news18-kannada Updated:February 23, 2021, 7:42 AM IST
ಮಂಗಳೂರು ಕೇರಳ ಗಡಿ ಬಂದ್
ಮಂಗಳೂರು (ಫೆ. 23): ಕೇರಳ ಕರ್ನಾಟಕ ಗಡಿ ಮಂಗಳೂರಿನ ತಲಪಾಡಿಯಲ್ಲಿ ನಿನ್ನೆ ದೊಡ್ಡ ಹೈಡ್ರಾಮವೇ ನಡೆಯಿತು. ಕೊರೊನಾ ಕಾರಣದಿಂದ ಕೇರಳದಿಂದ ಮಂಗಳೂರು ಪ್ರವೇಶಕ್ಕೆ ನಿರ್ಬಂಧ ವಿಧಿಸಿರೋದನ್ನು ವಿರೋಧಿಸಿ ಗಡಿ ಭಾಗದ ಜನ ಕರ್ನಾಟಕದಿಂದ ಕೇರಳ ಪ್ರವೇಶಕ್ಕೂ ತಡೆಯೊಡ್ಡಿದರು. ಕೊನೆಗೂ ಕೇರಳ ಪೊಲೀಸರ ಸಂಧಾನಕ್ಕೆ ಮಣಿದ ಪ್ರತಿಭಟನಕಾರರು ಸಂಜೆಯೊಳಗೆ ಆದೇಶ ರದ್ದುಗೊಳಿಸುವಂತೆ ಗಡುವು ನೀಡಿದರು.
ಕೇರಳದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಕಾಸರಗೋಡಿನಿಂದ ಮಂಗಳೂರು ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೇರಳದಿಂದ ಮಂಗಳೂರಿಗೆ ಎಂಟ್ರಿಯಾಗುವ 12 ಗಡಿಯಲ್ಲಿ 8 ಗಡಿ ಬಂದ್ ಮಾಡಿ 4 ಗಡಿಯಲ್ಲಿ ಮಾತ್ರ ಪ್ರವೇಶಕ್ಕೆ ಅನುಮತಿ ಕಲ್ಪಿಸಲಾಗಿದೆ. ಆದರೆ ಇಲ್ಲಿಯೂ ಪ್ರವೇಶ ಸಂದರ್ಭ 72 ಗಂಟೆ ಮೊದಲು ಮಾಡಿದ ಕೋವಿಡ್ ಟೆಸ್ಟ್ನ ನೆಗೆಟಿವ್ ರಿಪೋರ್ಟ್ ಸಲ್ಲಿಸಿದ ಬಳಿಕ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಈ ತಪಾಸಣೆ ಆರಂಭವಾಗಿದ್ದು, ಇದಕ್ಕೆ ಗಡಿನಾಡು ಭಾಗದ ಕಾಸರಗೋಡಿನ ಜನ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು. ಜಿಲ್ಲಾಡಳಿತದ ನಿರ್ಧಾರ ಸರಿಯಿಲ್ಲ ಎಂದು ಮಂಗಳೂರಿನಿಂದ ಕೇರಳಕ್ಕೆ ತೆರಳುವ ವಾಹನಗಳಿಗೆ ತಡೆಯೊಡ್ಡಿ ಪ್ರತಿಭಟಿಸಿದರು.
ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಾರೆ. ನಿತ್ಯ ಪ್ರಯಾಣಿಸುವವರಿಗೆ 15 ದಿನಕ್ಕೊಮ್ಮೆ ಕೋವಿಡ್ ನೆಗೆಟಿವ್ ವರದಿಯನ್ನು ಚೆಕ್ಪೋಸ್ಟ್ನಲ್ಲಿ ಸಲ್ಲಿಸಿ ಪ್ರವೇಶಕ್ಕೆ ಅವಕಾಶವನ್ನು ಸಹ ಕಲ್ಪಿಸಲಾಗಿದೆ. ಇದರ ಜೊತೆ ಕೋವಿಡ್ ಟೆಸ್ಟ್ ನಡೆಸುವುದಕ್ಕೆ ಗಡಿಯಲ್ಲಿಯೇ ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡವಿದ್ದು, ಟೆಸ್ಟ್ ಸಹ ನಡೆಸಲಾಗುತ್ತಿದೆ. ಆದರೆ ಈ ನಿರ್ಧಾರ ಸರಿಯಲ್ಲ ಎಂಬುದು ಕೇರಳಿಗರ ವಾದ. ರಸ್ತೆ ತಡೆ ನಡೆಸುತ್ತಿದಂತೆ ಸ್ಥಳಕ್ಕೆ ಕೇರಳ ಪೊಲೀಸರು ಆಗಮಿಸಿದರು. ಕೊನೆಗೂ ಸಂಧಾನದ ಬಳಿಕ ಸಂಜೆಯೊಳಗೆ ನಿರ್ಧಾರ ಬದಲಿಸುವಂತೆ ಪ್ರತಿಭಟನಕಾರರು ಗಡುವು ನೀಡಿದರು. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ನೆರೆಯ ಕೇರಳ ಗಡಿಭಾಗದ ಜನ ಪ್ರತಿಯೊಂದು ಕಾರಣಕ್ಕೂ ಆಶ್ರಯಿಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ವ್ಯವಹಾರಿಕ, ವೈಯಕ್ತಿಕ ವಿಚಾರಕ್ಕೂ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಗಡಿಭಾಗದ ಜನರು ಅವಲಂಬಿಸಿದ್ದಾರೆ. ಕೆಲವು ಕಡೆಗಳಲ್ಲಿ ರಸ್ತೆಗೆ ಮಣ್ಣು ಹಾಕಿ ಇಡೀ ರಸ್ತೆ ಸಾರಿಗೆ ಸಂಪರ್ಕವನ್ನೇ ಕಡಿತಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಜನರೂ ಹೈರಾಣಾಗಿದ್ದಾರೆ. ಯಾರದೋ ತಪ್ಪಿಗೆ ಅನ್ಯಾಯವಾಗಿ ಅಮಾಯಕರು ಶಿಕ್ಷೆ ಅನುಭವಿಸಬೇಕೆಂದು ಅವಲತ್ತುಕೊಂಡಿದ್ದಾರೆ. ಮಂಗಳೂರು ಜಿಲ್ಲಾಧಿಕಾರಿಗಳು ವಾಸ್ತವ ಸ್ಥಿತಿಯನ್ಜು ಅರಿತು ಆದೇಶಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ಕೋವಿಡ್ ಟೆಸ್ಟ್ ಗಾಗಿ ಬಿಸಿಲಿನಲ್ಲಿ ನಿಲ್ಲುವ ಅನಿವಾರ್ಯತೆಯೂ ಜನರಿಗೆ ಬಂದಿದೆ.
ಇನ್ನು ತಲಪಾಡಿಯ ತಡೆ ಸಂದರ್ಭ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸದ್ಯ ಕೊರೊನಾ ನಿಯಂತ್ರಣಕ್ಕಾಗಿ ದಕ್ಷಿಣಕನ್ನಡ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದ್ದರೂ ಅನುಷ್ಠಾನ ಎಷ್ಟು ಪರಿಪೂರ್ಣವಾಗಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.
Published by:
Sushma Chakre
First published:
February 23, 2021, 7:42 AM IST