ಎರಡು ತೆಂಗಿನಕಾಯಿ ಹರಕೆ; ಕೇಳಿದ ಬೇಡಿಕೆ ಈಡೇರಿಸುವ ಹರಿಹರ ಪಳ್ಳತ್ತಡ್ಕದ ಹರಿಹರೇಶ್ವರ

ಅತ್ಯಂತ ಪುರಾತನವಾದ ಈ ದೇವಸ್ಥಾನ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೂ ಸಮೀಪದಲ್ಲೇ ಇದ್ದು, ಪ್ರತಿದಿನವೂ ಇಲ್ಲಿ ಪೂಜೆ ಪುನಸ್ಕಾರಗಳು ನಿರಂತರ ನಡೆದುಕೊಂಡು ಬರುತ್ತಿದೆ.

ಹರಿಹರೇಶ್ವರ

ಹರಿಹರೇಶ್ವರ

  • Share this:
ಪುತ್ತೂರು (ಸೆ. 18):  ವಿಶಿಷ್ಟವಾದ ಆರಾಧನಾ ಪದ್ಧತಿಯನ್ನು ಹೊಂದಿರುವ ಕರಾವಳಿ ಭಾಗದಲ್ಲಿ ಜನ ಪ್ರಕೃತಿಯಲ್ಲೇ ದೇವರನ್ನು ಕಾಣುವವರು. ಪ್ರಕೃತಿಯ ಎಲ್ಲಾ ಆಗು-ಹೋಗುಗಳನ್ನು ನಿಯಂತ್ರಿಸುವ ಶಕ್ತಿಯನ್ನು ಇಲ್ಲಿನ ಜನ ದೇವರು, ದೈವಗಳು ಎನ್ನುವ ರೂಪದಲ್ಲಿ ಆರಾಧಿಸಿಕೊಂಡು ಬರುತ್ತಿದ್ದಾರೆ.ನಂಬಿಕೆಯ ನೆಲೆಯಲ್ಲೇ ಆಸ್ತಿಕರ ಬದುಕು ರೂಪುಗೊಂಡಿದ್ದು, ಇದೇ ನಂಬಿಕೆಯ ಆಧಾರದಲ್ಲೇ ಕೋಟ್ಯಾಂತರ ದೇವ ದೇವತೆಗಳನ್ನು ಗುಡಿಯಲ್ಲಿ ಸ್ಥಾಪಿಸಿ ಆನಾದಿಕಾಲದಿಂದಲೂ ಪೂಜಿಸಿಕೊಂಡು ಬರುತ್ತಿರುವುದು ಇವರ ಧಾರ್ಮಿಕ ಶ್ರದ್ಧೆಗೊಂದು ನಿದರ್ಶನವೂ ಆಗಿದೆ. ಇಂಥಹುದೇ ಒಂದು ಭಕ್ತರ ನಂಬಿಕೆಯ ಶ್ರದ್ಧಾಕೇಂದ್ರ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಗ್ರಾಮವಾಗಿರುವ ಹರಿಹರಪಳ್ಳತ್ತಡ್ಕದಲ್ಲಿದೆ. ಇಲ್ಲಿನ ಹರಿಹರೇಶ್ವರನಿಗೆ ಭಕ್ತ ಬಯಸಿದರೆ ಪ್ರಕೃತಿಯ ಪ್ರಕ್ರಿಯೆಗಳನ್ನೇ ನಿಯಂತ್ರಿಸುವ ಶಕ್ತಿಯಿದೆ ಎನ್ನುವ ಬಲವಾದ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರಪಳ್ಳತ್ತಡ್ಕ ಎನ್ನುವ ಹಸಿರು ಹೊದಿಕೆಯಂತಿರುವ ಪಶ್ಚಿಮಘಟ್ಟಗಳ ಅಂಚಿನಲ್ಲಿರುವ ಕುಗ್ರಾಮದಲ್ಲಿರುವ ಹರಿಹರೇಶ್ವರ ದೇವಸ್ಥಾನ ಹಲವು ವಿಶೇಷತೆಗೆ ಹೆಸರುವಾಸಿಯಾಗಿದೆ.  ಈ ದೇವಸ್ಥಾನದಲ್ಲಿ ಶಿವ, ವಿಷ್ಣು ಜೊತೆಗೆ ಇತರೆ ಹಲವು ದೇವತೆಗಳನ್ನೂ ಆರಾಧಿಸಿಕೊಂಡು ಬರಲಾಗುತ್ತಿದೆ.  ಅತ್ಯಂತ ಪುರಾತನವಾದ ಈ ದೇವಸ್ಥಾನ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೂ ಸಮೀಪದಲ್ಲೇ ಇದ್ದು, ಪ್ರತಿದಿನವೂ ಇಲ್ಲಿ ಪೂಜೆ ಪುನಸ್ಕಾರಗಳು ನಿರಂತರ ನಡೆದುಕೊಂಡು ಬರುತ್ತಿದೆ. ಈ ದೇವಸ್ಥಾನದ ವಿಶೇಷವೆಂದರೆ ಇಲ್ಲಿಗೆ ಬರುವ ಎಲ್ಲಾ ಭಕ್ತಾಧಿಗಳಿಗೂ ಯಾವುದೇ ತಾರತಮ್ಯವಿಲ್ಲದೆ ಅನ್ನಪ್ರಸಾದವನ್ನು ನೀಡಲಾಗುತ್ತಿದೆ.

ಅಲ್ಲದೆ ದೇವಸ್ಥಾನಕ್ಕೆ ದಿನದಲ್ಲಿ ಕೇವಲ ಒರ್ವ ಭಕ್ತ ಬಂದರೂ ಅವನಿಗೆ ಅನ್ನವನ್ನು ನಿರಾಕರಿಸದೆ ನೀಡುವ  ಸಂಪ್ರದಾಯವನ್ನು ಈ ದೇವಸ್ಥಾನವು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಪಾಲಿಸಿಕೊಂಡು ಬರುತ್ತಿದೆ. ಹರಿಹರೇಶ್ವರನನ್ನು ಒಂದೇ ಲಿಂಗದಲ್ಲಿ  ಪ್ರತಿಷ್ಟಾಪಿಸಿರುವ ಈ ಕ್ಷೇತ್ರದಲ್ಲಿ ಕೊಡಗಿನ ತಲಕಾವೇರಿಯಲ್ಲಿ ಯಾವ ರೀತಿ ತೀರ್ಥೋದ್ಭವ ಆಗುತ್ತದೆಯೋ, ಹರಿಹರೇಶ್ವರಲ್ಲೂ ಅಂಥಹುದೇ ತೀರ್ಥೋದ್ಭವವಾಗುತ್ತದೆ. ಶಿವನ ಕ್ಷೇತ್ರವಾಗಿರುವ ಇಲ್ಲಿ ಮಾಡುವ ಶನಿ ಪೂಜೆಗೂ ವಿಶೇಷ ಮಹತ್ವವಿದೆ.

ಇದನ್ನು ಓದಿ: ಜೆಡಿಎಸ್​ ಅಧಿಕಾರ ಕುಟುಂಬಕ್ಕೆ ಮಾತ್ರ ಸೀಮಿತ; ಎಚ್​ಡಿಕೆ ವಿರುದ್ಧ ಹರಿಹಾಯ್ದ ಜೆಡಿಎಸ್‌ ಶಾಸಕ ಶ್ರೀನಿವಾಸಗೌಡ

ಅಲ್ಲದೆ ಈ ದೇವಸ್ಥಾನದಲ್ಲಿ ಆರಾಧಿಸಲ್ಪಡುವ ಹರಿಹರೇಶ್ವರನಿಗೆ ಪ್ರಕೃತಿಯ ಮೇಲೆಯೂ ಪ್ರಭಾವವಿದೆ ಎನ್ನುವ ಸತ್ಯವನ್ನು ಇಲ್ಲಿನ ಜನ ತಮ್ಮ ಸ್ವಂತ ಅನುಭವದ ಮೂಲಕ ತಿಳಿದುಕೊಂಡಿದ್ದಾರೆ. ಊರಿನಲ್ಲೂ ಅಥವಾ ಮನೆಯಲ್ಲಿ ಯಾವುದಾದರೂ ಶುಭ ಕಾರ್ಯಕ್ರಮಗಳಿಗೆ ಮಳೆಯು ಅಡ್ಡಿಯಾಗದಿರಲಿ ಎಂದು ಎರಡು ತೆಂಗಿನಕಾಯಿಯನ್ನು ಅರ್ಪಿಸಿ ಪ್ರಾರ್ಥಿಸಿದ್ದಲ್ಲಿ ಕಾರ್ಯಕ್ರಮ ಮುಗಿಯುವವರೆಗೂ ಮಳೆಯ ಸಿಂಚನವೂ ಆಗುವುದಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಇಂಥಹ ಹಲವು ನಿದರ್ಶನಗಳನ್ನು ಸ್ಥಳೀಯರು ನೀಡುತ್ತಿದ್ದು, ಇದೇ ನಂಬಿಕೆ ಆಧಾರದಲ್ಲೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಭೇಟಿ ನೀಡುತ್ತಿದ್ದಾರೆ‌.

ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಹರಕೆಗಳು ಇಲ್ಲಿ ಈಡೇರುತ್ತದೆ. ಸಂತಾನವಿಲ್ಲದವರಿಗೆ ಹಾಗೂ ಮದುವೆಯಾಗದವರಿಗೆ ಕಂಕಣಭಾಗ್ಯವನ್ನೂ ಈ ದೇವರು ಕರುಣಿಸುತ್ತಾರೆ ಎನ್ನುವ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. ಪ್ರಕೃತಿಯ ಸುಂದರ ಮಡಿಲಲ್ಲಿರುವ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವರ ದರ್ಶನದ ಜೊತೆಗೆ ಪ್ರಕೃತಿಯ ಸುಂದರ ಸೊಬಗನ್ನೂ ಸವಿಯಬಹುದಾಗಿದೆ.
Published by:Seema R
First published: