ಮಂಗಳೂರು, ಡಿ. 4: ರಸ್ತೆ ಬದಿಗಳಲ್ಲಿ ಕಸ ಎಸೆಯಬೇಡಿ ಅಂದ್ರೆ ಜನ ಕೇಳಲ್ಲ. ಸಿಸಿಟಿವಿ ಹಾಕಿದರೂ ಏನೂ ಪ್ರಯೋಜನವಾಗಲ್ಲ. ಎಷ್ಟೇ ಬ್ಯಾನರ್ ಹಾಕಿದರೂ ಎಚ್ಚರಿಕೆ ನೀಡಿದರೂ ಜನ ಮಾತ್ರ ಬದಲಾಗಲೇ ಇಲ್ಲ. ಹೀಗಾಗಿ ಜನರ ವರ್ತನೆಯಿಂದ ಬೇಸತ್ತು ಹೋದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ವೊಂದು ಹೊಸ ಐಡಿಯಾ ರೂಪಿಸಿತು. ಕಸ ಬಿಸಾಡುವವರ ಮಾಹಿತಿ ನೀಡಿ 500 ರೂಪಾಯಿ ಗೆಲ್ಲಿ ಎಂಬ ಹೊಸ ಆಫರ್ ಅನ್ನು ಗ್ರಾಮದ ಜನರಿಗೆ ನೀಡಿತು. ಇದು ವರ್ಕೌಟ್ ಆದಂತಿದೆ. ಪಂಚಾಯತ್ನ ಈ ನೂತನ ಆಫರ್ ಸಕ್ಸಸ್ ಆಗಿದ್ದು, ಬೇಕಾಬಿಟ್ಟಿ ಕಸ ಎಸೆಯೋದು ನಿಂತೇ ಹೋಗಿದೆ.
ಗ್ರಾಮೀಣ ಭಾಗದಲ್ಲಿ ರಸ್ತೆ ಬದಿ ಕಸ, ತ್ಯಾಜ್ಯ ಗಳನ್ನು ಎಸೆಯೋದು ಕಾಮನ್ ಆಗಿಬಿಟ್ಟಿದೆ. ನಮ್ಮನೆ ಕಸ ಇಲ್ದೇ ಕ್ಲೀನ್ ಆಗಿ ಇದ್ರೆ ಸಾಕು, ಹೊರಗಿನ ಸ್ಥಿತಿ ಹೇಗಿದ್ರೂ ತೊಂದ್ರೆ ಇಲ್ಲ ಅನ್ನೋರು ಕಸ ಎಸೆಯೋದು ರಸ್ತೆಯಲ್ಲೇ. ಆದ್ದರಿಂದ ಈ ಸ್ಥಿತಿಯನ್ನು ನಿಭಾಯಿಸೋದು ಕೂಡಾ ಸ್ಥಳೀಯಾಡಳಿತಕ್ಕೆ ತೊಂದರೆ ಆಗುತ್ತದೆ. ಈ ಹಿನ್ನಲೆಯಲ್ಲಿ ಮಂಗಳೂರಿನ ಕುಪ್ಪೆಪದವು ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯ ಗ್ರಾಮದ ಜನರಿಗೆ ಹೊಸ ಆಫರ್ ಅನ್ನು ನೀಡಿತ್ತು. ಈ ಆಫರ್ ಈಗ ಭರ್ಜರಿ ಯಶಸ್ಸನ್ನು ತಂದಿಟ್ಟಿದ್ದು, ರಸ್ತೆ ಬದಿ ಕಸ ಎಸೆಯುವವರ ಸಂಖ್ಯೆ ಕಡಿಮೆಯಾಗಿದೆ. ರಸ್ತೆ ಬದಿ ಕಸ ಎಸೆಯುವವರನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯತ್ ಅಧಿಕಾರಿಗಳು ಮಾಡಿದ ಉಪಾಯ ಫಲ ನೀಡಿದೆ.
ಅಕ್ಟೋಬರ್28ರಂದು ಗ್ರಾಮ ಪಂಚಾಯತ್ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿತ್ತು. ಕಸಎಸೆದವರ ಮಾಹಿತಿಯನ್ನು ನೀಡಿದರೆ 500ರೂಪಾಯಿ ಗೆಲ್ಲಬಹುದು. ಕಸ ಎಸೆದವರು 1000ರೂಪಾಯಿ ದಂಡ ಕಟ್ಟಬೇಕು ಎಂಬ ಖಡಕ್ ಆದೇಶವನ್ನು ಗ್ರಾಮಪಂಚಾಯತ್ನಲ್ಲಿ ಮಾಡಲಾಗಿತ್ತು.
ಕಸ ಎಸೆದವರ ಫೋಟೋ ಮತ್ತು ವಿಡಿಯೋ ಕಳುಹಿಸಿದರೆ 500ರೂಪಾಯಿ ಹಣ ಗೆಲ್ಲಬಹುದು ಎಂಬ ಆಫರ್ ಕೊಡಲಾಗಿದೆ. ಈ ಆಫರ್ ಕಸ ಎಸೆಯುವವರಲ್ಲಿ ಅಂಜಿಕೆ ಹುಟ್ಟಿಸಿದೆ. ಫೋಟೋ, ವಿಡಿಯೋ ಮಾಡಿ ಮರ್ಯಾದೆ ಹೋಗಬಹುದು ಎನ್ನುವ ಭಯದಿಂದ ಈಗ ಕಸ ಎಸೆಯುವವರ ಸಂಖ್ಯೆ ಕಡಿಮೆಯಾಗಿದೆ. ಗ್ರಾಮ ಪಂಚಾಯತ್ ಈ ಆದೇಶ ಸಕರಾತ್ಮಕ ಫಲಿತಾಂಶ ನೀಡಿದೆ. ಇದರ ಪರಿಣಾಮ ರಸ್ತೆ ಬದಿಗಳಲ್ಲಿ, ಖಾಲಿ ಸೈಟ್ ಗಳಲ್ಲಿ ಕಸ ಎಸೆಯೋದು ನಿಂತಿದೆ.
ಇದನ್ನೂ ಓದಿ: ಪ್ರೀತಿ ವಿರೋಧಿಸಿ ಯುವತಿಗೆ ಬಲವಂತದ ಮದುವೆ; ಕೆಆರ್ಎಸ್ ಹಿನ್ನೀರಿನಲ್ಲಿ ಪ್ರೇಮಿಯೊಂದಿಗೆ ಶವವಾಗಿ ಪತ್ತೆಯಾದ ನವವಧು
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಪ್ಪೆಪದವು ಗ್ರಾಮ ಪಂಚಾಯತ್ ಪಿಡಿಒ ಸವಿತಾ, ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಜನರು ಕಸದ ರಾಶಿಯನ್ನೇ ಸುರಿದು ಹೋಗುತ್ತಿದ್ದರು. ಈ ಪ್ರದೇಶಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ನೆರವಿನಿಂದ ಶುಚಿ ಮಾಡಿದ್ದೆವು. ಕಸ ವಿಲೇವಾರಿ ಮಾಡಿದ ಬಳಿಕವೂ ಜನ ಕಸ ಸುರಿಯಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಪಂಚಾಯತ್ನಲ್ಲಿ ಸಭೆ ಮಾಡಿ ಕಸ ಎಸೆದವರ ಮಾಹಿತಿ ನೀಡಿದರೆ 500 ರೂಪಾಯಿ ಹಣ ಗೆಲ್ಲುವ ಆಫರ್ ಅನ್ನು ಜನರಿಗೆ ನೀಡಿ ಆ ಬಗ್ಗೆ ಬೋರ್ಡ್ ಕೂಡಾ ಹಾಕಿದೆವು. ನಮ್ಮ ಈ ನಿರ್ಧಾರ ಈಗ ಫಲ ನೀಡಿದೆ. ಕಸ ಎಸೆಯುವವರ ಸಂಖ್ಯೆ ಬಹಳ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೈದು ಪ್ರದೇಶದಲ್ಲಿ ಜನ ರಾಶಿ ರಾಶಿ ಕಸವನ್ನು ಎಸೆಯುತ್ತಿದ್ದರು. ಆದರೆ ಈ ಆದೇಶದ ಬಳಿಕ ಆ ಜಾಗಗಳು ಸ್ವಚ್ಛವಾಗಿವೆ. ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡೋಕೂ ಅವಕಾಶ ಇಲ್ಲದಂತಾಗಿದೆ ಅಂತಾ ಪಿಡಿಒ ಸವಿತಾ ಖುಷಿ ವ್ಯಕ್ತಪಡಿಸಿದ್ದಾರೆ.
ವರದಿ: ಕಿಶನ್ ಕುಮಾರ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ