• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಜೇನು ಸಾಕಣೆಯಲ್ಲಿ ಯಶಸ್ವಿಯಾದ ದಕ್ಷಿಣಕನ್ನಡದ ಕೃಷಿಕ: ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ಪಡೆದ ಸಾಧಕ

ಜೇನು ಸಾಕಣೆಯಲ್ಲಿ ಯಶಸ್ವಿಯಾದ ದಕ್ಷಿಣಕನ್ನಡದ ಕೃಷಿಕ: ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ಪಡೆದ ಸಾಧಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Organic Honey Farming: ಹಲವು ಸಮಸ್ಯೆಗಳಿಂದಾಗಿ ಬೆಳೆದ ಬೆಳೆಗೆ ಸಂಕಷ್ಟ ಬಂದಾಗ ಈ ಜೇನುಗಳು ಆ ಕುಟುಂಬಗಳಿಗೆ ಸಿಹಿಯನ್ನು ನೀಡಿದೆ ಎನ್ನುವುದು ಕುಮಾರ್ ಪೆರ್ನಾಜೆಯವರ  ವಿಶ್ವಾಸದ ನುಡಿ

  • Share this:

ಹೆಚ್ಚು ಹೆಚ್ಚು ಬಂಡವಾಳವನ್ನು ಹಾಕಿ ಕೃಷಿ ಮಾಡಿ ಹೆಚ್ಚು ಆದಾಯವನ್ನು ಗಳಿಸಬಹುದು ಎನ್ನುವ ಮನಸ್ಥಿತಿಯಿರುವ ಕೃಷಿಕರಿಗೆ, ಕಡಿಮೆ ಬಂಡವಾಳವನ್ನು ಹಾಕಿ ಹೆಚ್ಚಿನ ಆದಾಯವನ್ನು ಗಳಿಸಿ ನಮ್ಮದಿಯ ಜೀವನ ಸಾಧ್ಯ ಎನ್ನುವುದನ್ನೂ ತಿಳಿಯಬೇಕಿದೆ. ಇಂಥಹ ಕೃಷಿಯಲ್ಲಿ ಜೇನು ಸಾಕಾಣಿಕೆಯೂ ಒಂದು. ಅತ್ಯುನ್ನತ ಔಷಧೀಯ ಗುಣವುಳ್ಳ ಜೇನುತುಪ್ಪಕ್ಕೆ (Honey) ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆಯಿದ್ದು, ಹೆಚ್ಚು ಹೆಚ್ಚು ಜನ ಇದೀಗ ಜೇನು ಸಾಕಾಣಿಕೆಯತ್ತ ವಾಲುತ್ತಿದ್ದಾರೆ.


ದಕ್ಷಿಣಕನ್ನಡ ಜಿಲ್ಲೆಯ (Mangaluru district) ಪುತ್ತೂರು ತಾಲೂಕಿನ ಪೆರ್ನಾಜೆಯಲ್ಲೂ ಇಂಥಹುದೇ ಒಬ್ಬ ಜೇನು ಬೆಳೆಗಾರ ಮಹಿಳೆಯಿದ್ದು, ಜೇನು ಸಾಕಾಣಿಕೆಯೊಂದರಲ್ಲೇ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯವನ್ನು ಪಡೆಯುತ್ತಿದ್ದಾರೆ. ಅತ್ಯುನ್ನತ ಔಷಧೀಯ ಗುಣವುಳ್ಳಂತಹ ಜೇನಿಗೆ ಇದೀಗ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಮನುಷ್ಯನ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಿರುವ ಜೇನನ್ನು ಔಷಧಿಯಾಗಿ, ಸಿಹಿಗಾಗಿ ಹೀಗೆ ವಿವಿಧ ಪ್ರಕಾರಗಳಲ್ಲಿ ಬಳಸಲಾಗುತ್ತಿದೆ. ಜೇನಿಗೆ ಸಿಗುತ್ತಿರುವ ಈ ರೀತಿಯ ಬೇಡಿಕೆಯಿಂದಾಗಿಯೇ ಇಂದು ಹೆಚ್ಚಿನ ಕೃಷಿಕರು ಜೇನು ಸಾಕಾಣಿಕೆಯನ್ನು ತನ್ನ ಕೃಷಿ ಆದಾಯದ ಒಂದು ಮೂಲವನ್ನಾಗಿಯೂ ನೆಚ್ಚಿಕೊಂಡಿದ್ದಾರೆ.


ಹೆಚ್ಚು ಬಂಡವಾಳವನ್ನು ಹಾಕಿದರೆ ಮಾತ್ರವೇ ಹೆಚ್ಚಿನ ಆದಾಯ ಸಾಧ್ಯ ಎಂದು ತಿಳಿದವರಿಗೆ ವ್ಯತಿರಿಕ್ತವಾಗಿ ಕಡಿಮೆ ಬಂಡವಾಳವನ್ನು ಹಾಕಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಎನ್ನುವುದನ್ನು ಜೇನು ಸಾಕಾಣಿಕೆ (Honey Farming) ಕೃಷಿ ತೋರಿಸಿಕೊಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನಾಜೆ ನಿವಾಸಿ ಕುಮಾರ ಪೆರ್ನಾಜೆ ಜೇನು ಸಾಕಾಣೆಯಲ್ಲಿ ಯಶಸ್ವಿ ಗಳಿಸಿದ ಒರ್ವ ಕೃಷಿಕ.ತಮ್ಮ ತೋಟ ಹಾಗೂ ಮನೆಯಲ್ಲಿ ಪೆಟ್ಟಿಗೆ ಜೇನು ಹಾಗೂ ಕೋಲ್ಜೇನನ್ನು ಬೆಳೆಸಿ, ಉತೃಷ್ಟ ಗುಣಮಟ್ಟದ ಜೇನನ್ನು ಪಡೆಯುತ್ತಿದ್ದಾರೆ.


ಕುಮಾರ್ ಪೆರ್ನಾಜೆಯ ಪ್ರಕಾರ ಜೇನು ಸಾಕಾಣಿಕೆಗೆ ಕೃಷಿಕ ಹೆಚ್ಚಿನ ಬಂಡವಾಳವನ್ನು ಹೂಡುವ ಅಗತ್ಯವಿಲ್ಲ. ಅವರ ಪ್ರಕಾರ ಜೇನು ಸಾಕಾಣಿಕೆಗೆ ಹೂಡಬೇಕಾಗಿರುವ ಬಂಡವಾಳ ಕೇವಲ ಜೇನು ಪೆಟ್ಟಿಗೆ ಹಾಗೂ ಜೇನು ಸಂಸ್ಕರಿಸುವ ಯಂತ್ರಕ್ಕೆ ಮಾತ್ರ ಸೀಮಿತವಾಗಿದೆ. ಜೇನು ಸಾಕಾಣಿಕೆಯ ಒಂದು ಪೆಟ್ಟಿಗೆ ಸಾಮಾನ್ಯವಾಗಿ ಪ್ರಸುತ ಮಾರುಕಟ್ಟೆಯಲ್ಲಿ 2000 ದಿಂದ 2500 ಸಾವಿರ ರೂಪಾಯಿ ಆಸುಪಾಸಿನಲ್ಲಿ ದೊರೆಯುತ್ತಿದ್ದು, ಸಂಸ್ಕರಣೆಯ ಯಂತ್ರಕ್ಕೆ ಸುಮಾರು 3000  ರೂಪಾಯಿಷ್ಟಿದೆ. ಜೇನು ಸಾಕಾಣಿಕೆಯನ್ನು ಎಲ್ಲಿ ಬೇಕಾದರೂ ಮಾಡಲು ಸಾಧ್ಯವಿದ್ದು, ಇದಕ್ಕೆ ಇಂಥದ್ದೇ ನಿರ್ದಿಷ್ಟವಾದ ಜಾಗ ಬೇಕೆಂಬ ನಿಯಮವಿಲ್ಲ. ತೋಟದ ಮಧ್ಯೆ, ಮನೆಯಂಗಳದಲ್ಲಿ ಹೀಗೆ ಎಲ್ಲಿ ಬೇಕಾದರೂ ಜೇನನ್ನು ಸಾಕಬಹುದಾಗಿದ್ದು, ಒಂದು ಜೇನು ಪೆಟ್ಟಿಗೆಯ ಅಂತರ ಇನ್ನೊಂದರಿಂದ ಸುಮಾರು 7 ಮೀಟರ್ ನಷ್ಟು ಅಂತರದಲ್ಲಿರುವಂತೆ ನೋಡಿಕೊಳ್ಳಬೇಕು ಎನ್ನುವುದು ಪೆರ್ನಾಜೆಯವರು ಹತ್ತು ಹಲವು ವರ್ಷಗಳ ಅನುಭವದ ನುಡಿ.


ಇದನ್ನೂ ಓದಿ: ಕಡಿಮೆ ಜಾಗದಲ್ಲಿ ಬೆಳೆದು ನಿಂತಿದೆ ದಟ್ಟ ಕಾಡು.. ಮೆಸ್ಕಾಂ ಲೈನ್​​ಮ್ಯಾನ್​​ ಪರಿಸರ ಪ್ರೇಮ


ಪ್ರತೀ ಜೇನು ಪೆಟ್ಟಿಗೆಯಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಜೇನನ್ನು ಸಂಗ್ರಹಿಸಬಹುದಾಗಿದೆ. ಕಾಡು ಹಾಗೂ ಮರಗಳು ಹೆಚ್ಚಿದ್ದ ಕಡೆಗಳಲ್ಲಿ ಜೇನನ್ನು ಹೆಚ್ಚು ಸಂಗ್ರಹಿಸಬಹುದಾಗಿದ್ದು, ಇಂಥ ಕಡೆಗಳಲ್ಲಿ ವಾರಕ್ಕೊಮ್ಮೆ ಜೇನನ್ನು ಪಡೆಯಲೂ ಸಾಧ್ಯವಿದೆ ಎನ್ನುವ ಪೆರ್ನಾಜೆಯವರಿಗೆ ಜೇನನ್ನು ಯಾವ ಕಾಲದಲ್ಲಿ ಹೇಗೆ ಪಡೆಯಬಹುದು ಎನ್ನುವುದರ ಬಗ್ಗೆಯೂ ಹೆಚ್ಚಿನ ಮಾಹಿತಿಯಿದೆ. ಕುಮಾರ್ ಪೆರ್ನಾಜೆ ಹೇಳುವ ಪ್ರಕಾರ ಬೇಸಿಗೆಯ ಎಲ್ಲಾ ತಿಂಗಳಿನಲ್ಲೂ ಜೇನು ಗೂಡಿನಿಂದ ಜೇನನ್ನು ಪಡೆಯಲು ಸಾಧ್ಯವಿದ್ದು, ಮಳೆಗಾಲದಲ್ಲಿ ಮಾತ್ರ ಪೆಟ್ಟಿಗೆಯಲ್ಲಿ ಜೇನಿನ ಸಂಗ್ರಹ ಕಷ್ಟ ಸಾಧ್ಯ. ಮಳೆಗಾಲದಲ್ಲಿ ಹೂವುಗಳಲ್ಲಿ ಮಕರಂದ ಸಿಗದೆ,ಹಾಗೂ ಮಳೆಗೆ ಹಾರಲು ಸಾಧ್ಯವಾಗದೆ ಜೇನು ನೊಣಗಳೆಲ್ಲಾ ಜೇನು ಪೆಟ್ಟಿಗೆಯಲ್ಲೇ ವಿಶ್ರಾಂತಿ ಪಡೆಯುವುದರಿಂದಾಗಿ ಮಳೆಗಾಲದಲ್ಲಿ ಜೇನು ಸಂಗ್ರಹವನ್ನು ಮಾಡದಿರುವುದೇ ಒಳಿತು.


ಇದನ್ನೂ ಓದಿ: ಶಾಲೆಯ ಆವರಣದಲ್ಲಿ ಗಿಡ-ಮರಗಳನ್ನು ನೆಟ್ಟು ನಂದನವನ ಮಾಡಿದ ವಿದ್ಯಾರ್ಥಿಗಳು


ಇದೇ ಸಂದರ್ಭದಲ್ಲಿ ಜೇನುಗಳ ಸಂತಾನೋತ್ಪತ್ತಿ ಕಾರ್ಯವೂ ನಡೆಯುತ್ತದೆ. ಇಂಥ ಸಮಯದಲ್ಲಿ ಜೇನು ಪೆಟ್ಟಿಗೆಯಲ್ಲಿ ರಾಣಿ ಜೇನು ಒಂದಕ್ಕಿಂತ ಜಾಸ್ತಿ ಕಂಡು ಬಂದಲ್ಲಿ , ಅವುಗಳನ್ನು ಬೇರೆ ಪೆಟ್ಟಿಗೆಗಳಿಗೆ  ಸ್ಥಳಾಂತರಿಸುವ ಮೂಲಕ ಮತ್ತೆ ಪ್ರತ್ಯೇಕ ಜೇನು ಕುಟುಂಬಕ್ಕೆ ವ್ಯವಸ್ಥೆಯನ್ನೂ  ಮಾಡಬೇಕಾಗುತ್ತದೆ ಎನ್ನುವುದು ಪೆರ್ನಾಜೆಯವರ ಅನುಭವದ ನುಡಿ. ಪೆರ್ನಾಜೆಯವರು ತಮ್ಮ ಮನೆಯಲ್ಲಿರುವ 35  ಜೇನು ಪೆಟ್ಟಿಗೆಯಲ್ಲಿ ವರ್ಷಕ್ಕೆ ಒಂದರಿಂದ ಒಂದೂವರೆ ಕ್ವಿಂಟಾಲ್ ನಷ್ಟು ಜೇನು ಪಡೆಯುತ್ತಿದ್ದಾರೆ. ಇವರು ಸಂಗ್ರಹಿಸುವ ಜೇನಿಗೆ ಭಾರೀ ಬೇಡಿಕೆಯೂ ಇದ್ದು, ದೂರದೂರುಗಳಿಂದಲೂ ಇವರಲ್ಲಿಗೆ ಬಂದು ಜೇನು ಸಂಗ್ರಹಿಸುವವರಿದ್ದಾರೆ. ವಿದೇಶಗಳಿಗೂ ಇವರಲ್ಲಿಂದ ಈಗಲೂ ಜೇನನ್ನು ಕೊಂಡೊಯ್ಯುವವರಿದ್ದು, ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ.


ಇದನ್ನೂ ಓದಿ: ಗುಬ್ಬಚ್ಚಿಗಳಿಗಾಗಿ ಮನೆ ಮೀಸಲಿಟ್ಟ ಪಕ್ಷಿ ಪ್ರೇಮಿ; ಪರಿಸರ ಪ್ರೇಮಿಯ ಬಗ್ಗೆ ತಿಳಿಯಲೇಬೇಕು


ಜೇನು ಸಂಗ್ರಹಿಸಲು ಪ್ರತ್ಯೇಕ ಕಾರ್ಮಿಕನ ಅವಶ್ಯಕತೆಯೂ ಇಲ್ಲದ ಕಾರಣ ಪೆರ್ನಾಜೆಯವರ ಮನೆ ಮಂದಿಯೇ ತನ್ನ ಸಮಯಕ್ಕೆ ತಕ್ಕಂತೆ ಜೇನು ಸಂಗ್ರಹಿಸುತ್ತಾರೆ. ಕೇವಲ ಪುರುಷರಲ್ಲದೆ, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರೂ ಈ ಜೇನು ಸಾಕಾಣೆಯನ್ನು ಮಾಡಬಹುದಾಗಿದ್ದು, ತಮ್ಮ ಅಗತ್ಯಕ್ಕೆ ತಕ್ಕಂತೆ ಆದಾಯವನ್ನೂ ಈ ಜೇನು ಸಾಕಾಣಿಕೆಯ ಮೂಲಕ ಪಡೆಯಬಹುದಾಗಿದೆ. ಜೇನು ನೊಣಗಳ ಸಂತಾನೋತ್ಪತ್ತಿಯಾದ ಬಳಿಕ ಅದರ ಕುಟುಂಬವನ್ನು ಬೇರ್ಪಡಿಸಿ ಅವುಗಳನ್ನು ಇತರರಿಗೆ ಮಾರುವುದರಿಂದಲೂ ಹಣ ಗಳಿಸಬಹುದು.


ಹಲವು ಸಮಸ್ಯೆಗಳಿಂದಾಗಿ ಬೆಳೆದ ಬೆಳೆಗೆ ಸಂಕಷ್ಟ ಬಂದಾಗ ಈ ಜೇನುಗಳು ಆ ಕುಟುಂಬಗಳಿಗೆ ಸಿಹಿಯನ್ನು ನೀಡಿದೆ ಎನ್ನುವುದು ಕುಮಾರ್ ಪೆರ್ನಾಜೆಯವರ  ವಿಶ್ವಾಸದ ನುಡಿಯೂ ಆಗಿದೆ.

Published by:Sharath Sharma Kalagaru
First published: