ಪಿಗ್ಗಿ ಬ್ಯಾಂಕಲ್ಲಿ ಕೂಡಿಟ್ಟ ಹಣವೆಲ್ಲವನ್ನೂ ಈ ಪೋರಿ ಮಾಡಿದ್ದಾದರೂ ಏನು?
ಕೋವಿಡ್ ಸಂಕಷ್ಟದ ಕಾಲದಲ್ಲಿ ಬಡ ರೋಗಿಗಳು ಔಷಧಿ ವೆಚ್ಚ ಭರಿಸಲು ಪರದಾಡುವುದನ್ನು ಮಾಧ್ಯಮಗಳಲ್ಲಿ ನೋಡಿ ತಿಳಿದಿದ್ದ ಪುತ್ತೂರಿನ ಬಾಲಕಿ ತನ್ನ ಉಳಿತಾಯದ ಹಣವೆಲ್ಲವನ್ನೂ ಧಾರೆ ಎರೆದು ತನ್ನ ಜನ್ಮದಿನ ಆಚರಿಸಿದ್ದಾಳೆ.
ತನ್ನ ಉಳಿತಾಯದ ಹಣವನ್ನು ವೈದ್ಯರಿಗೆ ನೀಡಿದ ಪುತ್ತೂರಿನ ಹುಡುಗಿ ದಿಶಾ
ಪುತ್ತೂರು: ತನ್ನ ತಾತ, ಅಜ್ಜಿ, ಮಾವ, ಅಪ್ಪ, ಅಮ್ಮ ನೀಡಿದ್ದ ಸುಮಾರು 10 ಸಾವಿರ ರೂಪಾಯಿಯಷ್ಟು ಪಾಕೆಟ್ ಮನಿಯನ್ನು ಕೂಡಿಟ್ಟಿದ್ದ ಪುತ್ತೂರಿನ ವಿದ್ಯಾರ್ಥಿನಿಯೊಬ್ಬರು ಈ ಹಣದಿಂದ ವೈದ್ಯರ ಮೂಲಕ ಬಡರೋಗಿಗಳ ಚಿಕಿತ್ಸೆಗೆ ಬಳಕೆಯಾಗಬೇಕೆಂದು ವೈದ್ಯರ ದಿನದಂದು ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ. ಎಂ. ಕೆ. ಪ್ರಸಾದ್ ಅವರಿಗೆ ಹಸ್ತಾಂತರ ಮಾಡುವ ಮೂಲಕ ತನ್ನ ಹುಟ್ಟಿದ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ.
ಪುತ್ತೂರಿನ ಬನ್ನೂರು ಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ದಿ| ಶ್ರೀಧರ್ ಭಂಡಾರಿ ಅವರ ಮೊಮ್ಮಗಳು ವಿವೇಕಾನಂದ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ದಿಶಾ ಅವರು ತನ್ನ ಹುಟ್ಟಿದ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದವರು. ದಿಶಾ ಅವರ ತಾಯಿ ಡಾ. ಅನಿಲಾ ರಾಜ್ಯದ ಜನೌಷಧಿಯ ನೋಡೆಲ್ ಅಧಿಕಾರಿಯಾಗಿದ್ದಾರೆ. ತಂದೆ ದೀಪಕ್ ಶೆಟ್ಟಿ ಉದ್ಯಮಿಯಾಗಿದ್ದಾರೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಬಡ ರೋಗಿಗಳಿಗೆ ಔಷಧಿ ವೆಚ್ಚ ಭರಿಸುವ ಮತ್ತು ಚಿಕಿತ್ಸೆ ಸಂದರ್ಭದಲ್ಲಿ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳನ್ನು ಪತ್ರಿಕೆ, ಮಾಧ್ಯಮಗಳ ಮೂಲಕ ಅರಿತಿದ್ದ ದಿಶಾ ಅವರು ತಾನು ಕೂಡಿಟ್ಟಿದ್ದ ಹಣವನ್ನು ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ. ಎಂ. ಕೆ. ಪ್ರಸಾದ್ ಅವರಿಗೆ ಹಸ್ತಾಂತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಕ್ ಕಟ್ ಮಾಡಿ ವೈದ್ಯರಿಗೆ ಶುಭಾಶಯ ತಿಳಿಸಿದ್ದಾರೆ. ದಿಶಾ ಅವರು ನೀಡಿದ ನಗದು ತುಂಬಿದ ಪೊಟ್ಟಣ ಸ್ವೀಕರಿಸಿದ ಡಾ. ಎಂ. ಕೆ. ಪ್ರಸಾದ್ ಅವರು ಹಿರಿಯರು ನೀಡಿದ ಸಂಸ್ಕಾರ ಸಾರ್ಥಕತೆಯನ್ನು ಸಾರುತ್ತಿದೆ. ಇದು ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದ್ದಾರೆ.
ಹುಟ್ಟಿದ ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲಬ್ರೇಶನ್ ಮಾಡಿಲ್ಲ. ಇವತ್ತು ನನ್ನ ಹುಟ್ಟಿದ ಹಬ್ಬ. ಆದರೆ ಅದನ್ನು ಗ್ರ್ಯಾಂಡ್ ಆಗಿ ಸೆಲಬರೇಶನ್ ಮಾಡಿಲ್ಲ. ಈ ನಿಟ್ಟಿನಲ್ಲಿ ನನ್ನ ಪಿಗಿ ಬ್ಯಾಂಕ್ (ಕೂಡಿಟ್ಟ ಹಣದ ಪೊಟ್ಟಣ) ಅನ್ನು ವೈದ್ಯರಿಗೆ ನೀಡಿ ಅವರ ಮೂಲಕ ಬಡ ರೋಗಿಗಳಿಗೆ ಚಿಕಿತ್ಸೆ ಕೊಡಿಸುವಂತೆ ಕೇಳಿಕೊಂಡಿದ್ದೇನೆ ಎನ್ನುತ್ತಾರೆ ದಿಶಾ. ಕೊರೊನಾ ಸಂಕಷ್ಟವನ್ನು ಮಾಧ್ಯಮಗಳ ಮೂಲಕ ಅರಿತಿದ್ದು, ಬಡ ಜನತೆ ತಮ್ಮ ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನು ಕಂಡಿದ್ದೇನೆ ಎನ್ನುತ್ತಾರೆ ಈ ಪುಟ್ಟ ಬಾಲಕಿ.
ಹುಟ್ಟಿದ ಹಬ್ಬದಲ್ಲಿ ಸಂಭ್ರಮಕ್ಕಿಂತ ಮಕ್ಕಳ ಮನಸ್ಸಿನಲ್ಲಿ ದೇಶ ಸೇವೆ ಮಾಡುವ ಚಿಂತನೆ ಬೆಳೆಯಬೇಕು. ಈ ನಿಟ್ಟಿನಲ್ಲಿ ನನ್ನ ಪುತ್ರಿ ಈ ಬಾರಿ ಮನೆ ಮಂದಿ ನೀಡುತ್ತಿದ್ದ ಪಾಕೆಟ್ ಮನಿಯನ್ನು ಬಡ ರೋಗಿಗಳ ಚಿಕಿತ್ಸೆಗೆ ಬಳಕೆಯಾಗಬೇಕೆಂದು ಕೇಳಿಕೊಂಡು ಮಾದರಿ ಆಗಿದ್ದಾಳೆ. ಅವಳ ಹುಟ್ಟಿದ ದಿನದಂತೆ ಪುತ್ತೂರಿನ ಖ್ಯಾತ ಡಾ. ಎಂ. ಕೆ. ಪ್ರಸಾದ್ ಅವರ ಮೂಲಕ ಉಪಯೋಗ ಆಗಲಿ ಎಂದು ಅವರಿಗೆ ಹಸ್ತಾಂತರಿಸಿದ್ದೇವೆ ಎನ್ನುತ್ತಾರೆ ರಾಜ್ಯದ ಜನೌಷಧಿಯ ನೋಡೆಲ್ ಅಧಿಕಾರಿಯೂ ಆಗಿರುವ ದಿಶಾ ತಾಯಿ ಡಾ. ಅನಿಲಾ. ಈ ನಿರ್ಧಾರವು ಸಂಪೂರ್ಣ ದಿಶಾಳದ್ದೇ ಆಗಿದ್ದು, ಇದರಲ್ಲಿ ಪೋಷಕರ ಯಾವ ಪಾತ್ರವೂ ಇಲ್ಲ ಎಂದೂ ಡಾ. ಅನಿಲಾ ಅವರು ಸ್ಪಷ್ಟಪಡಿಸಿದ್ದಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಅಜಿತ್ ಕುಮಾರ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ