HOME » NEWS » State » MANGALORE DAKSHINA KANNADA PM VANI STARED FOR INTERNET PROBLEM IN SULYA AKP SESR

ಇಂಟರ್ನೆಟ್ ಸಮಸ್ಯೆ; ಪಿ.ಎಂ.ವಾಣಿ ಸಾರ್ವಜನಿಕ ವೈ ಫೈ ವ್ಯವಸ್ಥೆಯಿಂದ ಗ್ರಾಮದ ಜನರು ಖುಷ್

 ಟೆಲಿಕಾಂ ಇಲಾಖೆಗಳು ಅನುಮತಿಯೊಂದಿಗೆ ಆರಂಭವಾಗುವ ಈ ಯೋಜನೆಗೆ  ವೇಗದ ಇಂಟರ್ನೆಟ್‌ ಅಗತ್ಯವಿದೆ

news18-kannada
Updated:June 21, 2021, 9:05 PM IST
ಇಂಟರ್ನೆಟ್ ಸಮಸ್ಯೆ; ಪಿ.ಎಂ.ವಾಣಿ ಸಾರ್ವಜನಿಕ ವೈ ಫೈ ವ್ಯವಸ್ಥೆಯಿಂದ ಗ್ರಾಮದ ಜನರು ಖುಷ್
ಇಂಟರ್​ನೆಟ್​ ಸಮಸ್ಯೆ
  • Share this:
ಪುತ್ತೂರು (ಜೂ. 21):  ಕೊರೋನಾ ಸಂಕಷ್ಟದ ಕಾರಣದಿಂದ ಶಾಲೆ-ಕಾಲೇಜುಗಳು ನಡೆಯುತ್ತಿಲ್ಲ. ಕೆಲಸಕ್ಕೆ ತೆರಳುವ ಮಂದಿಗೂ ಸಂಕಷ್ಟ. ಇಂತಹ ಸನ್ನಿವೇಶದಲ್ಲಿ  ವೇಗದ ಇಂಟರ್ನೆಟ್‌ ಇಂದು ಅಗತ್ಯವಾಗಿದೆ. ಹಳ್ಳಿಯಲ್ಲೂ ಇಂದು ಇಂಟರ್ನೆಟ್‌ ಎಲ್ಲಾ ವರ್ಗದವರಿಗೂ ಅಗತ್ಯವಾದ ಸಂಗತಿಯಾಗಿದೆ. ನಗರದಲ್ಲಿ  ಇಂತಹ ಯಾವುದೇ ಸಮಸ್ಯೆಗಳು ಎದುರಾಗದೇ ಇದ್ದರೂ ಹಳ್ಳಿಗಳಲ್ಲಿ  ಇಂಟರ್ನೆಟ್‌ ಬಿಡಿ ಕಾಲ್‌ ಮಾಡುವುದಕ್ಕೂ ಪರದಾಟ ಮಾಡಬೇಕಾದ ಸ್ಥಿತಿ ಇದೆ. ಈಗ ಆನ್‌ ಲೈನ್‌ ಕ್ಲಾಸ್‌ ಗೆ ಗುಡ್ಡದ ತುದಿಯಲ್ಲಿ ಗಾಳಿ ಮಳೆಯ ನಡುವೆಯೂ ಮರದ ಅಡಿಯಲ್ಲಿ , ರಸ್ತೆ ಬದಿ ಒದ್ದೆಯಾಗಿ ನಿಲ್ಲುವ ಸ್ಥಿತಿಯನ್ನು  ತಪ್ಪಿಸಿ ಸುರಕ್ಷತೆಯ ದಾರಿ ಬೇಕಾಗಿತ್ತು. ಇಂತಹ ಸನ್ನಿವೇಶದಲ್ಲಿ  ಇದೀಗ ಪಿ ಎಂ ವಾಣಿ ಚಾಲೂಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಮಿಲದಲ್ಲಿ  ಈಗ ಪಿ ಎಂ ವಾಣಿ ಚಾಲೂಗೊಂಡಿದ್ದು ಏಕಾನೆಟ್‌ ಎಂಬ ಹೆಸರಿಲ್ಲಿ  ಈಗ ಲಭ್ಯವಾಗುತ್ತಿದೆ.

ಕೇಂದ್ರ ಸರಕಾರವು ಸಾರ್ವಜನಿಕ ವೈ ಫೈ ನೀಡಲು ಪಿ ಎಂ ವಾಣಿ ಎಂಬ ಯೋಜನೆಯಲ್ಲಿ  ಕಳೆದ ಡಿಸೆಂಬರ್‌ ನಲ್ಲಿ  ಟೆಲಿಕಾಂ ಇಲಾಖೆಯ ಮೂಲಕ ವ್ಯವಸ್ಥೆಗೆ ಮುಂದಾಗಿತ್ತು. ದೇಶದ ಹಲವು ಕಡೆಗಳಲ್ಲಿ  ಈ ಯೋಜನೆಯನ್ನು  ಜಾರಿ ಮಾಡಲು ಕೂಡಾ ಸೂಚಿಸಿತ್ತು. ಇದರ ಅನ್ವಯ ಟೆಲಿಕಾಂ ಇಲಾಖೆಗಳನ್ನು ಸಂಪರ್ಕಿಸಿದ ಸುಳ್ಯದ ಸಾಯಿರಂಜನ್‌ ಕಲ್ಚಾರು ಹಾಗೂ ಸದಾಶಿವ ಕೊಡಪ್ಪಾಲ ಅವರು ಇದಕ್ಕೆ ಬೇಕಾದ ವ್ಯವಸ್ಥೆಗೆ ಮುಂದಾದರು. ಇಲಾಖೆಗಳನ್ನು, ವ್ಯವಸ್ಥೆಗಳನ್ನು  ದೂರುತ್ತಾ ಕೂರುವ ಬದಲು ಇರುವ ವ್ಯವಸ್ಥೆಗಳನ್ನು  ಹೇಗೆ ಬಳಕೆ ಮಾಡಬಹುದು ಹಾಗೂ ಸುಧಾರಿಸಬಹುದು  ಎಂದು ಈ ಯುವಕರಿಬ್ಬರು ಯೋಚಿಸಿದರು.

ಈಗ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳು ಆನ್‌ ಲೈನ್‌ ಕ್ಲಾಸಿಗೆ ಪರದಾಟ ನಡೆಸುವ ಸ್ಥಿತಿಯನ್ನು  ಕಂಡು ತಕ್ಷಣವೇ ಇಲಾಖೆಗಳಿಂದ ಅನುಮತಿ ಪಡೆದು ಇದೀಗ ಸುಳ್ಯದ ಕಮಿಲದಲ್ಲಿ ಈ ವ್ಯವಸ್ಥೆಗೆ ಮುಂದಾದರು. ಈ ನೆಟ್ವರ್ಕ್‌ ಗೆ ಏಕಾನೆಟ್‌ ಎಂಬ ಹೆಸರು ಇರಿಸಲಾಗಿದ್ದು, ಏಕ ಎಂದರೆ ಒಂದು ಹಾಗೂ ನೆಟ್‌ ಎಂದರೆ ನೆಟ್ವರ್ಕ್‌ ಎಂಬ ಅರ್ಥ ಒಳಗೊಂಡಿದ್ದು , ಒಂದು ನೆಟ್ವರ್ಕ್‌ ಎಲ್ಲರಿಗಾಗಿ ಎಂಬ ಸಂದೇಶ ಇದರ ಹಿಂದಿದೆ. ಸೇವಾ ಉದ್ದೇಶ ಇದಾದರೂ ಇದಕ್ಕೆ ಬೇಕಾದ ಇಂಟರ್ನೆಟ್‌ ಹಾಗೂ ಇತರ ಉಪಕರಣಗಳಿಗೆ ವೆಚ್ಚಗಳಾಗುವುದರಿಂದ ಬಳಸುವ ಡಾಟಾಗಳ ಮೇಲೆ ಕನಿಷ್ಟ ದರ ವಿಧಿಸಲಾಗುತ್ತದೆ. ಸದ್ಯ ಸುಮಾರು  2000  ಚದರ ಅಡಿಯಲ್ಲಿ  ಈ ಸಿಗ್ನಲ್‌ ಲಭ್ಯವಿರುತ್ತದೆ. ತೀರಾ ಅಗತ್ಯ ಇರುವ ವಿದ್ಯಾರ್ಥಿಗಳಿಗೆ, ತುರ್ತು ಇಂಟರ್ನೆಟ್‌ ಅಗತ್ಯ ಇದ್ದವರಿಗೆ, ವರ್ಕ್‌ ಫ್ರಂ ಹೋಂ ವ್ಯವಸ್ಥೆಯ ಮಂದಿಗೆ ಈ ಸಾರ್ವಜನಿಕ ವೈ ಫೈ ಬಳಕೆ ಮಾಡಬಹುದು. ಈ ಯೋಜನೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳು ಇದ್ದು ನೆಟ್ವರ್ಕ್ ಲೋಪದೋಷಗಳ ಕಡೆಗೂ ಗಮನಹರಿಸಲಾಗುತ್ತಿದೆ.

ಇದನ್ನು ಓದಿ: ಶಿವಮೊಗ್ಗ, ಬಳ್ಳಾರಿ ಸೇರಿದಂತೆ 6ಜಿಲ್ಲೆಗಳು ಅನ್​ಲಾಕ್​; ಇನ್ನುಳಿದ 7 ಜಿಲ್ಲೆಗಳಲ್ಲಿ ಲಾಕ್​ಡೌನ್​ ಮುಂದುವರಿಕೆ

ಟೆಲಿಕಾಂ ಇಲಾಖೆಗಳು ಅನುಮತಿಯೊಂದಿಗೆ ಆರಂಭವಾಗುವ ಈ ಯೋಜನೆಗೆ  ವೇಗದ ಇಂಟರ್ನೆಟ್‌ ಅಗತ್ಯವಿದೆ. ಕಮಿಲದಲ್ಲಿ ಬಿ ಎಸ್‌ ಎನ್‌ ಎಲ್‌ ಭಾರತ್‌ ಏರ್‌ ಫೈಬರ್‌ ಮೂಲಕ ಇಂಟರ್ನೆಟ್‌ ಸಂಪರ್ಕ ಪಡೆದು ಪ್ರತ್ಯೇಕ ಡಿವೈಸ್‌ ಮೂಲಕ ಸಾರ್ವಜನಿಕ ವೈ ಫೈ ನೀಡಲಾಗುತ್ತಿದೆ. ಇಂದು ಇಂಟರ್ನೆಟ್‌ ಖಾಸಗೀ ವಲಯಕ್ಕೆ ಬಿ ಎಸ್‌ ಎನ್‌ ಎಲ್ ಪ್ರಾಂಚೈಸಿ ಮೂಲಕ ನೀಡುವ ಕಾರಣದಿಂದ ಸಾಮಾನ್ಯ ಜನರಿಗೂ ಇಂತಹ ಸಂಪರ್ಕ ಪಡೆಯಲು ಕಷ್ಟವಾಗಿದೆ. ಈ ಕಾರಣದಿಂದ ಸಾರ್ವಜನಿಕ ವೈ ಫೈ ಉದ್ದೇಶ ಉತ್ತಮವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 2020 ಡಿಸೆಂಬರ್ 9 ರಂದು ಪ್ರಧಾನ ಮಂತ್ರಿಯ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್ (ಪಿಎಂ-ವಾಣಿ) ಚೌಕಟ್ಟಿನಡಿಯಲ್ಲಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳ ಮೂಲಕ ಬ್ರಾಡ್‌ಬ್ಯಾಂಡ್ ಅನ್ನು ಹೆಚ್ಚಿಸುವ ಟೆಲಿಕಾಂ ಇಲಾಖೆಯ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು. ಡಿಜಿಟಲ್ ಸಂವಹನ ಮೂಲಸೌಕರ್ಯವನ್ನು ರಚಿಸುವ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯ ಮುಂದುವರಿದ ಭಾಗ ಇದಾಗಿದೆ. ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್ ಪೂರೈಕೆದಾರರ ಮೂಲಕ ಬ್ರಾಡ್‌ಬ್ಯಾಂಡ್ ಒದಗಿಸುವುದು ಕೂಡಾ ಸರಕಾರದ ಉದ್ದೇಶವಾಗಿತ್ತು. ಇದಕ್ಕೆ ಒಟಿಪಿ ಮೂಲಕ ರಿಜಿಸ್ಟರ್‌ ಮಾಡುವುದು  ಹಾಗೂ ಡಾಟಾಗಳ ಬಳಕೆಯ ಮೇಲೆ ನಿಗಾ ಇರಿಸುವ ವ್ಯವಸ್ಥೆಯನ್ನೂ ಹೊಂದಿದೆ. ಹೀಗಾಗಿ ದುರ್ಬಳಕೆ ತಡೆಗೆ ಸರಕಾರವೇ ವ್ಯವಸ್ಥೆ ಮಾಡಿದೆ.‌
Published by: Seema R
First published: June 21, 2021, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories