ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂ ವಂಚನೆ

ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯೋರ್ವನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮಂಗಳೂರು (ಆ. 16):  ಲಾಕ್ ಡೌನ್ ಬಳಿಕ ಹಲವರ ಉದ್ಯೋಗ ಕಡಿತವಾಗಿದೆ. ಕಂಪೆನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಕಂಪನಿಗಳು ನಷ್ಟವನ್ನು ತುಂಬಿಸಿಕೊಳ್ಳುತ್ತಿದೆ. ಹೀಗಾಗಿ ಬೇರೆ  ಉದ್ಯೋಗವನ್ನು ಅರಸಿ ವಿದೇಶಗಳಿಗೆ ತೆರಳುವ ಸಂಖ್ಯೆ ಹೆಚ್ಚಾಗಿದೆ‌‌. ಇದನ್ನೇ ಬಂಡವಾಳವನ್ನಾಗಿ ಉಪಯೋಗಿಸಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ವಿದೇಶದ ಆಸೆ  ತೋರಿಸಿ ಮಹಿಳೆಗೆ ಮೋಸ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ವಿದೇಶದಲ್ಲಿ ಕಚೇರಿಯೊಂದರಲ್ಲಿ ಕೆಲಸ ಇರುವುದಾಗಿ, ಅದಕ್ಕೆ ಸಂಬಂಧಪಟ್ಟ ವೀಸಾವನ್ನು ಮಾಡಿಕೊಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿದ ಆರೋಪದಲ್ಲಿ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

  ಬಲ್ಮಠದ ಖಾಸಗಿ ಆಸ್ಪತ್ರೆ ಸಮೀಪದ ನಿವಾಸಿ ಜೆರಿ ಇಥಿಯಲ್ ಸಿಖಾ (32) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಕಾವೂರಿನ ಮಹಿಳೆಯೊಬ್ಬರು ವಿದೇಶದಲ್ಲಿ ಉದ್ಯೋಗಕ್ಕೆ ತೆರಳಲು ಉದ್ದೇಶಿಸಿ ಎಪ್ರಿಲ್ ತಿಂಗಳ ಆರಂಭದಲ್ಲಿ ನಗರದ ಜೆರಿ ಇಥಿಯಲ್ ಸಿಖಾ ಎಂಬವರ ಕಚೇರಿಗೆ ತೆರಳಿದ್ದರು. ಉದ್ಯೋಗದ ಬಗ್ಗೆ ವಿಚಾರಿಸಿದಾಗ, ಯುರೋಪ್‌ನ ಲಿಥುವೇನಿಯಾ ದೇಶದಲ್ಲಿ ಕಚೇರಿಯಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ. ತಿಂಗಳಿಗೆ 3. 5 ಲಕ್ಷ ರೂ. ವೇತನ ಸಿಗಲಿದೆ. ಜೊತೆಗೆ ವೀಸಾ ಕೂಡ ಕೊಡಲಾಗುವುದು. ಇದಕ್ಕೆ ಒಟ್ಟು 5. 5 ಲಕ್ಷ ರೂ. ವೆಚ್ಚ ತಗುಲುವುದಾಗಿ ಆರೋಪಿಯು ಮಹಿಳೆಗೆ ವಿವರ ನೀಡಿದ್ದ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

  ಉದ್ಯೋಗ ಲಭಿಸುವ ಆಶಾಭಾವನೆಯಲ್ಲಿ ಮಹಿಳೆಯು ಚಿನ್ನಾಭರಣ ಅಡವಿಟ್ಟು ಒಂದು ಲಕ್ಷ ರೂ. ನಗದನ್ನು ನೇರವಾಗಿ ಹಾಗೂ ಒಂದು ಲಕ್ಷ ರೂ.ವನ್ನು ನೆಫ್ಟ್ ಮೂಲಕ ಆರೋಪಿಯ ಕಚೇರಿಯ ಬ್ಯಾಂಕ್ ಖಾತೆಗೆ ಪಾವತಿಸಿದ್ದರು. ನಂತರ ಆರೋಪಿಯು ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆಯದಿರುವುದು ಮಹಿಳೆಯ ಗಮನಕ್ಕೆ ಬಂದಿದೆ. ಈ ವೇಳೆ ಹಣ ವಾಪಸ್ ಮಾಡಲು ಕೇಳಿದಾಗ ವಂಚಿಸಿರುವುದಾಗಿ ಮಹಿಳೆ ದೂರು ನೀಡಿದ್ದರು.

  ಈ ಪ್ರಕರಣ ಕುರಿತು ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯೋರ್ವನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ. ಬಂಧಿತ ಆರೋಪಿಯಿಂದಲೇ ವಂಚನೆಗೊಳಗಾದ ಮತ್ತಿಬ್ಬರು ಸಂತ್ರಸ್ತರು ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದರು.

  ಇದನ್ನು ಓದಿ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಮಧ್ಯವರ್ತಿಗಳೇ ಹೊರತು ರೈತರಲ್ಲ: ಸಚಿವೆ ಶೋಭಾ ಕರಂದ್ಲಾಜೆ

  ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ವಿದೇಶಾಂಗ ವ್ಯವಹಾರ ಸಚಿವಾಲಯದ ಅಂಗಸಂಸ್ಥೆ ವಲಸಿಗರ ರಕ್ಷಕ ಸಂಸ್ಥೆಯಿಂದ (Protector of Emigrants-POE) ವಿದೇಶಿ ಉದ್ಯೋಗ ನೇಮಕಾತಿ ಏಜೆನ್ಸಿಗಳ ಅಧಿಕೃತ ಪಟ್ಟಿ ಬಿಡುಗಡೆಗೊಳಿಸಿತ್ತು. ಯಥಾವತ್ ಪ್ರತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ವಿದೇಶಿ ಉದ್ಯೋಗದ ಆಮಿಷ ನೀಡಿ ವಂಚನೆ ಆಗಿದ್ದರೆ, ಅಂಥವರು ನೇರವಾಗಿ ಪೊಲೀಸರಿಗೆ ದೂರು ನೀಡಬಹುದಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

  ಒಟ್ಟಿನಲ್ಲಿ ಮೋಸ‌ ಹೋಗುವವು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಅನ್ನೋದಕ್ಕೆ ಮಂಗಳೂರಿನ ಈ ಪ್ರಕರಣ ನಿದರ್ಶನ ವಾಗಿದೆ..ಮೋಸ ಮಾಡುವ ಘಟನೆಗಳು ಪ್ರತಿನಿತ್ಯ ದಾಖಲಾಗುತ್ತಿದ್ದರೂ ಜನ ಇನ್ನೂ ಎಚ್ಚೆತ್ತುಕೊಳ್ಳದಿರೋದು ದುರಂತವಾಗಿದೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: