Karnataka Coronavirus: ಲಾಕ್​ಡೌನ್ ಹಿನ್ನೆಲೆ; ಕರ್ನಾಟಕ ಸರ್ಕಾರದಿಂದ ಅರ್ಚಕ ವೃಂದಕ್ಕೆ ಆಹಾರ ಕಿಟ್ 

ಅರ್ಚಕ ವರ್ಗಕ್ಕೆ ಮುಂಗಡ 33.5 ಕೋಟಿ ರೂ. ತಸ್ತಿಕ್ ಮತ್ತು  4.5 ಕೋಟಿ ರೂ. ವರ್ಷಾಸನವನ್ನು ಮುಂಗಡವಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಕೋಟಾ ಶ್ರೀನಿವಾಸ ಪೂಜಾರಿ

ಕೋಟಾ ಶ್ರೀನಿವಾಸ ಪೂಜಾರಿ

  • Share this:
ಮಂಗಳೂರು (ಮೇ 22): ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 1,250 ಕೋಟಿ ರೂ. ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅಸಂಘಟಿತ ಶ್ರಮಿಕ ವರ್ಗಕ್ಕೆ ನೆರವಾಗುವ ಹಿನ್ನಲೆಯಲ್ಲಿ ಸರ್ಕಾರ ಈ ಪ್ಯಾಕೇಜ್ ಘೋಷಣೆ ಮಾಡಿದ್ದು,ಇದೀಗ ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ಅರ್ಚಕರಿಗೂ ಸರ್ಕಾರ ನೆರವಿನ ಹಸ್ತ ಚಾಚಿದೆ. ಅರ್ಚಕ ವರ್ಗಕ್ಕೆ ಮುಂಗಡ 33.5 ಕೋಟಿ ರೂ. ತಸ್ತಿಕ್ ಮತ್ತು  4.5 ಕೋಟಿ ರೂ. ವರ್ಷಾಸನವನ್ನು ಮುಂಗಡವಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಏಪ್ರಿಲ್ 21 ರಂದೇ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ್ದು, ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ಅರ್ಚಕ ವರ್ಗಕ್ಕೂ ಇದರಿಂದ ತುಂಬಾ ನಷ್ಟವಾಗಿತ್ತು. ದೇವಸ್ಥಾನಗಳಲ್ಲಿ ಸಲ್ಲುವ ತ್ರಿಕಾಲ ಪೂಜೆಗೂ ಭಕ್ತ ರಹಿತವಾಗಿ ಮಾಡಲು ಧಾರ್ಮಿಕ ದತ್ತಿ ಇಲಾಖೆ ಸೂಚಿಸಿತ್ತು. ರಾಜ್ಯದ ಎ ಮತ್ತು  ಬಿ ದರ್ಜೆಯ ದೇವಸ್ಥಾನ ಗಳಲ್ಲಿ ಪ್ರತಿನಿತ್ಯ ಅನ್ನ ದಾಸೋಹ ನಡೆಯುವ ಸಲುವಾಗಿ ಸಂಗ್ರಹಿಸಲ್ಪಟ್ಟಿದ್ದ ಆಹಾರ ಸಾಮಗ್ರಿಗಳನ್ನು ಕಿಟ್ ರೂಪದಲ್ಲಿ ವಿತರಿಸುವಂತೆ ಇದೀಗ ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಿ ದರ್ಜೆಯ ದೇವಸ್ಥಾನ ದ ಅರ್ಚಕರಿಗೆ ದೇವಸ್ಥಾನಗಳಲ್ಲಿ ಸಂಗ್ರಹಿಸಲಾದ ಅಕ್ಕಿ ಮತ್ತು ದವಸ ಧಾನ್ಯಗಳನ್ನು ನೀಡುವಂತೆ ಸರ್ಕಾರ ಆದೇಶಿಸಿದೆ. ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಲಾದ ಆಹಾರ ಸಾಮಗ್ರಿಗಳು ಹಾಳಾಗುವ ಸಾಧ್ಯತೆಗಳು ಇರುವುದರಿಂದ ಅರ್ಚಕ ವೃಂದ ಮತ್ತು ಸಾರ್ವಜನಿಕರಿಗೆ ವಿತರಿಸುವಂತೆ ಸೂಚಿಸಲಾಗಿದೆ.

ಸಿ ದರ್ಜೆಯ ದೇವಸ್ಥಾನಗಳಲ್ಲಿ ದುಡಿಯುವ ಅರ್ಚಕ ಮತ್ತು ದೇವಳದ ಸಿಬ್ಬಂದಿ ವರ್ಗಕ್ಕೆ ಈ ಆಹಾರ ಸಾಮಗ್ರಿಗಳನ್ನು ನೀಡಬೇಕು. ಸಾಲದಿದ್ದಲ್ಲಿ ದೇವಳದ ಆದಾಯದ ನಿಧಿಯಿಂದ ವೆಚ್ಚ ಭರಿಸಿ ಆಹಾರ ಕಿಟ್ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಸರ್ಕಾರದ ಈ ನಿರ್ಧಾರದಿಂದ‌ 50 ಸಾವಿರಕ್ಕೂ ಹೆಚ್ಚು ಅರ್ಚಕರಿಗೆ ಆಹಾರ ಸಾಮಗ್ರಿ ಕಿಟ್ ದೊರೆಯಲಿದೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅರ್ಚಕರಿಗೆ ಆಹಾರ ಕಿಟ್ ನೀಡುವಂತೆ ಮನವಿ ಮಾಡಿದ್ದರು.

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಬುಧವಾರ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿತ್ತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಹೂವು ಬೆಳೆಗಾರರು, ಬೀದಿ ಬದಿ ವ್ಯಾಪಾರಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ವಿಶೇಷ ಪ್ಯಾಕೇಜ್ ಅಡಿ ಸಹಾಯಧನ ಘೋಷಿಸಿದ್ದರು. ಸರ್ಕಾರ ಘೋಷಣೆ ಮಾಡಿದ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನಿಂದಾಗಿ ಸುಮಾರು 30 ಲಕ್ಷ ಫಲಾನುಭವಿಗಳಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದರು.
Published by:Sushma Chakre
First published: