ಮಂಗಳೂರು(ಡಿಸೆಂಬರ್. 02): ಅರಬ್ಬಿ ಸಮುದ್ರದಲ್ಲಿ ನಡೆದ ಮೀನುಗಾರಿಕಾ ದೋಣಿ ದುರಂತ ಪ್ರಕರಣದಲ್ಲಿ ಆರು ಮಂದಿ ಮೀನುಗಾರರ ಶವಗಳು ಪತ್ತೆಯಾಗಿದೆ. ಮುಳುಗು ತಜ್ಞರು, ಸ್ಥಳೀಯ ಮೀನುಗಾರರ ಕಾರ್ಯಾಚರಣೆಯಿಂದ ಶವ ದೊರಕಿದೆ. ಮೀನುಗಾರಿಕಾ ಸಚಿವರು ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸೋಮವಾರ ತಡರಾತ್ರಿ ಅರಬ್ಬಿಸಮುದ್ರದಲ್ಲಿ ದುರಂತಕ್ಕೀಡಾಗಿದ್ದ ಮೀನುಗಾರಿಕಾ ಬೋಟ್‌ನಿಂದ ನಾಪತ್ತೆಯಾಗಿದ್ದ ಆರು ಜನರ ಮೃತದೇಹಗಳು ಪತ್ತೆಯಾಗಿವೆ. ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಇಂದು ಸಹ ಮೀನುಗಾರರು, ಮುಳುಗುತಜ್ಞರು ಕಾರ್ಯಾಚರಣೆ ನಡೆಸಿ ಸಮುದ್ರದ ಆಳದಲ್ಲಿ ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡಿದ್ದ ನಾಲ್ವರ ಮೃತದೇಹ ಪತ್ತೆ ಮಾಡಿದ್ದಾರೆ. ಮಂಗಳೂರಿನ ಬೇಂಗ್ರೆ ನಿವಾಸಿಗಳಾದ ಪ್ರೀತಂ, ಪಾಂಡುರಂಗ, ಚಿಂತನ್, ಅನ್ಸರ್, ಜೀಯಾ, ಹಸೈನಾರ್ ಎಂದು ಗುರುತಿಸಲಾಗಿದೆ.
ಸೋಮವಾರ ಮುಂಜಾನೆ ಶ್ರೀರಕ್ಷಾ ಹೆಸರಿನ ಈ ಬೋಟ್ ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. 25 ಜನ ಮೀನುಗಾರರಿದ್ದ ಈ ಬೋಟ್ ತಡರಾತ್ರಿ ಮೀನುಗಾರಿಕೆ ಮುಗಿಸಿ ವಾಪಾಸು ಬರುವಾಗ ಅವಘಡಕ್ಕಿಡಾಗಿ ಪಲ್ಟಿಯಾಗಿತ್ತು. 19 ಜನ ಮೀನುಗಾರರು ದುರ್ಘಟನೆಯಲ್ಲಿ ಬಚಾವಾಗಿದ್ದರೆ, ಆರು ಜನ ಕಣ್ಮರೆಯಾಗಿದ್ದರು. ಇಂದು ಕೂಡಾ ಕಾರ್ಯಾಚರಣೆ ನಡೆಸುವ ಸಲುವಾಗಿ ಮಂಗಳೂರು ಮೀನುಗಾರಿಕಾ ಬಂದರನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಕರಾಳ ದಿನವನ್ನಾಗಿ ಆಚರಿಸಿ ಮೀನುಗಾರರು ತಮ್ಮ ತಮ್ಮ ಬೋಟ್ ಮೂಲಕ ಘಟನೆ ನಡೆದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದರು.
ಇದನ್ನೂ ಓದಿ : ಚಿಕ್ಕೋಡಿ ಜಿಲ್ಲಾ ರಚನೆಗೆ ವರಸೆ ಬದಲಿಸಿದ ಬಿಜೆಪಿ ನಾಯಕರು; ಜಿಲ್ಲೆ ರಚನೆಗೆ ಹಿಂದೇಟು
ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಆಸ್ಪತ್ರೆಗೆ ಮೀನುಗಾರಿಕಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ