ಕಾಮನ್​​​ಸೆನ್ಸ್​​ ಇಲ್ವೇನ್ರಿ.. ದಕ್ಷಿಣ ಕನ್ನಡ ಡಿಸಿ ವಿರುದ್ಧ ಸಿಎಂ ಬೊಮ್ಮಾಯಿ ಕೆಂಡಾಮಂಡಲ

ಗ್ಲೌಸ್ ಇಲ್ಲದೆ ಏನ್ ಆಡಳಿತ ಮಾಡ್ತೀರಾ ಇಲ್ಲಿ, ಆರೋಗ್ಯ ಸಿಬ್ಬಂದಿಗೆ ಬೇಕಾದ ಸೌಲಭ್ಯ ಕೋಡೋಕೆ ಆಗಲ್ವಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ರು. ಅಷ್ಟು ಕಾಮನ್‌ಸೆನ್ಸ್ ಇಲ್ಲದೇ ಏನ್ರೀ ಮಾಡ್ತೀರಾ ಇಲ್ಲಿ ಎಂದು ಸಿಎಂ ತರಾಟೆ ತೆಗೆದುಕೊಂಡರು.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ದಕ್ಷಿಣಕನ್ನಡ:  ಜಿಲ್ಲೆಯಲ್ಲೇ ಕೊರೊನಾ ಸೋಂಕು ಹೆಚ್ಚಾಗಿದೆ. ಹೀಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ದಕ್ಷಿಣಕನ್ನಡ ಜಿಲ್ಲೆಯ ಪ್ರವಾಸ ನಡೆಸಿದರು. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಅವರು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟಾಜ್ಞೆ ಹೊರಡಿಸಿದ್ದಾರೆ.  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿದ್ರು. ಜಿಲ್ಲೆಯ ಪಾಸಿಟಿವ್ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸದ್ದಕ್ಕೆ ಪ್ರಾರಂಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಸಿ.ಎಂ ಹಾಗೂ ಆರೋಗ್ಯ ಸಚಿವ ಸುಧಾಕರ್ ಆದಷ್ಟು ಸೋಕಿಂತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಿ ಎಂದ್ರು. ಇದೇ ಸಂದರ್ಭ ಸಭೆಯಲ್ಲಿ ಶಾಸಕ ಯು.ಟಿ ಖಾದರ್ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್, ಗ್ಲೌಸ್​​ ಕೊರತೆ ಇದೆ ಎಂಬುದರ ಬಗ್ಗೆ ಗಮನ ಸೆಳೆದ್ರು. ಈ ಸಂದರ್ಭ ಕೆಂಡಾಮಂಡಲರಾದ ಸಿ.ಎಂ ಬೊಮ್ಮಾಯಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ್ರು.

ಗ್ಲೌಸ್ ಇಲ್ಲದೆ ಏನ್ ಆಡಳಿತ ಮಾಡ್ತೀರಾ ಇಲ್ಲಿ, ಆರೋಗ್ಯ ಸಿಬ್ಬಂದಿಗೆ ಬೇಕಾದ ಸೌಲಭ್ಯ ಕೋಡೋಕೆ ಆಗಲ್ವಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ರು. ಅಷ್ಟು ಕಾಮನ್‌ಸೆನ್ಸ್ ಇಲ್ಲದೇ ಏನ್ರೀ ಮಾಡ್ತೀರಾ ಇಲ್ಲಿ. ಎಸ್.ಡಿ.ಆರ್.ಎಫ್ ಫಂಡ್‌ನಿಂದ ಇವತ್ತೇ ಖರೀದಿ ಮಾಡಿ ಸಂಜೆಯೊಳಗೆ ನನಗೆ ರಿಪೋರ್ಟ್ ಕೊಡಿ ಎಂದು ತಾಕೀತು ಮಾಡಿದ್ರು. ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರನ್ನು ಸಹ ತರಾಟೆಗೆ ತೆಗೆದುಕೊಂಡ ಸಿ.ಎಂ ಏನಯ್ಯ, ನೀನ್ ಏನ್ ಮಾಡ್ತಾ ಇದ್ದೀಯಾ ಇಲ್ಲಿ ಅಂತ ಹೇಳು ಅಂದ್ರು. ಏನು ಸಮಸ್ಯೆ ಇದೆ ಅಂತ ಡಿ.ಸಿ ಗಮನಕ್ಕೆ ತರೋಕೆ ಗೊತ್ತಿಲ್ವಾ, ಮೋಸ್ಟ್ ಸೀನಿಯರ್ ಹೆಲ್ತ್ ಆಫೀಸರ್ ಆಗಿದ್ರೂ ನೀನ್ ಏನ್ ನಿದ್ದೆ ಮಾಡ್ತ ಇದ್ದೀಯಾ ಎಂದು ತರಾಟೆಗೆ ತೆಗೆದುಕೊಂಡ್ರು.

ಇನ್ನು ಇದೇ ಸಂದರ್ಭ ಮಕ್ಕಳಿಗೆ ಕೋವಿಡ್ ಸೋಂಕು ತಗುಲುತ್ತಿರುವ ಬಗ್ಗೆಯು ಎಚ್ಚರಿಕೆ ನೀಡಿದ ಸಿ.ಎಂ ಎಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳ ಐ.ಸಿ.ಯು ಮತ್ತು ಬೆಡ್‌ಗಳು ತಯಾರಾಗಿದೆ ಎಂದ್ರು. ಮಕ್ಕಳ ಇಮ್ಯುನಿಟಿ ಪವರ್ ಹೆಚ್ಚಿಸೋ ಸಲುವಾಗಿ ಪೌಷ್ಟಿಕ ಆಹಾರ ನೀಡಲು ಸೂಚಿಸಲಾಗಿದೆ ಅಂದ್ರು. ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮಕ್ಕಳನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಲು ಸೂಚಿಸಿದ್ದು ಯಾವುದೇ ಪರಿಸ್ಥಿತಿ ಬಂದ್ರು ಸನ್ನಧರಾಗಿರಲು ನಾವು ರೆಡಿ ಅಂದ್ರು.

ಇದನ್ನೂ ಓದಿ: ಪ್ರಾಣ ಉಳಿಸಿ ಪ್ರಾಣ ಬಿಟ್ಟ.. ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿ, ಕೊಚ್ಚಿ ಹೋದ ವ್ಯಕ್ತಿ

ಬೆಳಗ್ಗೆ 10:50ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ನೇರವಾಗಿ ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ತೆರಳಿದರು. ಅಲ್ಲಿ 32 ಬೆಡ್‌ಗಳ ತೀವ್ರ ನಿಗಾ ಘಟಕದ ಉದ್ಘಾಟನೆ ಮಾಡಿದರು. ಅಲ್ಲಿಂದ ನಗರದ ಉರ್ವದಲ್ಲಿ ನೂತನವಾಗಿ ನಿರ್ಮಿಸಿದ್ದ ಅಂಬೇಡ್ಕರ್ ಭವನ ಉದ್ಘಾಟಿಸಿ ಬಳಿಕ ಕೋವಿಡ್ ನಿಯಂತ್ರಣ ಸಂಬಂಧದ ಸಭೆ ನಡೆಸಿದ್ದಾರೆ. ಜಿ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಡಿ ಭಾಗದಲ್ಲಿ ಜಾಗ್ರತೆ ವಹಿಸಬೇಕು, ಕೋವಿಡ್ ಉತ್ತುಂಗಕ್ಕೆ ಹೋದ ಸಮಯದಲ್ಲಿ ಯಾವ ರೀತಿ ಕೆಲಸ ಮಾಡಿದ್ರೋ ಹಾಗೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಮೀಣ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರೌಂಡ್ ಲೆವಲ್‌ನಲ್ಲಿ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದಾರೆ.

ಸಿ.ಎಂ ಬಸವರಾಜ್ ಬೊಮ್ಮಾಯಿಗೆ ಆರೋಗ್ಯ ಸಚಿವ ಸುಧಾಕರ್, ಸಚಿವ ಎಸ್.ಅಂಗಾರ, ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಜನಪ್ರತಿನಿಧಿಗಳು ಸಾಥ್ ನೀಡಿದರು. ಇನ್ನು ರಾಜ್ಯದಲ್ಲಿ ಆಗಸ್ಟ್ 15ರ ಬಳಿಕ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ನಾವು ತಜ್ಞರ ಸಮಿತಿ ಸಭೆಯನ್ನು ಕಳೆದ ವಾರ ಮಾಡಿದ್ದೇವೆ ಮುಂದಿನ ವಾರ ಮತ್ತೆ ಮಾಡ್ತೇವೆ. ಗಡಿ ಜಿಲ್ಲೆ ಅಷ್ಟೇ ಅಲ್ಲ ಬೆಂಗಳೂರು ಸೇರಿ ರಾಜ್ಯದ ಬಗ್ಗೆ ಚರ್ಚೆ ಮಾಡ್ತೇವೆ. ಕೋವಿಡ್ ನಿಯಂತ್ರಣಕ್ಕೆ ಕಾಲ ಕಾಲಕ್ಕೆ ಬದಲಾವಣೆ ಮಾಡ್ತೇವೆ ಕಟ್ಟು ನಿಟ್ಟಿನ ಕ್ರಮಗಳ ಬಗ್ಗೆ ಚರ್ಚೆ ಮಾಡ್ತೇವೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಚಿವ ಎಸ್.ಅಂಗಾರ, ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್ ಸೇರಿದಂತೆ ಜಿಲ್ಲೆಯ ಶಾಸಕರು ಸಾಥ್ ನೀಡಿದ್ರು. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು ಈ ಬಗ್ಗೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಿ.ಎಂ ಅಧಿಕಾರಿಗಳಿಗೆ ಸೂಚಿಸಿದ್ರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಭೆ ಮುಗಿಸಿ ಬಳಿಕ ಉಡುಪಿ ಜಿಲ್ಲೆಗೆ ತೆರಳಿದ ಸಿ.ಎಂ ಅಲ್ಲಿಯೂ ಕೋವಿಡ್ ನಿಯಂತ್ರಣ ಸಂಬಂಧ ಪರಿಶೀಲನಾ ಸಭೆ ನಡೆಸಿದ್ರು. ಇಂದು ವಾಸ್ತವ್ಯ ಮಾಡಲಿರುವ ಸಿ.ಎಂ ನಾಳೆ ಗಡಿ ಭಾಗದ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಲಿದ್ದಾರೆ. ಒಟ್ಟಿನಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸಿ.ಎಂ ನೀಡಿದ ಸೂಚನೆಗಳು ಅನುಷ್ಠಾನವಾಗಿ ಕೋವಿಡ್ ಮೂರನೇ ಅಲೆಯಿಂದ ಮುಕ್ತಿ ಪಡೆಯಬೇಕಾಗಿದೆ.
Published by:Kavya V
First published: