ಮಂಗಳೂರು ಗೋಲಿಬಾರ್; ಕಮೀಶನರ್ ಡಾ.ಹರ್ಷಾ ರಾಜೀನಾಮೆ ನೀಡಿ ಹುದ್ದೆಯ ಘನತೆ ಉಳಿಸಲಿ ಎಂದು ಬಹಿರಂಗ ಪತ್ರ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್​ 19 ರಂದು  ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉಂಟಾದ ಗಲಭೆ ಸಂದರ್ಭದಲ್ಲಿ ಪೊಲೀಸರ ಗೋಲಿಬಾರ್​ಗೆ ಇಬ್ಬರು ಯುವಕರು ಮೃತಪಟ್ಟಿದ್ದರು. ಗೋಲಿಬಾರ್​ ನಂತರ ಕೇರಳದ ಪತ್ರಕರ್ತರಿಗೆ ವಿನಾಃ ಕಾರಣ ಕಿರುಕುಳ ನೀಡಿದ್ದ ಕಮಿಷನರ್​ ಡಾ. ಹರ್ಷ, ಈ ಗಲಭೆಯಲ್ಲಿ ಕೇರಳಿಗರ ಕೈವಾಡ ಇದೆ ಎಂದು ಆರೋಪಿಸಿದ್ದರು.

ಪೌರತ್ವ ಕಾಯ್ದೆ ವಿರುದ್ಧದ  ಪ್ರತಿಭಟನೆ

ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ

  • Share this:
ಮಂಜೇಶ್ವರ (ಜನವರಿ 19): ಮಂಗಳೂರು ಗೋಲಿಬಾರ್​ ಹಾಗೂ ತದನಂತರದ ಬೆಳವಣಿಗೆಯನ್ನು, ಪೊಲೀಸರ ಕ್ರಮವನ್ನು ಕಟುವಾಗಿ ಟೀಕಿಸಿರುವ ಕಾಸರಗೋಡು ಜಿಲ್ಲಾ ಪಂಚಾಯತ್​ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್​ ವರ್ಕಾಡಿ, ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯಕ್ತ​ ಡಾ. ಹರ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹುದ್ದೆಯ ಘನತೆ ಉಳಿಸಲಿ ಎಂದು ಬಹಿರಂಗ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.​ 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್​ 19 ರಂದು  ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉಂಟಾದ ಗಲಭೆ ಸಂದರ್ಭದಲ್ಲಿ ಪೊಲೀಸರ ಗೋಲಿಬಾರ್​ಗೆ ಇಬ್ಬರು ಯುವಕರು ಮೃತಪಟ್ಟಿದ್ದರು. ಗೋಲಿಬಾರ್​ ನಂತರ ಕೇರಳದ ಪತ್ರಕರ್ತರಿಗೆ ವಿನಾಃ ಕಾರಣ ಕಿರುಕುಳ ನೀಡಿದ್ದ ಕಮಿಷನರ್​ ಡಾ. ಹರ್ಷ, ಈ ಗಲಭೆಯಲ್ಲಿ ಕೇರಳಿಗರ ಕೈವಾಡ ಇದೆ ಎಂದು ಆರೋಪಿಸಿದ್ದರು. ಅಲ್ಲದೆ, ಹಲವರನ್ನು ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದ್ದರು. ಇದು ಸಾಮಾನ್ಯವಾಗಿ ಹಲವರ ಅಸಮಾಧಾನಕ್ಕೂ ಕಾರಣವಾಗಿತ್ತು.

ಬಹಿರಂಗ ಪತ್ರದ ಸಾರಾಂಶ ಈ ರೀತಿಯಿದೆ

ಗೆ,

ಶ್ರೀ ಹರ್ಷ ಪಿ.ಎಸ್.
ಸಿಟಿ ಪೊಲೀಸ್ ಕಮಿಷನರ್,
ಮಂಗಳೂರು.

2019 ಡಿಸೆಂಬರ್ ತಿಂಗಳ 19 ನೇ ದಿನಾಂಕ ಮಂಗಳೂರಿನಲ್ಲಿ ನಡೆದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ ಎದುರಾಗಿನ ಪ್ರತಿಭಟನೆ ಹಾಗೂ ಪೊಲೀಸ್ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟ ಘಟನೆಯ ಕುರಿತು ಓರ್ವ ಜನಪ್ರತಿನಿಧಿ ಎಂಬ ನೆಲೆಯಲ್ಲಿ ನನ್ನ ಕೆಲವು ಪ್ರಶ್ನೆ, ಸಂದೇಹ ಮತ್ತು ಆಕ್ಷೇಪಗಳನ್ನು ಬಹಿರಂಗವಾಗಿ ಈ ಕೆಳಗಿನಂತೆ ತಮ್ಮ ಸಮಕ್ಷಮ ಮಂಡಿಸುತ್ತೇನೆ.

ತಾವು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂಬ ವಿಷಯ ನನಗೆ ಚೆನ್ನಾಗಿ ಗೊತ್ತು. ಆದರೆ, ತಾವು ಅದಕ್ಕಿಂತಲೂ ಹೆಚ್ಚಿನ ಜವಾಬ್ದಾರಿಗಳೇನೋ ತಮ್ಮ ಹೆಗಲ ಮೇಲಿವೆ ಎಂದು ಭಾವಿಸಿಕೊಂಡಿದ್ದೀರಿ ಎಂದೆನಿಸುತ್ತಿದೆ. ಸ್ವತಂತ್ರ, ಸಾರ್ವಭೌಮ, ಮತೇತರ, ಸಮಾಜವಾದಿ ಗಣರಾಜ್ಯವಾದ ಭಾರತದಲ್ಲಿ ಜನತೆಗೆ ಪ್ರತಿಭಟಿಸುವ ಸ್ವಾತಂತ್ರ್ಯ ಸಂವಿಧಾನ ದತ್ತವಾದದ್ದು. ಅದು ಕಾನೂನು ಮತ್ತು ಸುವ್ಯವಸ್ಥೆ ಪಾಲಿಸುವ ಸೀಮಿತ ಜವಾಬ್ದಾರಿ ಇರುವ ಪೊಲೀಸರ ಔದಾರ್ಯವಲ್ಲ ಎಂಬುದು ಒಂದೋ ತಮಗೆ ಗೊತ್ತಿಲ್ಲ. ಇಲ್ಲವೇ ತಮಗೆ ಅದರ ಮೇಲೆ ಗೌರವವಿಲ್ಲ ಎಂಬುದು ನಿಮ್ಮ ಕೆಲವು ನಡೆಗಳನ್ನು ಗಮನಿಸುವಾಗ ಸ್ಪಷ್ಟವಾಗುತ್ತದೆ.

ಸರಕಾರದ ಕಾನೂನುಗಳನ್ನು ವಿರೋಧಿಸುವ ಜನತೆಯ ಹಕ್ಕುಗಳನ್ನು ದಮನಿಸುವ ಅನಿವಾರ್ಯತೆ ತಮಗೇಕೆ ಎಂಬುದು ಗೊತ್ತಾಗಬೇಕಿದೆ. ತಾವು ಆಯ್ಕೆ ಮಾಡಿದ ಸರಕಾರದೊಡನೆ ಜನತೆಗೆ ಪ್ರಶ್ನೆಗಳಿದ್ದರೆ, ಅದಕ್ಕೆ ಉತ್ತರಿಸಲು ಸರಕಾರವಿದೆ. ಮಧ್ಯೆ ನೀವೇಕೆ ಸರಕಾರದ ತೀರ್ಮಾನ ಸಮರ್ಥಿಸುವ ದಲ್ಲಾಳಿ ಕೆಲಸ ನಿರ್ವಹಿಸಬೇಕು?

ಈ ಪ್ರಶ್ನೆ-ಸಂದೇಹಗಳಿಗೆ ಕಾರಣವಿದೆ. ಗೋಲಿಬಾರ್ ನಡೆದ ನಂತರ ತಾವು ಪತ್ರಿಕಾಗೋಷ್ಠಿ ನಡೆಸಿ ಕೇರಳೀಯರು ಬಂದು ಇಲ್ಲಿ ಗಲಭೆ ಎಬ್ಬಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದೀರಿ. ಆದರೆ, ಅಂದಿನ ಘಟನೆಯ ಸಂಬಂಧ ಬಂಧಿತರ ಪೈಕಿ ಓರ್ವನೇ ಓರ್ವ ಕೇರಳೀಯನಿರಲಿಲ್ಲ. ಯಾವುದೇ ಕೇರಳೀಯನೂ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿಲ್ಲ. ಮತ್ತೆ ಹೇಗೆ ನೀವು ಕೇರಳೀಯರು ಗಲಭೆ ನಡೆಸಿದರು ಎಂಬ ಆರೋಪ ಹೊರಿಸಿದಿರಿ?

ಗೋಲಿಬಾರ್ ಹೆಸರಲ್ಲಿ ನಿರ್ದಯವಾಗಿ ಇಬ್ಬರನ್ನು ಕೊಂದ ಪಾಪ ಪರಿಹಾರಕ್ಕಾಗಿ ತಮಗೆ ಕೇರಳದ ಹೆಸರನ್ನು ಬಳಸಬೇಕಾಯ್ತು ಎಂದು ಈ ಮೂಲಕ ಗೊತ್ತಾಗುತ್ತಿದೆ. ಗೋಲಿಬಾರ್ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿರುವ ಕಾರಣ ನಾನು ಆ ಬಗ್ಗೆ ಹೆಚ್ಚು ಮಾತನಾಡಲಾರೆ. ಆದರೆ, ತಾವು ಈ ಘಟನೆಗೆ ಕೇರಳೀಯರನ್ನು ಅನಗತ್ಯವಾಗಿ ಎಳೆದು ತಂದಾಗಿದೆ. ಅದನ್ನು ಸಮರ್ಥಿಸಲಿಕ್ಕಾಗಿ ಅಂದು ಮಂಗಳೂರಿನಲ್ಲಿ ಆಕ್ಟಿವ್ ಆಗಿದ್ದ ಕೇರಳ ಸರ್ಕಲ್ ನ ಮೊಬೈಲ್ ನಂಬರ್ ಗಳ ವಿವರಗಳನ್ನು ಮೊಬೈಲ್ ಕಂಪೆನಿಗಳಿಂದ ಪಡೆದು ಹಲವರಿಗೆ ಸಮನ್ಸ್ ಕಳಿಸುತ್ತಿದ್ದೀರಿ.

ಸ್ವಾಮಿ, ತಮಗೆ ಮಂಗಳೂರು ಒಂದು ಕಾಸ್ಮೊಪೊಲಿಟನ್ ನಗರ ಎಂದು ಗೊತ್ತಿಲ್ಲ ಎಂದರೆ ನಂಬಲಾಗದು. ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್ ಮತ್ತು ಮೀನುಗಾರಿಕೆಯಲ್ಲಿ ಮಂಗಳೂರು ಹೆಸರುವಾಸಿಯಾದುದು. ಕೇರಳದ ಅತೀ ದಕ್ಷಿಣ ತುದಿಯಾದ ತಿರುವನಂತಪುರದಿಂದ ತೊಡಗಿ, ಅತೀ ಉತ್ತರ ತುದಿಯಾದ ಮಂಜೇಶ್ವರದವರೆಗಿನ ಜನರು ಮೇಲೆ ಉಲ್ಲೇಖಿಸಲಾದ ಅಗತ್ಯಗಳಿಗಾಗಿ ಮಂಗಳೂರನ್ನು ಆಶ್ರಯಿಸುತ್ತಿದ್ದಾರೆ. ದಿನನಿತ್ಯ ಸಹಸ್ರಾರು ಕೇರಳೀಯರು ಈ ಉದ್ದೇಶಗಳಿಗೆ ಮಾತ್ರವಲ್ಲದೆ ಟೆಕ್ಸ್ ಟೈಲ್ಸ್, ಜ್ಯುವೆಲ್ಲರಿ, ಸಾಗರೋತ್ಪನ್ನಗಳು, ಔಷಧಿ, ಕೃಷ್ಯುತ್ಪನ್ನಗಳ ಮಾರಾಟ, ಖರೀದಿ ಇತ್ಯಾದಿ ಅಗತ್ಯಗಳಿಗೆ ಮಂಗಳೂರಿಗೆ ಬರುತ್ತಾರೆ.

ಓರ್ವನ ಮೊಬೈಲ್ ಫೋನ್ ಅಂದರೆ ಅವನು ಸಂಚರಿಸುವಲ್ಲೆಲ್ಲಾ ಆತನ ಜೊತೆಗೇ ಇರುತ್ತದೆ. ಅದು ಫಿಕ್ಸೆಡ್ ಫೋನ್ ಅಲ್ಲ. ಇದನ್ನು ಆಧಾರವಾಗಿಸಿ ಆ ದಿನಾಂಕದಂದು ಮಂಗಳೂರಿನಲ್ಲಿ ಆಕ್ಟಿವ್ ಆಗಿದ್ದ ಮೊಬೈಲ್ ಫೋನ್ ಮಾಲಕರಿಗೆ ಸಮನ್ಸ್ ಕಳಿಸುತ್ತೀರೆಂದರೆ ಇದರಷ್ಟು ನಗೆಪಾಟಲಿನ ವಿಷಯ ಬೇರಾವುದೂ ಇಲ್ಲ. ಇರಲಿ, ಈ ಫೋನ್ ಗಳ ಪೈಕಿ ಎಲ್ಲರಿಗೂ ಸಮನ್ಸ್ ಕಳಿಸಿದ್ದೀರಾ ಅಥವಾ ಮೊಬೈಲ್ ಫೋನ್ ಗೂ ಜಾತಿ ಲೇಪನ ಹಚ್ಚಿ ಆಯ್ದ ಕೆಲವರಿಗೆ ಮಾತ್ರ ಕಳಿಸಿದ್ದೀರಾ?

ಗೋಲಿಬಾರ್ ಮರುದಿನ ತಾವು ಕೇರಳದ ಕೆಲವು ಗಲಭೆಕೋರರು ಪತ್ರಕರ್ತರ ವೇಷದಲ್ಲಿ ಆಯುಧಗಳೊಂದಿಗೆ ಬಂದಿದ್ದಾರೆ ಎಂದು ಆರೋಪ ಹೊರಿಸಿ ಹಲವು ಪತ್ರಕರ್ತರನ್ನು ಬಂಧಿಸಿ ಕೊನೆಗೆ ಕರ್ನಾಟಕದ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಅವರನ್ನು ಬಿಡುಗಡೆ ಮಾಡಿದಿರಿ. ಅವರಲ್ಲಿ accreditation letter ಇರಲಿಲ್ಲ ಎಂಬುದು ತಮ್ಮ ಆರೋಪವಾಗಿತ್ತು. ಆದರೆ, ದೇಶದ ವಿವಿಧೆಡೆಗಳ ಹಲವಾರು ಪತ್ರಕರ್ತರು ಅಂದು ತಮ್ಮ ಯಾವುದೇ ನಿರ್ಬಂಧಗಳಿಲ್ಲದೆ ವರದಿಗಾರಿಕೆ ಮಾಡಿದ್ದರು.

ಅವರ accreditation letter copy ತಮ್ಮ ಬಳಿ ಇದೆಯೇ, ಇದ್ದರೆ ಅದನ್ನು ಬಹಿರಂಗಪಡಿಸಬಹುದೆ? ತಾವು ಬಂಧಿಸಿದ ಏಶ್ಯಾನೆಟ್ ಗುಂಪಿನ ಕನ್ನಡ ಚಾನೆಲ್ ಏಷ್ಯಾ ನೆಟ್ ಸುವರ್ಣ ಚಾನೆಲ್ ಪ್ರತಿನಿಧಿಗಳು ಅಲ್ಲಿದ್ದರಲ್ಲ? ಅವರು ನಿಮಗೆ ಬೇಕಾದಂತೆ ವರದಿ ಮಾಡುತ್ತಿದ್ದ ಕಾರಣಕ್ಕೆ ಅವರ ಗುರುತು ಪತ್ರ ತಮಗೆ ಅಗತ್ಯ ಕಂಡು ಬರಲಿಲ್ಲ ಅಲ್ವಾ? ಆ ಪತ್ರಕರ್ತರ ಬಳಿಯಿದ್ದ ಆಯುಧಗಳು ಯಾವುವು? ಅವರನ್ನು ಯಾವ ಆರೋಪದ ಮೇಲೆ ಬಂಧಿಸಿದ್ದೀರೋ, ಆ ಆರೋಪ ಸುಳ್ಳು ಎಂದು ಸಾಬೀತಾದ ಕಾರಣಕ್ಕೆ ತಾನೇ ತಾವು ಅವರನ್ನು ಬಿಡುಗಡೆ ಮಾಡಿದ್ದು? ಅವರು ನಿರಪರಾಧಿಗಳು ಎಂದು ಸಾಬೀತಾದ ನಂತರ ಅವರನ್ನು ಅವರ ಕೆಲಸ ನಿರ್ವಹಿಸಲು ಬಿಡದೆ ಗಡೀಪಾರು ಮಾಡಿದ್ದಕ್ಕೆ ತಾವು ನೀಡುವ ಸಮರ್ಥನೆಗಳೇನು?

ಜನತಾ ಚಳವಳಿಗಳ ಮೂಲಕ ಹಲವಾರು ಕಾಯ್ದೆಗಳು ರೂಪೀಕರಣಗೊಂಡ, ತಿದ್ದುಪಡಿ ಮಾಡಲ್ಪಟ್ಟ ಇಲ್ಲವೇ ರದ್ದುಗೊಂಡ ಹಲವಾರು ಉದಾಹರಣೆಗಳು ಇತಿಹಾಸದುದ್ದಕ್ಕೂ ಜಗತ್ತಿನಾದ್ಯಂತ ಸಂಭವಿಸಿವೆ. ಇದು ತಮಗೆ ಗೊತ್ತಿಲ್ಲವೆಂದರೆ ಅದು ತಮ್ಮ ಅಜ್ಞಾನವೇ ಹೊರತು ಅವಾಸ್ತವವಲ್ಲ.

ಮಂಗಳೂರು ಗಲಭೆ ಸಂಬಂಧ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಕುಮಾರಸ್ವಾಮಿಯವರು ಕೆಲವು ವಿಡಿಯೋಗಳನ್ನು ಬಹಿರಂಗಪಡಿಸಿದರು, ತಾವು ಪತ್ರಿಕಾಗೋಷ್ಠಿ ಕರೆದು ಅದು ತಿರುಚಿದ ವಿಡಿಯೋ ಅಂದಿರಿ. ಕುಮಾರಸ್ವಾಮಿ ಬಂದರೆ ನೆಟ್ಟಗೆ ನಿಂತು ಸೆಲ್ಯೂಟ್ ಹೊಡೆಯಬೇಕಾದ ನೀವು ಯಾವ ಅಧಿಕಾರ ಮತ್ತು ಪ್ರೊಟೋಕಾಲ್ ಪ್ರಕಾರ ಅವರಿಗೆ ಉತ್ತರ ನೀಡಿದಿರಿ?.

ನಿಮ್ಮ ರಾಜ್ಯದಲ್ಲೊಬ್ಬ ಗೃಹಮಂತ್ರಿ ಇದ್ದಾರಲ್ಲಾ? ರಾಜಕೀಯ ಹೇಳಿಕೆಗಳಿಗೆ ಉತ್ತರ ನೀಡಬೇಕಾದುದು ರಾಜಕಾರಣಿಗಳೇ ಹೊರತು ಸರಕಾರದ ಚಾಕರಿ ಮಾಡುವ ತಮ್ಮಂತವರು ಅಲ್ಲ ತಾನೆ? 2020 ಜನವರಿ 15 ರ ಅಡ್ಯಾರ್ ಸಮಾವೇಶಕ್ಕೆ ಕೇರಳೀಯರು ಬರಬಾರದು ಎಂದು ಕಟ್ಟಪ್ಪಣೆ ಹೊರಡಿಸಿದಿರಿ. ತಪಾಸಣೆಗೆ ವ್ಯವಸ್ಥೆಗಳನ್ನೂ ಮಾಡಿದಿರಿ. ಅಲ್ಲ ಸ್ವಾಮೀ, ಕೇರಳ ಎಂದಿನಿಂದ ವಿದೇಶವಾಯ್ತು? ಕಂಡ ಕಂಡದ್ದಕ್ಕೆಲ್ಲಾ ಕೇರಳೀಯರನ್ನು ಎತ್ತಿ ಕಟ್ಟುವ ಕೊಳಕು ಕೆಲಸಕ್ಕೆ ತಾವೇಕೆ ಇಳಿಯಬೇಕು? ಐಪಿಸಿಯ ಯಾವ ನಿಯಮದಂತೆ ಈ ನಿರ್ಬಂಧಗಳು?

ನೀವು ನಿಮ್ಮ ರಾಜಕೀಯ ಧಣಿಗಳನ್ನು ತೃಪ್ತಿಪಡಿಸಲು, ನಿಮ್ಮ ಸಿದ್ಧಾಂತದ ಬೆಳವಣಿಗೆಗಾಗಿ ತಮಗಿರುವ ಜನಾಂಗೀಯ, ಪ್ರಾದೇಶಿಕ ತಾರತಮ್ಯಗಳ ಕಾರಣಗಳಿಂದಾಗಿ ಈ ರೀತಿಯ ದ್ರಾವಿಡ ಪ್ರಾಣಾಯಾಮ ಮಾಡುತ್ತಿದ್ದೀರಿ ಎಂದು ಯಾರಾದರೂ ಆರೋಪಿಸಿದರೆ ತಪ್ಪೆಂದು ಹೇಗೆ ಹೇಳಬಹುದು? ನೀವು ನಿರ್ಲಜ್ಜವಾಗಿ ಅಧಿಕಾರ ದುರುಪಯೋಗ ಮಾಡುತ್ತಿದ್ದೀರಿ ಎಂಬುದು ನನ್ನ ನೇರ ಆರೋಪ.

ಪೂರ್ವಾಗ್ರಹ ಪೀಡಿತರಾಗಿ ಕೆಲಸ ನಿರ್ವಹಿಸುವ ಮೂಲಕ ತಾವು ತಮ್ಮ ಹುದ್ದೆಯ ಘನತೆಗೆ ಕುಂದುಂಟು ಮಾಡಿದ್ದೀರಿ. ಅಳಿದುಳಿದ ಗೌರವ ಉಳಿಸಲು ಹುದ್ದೆಗೆ ರಾಜೀನಾಮೆ ನೀಡಿ ನಿಮ್ಮ ಸಿದ್ಧಾಂತಗಳಿಗೆ ಬೇಕಾಗಿ ನೇರವಾಗಿ ದುಡಿಯಲು ಮುಂದಾಗುವುದು ಹಿತಕರವಲ್ಲವೆ? ನಿಕಟಪೂರ್ವ ಜಿಲ್ಲಾಧಿಕಾರಿ ಶ್ರೀ ಸಸಿಕಾಂತ್ ಸೆಂಥಿಲ್ ತಮ್ಮ ಆತ್ಮಸಾಕ್ಷಿಯನ್ನು ವಂಚಿಸಿ ಯಾಂತ್ರಿಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹುದ್ದೆಗೆ ರಾಜೀನಾಮೆ ನೀಡಿ ಮಾದರಿ ತೋರಿಸಿದ್ದಾರೆ. ತಮಗೆ ಆ ಹಾದಿ ಒಳ್ಳೆಯದು. ತಮ್ಮ ಹುದ್ದೆಯ ಘನತೆ ಉಳಿಸಲು ಮತ್ತು ಪೂರ್ಣ ಪ್ರಮಾಣದಲ್ಲಿ ತಮ್ಮ ಸಿದ್ಧಾಂತಕ್ಕೆ ಬೇಕಾಗಿ ದುಡಿಯಲು ತಾವೂ ಆ ಮಾದರಿ ಅನುಸರಿಸುವಿರಾಗಿ ಆಶಿಸುತ್ತೇನೆ.

ಹರ್ಷಾದ್ ವರ್ಕಾಡಿ
ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರು
ಕಾಸರಗೋಡು ಜಿಲ್ಲಾ ಪಂಚಾಯತು.
First published: