HOME » NEWS » State » MANGALORE BANTWAL TALUK VITLA BILLAMPADAVU FARMER INVENTED NEW IDEA TO CONTROL MONKEYS IN FARM AKP SCT

Bantwal: ಮನುಷ್ಯ- ಮಂಗಗಳ ನಡುವಿನ ಆಹಾರ ಸಮರಕ್ಕೆ ಅಂತ್ಯ ಹಾಡಿದ ಬಂಟ್ವಾಳದ ಕೃಷಿಕ

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಬಿಲ್ಲಂಪದವು ನಿವಾಸಿ ನಾರಾಯಣ ಭಟ್ಟರ ಮನೆಯಲ್ಲಿ ಮನೆ ಮಂದಿಯ ಜೊತೆಗೆ ಕೋತಿಗಳೂ ಭೋಜನಕ್ಕೆ ಸಾಥ್ ನೀಡುತ್ತಾರೆ.

news18-kannada
Updated:January 27, 2021, 3:58 PM IST
Bantwal: ಮನುಷ್ಯ- ಮಂಗಗಳ ನಡುವಿನ ಆಹಾರ ಸಮರಕ್ಕೆ ಅಂತ್ಯ ಹಾಡಿದ ಬಂಟ್ವಾಳದ ಕೃಷಿಕ
ವಿಟ್ಲದ ಕೃಷಿಕರ ಮನೆಯಲ್ಲಿ ಅನ್ನ ತಿನ್ನುತ್ತಿರುವ ಕೋತಿ
  • Share this:
ಪುತ್ತೂರು (ಜ. 2): ಪ್ರೀತಿ, ಸ್ನೇಹಕ್ಕೆ ವಿಶ್ವವನ್ನೇ ಗೆಲ್ಲುವ ಶಕ್ತಿಯಿರುವಾಗ ಮಂಗನ ಉಪಟಳವನ್ನು ತಡೆಯಲು ಸಾಧ್ಯವಿಲ್ಲವೇ? ಹೌದು, ಈ ಮಾತು ಕೇಳಿದಾಗ ಕೊಂಚ ಗೊಂದಲವಾಗೋದು ಸಾಮಾನ್ಯ. ಆದರೆ ತನ್ನ ಕೃಷಿ ತೋಟಗಳಿಗೆ ಹಾನಿಯನ್ನುಂಟು ಮಾಡುತ್ತಿದ್ದ ವಾನರ ಪಡೆಯನ್ನು ಇದೇ ಪ್ರೀತಿ ಹಾಗೂ ಸ್ನೇಹದ ಮೂಲಕ ನಿಯಂತ್ರಿಸಿದ ಕೃಷಿಕರೊಬ್ಬರು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಬಿಲ್ಲಂಪದವು ನಿವಾಸಿ ನಾರಾಯಣ ಭಟ್ಟರ ಮನೆಯಲ್ಲಿ ಮನೆ ಮಂದಿಯ ಜೊತೆಗೆ ಕೆಲವು ವಿಶಿಷ್ಟ ಅತಿಥಿಗಳೂ ಭೋಜನಕ್ಕೆ ಸಾಥ್ ನೀಡುತ್ತಾರೆ. ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಾರಾಯಣ ಭಟ್ ಅವರ ತೋಟದಲ್ಲಿದ್ದ ಅಡಿಕೆಗಳು  ಹಾಗೂ ಅಂಗಳದ ಸುತ್ತ ಇರುವ ತೆಂಗಿನ ಮರಗಳಲ್ಲಿದ್ದ ತೆಂಗಿನಕಾಯಿ ಹಾಗೂ ಅಡಿಕೆಗಳು ವರ್ಷಪೂರ್ತಿ ಅರ್ಧ ತಿಂದ ಸ್ಥಿತಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಈ ಯಾವ ದೃಶ್ಯಕ್ಕೆ ಕೊಂಚ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ: ಆಧುನಿಕ ತಂತ್ರಜ್ಞಾನಕ್ಕೇ ಸವಾಲೊಡ್ಡಿದೆ ಬಂಟ್ವಾಳದ 450 ವರ್ಷಗಳ ಹಿಂದಿನ ಸಾಂಪ್ರದಾಯಿಕ ಮನೆ

ಕಳೆದ ಹಲವು ವರ್ಷಗಳಿಂದ ನಾರಾಯಣ ಭಟ್ ಹಾಗೂ ಇವರ ತೋಟದ ಸಮೀಪವೇ ಇರುವಂತಹ ಕಾಡಿನಲ್ಲಿರುವ ವಾನರ ಪಡೆಗಳ ನಡುವೆ ನಿರಂತರ ಉಳಿವಿಗಾಗಿ ಸಮರ ನಡೆಯುತ್ತಿತ್ತು. ಒಂದೆಡೆ ನಾರಾಯಣ ಭಟ್ ಅವರಿಗೆ ತನ್ನ ತೋಟದ ಬೆಳೆಯನ್ನು ಉಳಿಸುವ ಸಮರವಾದರೆ, ಇನ್ನೊಂದೆಡೆ ತನ್ನ ಆಹಾರಕ್ಕಾಗಿ ವಾನರ ಪಡೆಗಳು ನಡೆಸುವ ಸಮರ ಅದಾಗಿತ್ತು. ಆದರೆ, ಈ ಸಮರಕ್ಕೆ ಪ್ರಮುಖ ಕಾರಣವೇನೆಂದು ಅರಿತುಕೊಂಡ ನಾರಾಯಣ ಭಟ್ ಅವರ ಕುಟುಂಬ ಇದೀಗ ವಾನರ ಪಡೆಗಳ ಆಹಾರದ ಸಮಸ್ಯೆಯನ್ನು ನೀಗಿಸಲು ಮುಂದೆ ಬಂದಿದೆ.

ಅವರು ತಮ್ಮ ಮನೆಯ ಅಕ್ಕಪಕ್ಕದಲ್ಲಿ ಮಂಗಗಳಿಗಾಗಿ ಆಹಾರವನ್ನು ಇರಿಸುವ ಮೂಲಕ ಮಂಗಗಳ ಹಸಿವನ್ನು ನೀಗಿಸುತ್ತಿದ್ದಾರೆ. ಹಸಿವಿನಿಂದಾಗಿ ಆಹಾರವನ್ನು ಹುಡುಕಿಕೊಂಡು ಮಂಗಗಳು ತೋಟಗಳಿಗೆ ಲಗ್ಗೆ ಇಡುತ್ತಿವೆ ಎನ್ನುವುದನ್ನು ಅರಿತುಕೊಂಡಿದ್ದ ನಾರಾಯಣ ಭಟ್ ಕುಟುಂಬ ಮಂಗಗಳಿಗೆ ಆಹಾರವನ್ನು ಇಡುವುದನ್ನು ಆರಂಭಿಸಿದ ಬಳಿಕ ಅವರು ನಿರೀಕ್ಷಿಸಿದಕ್ಕಿಂತಲೂ ಹೆಚ್ಚಿನ ಫಲಿತಾಂಶಗಳು ಹೊರ ಬರುತ್ತಿದೆ. ಆಹಾರ ದೊರಕಿದ ಬಳಿಕ ಮಂಗಗಳೀಗ ತೋಟದ ಯಾವುದೇ ಬೆಳೆಯನ್ನು ಮುಟ್ಟಲೂ ಹೋಗುತ್ತಿಲ್ಲ. ಹಿಂದೆ ತೋಟದಲ್ಲಿದ್ದ ತೆಂಗಿನ ಮರಗಳ ಶೇ. 75ರಷ್ಟು ಭಾಗವನ್ನು ನಾಶ ಮಾಡುತ್ತಿದ್ದ ಮಂಗಗಳು ಇದೀಗ ಒಂದೋ, ಎರಡೋ ಎಳನೀರನ್ನು ಕುಡಿದು ತಮ್ಮಷ್ಟಕ್ಕೇ ತಾವು ಇರುತ್ತಿವೆ.

ಇದನ್ನೂ ಓದಿ: ಸುಳ್ಯದ ಕೃಷಿಕನ ತೋಟದಲ್ಲಿ ಪ್ರತಿದಿನ ಟನ್​ಗಟ್ಟಲೆ ಕಸ ಸಂಗ್ರಹ; ಹಸಿಕಸದಿಂದ ಫಲವತ್ತಾದ ಗೊಬ್ಬರ ತಯಾರಿ

ವಾನರ ಭೋಜನ ಆರಂಭದ ಮೊದಲು ನಾರಾಯಣ ಭಟ್ಟರ ಮನೆಯ ಅಂಗಳದಲ್ಲಿ, ತೋಟದಲ್ಲಿ, ಮನೆ ಮಾಡಿನಲ್ಲಿ ಹೀಗೆ ಎಲ್ಲೆಂದರಲ್ಲಿ ಕುಳಿತು ತೊಂದರೆ ನೀಡುತ್ತಿದ್ದ ವಾನರ ಪಡೆಯೀಗ ಸಮಯಕ್ಕೆ ಸರಿಯಾಗಿ ಸಿಗುವ ಆಹಾರವನ್ನು ಸವಿದು ಕಾಡಿಗೆ ಮರಳುತ್ತಿದೆ. ಮನುಷ್ಯರನ್ನು ಕಂಡರೆ ನೂರಡಿ ದೂರ ಓಡುತ್ತಿದ್ದ ಮಂಗಗಳು ಇದೀಗ ನಾರಾಯಣ ಭಟ್ ಕುಟುಂಬದ ಸದಸ್ಯರ ಕೈಯಿಂದಲೇ ಆಹಾರವನ್ನು ಪಡೆದು ಹೋಗುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎನ್ನುತ್ತಾರೆ ಮನೆ ಯಜಮಾನಿ ಗೀತಾ.

ಕಾಡನ್ನು ನಾಶ ಮಾಡಿ ತೋಟ ಬೆಳೆಸಿ , ಕಾಡಿನಲ್ಲಿದ್ದ ಪ್ರಾಣಿಗಳಿಗೆ ಆಹಾರವನ್ನು ಇಲ್ಲದಂತೆ ಮಾಡುತ್ತಿರುವ ಕಾರಣದಿಂದಲೇ ಇಂದು ಕಾಡು ಪ್ರಾಣಿಗಳು ಆಹಾರವನ್ನು ಅರಸಿ ನಾಡಿಗೆ ಬರುತ್ತಿದೆ. ಈ ಪ್ರಾಣಿಗಳಲ್ಲಿ ಮಂಗಗಳೂ ಸೇರುತ್ತಿದ್ದು, ನಾರಾಯಣ ಭಟ್ಟರ ವಾನರ ಭೋಜನ ವ್ಯವಸ್ಥೆ ಇದೀಗ ಪ್ರಾಣಿಗಳ ಉಪಟಳದಿಂದ ಮುಕ್ತ ಪಡೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. ಪ್ರೀತಿ , ಸ್ನೇಹ ಎರಡಿದ್ದರೆ, ಯಾರ ಮನಸ್ಸನ್ನೂ ಗೆಲ್ಲಬಹುದು ಎನ್ನುವುದನ್ನು ನಾರಾಯಣ ಭಟ್ ಹಾಗೂ ವಾನರ ಪಡೆ ತೋರಿಸಿಕೊಟ್ಟಿದೆ.
Published by: Sushma Chakre
First published: January 27, 2021, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories