• Home
  • »
  • News
  • »
  • state
  • »
  • MLC Electionನಿಂದ ಅಂತರ ಕಾಯ್ದುಕೊಂಡ ಅನಂತ್​​ಕುಮಾರ್​​ ಹೆಗಡೆ; BJPಯಲ್ಲಿ ಎಲ್ಲವೂ ಸರಿ ಇಲ್ಲ!?

MLC Electionನಿಂದ ಅಂತರ ಕಾಯ್ದುಕೊಂಡ ಅನಂತ್​​ಕುಮಾರ್​​ ಹೆಗಡೆ; BJPಯಲ್ಲಿ ಎಲ್ಲವೂ ಸರಿ ಇಲ್ಲ!?

ಸಂಸದ ಅನಂತ್​ಕುಮಾರ್​​ ಹೆಗಡೆ

ಸಂಸದ ಅನಂತ್​ಕುಮಾರ್​​ ಹೆಗಡೆ

Anantkumar Hegde: ಪಕ್ಷದ ಪ್ರಭಾವಿ ಮುಖಂಡ ಎನಿಸಿಕೊಂಡಿರುವ ಫೈರ್ ಬ್ರ್ಯಾಂಡ್ ಅನಂತ್​​ಕುಮಾರ್ ಹೆಗಡೆ ಮಾತ್ರ ಎಂಎಲ್‌ಸಿ ಚುನಾವಣಾ ಕಣದಿಂದ ಕಣ್ಮರೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

  • Share this:

ಕಾರವಾರ: ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಪರಿಷತ್ ಚುನಾವಣೆ (MLC Election) ಕಾವು ಜೋರಾಗಿದ್ದು ಅಭ್ಯರ್ಥಿಗಳು (Candidate) ಅಬ್ಬರದ ಪ್ರಚಾರದಲ್ಲಿ (Election Campaign) ತೊಡಗಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಐದು ಶಾಸಕರನ್ನ ಹೊಂದಿರುವ ಬಿಜೆಪಿಗೆ ಈ ಚುನಾವಣೆ ಸಾಕಷ್ಟು ಮಹತ್ವವನ್ನ ಪಡೆದಿದ್ದು,  ಉಸ್ತುವಾರಿ ಸಚಿವ ಸೇರಿದಂತೆ ಪಕ್ಷದ ಎಲ್ಲ ಮುಖಂಡರೂ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗೆ (BJP Candidate) ಸಾಥ್ ನೀಡುತ್ತಿದ್ದಾರೆ. ಆದ್ರೆ ಪಕ್ಷದ ಪ್ರಭಾವಿ ಮುಖಂಡ ಎನಿಸಿಕೊಂಡಿರುವ ಫೈರ್ ಬ್ರ್ಯಾಂಡ್ ಅನಂತ್​​ಕುಮಾರ್​​ ಹೆಗಡೆ ಮಾತ್ರ ಎಂಎಲ್‌ಸಿ ಚುನಾವಣಾ ಕಣದಿಂದ ಕಣ್ಮರೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.


ಅಂತರ ಕಾಯ್ದುಕೊಂಡ ಅನಂತ್​​ಕುಮಾರ್​​ ಹೆಗಡೆ


ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಮಟ್ಟಿಗೆ ಅನಂತ್​​ಕುಮಾರ್​​ ಹೆಗಡೆ ಹೈಕಮಾಂಡ್ ಇದ್ದಂತೆ. ಯಾವುದೇ ಚುನಾವಣೆಗಳಿದ್ದರೂ ಸಹ ಅವರು ಸೂಚಿಸಿದ ಅಭ್ಯರ್ಥಿಗೇ ಮೊದಲು ಪ್ರಾಶಸ್ತ್ಯ ನೀಡಲಾಗುತ್ತದೆ ಅನ್ನೋದು ಪಕ್ಷದ ವಲಯದಲ್ಲೇ ಕೇಳಿಬರುತ್ತಿದ್ದ ಮಾತುಗಳು. ಆದ್ರೆ ಈ ಬಾರಿ ಪರಿಷತ್ ಚುನಾವಣೆ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದರೂ ಸಹ ಅನಂತ್​​ಕುಮಾರ್  ಮಾತ್ರ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗಾಗಲಿ ಅಥವಾ ಅಭ್ಯರ್ಥಿ ಪರ ಪ್ರಚಾರದಲ್ಲಾಗಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದು ಪಕ್ಷದವರಲ್ಲೂ ಸಹ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದು ಪಕ್ಷದ ಮುಖಂಡರುಗಳಿಗೂ ಇರಿಸುಮುರುಸು ಉಂಟುಮಾಡಿದೆ.


ಎಲ್ಲಾ ಮುಖ್ಯ ಕಾರ್ಯಕ್ರಮಗಳಿಗೂ ಗೈರು 


ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಕಾರವಾರದ ಗಣಪತಿ ಉಳ್ವೇಕರ್‌ಗೆ ಟಿಕೆಟ್ ನೀಡಲಾಗಿದ್ದು, ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಆದ್ರೆ ಅನಂತ್​​ಕುಮಾರ್ ಹೆಗಡೆ ಸೂಚಿಸಿದ್ದ ಅಭ್ಯರ್ಥಿಗೆ ಟಿಕೆಟ್ ಸಿಗದ ಹಿನ್ನೆಲೆ ಅವರು ಮುನಿಸಿಕೊಂಡಿದ್ದು, ಈ ಕಾರಣದಿಂದಲೇ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡ ಜನಸ್ವರಾಜ್ ಯಾತ್ರೆ ವೇಳೆಯಲ್ಲಿಯೂ ಅನಂತಕುಮಾರ ಗೈರಾಗಿದ್ದರು. ಈ ವೇಳೆ ದೆಹಲಿಯಲ್ಲಿದ್ದ ಅನಂತ್​​ಕುಮಾರ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಬೆಂಗಳೂರಿನಲ್ಲೇ ಉಳಿದುಕೊಳ್ಳುವ ಮೂಲಕ ಆ ಕಾರ್ಯಕ್ರಮದಿಂದಲೂ ದೂರ ಉಳಿದಿದ್ದರು. ಅಲ್ಲದೇ ಇದೀಗ ಪ್ರಚಾರ ವೇಳೆಯಲ್ಲಿಯೂ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನ ತೋರಿಸಿಕೊಟ್ಟಿದ್ದು ಅನಂತಕುಮಾರ ಗೈರು ಎದ್ದು ಕಾಣುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.


ಬೆಂಬಲಿಗರಲ್ಲಿ ಗೊಂದಲ 


ಜಿಲ್ಲೆಯಲ್ಲಿ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತ್​​ಕುಮಾರ್ ಹೆಗಡೆ ಫೈರ್ ಬ್ರ್ಯಾಂಡ್ ಎಂದೇ ಪ್ರಸಿದ್ಧಿ ಪಡೆದಿರುವ ಪ್ರಭಾವಿ ನಾಯಕ. ಪಕ್ಷದಲ್ಲೂ ಸಾಕಷ್ಟು ಪ್ರಭಾವವನ್ನ ಹೊಂದಿರುವ ಅನಂತಕುಮಾರ ಹೆಗಡೆಗೆ ಜಿಲ್ಲೆಯಲ್ಲಿ ಸಾಕಷ್ಟು ಅಭಿಮಾನಿ ಬಳಗವಿದ್ದು ಪರಿಷತ್ ಚುನಾವಣಾ ಪ್ರಚಾರದಲ್ಲಿ ಅವರ ಹಾಜರಾತಿಯಿಂದ ಬಹುಪಾಲು ಮತಗಳನ್ನ ಸೆಳೆಯಲು ಅನುಕೂಲವಾಗುತ್ತಿತ್ತು. ಆದ್ರೆ ಅನಂತಕುಮಾರ ಮಾತ್ರ ಬಹಿರಂಗವಾಗಿ ಎಲ್ಲಿಯೂ ಅಭ್ಯರ್ಥಿ ಪರ ಬೆಂಬಲ ವ್ಯಕ್ತಪಡಿಸಿಲ್ಲವಾಗಿದ್ದು ಚುನಾವಣಾ ಕಣದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಇದರಿಂದ ಅನಂತಕುಮಾರ ಬೆಂಬಲಿಗರಿಗೆ ಸಾಕಷ್ಟು ಗೊಂದಲ ಉಂಟುಮಾಡಿದ್ದು ಇದು ಪರೋಕ್ಷವಾಗಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನು ಈ ಬಗ್ಗೆ ಪಕ್ಷದ ವಕ್ತಾರರನ್ನ ಕೇಳಿದ್ರೆ ಅನಂತಕುಮಾರ ಹೆಗಡೆ ಜವಾಬ್ದಾರಿಯುತ ನಾಯಕನಾಗಿದ್ದು ತಮ್ಮದೇ ಆದ ಕೆಲಸ ಕಾರ್ಯಗಳನ್ನ ಹೊಂದಿದ್ದಾರೆ. ಈ ಕಾರಣದಿಂದ ಬಹಿರಂಗವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲವಾಗಿದ್ದು ಅನಂತಕುಮಾರ ಮುನಿಸಿಕೊಂಡಿರುವ ಆರೋಪವನ್ನ ತಳ್ಳಿಹಾಕಿದ್ದಾರೆ.


ಇದನ್ನೂ ಓದಿ: Karnataka Local Body Elections: 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ; ಸಂಪೂರ್ಣ ಮಾಹಿತಿ ಇಲ್ಲಿದೆ


ಒಟ್ಟಾರೇ ಮಹತ್ವದ ಚುನಾವಣೆಯ ಸಂದರ್ಭದಲ್ಲೇ ಪಕ್ಷದ ಪ್ರಭಾವಿ ಮುಖಂಡ ಅನಂತ್​​ಕುಮಾರ್ ಹೆಗಡೆ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸದಿರೋದು ಬಿಜೆಪಿ ನಾಯಕರುಗಳಿಗೆ ನುಂಗಲಾರದ ತುತ್ತಾಗಿದ್ದು ಇದು ಚುನಾವಣೆಯ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಅನ್ನೋದನ್ನ ಕಾದುನೋಡಬೇಕು.

Published by:Kavya V
First published: