ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಬುಧವಾರ (06/07/2022) ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೋಮವಾರದಿಂದ ಆರಂಭವಾದ ಧಾರಾಕಾರ ಮಳೆ ಎಡೆಬಿಡದೇ ಮುಂದುವರೆದಿದೆ. ಹೀಗಾಗಿ ಸತತ ಎರಡನೇ ದಿನವೂ ಜಿಲ್ಲಾಡಳಿತವು ರಜೆ ಘೋಷಿಸಿ ಆದೇಶಿಸಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ (Dakshina Kannada Rains) ಜಿಲ್ಲೆಗಳಾದ್ಯಂತ ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಶಾಲಾ ಕಾಲೇಜಿಗೆ ರಜೆ
ಭಾರೀ ಗಾಳಿ ಸಹಿತ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಎಲ್ಲ ಶಾಲಾ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ. ರಜೆ ಘೋಷಿಸಿದ್ದಾರೆ.
ಕಂಟ್ರೋಲ್ ರೂಂ ಸಂಖ್ಯೆ
ಯಾವುದೇ ತುರ್ತು ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಜನತೆ ತುರ್ತು ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸಾರ್ವಜನಿಕರು ತುರ್ತು ಸಹಾಯವಾಣಿ ಸಂಖ್ಯೆ 1077 ಹಾಗೂ 0820-2574802 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: Kittur Rani Chennamma Zoo: ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಹುಲಿ ಸಫಾರಿ! ವಿಡಿಯೋ ನೋಡಿ
ಕರಾವಳಿಯಾದ್ಯಂತ ಜುಲೈ 7ರ ವರೆಗೆ ಭಾರೀ ಮಳೆ ನಿರೀಕ್ಷಿಸಲಾಗಿದೆ. ಸಮುದ್ರ, ನದಿ, ಕೆರೆಗಳಿಗೆ ಇಳಿಯದಂತೆ ಆಯಾಯ ಜಿಲ್ಲಾಡಳಿತವು ಎಚ್ಚರಿಸಿದೆ. ಉಡುಪಿ ಜಿಲ್ಲೆಯ ಸೀತಾನದಿ ಉಕ್ಕಿ ಹರಿಯುತ್ತಿದ್ದು ಅಪಾಯ ಮಟ್ಟ ಮೀರುವ ಆತಂಕ ಎದುರಾಗಿದೆ. ಕೊಲ್ಲೂರು, ಹೆಬ್ರಿ, ಕಾರ್ಕಳ, ಕಾಪು, ಉಡುಪಿ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ಹಾನಿಯೂ ಸಂಭವಿಸಿದೆ.
ಇದನ್ನೂ ಓದಿ: Belagavi Police Museum: ಬೆಳಗಾವಿ ಪೊಲೀಸ್ ಮ್ಯೂಸಿಯಂ ನೋಡಿದ್ದೀರಾ? ವಿಡಿಯೋ ನೋಡಿ!
ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ
ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ‘ಆರೆಂಜ್ ಅಲರ್ಟ್‘ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ ಇಲಾಖಾ ಅಧಿಕಾರಿಗಳಿಗೆ ಒಂದಿಷ್ಟು ಸೂಚನೆಗಳನ್ನು ಜಿಲ್ಲಾಡಳಿತವು ರವಾನಿಸಿದೆ.
1. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ಹಾಗೂ ಸಮುದ್ರ ತೀರ ಪ್ರದೇಶಗಳಿಗೆ ಮಕ್ಕಳು ತೆರಳದಂತೆ ಪಾಲಕರು ಮುಂಜಾಗರೂಕತೆ ವಹಿಸಬೇಕು.
2. ಮೀನುಗಾರರು ಕೂಡಾ ಸಮುದ್ರಕ್ಕೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ
3. ಸಾರ್ವಜನಿಕರು, ಪ್ರವಾಸಿಗರು ನದಿ, ಸಮುದ್ರ ಪ್ರದೇಶಗಳಿಗೆ ತೆರಳದಂತೆ ಸೂಚನೆ
ಅಧಿಕಾರಿಗಳಿಗೆ ಸೂಚನೆ
1. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣೆಯನ್ನು ಚಾಚೂ ತಪ್ಪದೇ ಪಾಲಿಸುವುದು.
2. ಜಿಲ್ಲಾಡಳಿತವು ನೇಮಿಸಿರುವಂತಹ ನೋಡಲ್ ಅಧಿಕಾರಿಗಳು, ಆಯಾಯ ಪ್ರದೇಶಗಳಲ್ಲಿದ್ದು ಸಾರ್ವಜನಿಕರ ದೂರಿಗೆ ಸ್ಪಂದಿಸುವುದು ಹಾಗೂ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ ಜೊತೆ ನಿಯಂತ್ರಣ ಸಂಪರ್ಕದಲ್ಲಿರುವುದು.
3. ಸಂಬಂಧ ಪಟ್ಟ ಅಧಿಕಾರಿಗಳು ಪ್ರತಿ ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿಡುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ