• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕರಾವಳಿಯಲ್ಲಿ ತೌಕ್ತೆ ತಂದ ಸಂಕಷ್ಟ: ಎಳೆ ಅಡಿಕೆಗಳು ಉದುರುತ್ತಿರುವುದರಿಂದ ಬೆಳೆಗಾರರಿಗೆ ನಷ್ಟದ ಆತಂಕ!

ಕರಾವಳಿಯಲ್ಲಿ ತೌಕ್ತೆ ತಂದ ಸಂಕಷ್ಟ: ಎಳೆ ಅಡಿಕೆಗಳು ಉದುರುತ್ತಿರುವುದರಿಂದ ಬೆಳೆಗಾರರಿಗೆ ನಷ್ಟದ ಆತಂಕ!

ಅಡಿಕೆ ಬೆಳೆ

ಅಡಿಕೆ ಬೆಳೆ

ಈಗಾಗಲೇ ಒಂದು ಕೊಯಿಲನ್ನು ಕೊಯ್ದು ಮಾರಾಟ ಮಾಡಿರುವ ಅಡಿಕೆ ಬೆಳಗಾರ ಇನ್ನೊಂದು ಕೊಯಿಲಿನ ನಿರೀಕ್ಷೆಯಲ್ಲಿದ್ದ. ಆದರೆ ಅಕಾಲಿಕ ಮಳೆಯಿಂದಾಗಿ ಈ ಎಳೆ ಅಡಿಕೆಗಳು ಉದುರಲಾರಂಭಿಸಿದೆ.

  • Share this:

ದಕ್ಷಿಣ ಕನ್ನಡ : ಕರಾವಳಿಯಾದ್ಯಂತ ತೌಕ್ತೆ ಚಂಡಮಾರುತ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿ ಹೊರಟಿದೆ. ಒಂದೆಡೆ ಸಮುದ್ರ ಕೊರೆಯುವಿಕೆಯಿಂದ ನೂರಾರು ಮನೆಗಳು ಕಡಲ ಪಾಲಾಗಿದ್ದರೆ, ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆಗೆ ಕಡಲ ತೀರದ ಜನ ಮಾತ್ರವಲ್ಲ, ಮಲೆನಾಡಿನ ಜನರೂ ಸಂಕಷ್ಟಕ್ಕೀಡಾಗಿದ್ದಾರೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಸಮಸ್ಯೆ ಎದುರಾಗಿದೆ. ಮಳೆಯಿಂದಾಗಿ ಅಡಿಕೆ ಗಿಡದಿಂದ ಸಣ್ಣ ಅಡಿಕೆಗಳು ಬೀಳಲಾರಂಭಿಸಿದ್ದು ಇದು ಅಡಿಕೆ ಬೆಳೆಗಾರನ ಫಸಲಿಗೆ ಭಾರೀ ಹೊಡೆತ ನೀಡಲಿದೆ.


ಕರಾವಳಿ ಭಾಗದ ಕೃಷಿಕರ ಪ್ರಮುಖ ಜೀವನಾಧಾರ ಬೆಳೆಯಾದ ಅಡಿಕೆ ಬೆಳೆಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ತೌಕ್ತೆ ಚಂಡಮಾರುತದ ಹಿನ್ನಲೆಯಲ್ಲಿ ಕರಾವಳಿಯಾದ್ಯಂತ ಕಳೆದ ಒಂದು ವಾರಗಳಿಂದೀಚೆಗೆ ಸುರಿದ ಅಕಾಲಿಕ ಮಳೆ ಅಡಿಕೆ ಬೆಳೆಗಾರನಿಗೆ ಭಾರೀ ನಷ್ಟ ಉಂಟು ಮಾಡಿದೆ. ಈಗಾಗಲೇ ಒಂದು ಕೊಯಿಲನ್ನು ಕೊಯ್ದು ಮಾರಾಟ ಮಾಡಿರುವ ಅಡಿಕೆ ಬೆಳಗಾರ ಇನ್ನೊಂದು ಕೊಯಿಲಿನ ನಿರೀಕ್ಷೆಯಲ್ಲಿದ್ದಾನೆ. ಇಲ್ಲದೆ ಈ ಕೊಯಿಲಿಗೆ ಬೇಕಾದ ಮದ್ದು ಬಿಡುವ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಸಿದ್ಧತೆಯನ್ನೂ ಮಾಡಿಕೊಂಡಿದ್ದಾನೆ. ಆದರೆ ಅಕಾಲಿಕ ಮಳೆಯಿಂದಾಗಿ ಈ ಎಲ್ಲಾ ಸಿದ್ಧತೆಗಳಿಗೆ ನೀರಲ್ಲಿ ಕೊಚ್ಚಿ ಹೋಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅಡಿಕೆ ಗಿಡದಲ್ಲಿ ಇದೀಗ ಹಿಂಗಾರ ಬಿಡುವ ಹಾಗೂ ಎಳೆ ಅಡಿಕೆ ಮೊಳಕೆ ಬರುವ ಸಮಯವಾಗಿದ್ದು, ಅಕಾಲಿಕ ಮಳೆಯಿಂದಾಗಿ ಈ ಎಳೆ ಅಡಿಕೆಗಳು ಉದುರಲಾರಂಭಿಸಿದೆ.


ಅಲ್ಲದೆ ಮಳೆಯಿಂದಾಗಿ ಹಿಂಗಾರಗಳೂ ಕರಟಿ ಹೋಗುತ್ತಿವೆ. ಇದೇ ರೀತಿ ಎಳೆ ಅಡಿಕೆ ಉದುರಲು ಆರಂಭಿಸಿದಲ್ಲಿ , ಅಡಿಕೆ ಬೆಳೆಗಾರನಿಗೆ ಫಸಲು ದೊರೆಯುವುದು ಮರೀಚಿಕೆಯೇ ಆಗುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ಈ ಎಳೆ ಅಡಿಕೆಗೆ ಮದ್ದು ಬಿಡುವ ಕಾರ್ಯವೂ ನಡೆಯಬೇಕಿದ್ದು, ಸರಿಯಾದ ಸಮಯದಲ್ಲಿ ಮದ್ದು ಬಿಡದೇ ಹೋದಲ್ಲಿ, ಅಡಿಕೆಗೆ ಕೊಳೆರೋಗದ ಭಾಧೆಯೂ ಕಾಡುವ ಭೀತಿಯಿದೆ. ನಿರಂತರ ಮಳೆ ಬಂದಲ್ಲಿ ಅಡಿಕೆಗೆ ಯಾವುದೇ ತೊಂದರೆಯಿಲ್ಲದಿದ್ದರೂ, ಈ ರೀತಿಯ ಅಕಾಲಿಕ ಮಳೆಯಿಂದ ಭಾರೀ ತೊಂದರೆಯಾಗುತ್ತದೆ. ಮಳೆ ಬಂದು ಹೋದ ಮೇಲೆ ವಿಪರೀತ ಬಿಸಿಲು ಬರುವ ಕಾರಣದಿಂದಾಗಿ ಅಡಿಕೆಯ ಗೊಂಚಲು ಕರಟಿ ಹೋಗುವುದು ಸಾಮಾನ್ಯವಾಗಿದ್ದು, ಅಡಿಕೆ ಬೆಳೆಗಾರನಿಗೆ ತೌಕ್ತೆ ಚಂಡಮಾರುತ ಭಾರೀ ಹೊಡೆತ ನೀಡಿದೆ ಎನ್ನುತ್ತಾರೆ ಪುತ್ತೂರಿನ ಅಡಿಕೆ ಬೆಳೆಗಾರ ಆರ್.ಸಿ.ನಾರಾಯಣ್.


ಇದನ್ನೂ ಓದಿ: ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯ ಕೊರೊನಾಗೆ ಬಲಿ: ವೈದ್ಯನ ತಾಯಿ ಕೂಡ ಮೃತ!


ಕರಾವಳಿಯ ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯ ಹೆಚ್ಚಿನ ತೋಟಗಳಲ್ಲಿ ಈ ಸಮಸ್ಯೆಯೂ ಹೆಚ್ಚಾಗಿದೆ. ಒಂದೆಡೆ ಕೊಯ್ದು ಮಾರಾಟ ಮಾಡಲು ಸಿದ್ಧವಾದ ಅಡಿಕೆ ಮಳೆಯಿಂದಾಗಿ ಹಾಳಾದರೆ, ಇನ್ನೊಂದೆಡೆ ಹೊಸ ಫಸಲೂ ಮಳೆಯ ಕಾಟದಿಂದ ಕೈ ತಪ್ಪುವ ಹಂತದಲ್ಲಿದೆ. ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಗರಿಷ್ಟ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಕಿಲೊವೊಂದಕ್ಕೆ 400 ರೂಪಾಯಿ ದಾಟಿ, 500 ರೂಪಾಯಿಗೆ ಬಿಕರಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ. ಆದರೆ ಅಡಿಕೆಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದಾಗ ಅಡಿಕೆ ಬೆಳೆಯೂ ಈ ರೀತಿ ನಷ್ಟಕ್ಕೀಡಾಗುತ್ತಿದೆ. ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ ಎನ್ನುವುದು ಅಡಿಕೆ ಬೆಳೆಗಾರರ ಸದ್ಯದ ಸ್ಥಿತಿಯಾಗಿದೆ.

Published by:Kavya V
First published: