• Home
  • »
  • News
  • »
  • state
  • »
  • ದಕ್ಷಿಣ ಕನ್ನಡದಲ್ಲಿ ಹೆಚ್ಚಾದ ಸೋಂಕು; ವಾರಂತ್ಯದಲ್ಲಿ ಧರ್ಮಸ್ಥಳ, ಕುಕ್ಕೆ ದೇವಸ್ಥಾನಗಳಿಗೆ ಭಕ್ತರಿಗಿಲ್ಲ ಪ್ರವೇಶ

ದಕ್ಷಿಣ ಕನ್ನಡದಲ್ಲಿ ಹೆಚ್ಚಾದ ಸೋಂಕು; ವಾರಂತ್ಯದಲ್ಲಿ ಧರ್ಮಸ್ಥಳ, ಕುಕ್ಕೆ ದೇವಸ್ಥಾನಗಳಿಗೆ ಭಕ್ತರಿಗಿಲ್ಲ ಪ್ರವೇಶ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

covid 19: ಕಳೆದ ಒಂದು ವಾರದಿಂದ ದೇವಾಲಯಗಳಲ್ಲಿ ದೇವರ ಸೇವೆಗೆ ಅನುಮತಿ ನೀಡಲಾಗಿತ್ತು. ಆದರೆ, ಇದೀಗ ಕೋವಿಡ್​ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಎಲ್ಲಾ ಸೇವೆಗಳಿಗೂ ನಿರ್ಬಂಧ ಹೇರಲಾಗಿದೆ.

  • Share this:

ಪುತ್ತೂರು (ಆ. 4): ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹೊಸ ಕೋವಿಡ್-19 ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಮುಖ್ಯವಾಗಿ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಈ ಕ್ಷೇತ್ರಗಳಲ್ಲಿ ಮುಂದಿನ ಆದೇಶದವರೆಗೆ ಭಕ್ತಾಧಿಗಳಿಗೆ ದೇವರ ಸೇವೆಯನ್ನು ನಿಷೇಧಿಸಲಾಗಿದೆ. ಜಿಲ್ಲೆಯ ಪ್ರಮುಖ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ , ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ನಾಳೆಯಿಂದಲೇ ಈ ಆದೇಶ ಜಾರಿಗೆ ಬರಲಿದೆ. ಈ ಮೂರೂ ಪ್ರಮುಖ ದೇವಸ್ಥಾನಗಳಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಿದ್ದು, ಈ ರೀತಿಯಿಂದಲೂ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ಪ್ರಕರಣ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಇದೇ ಹಿನ್ನಲೆ ದೇವಸ್ಥಾನಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿ ಆದೇಶ ಹೊರಡಿಸಲಾಗಿದೆ. 


ಸೇವೆಗಳು ಬಂದ್​, ದರ್ಶನಕ್ಕೆ ಮಾತ್ರ ಅವಕಾಶ


ಕಳೆದ ಒಂದು ವಾರದಿಂದ ದೇವಾಲಯಗಳಲ್ಲಿ ದೇವರ ಸೇವೆಗೆ ಅನುಮತಿ ನೀಡಲಾಗಿತ್ತು. ಆದರೆ, ಇದೀಗ ಕೋವಿಡ್​ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಎಲ್ಲಾ ಸೇವೆಗಳಿಗೂ ನಿರ್ಬಂಧ ಹೇರಲಾಗಿದೆ.   ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಪ್ರಮುಖ ಸೇವೆಗಳಾದ ಸರ್ಪಸಂಸ್ಕಾರ ಪೂಜೆ, ಆಶ್ಲೇಷಬಲಿ, ನಾಗಪ್ರತಿಷ್ಟೆ ಸೇರಿದಂತೆ ಎಲ್ಲಾ ಸೇವೆಗಳನ್ನೂ ನಿಷೇಧಿಸಲಾಗಿದೆ. ಇವುಗಳಲ್ಲಿ ಸರ್ಪಸಂಸ್ಕಾರ ಸೇವೆಯನ್ನು ಭಕ್ತಾಧಿಗಳು ಆನ್ ಲೈನ್ ಮೂಲಕವೇ ಬುಕ್ ಮಾಡಿ, ಕ್ಷೇತ್ರ ನಿಗದಿಪಡಿಸುವ ದಿನಾಂಕದಂದು ಸೇವೆ ಮಾಡುವ ವ್ಯವಸ್ಥೆಯಿದ್ದು, ಈಗಾಗಲೇ ಸೇವೆಯ ದಿನಾಂಕವನ್ನು ಕಾಯ್ದಿರಿಸಿದ ಭಕ್ತಾಧಿಗಳಿಗೂ ಈ ಮಾರ್ಗಸೂಚಿ ಅನ್ವಯವಾಗುತ್ತದೆ.


ವಾರಾಂತ್ಯದಲ್ಲಿ ದೇವರ ದರ್ಶನಕ್ಕೂ ಇಲ್ಲ ಅವಕಾಶ


ನಾಳೆಯಿಂದ ಅಗಸ್ಟ್ 15ರವರೆಗೆ ದ.ಕ ಜಿಲ್ಲೆಯ ಮೂರು ಪ್ರಮುಖ ದೇವಸ್ಥಾನಗಳಲ್ಲಿ ಸೇವೆ ಸ್ಥಗಿತ ಮಾಡಲಾಗಿದ್ದು, ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ಭಕ್ತರ ಪ್ರವೇಶಕ್ಕೂ ನಿರ್ಬಂಧ, ದೇವರ ದರ್ಶನ ಕ್ಕೂ ಅವಕಾಶವಿಲ್ಲ. ಪ್ರತೀ ನಿತ್ಯ ಬೆ.7ರಿಂದ ಸಂಜೆ 7ರವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ವಾರಾಂತ್ಯದಲ್ಲಿ  ದೇವರ ದರ್ಶನ, ವಸತಿ ಗೃಹಗಳಲ್ಲಿ ತಂಗುವುದಕ್ಕೂ ನಿಷೇಧ ಹೇರಲಾಗಿದೆ. ಉಳಿದ ದಿನ ವಸತಿ ಗೃಹಗಳಲ್ಲಿ ತಂಗುವವರಿಗೆ 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ


ಈಗಾಗಲೇ ಸೇವೆಯನ್ನು ಕಾಯ್ದಿರಿಸಿದ ಭಕ್ತಾಧಿಗಳಿಗೆ ಕ್ಷೇತ್ರದಲ್ಲಿ ಸೇವೆಗಳು  ಕೋವಿಡ್​ ಮಾರ್ಗಸೂಚಿ ಹಿಂಪಡೆದ ಬಳಿಕ ಮಾಡಿದಂತೆ ಸೇವೆ ಕಾಯ್ದಿರಿಸಿದ ಭಕ್ತಾಧಿಗಳಿಗೆ ಮೊದಲ ಅವಕಾಶವನ್ನು ನೀಡುವ ಸಾಧ್ಯತೆಯಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅನ್ನಪ್ರಸಾದ ಸೇವೆಯ ಜೊತೆಗೆ ಕ್ಷೇತ್ರದಲ್ಲಿ ಭಕ್ತಾಧಿಗಳಿಗೆ ವಸತಿ ವ್ಯವಸ್ಥೆಯನ್ನೂ ಈ ಹೊಸ ಮಾರ್ಗಸೂಚಿಯ ಪ್ರಕಾರ ನಿರ್ಬಂಧಿಸಲಾಗಿದೆ.


ಅದೇ ರೀತಿ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೂ ಈ ನಿಯಮ ಅನ್ವಯಿಸುತ್ತಿದ್ದು,  ಈ ದೇವಸ್ಥಾನದಲ್ಲೂ ಯಾವುದೇ ಸೇವೆ ಹಾಗೂ ಅನ್ನಸಂತರ್ಪಣೆಗೆ ಅವಕಾಶವನ್ನು ನಿರಾಕರಿಸಲಾಗಿದೆ. ದೇವಸ್ಥಾನಗಳ ಸೇವೆಗಳ ನಿರ್ಬಂಧಗಳ ಜೊತೆಗೆ ದಕ್ಷಿಣಕನ್ನಡಕ್ಕೆ ಕೇರಳ ಭಾಗದಿಂದ ಬರುವ ಜನರ ಮೇಲೂ ನಿಗಾವಹಿಸಲು ತೀರ್ಮಾನಿಸಲಾಗಿದೆ.


ಇದನ್ನು ಓದಿ: ಬಿಎಸ್​ವೈ ವಿರುದ್ಧ ಬಂಡಾಯ ಎದ್ದಿದ್ದ ನಾಯಕರಿಗಿಲ್ಲ ಸಚಿವ ಸ್ಥಾನ; ಪ್ರಮಾಣ ವಚನದಿಂದ ದೂರ ಉಳಿದ ನಾಯಕರು


72 ಗಂಟೆ ಹಿಂದಿನ ಕೊರೊನಾ ನೆಗೆಟೀವ್ ವರದಿಯನ್ನು ಹೊಂದಿದ ಜನ ಮಾತ್ರ ದಕ್ಷಿಣಕನ್ನಡ ಜಿಲ್ಲೆಯನ್ನು ಪ್ರವೇಶಿಸಲು ಅನುಮತಿ ನೀಡಿಲಾಗಿದೆ. ತುರ್ತುಸಂದರ್ಭಗಳಲ್ಲಿ ಜಿಲ್ಲೆಗೆ ಆಗಮಿಸಲು ಅವಕಾಶವನ್ನು ನೀಡಲಾಗಿದ್ದು, ಇವುಗಳಿಗೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ


. ಕೇರಳ ರಾಜ್ಯದಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ಜಿಲ್ಲಾಡಳಿತದ ಈ ನಿಯಮಗಳಿಗೆ ಕೇರಳ ಭಾಗದ ಜನ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯನ್ನು ಸಂಪರ್ಕಿಸುವ ಕೇರಳ ಭಾಗದ ಅಧಿಕೃತ ರಸ್ತೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚುವ ಪ್ರಕ್ರಿಯೆಯೂ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ಹೆಚ್ಚಳವನ್ನು ತಡೆಯುವ ನಿಟ್ಟಿನಲ್ಲಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.

Published by:Seema R
First published: