Coronavirus: ಅಕ್ಟೋಬರ್ ಅಂತ್ಯದವರೆಗೆ ಕೇರಳಕ್ಕೆ ಹೋಗಬೇಡಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮನವಿ

ಜಿಲ್ಲಾಡಳಿತದ ನಿರ್ಧಾರಕ್ಕೆ ಗಡಿಭಾಗದ ಜನರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲವುದಕ್ಕೂ ಮಂಗಳೂರನ್ನೇ ಆಶ್ರಯಿಸಬೇಕಾಗಿರೋದ್ರಿಂದ ಅತ್ತ ಕೇರಳಕ್ಕೂ ಹೋಗಲಾರದೆ ಇತ್ತ ಮಂಗಳೂರಿಗೂ ಬರಲಾರದೆ ಅಂತತ್ರರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಗಳೂರು: ಕೇರಳ ರಾಜ್ಯದಿಂದ (Kerala State) ದಕ್ಷಿಣ ಕನ್ನಡ ಜಿಲ್ಲೆಗೆ (Dakshina Kannada) ಕೊರೋನಾ, ನಿಫಾ ಕಂಟಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಎರಡು ತಿಂಗಳುಗಳ ಕಾಲ ಕೇರಳ ಪ್ರವೇಶ, ಆಗಮನಕ್ಕೆ ನಿರ್ಬಂಧ ವಿಧಿಸಿದೆ. ತುರ್ತು ಕಾರಣವಿಲ್ಲದೇ ಯಾರು ಅನಗತ್ಯ ಪ್ರಯಾಣಿಸಬೇಡಿ ಎಂದು ಮನವಿ ಮಾಡಿಕೊಂಡಿದೆ. ಕೇರಳ ರಾಜ್ಯದಲ್ಲಿ ಕೋವಿಡ್ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಅಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಇದರ ಜೊತೆ ನಿಫಾ ವೈರಸ್ ಸಹ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದೆಲ್ಲದರ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೊರೋನಾ ಪಾಸಿಟಿವ್ ಪ್ರಕರಣ ದಿನಿನಿತ್ಯ 200 ಮೇಲೆ ಬರ್ತಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಿಂದ ದ.ಕ ಜಿಲ್ಲೆಗೆ ಬರುವವರು ಹಾಗೂ ಅಲ್ಲಿಗೆ ತೆರಳುವವರಿಗೆ ನಿರ್ಬಂಧ ವಿಧಿಸಿದೆ. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಒಂದಿಷ್ಟು ಸೂಚನೆಗಳನ್ನು ನೀಡಿದ್ದು ಕೇರಳದಿಂದ ಬರುವ ಪ್ಯಾರಾ ಮೆಡಿಕಲ್, ನರ್ಸಿಂಗ್ ಸೇರಿದಂತೆ ವಿದ್ಯಾರ್ಥಿಗಳು ಸಹ ಅಕ್ಟೋಬರ್ ಅಂತ್ಯವರೆಗೆ ಮಂಗಳೂರಿಗೆ ಬರಬೇಡಿ ಎಂದು ಹೇಳಿದ್ದಾರೆ.

ಕೇರಳದಲ್ಲಿ ಇದ್ದವರಿಗೆ ಈ ಬಗ್ಗೆ ಆಯಾ ಶಿಕ್ಷಣ ಸಂಸ್ಥೆ ಸೂಚನೆ ನೀಡುವಂತೆ ಹೇಳಲಾಗಿದೆ. ಇದರ ಜೊತೆಗೆ ಕೇರಳಕ್ಕೆ ತೆರಳುವ ಉದ್ದೇಶ ಇದ್ದವರು ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಸೂಚನೆ ನೀಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಆಸ್ಪತ್ರೆ, ನರ್ಸಿಂಗ್ ಹೋಮ್, ಕಚೇರಿ, ಹೊಟೇಲ್, ಕೈಗಾರಿಕೆಗಳಲ್ಲಿರುವ ಕೇರಳ ಮೂಲದ ಸಿಬ್ಬಂದಿಗಳು ಸಹ ಕೇರಳದಿಂದ ಬಂದು ಹೋಗುವುದನ್ನು ಕಡಿಮೆಗೊಳಿಸಿ ಎಂದು ಹೇಳಲಾಗಿದೆ. ಉದ್ಯೋಗದಾತರು ಕೇರಳ ಮೂಲದ ಸಿಬ್ಬಂದಿಗಳನ್ನು ಸೇರಿಸಿಕೊಳ್ಳದಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ತುರ್ತು ಕಾರಣವಿಲ್ಲದೇ ಪ್ರಯಾಣಿಸಬೇಡಿ ಎಂದು ಜಿಲ್ಲಾಡಳಿತ ಸೂಚಿಸಿದೆ.

ಕೇರಳದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಜೊತೆ ನಿಫಾ ಸೋಂಕು ಕೂಡ ಕೇರಳದಲ್ಲಿ ಆತಂಕ ಮೂಡಿಸಿದೆ. ಆದರೆ ಕೇರಳ ಸರ್ಕಾರ ಇದರ ಬಗ್ಗೆ ಕ್ಯಾರೇ ಅನ್ನದೇ ರಾಜ್ಯದಲ್ಲಿ ವಿಧಿಸಿದ್ದ ಕೊವಿಡ್ ಷರತ್ತುಗಳನ್ನೆಲ್ಲಾ ತೆಗದುಹಾಕಿದೆ. ಅಲ್ಲದೇ ಶಾಲಾ ಕಾಲೇಜುಗಳನ್ನು ನಡೆಸಲು ತೀರ್ಮಾನಿಸಿದೆ. ಇದರಿಂದ ರಾಜ್ಯದ ಗಡಿ ಭಾಗದಲ್ಲಿ ಆತಂಕ ಮೂಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ- ಮಂಗಳೂರು ಸಂಪರ್ಕವನ್ನೇ ಸ್ಥಗಿತಗೊಳಿಸಲು ಸೂಚಿಸಿದೆ.

ಜನರ ವಿರೋಧ

ಜಿಲ್ಲಾಡಳಿತದ ನಿರ್ಧಾರಕ್ಕೆ ಗಡಿಭಾಗದ ಜನರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲವುದಕ್ಕೂ ಮಂಗಳೂರನ್ನೇ ಆಶ್ರಯಿಸಬೇಕಾಗಿರೋದ್ರಿಂದ ಅತ್ತ ಕೇರಳಕ್ಕೂ ಹೋಗಲಾರದೆ ಇತ್ತ ಮಂಗಳೂರಿಗೂ ಬರಲಾರದೆ ಅಂತತ್ರರಾಗಿದ್ದೇವೆ. ಅಖಂಡ ಭಾರತದ ಬಗ್ಗೆ ಮಾತನಾಡುವ ಪಕ್ಷವೇ ಆಡಳಿತದಲ್ಲಿದ್ದು, ಈಗ ರಾಜ್ಯ ರಾಜ್ಯದ ನಡುವೆಯೇ ಕಂದಕ ಸೃಷ್ಟಿಸುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಕಂಪೆನಿಗಳಲ್ಲಿ ಉದ್ಯೋಗ ಮಾಡುತ್ತಿರುವವರೂ ಜಿಲ್ಲಾಡಳಿತದ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ತಿಂಗಳ ಕಾಲ ಲಾಕ್ ಡೌನ್ ನಿಂದ ಮನೆಯಲ್ಲೇ ಉಳಿಯಬೇಕಾಯಿತು. ಆಮೇಲೆ ಮತ್ತೆ ಕಂಪೆನಿ ಆರಂಭವಾಗಿ ಜೀವನ ಇನ್ನೇನು ಸ್ವಲ್ಪ ಸುಧಾರಿಸುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಜಿಲ್ಲಾಡಳಿತ ಈ ಆದೇಶ ಮಾಡಿದೆ. ನಾವೇನು ಗಡಿಭಾಗದಲ್ಲಿ ಹುಟ್ಟಿದ್ದೇ ತಪ್ಪಾ ಅಂತಾ ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾಸರಗೋಡು ಮೂಲದ ನಿಶಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: HD Devegowda: ಆಂಜನೇಯ ದೇಗುಲಕ್ಕೆ ಬಂದ ಎಚ್.ಡಿ.ದೇವೇಗೌಡರಿಗೆ ಪೂರ್ಣಕುಂಭ ಸ್ವಾಗತ ಮಾಡಿದ ಉರುವಾರೆ ಗ್ರಾಮಸ್ಥರು

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡರೂ ಸಹ ಕೋವಿಡ್ ಕೇಸ್ 100ಕ್ಕಿಂತ ಕೆಳಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ನೀಡಿರುವ ಈ ಸೂಚನೆ ಎಷ್ಟು ಪರಿಣಾಮಕಾರಿಯಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
Published by:HR Ramesh
First published: