ಪುತ್ತೂರು: ಕೊರೋನಾ ಸಾಂಕ್ರಾಮಿಕ ರೋಗ ಆವರಿಸಿದ ಬಳಿಕದ ದಿನಗಳಲ್ಲಿ ದೇಶದ ಎಲ್ಲಾ ಆಸ್ಪತ್ರೆಗಳೂ ಸಮಸ್ಯೆಗಳ ಆಗರವಾಗಿ ಬದಲಾಗಿವೆ. ಖಾಸಗಿ ಇರಲಿ, ಸರಕಾರಿ ಇರಲಿ ಕೊರೋನಾ ಪ್ರಕರಣಗಳ ನಿರ್ವಹಣೆಯಲ್ಲಿ ಎರಡೂ ಆಸ್ಪತ್ರೆಗಳು ಎಡವಿರುವ ವಿಚಾರಗಳೂ ಬೆಳಕಿಗೆ ಬಂದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಯೊಂದು ಈ ಎಲ್ಲಾ ಆರೋಪಗಳಿಂದ ಮುಕ್ತವಾಗಿ ತನ್ನ ಕೆಲಸ ನಿರ್ವಹಿಸಿದೆ. ಕಳೆದ ಬಾರಿಯ ಕೋವಿಡ್ ಸಂದರ್ಭದಲ್ಲಿ ತೋರಿದ ಕಾರ್ಯ ನಿರ್ವಹಣೆಗಾಗಿ ಈ ಆಸ್ಪತ್ರೆ ರಾಜ್ಯದಲ್ಲಿ ಉತ್ತಮ ನಿರ್ವಹಣೆಯಲ್ಲಿ ಮೂರನೇ ಸ್ಥಾನ ಹಾಗೂ ಜಿಲ್ಲೆಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಹೌದು, ಈ ಮನ್ನಣೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಂದಿದೆ. ಕೋವಿಡ್ ಮಹಾಮಾರಿ ಎಲ್ಲಾ ಕಡೆಗಳಲ್ಲಿ ಹೆಚ್ಚಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೂ ಹೆಚ್ಚಿನ ಸಂಖ್ಯೆಯ ಕೋವಿಡ್ ಪಾಸಿಟಿವ್ ರೋಗಿಗಳು ಚಿಕಿತ್ಸೆಗಾಗಿ ದಾಖಲಾಗಿದ್ದರು. ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯನ್ನು ಹೊರತುಪಡಿಸಿ ದಕ್ಷಿಣಕನ್ನಡ ಜಿಲ್ಲೆಯ ಅತೀ ದೊಡ್ಡ ಸರಕಾರಿ ಆಸ್ಪತ್ರೆಯಾಗಿರುವ ಪುತ್ತೂರು ಸರಕಾರಿ ಆಸ್ಪತ್ರೆ 100 ಬೆಡ್ ಗಳ ಆಸ್ಪತ್ರೆಯಾಗಿದೆ. ಕಳೆದ ಬಾರಿ ಇನ್ನೂರಕ್ಕೂ ಮಿಕ್ಕಿದ ಕೋವಿಡ್ ಪಾಸಿಟಿವ್ ರೋಗಿಗಳು ಈ ಆಸ್ಪತ್ರೆಯಲ್ಲಿ ದಾಖಲಾಗಿ, ಯಾವುದೇ ತೊಂದರೆಯಿಲ್ಲದೆ ಗುಣಮುಖರಾಗಿ ಹೋಗಿದ್ದಾರೆ. ಇವುಗಳಲ್ಲಿ ಕೇವಲ ಇಬ್ಬರು ರೋಗಿಗಳನ್ನು ಮಾತ್ರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿರುವುದನ್ನು ಹೊರತುಪಡಿಸಿ ಉಳಿದೆಲ್ಲಾ ರೋಗಿಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅಲ್ಲದೇ ಈ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ ಯಾವೊಬ್ಬ ರೋಗಿಯೂ ಮೃತಪಟ್ಟಿಲ್ಲ.
ಈ ಬಾರಿಯೂ ಕೋವಿಡ್ 19 ನ ಎರಡನೇ ಅಲೆ ಕಾರಣದಿಂದಾಗಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯ ಕೋವಿಡ್ ಪಾಸಿಟಿವ್ ರೋಗಿಗಳು ದಾಖಲಾಗುತ್ತಿದ್ದಾರೆ. ಈ ಕಾರಣಕ್ಕಾಗಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, 50 ಬೆಡ್ ಗಳಿಗೆ ಆಕ್ಸಿಜನ್ ಪೈಪ್ ಲೈನ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ 26 ಬೆಡ್ ಗಳನ್ನು ಕೇವಲ ಕೋವಿಡ್ ರೋಗಿಗಳಿಗಾಗಿಯೇ ಮೀಸಲಿಡಲಾಗಿದೆ ಎನ್ನುತ್ತಾರೆ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಆಶಾ ಪುತ್ತೂರಾಯ.
ಇದನ್ನು ಓದಿ: ಕೊರೋನಾ ನಿಯಂತ್ರಣ ಸಂಬಂಧ ಎಲ್ಲಾ ಜಿಲ್ಲಾ ಉಸ್ತುವಾರಿ, ಜಿಲ್ಲಾಧಿಕಾರಿ, ಎಸ್ಪಿಗಳೊಂದಿಗೆ ಸಿಎಂ ಬಿಎಸ್ವೈ ಸಭೆ
ಮುಖ್ಯವಾಗಿ ಈ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕಕ್ಕೆ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುತ್ತಿದ್ದು, ದಿನವೊಂದಕ್ಕೆ 50 ಕ್ಕೂ ಮಿಕ್ಕಿದ ರೋಗಿಗಳಿಗೆ ಡಯಾಲಿಸಿಸ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಕಳೆದ ಕೋವಿಡ್ ಸಂದರ್ಭದಲ್ಲಿ ಡಯಾಲಿಸಿಸ್ ಘಟಕವನ್ನು ತೆರೆಯುವ ಮೂಲಕ ಯಾವುದೇ ರೋಗಿಗೂ ಕೊರೋನಾ ವೈರಾಣು ತಗುಲದಂತೆ ನೋಡಿಕೊಳ್ಳಲಾಗಿದೆ. ಈ ಕಾರಣಕ್ಕಾಗಿಯೇ ಕೊರೋನಾ ಸಂದರ್ಭದಲ್ಲಿ ಡಯಾಲಿಸಿಸ್ ಘಟಕವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರಣಕ್ಕಾಗಿ ಈ ಆಸ್ಪತ್ರೆಗೆ ರಾಜ್ಯದಲ್ಲಿ ಮೂರನೇ ಉತ್ತಮ ಸರಕಾರಿ ಆಸ್ಪತ್ರೆ ಎನ್ನುವ ಮನ್ನಣೆಯೂ ದೊರೆತಿದೆ. ಅಲ್ಲದೆ ಜಿಲ್ಲೆಯ ಉತ್ತಮ ನಿರ್ವಹಣೆ ತೋರಿದ ಆಸ್ಪತ್ರೆಗಳ ಪೈಕಿ ಮೊದಲ ಸ್ಥಾನಕ್ಕೂ ಈ ಆಸ್ಪತ್ರೆ ಭಾಜನವಾಗಿದೆ. ಅಲ್ಲದೇ ಈ ಆಸ್ಪತ್ರೆಯ ಆರೋಗ್ಯ ಸಮಿತಿಯೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ಹೆಚ್ಚಿನ ಸಹಕಾರವನ್ನು ನೀಡುತ್ತಿದೆ ಎನ್ನುವುದು ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ಸಮಿತಿ ಸದಸ್ಯ ರಫೀಕ್ ಅವರ ಅಭಿಪ್ರಾಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ