ರಕರಣ; ವರದಿ ಕೇಳಿದ CM Bommai
ಇದಕ್ಕೂ ಮುನ್ನ ಆದಿತ್ಯವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಸನ್ನಿಧಾನದ ಮುಂಭಾಗ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಪುರೋಹಿತರ ದ ಸಮ್ಮುಖದಲ್ಲಿ ಮಂಜುನಾಥ ಸ್ವಾಮಿಯ ಆಲಯದಲ್ಲಿ ವಿಶೇಷ ಪೂಜೆಯ ಬಳಿಕ ಸ್ವಾಮಿಯ ಉತ್ಸವ ಮೂರ್ತಿಯನ್ನು ವೈಭಯುತವಾಗಿ ಯಾಗ ಮಂಟಪಕ್ಕೆ ಕರೆತರಲಾಗಿದೆ.
ಸೋಮವಾರ ಮಹಾಮೃತ್ಯುಂಜಯ ಹೋಮದ ಪ್ರಧಾನ ಹೋಮ ನಡೆದಿದೆ. ಬೆಳಗ್ಗೆ 9 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಪ್ರಧಾನ ಹೋಮ ಆರಂಭವಾಗಿ, 10.30ರ ವೇಳೆಗೆ ಮೃತ್ಯುಂಜಯ ಹೋಮ ಕುಂಡ ಹೊರತುಪಡಿಸಿ ಉಳಿದ ಆರು ಹೋಮ ಕುಂಡಗಳಲ್ಲಿ ಹೋಮ ಪೂರ್ಣಾಹುತಿ ಮಾಡಿ ಮಂಗಳಾರತಿ ಮಾಡಲಾಗಿದೆ. ಆನಂತರ ಆರು ಕುಂಡಗಳ ಅಗ್ನಿಯನ್ನು ಮೃತ್ಯುಂಜಯ ಹೋಮದ ಪ್ರಧಾನ ಕುಂಡಕ್ಕೆ ಅರ್ಪಿಸಲಾಗಿದೆ.. ಆ ಬಳಿಕ ಪ್ರಧಾನ ಕುಂಡದಲ್ಲಿ ಕಲ್ಪೋಕ್ತ ಪೂಜೆ ಆರಂಭವಾಗಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆದಿದೆ.
ಇದನ್ನೂ ಓದಿ: Corona Review Meeting: ಹೋಮ್ ಐಸೋಲೇಷನ್ನಲ್ಲಿ ಇರುವವರಿಗೆ ಮೆಡಿಕಲ್ ಕಿಟ್ ವಿತರಣೆ
ಯಾಗದ ಪೌರೋಹಿತ್ಯ ಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಪುರೋಹಿತರು ಆಗಮಿಸಿದ್ದರು. ಶೃಂಗೇರಿ, ಉಡುಪಿ, ಬೆಂಗಳೂರು, ಮೈಸೂರು, ಕಾಸರಗೋಡು ಭಾಗದಿಂದ ಒಟ್ಟು 200ಕ್ಕೂ ಅಧಿಕ ಪುರೋಹಿತರು ಆಗಮಿಸಿದ್ದಾರೆ.
ಇನ್ನು ಯಾಗದ ಬಗ್ಗೆ ಮಾತನಾಡಿದ ಯಾಗದ ಸೇವಾಕರ್ತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, “ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಯಾಗಿದ್ದು, ಅವರ ತತ್ವ ಆದರ್ಶಗಳ ಆರಾಧಕನಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವಭಯವಿರುವ ಕಾರಣ ಪಕ್ಷದ ಸಂಕಲ್ಪದಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸಹಕಾರ ಮತ್ತು ಆಶೀರ್ವಾದ ದಿಂದ ಬೆಳ್ತಂಗಡಿ ತಾಲೂಕಿನ ಜನರ ಪರವಾಗಿ ಮೃತ್ಯುಂಜಯ ಹೋಮ ಮಾಡಿದ್ದೇವೆ” ಅಂತಾ ಹೇಳಿದ್ದಾರೆ.
ವರದಿ: ಕಿಶನ್ ಕುಮಾರ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ