ಯಾರು ಈ ಆದಿತ್ಯ ರಾವ್?; ಮಂಗಳೂರು ಬಾಂಬರ್ ಬಗ್ಗೆ ಇಲ್ಲಿದೆ ಮಾಹಿತಿ...

ಕಳೆದ 1 ತಿಂಗಳಿನಿಂದಲೂ ಬಾಂಬ್ ಇದ್ದ ಬ್ಯಾಗ್​ ಆದಿತ್ಯ ರಾವ್ ಬಳಿಯೇ ಇತ್ತು. ಆತ ಆ ಬ್ಯಾಗನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ.

ಆದಿತ್ಯ ರಾವ್​

ಆದಿತ್ಯ ರಾವ್​

 • Share this:
  ಬೆಂಗಳೂರು (ಜ. 22): ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಬಾಂಬ್ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿ ಆದಿತ್ಯರಾವ್ ಇಂದು ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಉಡುಪಿ ಮೂಲದ ಆದಿತ್ಯ ರಾವ್​ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗಿದ್ದರೆ ಯಾರು ಈ ಆದಿತ್ಯ ರಾವ್? ಆತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಲು ಕಾರಣವೇನು? ಇಲ್ಲಿದೆ ಮಾಹಿತಿ...

  ಉಡುಪಿ ಜಿಲ್ಲೆಯ ಮಣಿಪಾಲದವನಾದ ಆದಿತ್ಯ ರಾವ್ 2018ರಲ್ಲಿ ಬೆಂಗಳೂರಿನಲ್ಲಿ ಬಂಧಿತನಾಗಿದ್ದ. ಬೆಂಗಳೂರು ವಿಮಾನ ನಿಲ್ದಾಣಕ್ಕೂ ಹುಸಿಬಾಂಬ್ ಕರೆ ಮಾಡಿದ್ದ ಆದಿತ್ಯ ರಾವ್​ನನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ 6 ತಿಂಗಳು ಜೈಲು ಶಿಕ್ಷೆ ಕೂಡ ವಿಧಿಸಲಾಗಿತ್ತು. ಮಂಗಳೂರಲ್ಲಿ ಕೃತ್ಯ ನಡೆದ ದಿನವೂ ಮತ್ತೆ ಮಂಗಳೂರು ಏರ್​ಪೋರ್ಟ್​ಗೆ ಕರೆ ಮಾಡಿ ಬಾಂಬ್ ಇಟ್ಟಿರುವ ಬೆದರಿಕೆಯೊಡ್ಡಿದ್ದ. ನನ್ನನ್ನು ಜೈಲುಪಾಲು ಮಾಡಿದ್ದಕ್ಕೆ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದೇನೆ ಎಂದಿದ್ದ ಆದಿತ್ಯ ರಾವ್ ಮಂಗಳೂರು ವಿಮಾನ ನಿಲ್ದಾಣದಲ್ಲಿ 3 ಕಡೆ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ.

  2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಲು ಆದಿತ್ಯ ರಾವ್ ಅರ್ಜಿ ಸಲ್ಲಿಸಿದ್ದ. ಆದರೆ, ಸೂಕ್ತ ದಾಖಲೆಗಳು ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ತನ್ನ ಅರ್ಜಿ ತಿರಸ್ಕೃತವಾಗಿದ್ದಕ್ಕೂ ಆದಿತ್ಯ ರಾವ್​ಗೆ ಆಕ್ರೋಶವಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.

  ಇದನ್ನೂ ಓದಿ: ಮಂಗಳೂರು ಬಾಂಬ್​ ಪತ್ತೆ ಪ್ರಕರಣ; ಆರೋಪಿ ಆದಿತ್ಯ ರಾವ್​ ಪೊಲೀಸರಿಗೆ ಶರಣು

  ಕಳೆದ 1 ತಿಂಗಳಿನಿಂದಲೂ ಬಾಂಬ್ ಇದ್ದ ಬ್ಯಾಗ್​ ಆದಿತ್ಯ ರಾವ್ ಬಳಿಯೇ ಇತ್ತು. ಆತ ಆ ಬ್ಯಾಗನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಟಾಯ್ಲೆಟ್​ಗೆ ಹೋಗುವಾಗಲೂ ಬ್ಯಾಗ್ ತೆಗೆದುಕೊಂಡೇ ಹೋಗುತ್ತಿದ್ದ. ಅದೇ ಬ್ಯಾಗ್​ನಲ್ಲಿ ಮಂಗಳೂರು ವಿಮಾನ ನಿಲ್ದಾಣದ ಬಳಿ ಬಾಂಬ್ ಪತ್ತೆಯಾಗಿತ್ತು.

  ಕಳೆದ ವರ್ಷ ಡಿ.16ರಂದು ಮಂಗಳೂರಿನ ಕುಡ್ಲ ಕ್ವಾಲಿಟಿ ಹೋಟೆಲ್​ನಲ್ಲಿ ಆದಿತ್ಯ ರಾವ್ ಬಿಲ್ಲಿಂಗ್ ಸೆಕ್ಷನ್​ನಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ, ಇದ್ದಕ್ಕಿದ್ದಂತೆ ಆತ ಜ. 13ರಂದು ಕೆಲಸ ಬಿಟ್ಟು ಹೋಗಿದ್ದ. ನೋಡಲು ಶಿಕ್ಷಿತನಂತೆ ಕಾಣುತ್ತಿದ್ದ ಆದಿತ್ಯ ರಾವ್ ಹೋಟೆಲ್​ಗೆ ಬರುವಾಗ ಪ್ರತಿದಿನ ಬರುವಾಗ ಬ್ಯಾಗ್ ತರುತ್ತಿದ್ದ. ಆತ ಎಲ್ಲೇ ಹೋದರೂ ಆ ಬ್ಯಾಗ್​ ಅನ್ನು ಜೊತೆಯಲ್ಲೇ ಕೊಂಡೊಯ್ಯುತ್ತಿದ್ದ. ಆ ಬ್ಯಾಗ್​ನಲ್ಲಿ ಬಿಳಿ ಪೌಡರ್ ಇತ್ತು. ಆ ಬಗ್ಗೆ ಕೇಳಿದಾಗ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಗ್ರಿಪ್​ಗೆ ಬಳಸುತ್ತೇನೆ ಎಂದು ಹೇಳುತ್ತಿದ್ದ ಎಂದು ಕುಡ್ಲ ಹೋಟೆಲ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಆದಿತ್ಯ ಇಂಜಿನಿಯರಿಂಗ್ ಪದವೀಧರ:

  ಮೂಲತಃ ಉಡುಪಿ ನಿವಾಸಿಯಾಗಿರುವ ಆದಿತ್ಯ ರಾವ್ ತಂದೆ ಮತ್ತು ತಮ್ಮನ ಜತೆ ವಾಸಿಸುತ್ತಿದ್ದ. ಮಣಿಪಾಲದ ಹೌಸಿಂಗ್ ಬೋರ್ಡ್​ನಲ್ಲಿ ವಾಸ ಮಾಡುತ್ತಿದ್ದ. ಬೆಂಗಳೂರಿನ ಪೊಲೀಸರು ಈ ಹಿಂದೆ ಆದಿತ್ಯ ರಾವ್​ನನ್ನು ಬಂಧಿಸಿದ ಬಳಿಕ ಇಡೀ ಕುಟುಂಬ ಉಡುಪಿಯಲ್ಲಿದ್ದ ಮನೆಯನ್ನು ಖಾಲಿ ಮಾಡಿ ಮಂಗಳೂರಿನಲ್ಲಿ ವಾಸಿಸುತ್ತಿತ್ತು. ಪ್ರತಿ ತಿಂಗಳಿಗೊಮ್ಮೆ ಆದಿತ್ಯ ರಾವ್ ಕುಟುಂಬ ಉಡುಪಿಗೆ ಭೇಟಿ ನೀಡುತ್ತಿತ್ತು. ಆದಿತ್ಯ ರಾವ್ ಅಪ್ಪ ಬ್ಯಾಂಕ್ ಮ್ಯಾನೇಜರ್ ಆಗಿದ್ದರು ಎಂಬ ವಿಷಯ ತಿಳಿದುಬಂದಿದೆ.

  ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರನಾಗಿದ್ದ ಆದಿತ್ಯ ರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಲುವಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದ. ಆದರೆ, ಕೆಲಸ ಸಿಗದ ಕಾರಣ ಮಾನಸಿಕವಾಗಿ ಕುಗ್ಗಿದ್ದ. ಆದಿತ್ಯನ ತಮ್ಮ ಮೂಡಬಿದಿರೆಯಲ್ಲಿ ಬ್ಯಾಂಕ್ ನೌಕರನಾಗಿದ್ದ. 1 ತಿಂಗಳ ಹಿಂದೆ ಆತ ಮಂಗಳೂರು ಚಿಲಿಂಬಿಗೆ ಶಿಫ್ಟ್ ಆಗಿದ್ದ. ಆದಿತ್ಯನ ತಾಯಿ ಇತ್ತೀಚೆಗೆ ಸಾವನ್ನಪ್ಪಿದ್ದರು. ಆದಿತ್ಯನಿಗೆ
  ಕೆಲಸ ಸಿಗದ ಕಾರಣ ಬಾಣಸಿಗನಾಗಿ, ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ. ಕೆಲ ಮಠ, ಕಾರ್ಯಕ್ರಮಗಳಿಗೆ ಬಡಿಸಲು ಹೋಗುತ್ತಿದ್ದ.

  ಇದನ್ನೂ ಓದಿ: Aditya Rao: ರಹಸ್ಯ ಸ್ಥಳದಲ್ಲಿ ಮಂಗಳೂರು ಬಾಂಬರ್​ ಆದಿತ್ಯ ರಾವ್​ ವಿಚಾರಣೆ

  ಏನಿದು ಘಟನೆ?:

  ಸೋಮವಾರ ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ಏರ್​​ಪೋರ್ಟ್​ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದು ಕಂಡು ಬಂದಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳದವರು ಆ ಬಾಂಬನ್ನು ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಹೋಗಿ, ಸ್ಫೋಟಿಸಲಾಗಿತ್ತು. ಇದರಿಂದಾಗಿ ಭಾರೀ ಅಪಾಯವೊಂದು ತಪ್ಪಿತ್ತು.

  ಇದನ್ನೂ ಓದಿ: ಆರೋಪಿ ಆದಿತ್ಯ ರಾವ್ ಬಂಧನ ಹಿನ್ನೆಲೆ; ವಿಚಾರಣೆಗಾಗಿ ಬೆಂಗಳೂರಿಗೆ ದೌಡಾಯಿಸಿದ ಮಂಗಳೂರು ಪೊಲೀಸರು

  ಶಂಕಿತನ ಜಾಡು ಹಿಡಿದ ಪೊಲೀಸರು ಉಡುಪಿ ಮನೆಯನ್ನು ಶೋಧಿಸಿದ್ದರು. ಮನೆಯಲ್ಲಿದ್ದವರನ್ನು ವಿಚಾರಣೆ ಮಾಡಿದ್ದರು. ಪ್ರಕರಣದಲ್ಲಿ ಆದಿತ್ಯ ರಾವ್ ಕೈವಾಡದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಈಗ ಬೆಂಗಳೂರಿಗೆ ಬಂದು ಆದಿತ್ಯ ರಾವ್ ಶರಣಾಗಿದ್ದಾನೆ.  ಬೆಂಗಳೂರು ಡಿಜಿ ಕಚೇರಿಗೆ ಹೋಗಿ ನಾನೇ ಆದಿತ್ಯರಾವ್ ಅಂತ ಹೇಳಿಕೊಂಡಿದ್ದ. ತಕ್ಷಣ ಹೊಯ್ಸಳ ವಾಹನದಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಈತನನ್ನು ಕರೆತರಲಾಗಿತ್ತು. ಠಾಣೆಗೆ ಬಂದ ಇನ್ಸ್​ಪೆಕ್ಟರ್ ಹರಿವರ್ಧನ್ ಆರೋಪಿ ಆದಿತ್ಯ ರಾವ್​ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
  First published: