ಇದು ಕುಗ್ರಾಮವಾದರೂ ಪವರ್ ಕಟ್ ಸಮಸ್ಯೆ ಇಲ್ಲ; ಗ್ರಾಮಸ್ಥರಿಂದಲೇ ಕರೆಂಟ್ ಉತ್ಪಾದನೆ

ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಕೊಡಗು ವ್ಯಾಪ್ತಿಯಲ್ಲಿರುವ ಚೆಂಬು ಗ್ರಾಮದಲ್ಲಿ ಜನರೇ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಪರಿಣಾಮ ಇಲ್ಲಿ ಪವರ್ ಕಟ್ ಬಾಧೆ ಎಂದೂ ಬಂದಿಲ್ಲ.

ಪುತ್ತೂರು ಕೊಡಗು ಗಡಿಭಾಗದ ಚೆಂಗು ಗ್ರಾಮದಲ್ಲಿ ಜಲವಿದ್ಯುತ್ ಉತ್ಪಾದನೆ

ಪುತ್ತೂರು ಕೊಡಗು ಗಡಿಭಾಗದ ಚೆಂಗು ಗ್ರಾಮದಲ್ಲಿ ಜಲವಿದ್ಯುತ್ ಉತ್ಪಾದನೆ

  • Share this:
ಪುತ್ತೂರು: ವಿದ್ಯುತ್ ಸಮಸ್ಯೆಯನ್ನು ಅನುಭವಿಸದ ಗ್ರಾಮ, ಪಟ್ಟಣವನ್ನು ನಮ್ಮ ದೇಶದಲ್ಲಿ ಹುಡುಕುವುದು ಕಷ್ಟಸಾಧ್ಯವೇ. ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಇಂದಿಗೂ ವಿದ್ಯುತ್ತನ್ನೇ ಕಾಣದ ಹಲವು ಪ್ರದೇಶಗಳು ಇಂದಿಗೂ ನಮ್ಮ ಮುಂದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಕೊಡಗಿನ ಚೆಂಬು ಗ್ರಾಮ ಮಾತ್ರ ಇವುಗಳಿಂದ ಸ್ವಲ್ಪ ಡಿಫರೆಂಟ್. ಜಲವಿದ್ಯುತ್ತನ್ನೇ ಬಳಸಿಕೊಂಡು ತಮಗೆ ಬೇಕಾದ ವಿದ್ಯುತ್ ಉತ್ಪಾದಿಸುತ್ತಿರುವ ಇಲ್ಲಿನ ಕುಟುಂಬಗಳು ಈ ಗ್ರಾಮವನ್ನು ವಿದ್ಯುತ್‍ನಲ್ಲಿ ಸ್ವಾವಲಂಬಿ ಗ್ರಾಮವನ್ನಾಗಿ ಮಾಡಿದೆ.

ಈ ಗ್ರಾಮದ ಜನರನ್ನು ಪವರ್ ಕಟ್ ಎನ್ನುವ ಬಾಧೆ ಎಂದಿಗೂ ಬಾಧಿಸಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಕೊಡಗು ವ್ಯಾಪ್ತಿಯಲ್ಲಿರುವ ವಿದ್ಯುತ್ ನಲ್ಲಿ ಸ್ವಾವಲಂಬಿಯಾದ ಚೆಂಬು ಗ್ರಾಮದ ಯಶೋಗಾಥೆ. ಹೆಚ್ಚಾಗಿ ಅರಣ್ಯ ಪ್ರದೇಶವನ್ನೇ ಹೊಂದಿರುವ ಇಲ್ಲಿ ಸಮರ್ಪಕವಾದ ರಸ್ತೆ ಸಂಪರ್ಕವಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ. ಹೆಚ್ಚಾಗಿ ದಟ್ಟಾರಣ್ಯವನ್ನೇ ಹೊಂದಿರುವ ಈ ಗ್ರಾಮದ ಕೆಲವು ಕಡೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿದ್ದು, ಇನ್ನು ಕೆಲವು ಕಡೆಗೆ ವಿದ್ಯುತ್ ಕಂಬಗಳನ್ನು ಹಾಕಲು ಅರಣ್ಯ ಇಲಾಖೆಯ ಆಕ್ಷೇಪವಿದೆ.

ಈ ಕಾರಣದಿಂದಾಗಿ ಇಲ್ಲಿ ವಿದ್ಯುತ್ ಸಂಪರ್ಕವು ಕಷ್ಟ ಸಾಧ್ಯ ಎಂದು ತಿಳಿದ ಇಲ್ಲಿನ ಕುಟುಂಬಗಳು ಈ ಭಾಗದಲ್ಲಿ ಹೇರಳವಾಗಿ ಹರಿಯುವ ಜಲಧಾರೆಗಳನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ತೊಡಗಿದ್ದಾರೆ. ಪರಿಣಾಮ ಇಲ್ಲಿನ ಶೇಕಡ 80 ಕ್ಕೂ ಮಿಕ್ಕಿ ಮನೆಗಳು ಇಂದು ಜಲವಿದ್ಯುತ್ತನ್ನೇ ವರ್ಷಪೂರ್ತಿ ಬಳಸಿಕೊಂಡು ತನ್ನ ವಿದ್ಯುತ್ ಕೊರತೆಯನ್ನು ನೀಗಿಸಿದೆ.

ಸರ್ಕಾರಿ ಯೋಜನೆಗಳ ಸದುಪಯೋಗ:

ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಚೆಂಬು ಗ್ರಾಮಪಂಚಾಯತ್ ಇಲ್ಲಿನ ಬಹುತೇಕ ಮನೆಗಳಿಗೆ ವಿದ್ಯುತ್ ಉತ್ಪಾದಿಸಲು ಬೇಕಾದ ಸಲಕರಣೆಗಳನ್ನು ಕಲ್ಪಿಸುವ ಮೂಲಕ ವಿದ್ಯುತ್ ಸ್ವಾವಲಂಭಿಯನ್ನಾಗಿ ರೂಪಿಸುವಲ್ಲಿ ಸಹಕಾರ ನೀಡಿದೆ.

ಇದನ್ನೂ ಓದಿ: ಕಸ ಎಸೆದವರ ಫೋಟೋ ಕೊಟ್ಟರೆ 500 ರೂ; ಗ್ರಾ.ಪಂ. ಆಫರ್​ಗೆ ಎಚ್ಚೆತ್ತುಕೊಂಡ ಜನರು

ವಿದ್ಯುತ್ ಉತ್ಪಾದನೆ ಹೀಗೆ:

ಬಂಡೆಗಳ ಮಧ್ಯದಿಂದ, ಹಳ್ಳಗಳಿಂದ ನೀರನ್ನು ಪೈಪ್ ಮೂಲಕ ತಮ್ಮ ಜಮೀನಿನಲ್ಲಿ ನಿರ್ಮಿಸಿದ ಟ್ಯಾಂಕ್ ನಲ್ಲಿ ನೀರನ್ನು ಸಂಗ್ರಹಿಸುವ ಇಲ್ಲಿನ ಗ್ರಾಮಸ್ಥರು, ಸಂಗ್ರಹಿಸಿದ ನೀರನ್ನು ವಿವಿಧ ಆಕಾರದ ಪೈಪ್ ಗಳನ್ನು ಜೋಡಿಸಿ ಟರ್ಬೈನ್ ಗೆ ಹಾಯಿಸುತ್ತಾರೆ. ನೀರಿನ ರಭಸಕ್ಕೆ ಟರ್ಬೈನ್ ತಿರುಗಿ, ಜನರೇಟರ್ ಮೂಲಕ ವಿದ್ಯುತ್ ಉತ್ಪಾದನೆಯಾಗುತ್ತದೆ. 1 ಕೆ.ವಿ, 2.ಕೆ.ವಿ ಹೀಗೆ ವಿದ್ಯುತ್ ಉತ್ಪಾದಿಸುವ ಇಲ್ಲಿನ ಗ್ರಾಮಸ್ಥರು ದಿನದ 24 ಗಂಟೆಯೂ ಯಾವುದೇ ಅಡಚಣೆಗಳಿಲ್ಲದೆ ವಿದ್ಯುತ್ ಪಡೆಯುತ್ತಿದ್ದೇವೆ ಎನ್ನುತ್ತಾರೆ ಚೆಂಬು ಗ್ರಾಮಸ್ಥ ಉದಯ್ ಕುಮಾರ್.

ಹೆಚ್ಚಾಗಿ ಈ ಭಾಗದಲ್ಲಿ ಹರಿಯುವ ನೀರಿನ ಮೂಲಗಳಿದ್ದು ಇವುಗಳನ್ನು ಪ್ಲಾಸ್ಟಿಕ್ ಪೈಪ್‍ಗಳ  ಮೂಲಕ ಶೇಖರಿಸಿ ಅವುಗಳನ್ನು  ಟರ್ಬೈನ್ ಮೂಲಕ ಹರಿಸಿ ವಿದ್ಯುತ್ ತಯಾರಿಸಲಾಗುತ್ತಿದೆ.

ವೆಚ್ಚವೂ ಕಡಿಮೆ, ಸರ್ಕಾರದಿಂದಲೂ ನೆರವು:

30 ರಿಂದ 50 ಸಾವಿರ ರೂಪಾಯಿಗಳಿಗೆ ಈ ವ್ಯವಸ್ಥೆಯನ್ನು ಆಳವಡಿಸುವ ಮೂಲಕ ನಿರಂತರ ವಿದ್ಯುತ್‍ನ್ನು ಪಡೆಯುತ್ತಿದ್ದಾರೆ. ಸರಕಾರದಿಂದ ಈ ವ್ಯವಸ್ಥೆಗೆ ಸಬ್ಸಿಡಿಯನ್ನೂ ನೀಡಲಾಗುತ್ತಿದ್ದು, ಇದರಿಂದಾಗಿ ಇಲ್ಲಿನ ಗ್ರಾಮಸ್ಥರು ಹೆಚ್ಚಿನ ಬಂಡವಾಳ ಹೂಡದೆಯೇ ನಿರಂತರ ವಿದ್ಯುತ್ ಪಡೆಯುತ್ತಿದ್ದಾರೆ.

ಇದನ್ನೂ ಓದಿ: MB Patil- ಎಂ.ಬಿ. ಪಾಟೀಲ್ ಸೊಕ್ಕು ಮುರಿಯಲು ಮಾದಿಗ ಸಂಘಟನೆ ಸಂಕಲ್ಪ

ಬೇಸಿಗೆಯಲ್ಲಿ ರಾತ್ರಿ ಮಾತ್ರ ಉತ್ಪಾದನೆ:

ಮಳೆಗಾಲದಲ್ಲಿ ನಿರಂತರ ಕರೆಂಟ್ ಪಡೆಯುವ ಇಲ್ಲಿನ ಗ್ರಾಮಸ್ಥರು ಬೇಸಿಗೆಯಲ್ಲಿ ಹಗಲು ಹೊತ್ತು ನೀರನ್ನು ಕೃಷಿತೋಟಗಳಿಗೆ ಬಿಟ್ಟು, ರಾತ್ರಿ ಮಾತ್ರ ಟರ್ಬೈನ್ ಗಳನ್ನು ಬಳಸುತ್ತಾರೆ. ಈ ಮೂಲಕ  ಕೃಷಿಗೂ ಹಾಗೂ ಕರೆಂಟಿಗೂ ನೀರಿನ ಎಲ್ಲಾ ಗೃಹೋಸಮತೋಲನವನ್ನು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಮನೆಗೆ ಅತೀ ಅಗತ್ಯವಾಗಿ ಬೇಕಾದಂತಹ ಎಲ್ಲಾ ವಿದ್ಯುತ್ ಉಪಕರಣಗಳನ್ನು ಜಲವಿದ್ಯುತ್ ಮೂಲಕವೇ ಉಪಯೋಗಿಸುತ್ತಿದ್ದು, ಯಾವ ಮಳೆ-ಗಾಳಿ ಬಂದರೂ ಯಾವುದೇ ಅಡಚಣೆಯಿಲ್ಲದೆ ನಿರಂತರ ವಿದ್ಯುತ್ ಸಿಗುತ್ತದೆ ಎನ್ನುತ್ತಾರೆ ಗ್ರಾಮಸ್ಥೆ ರತ್ನಾವತಿ.

ಎಲ್ಲಾ ರೀತಿಯ ಶುಲ್ಕ, ಹಣ ಪಾವತಿ ಮಾಡಿಯೂ ಅಡಚಣೆ ಮುಕ್ತ ವಿದ್ಯುತ್ ಸಂಪರ್ಕ ಸಿಗದೆ ಪರದಾಡುವ ಜನರ ಮಧ್ಯೆ, ಚೆಂಬು ಗ್ರಾಮದ ಜನ ಇದ್ಯಾವುದರ ಜಂಜಾಟವೇ ಇಲ್ಲದೆ ವಿದ್ಯುತ್ ಬಳಸುತ್ತಿದ್ದಾರೆ. ನೈಸರ್ಗಿಕ ಸಂಪನ್ಮೂಲವನ್ನು ಬಳಸಿ ಚೆಂಬು ಗ್ರಾಮದ ಜನ ವಿದ್ಯುತ್‍ನಲ್ಲಿ ಸ್ವಾವಲಂಭನೆಯನ್ನು ಹೊಂದುವ  ಮೂಲಕ ಮಾದರಿ ಗ್ರಾಮವಾಗಿ ಗುರುತಿಸಿಕೊಂಡಿದ್ದಾರೆ.

ವರದಿ: ಅಜಿತ್ ಕುಮಾರ್
Published by:Vijayasarthy SN
First published: